ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಕೊಳಚೆ ಪ್ರದೇಶದವರಿಗೆ ನಿವೇಶನ ನೀಡಿ: ಪ್ರತಿಭಟನೆ

Srinivasa Murthy VN
Updated On : 5 Feb 2014, 12:33 pm

ಕನ್ನಡಪ್ರಭ ವಾರ್ತೆ, ಲಕ್ಷ್ಮೇಶ್ವರ, ಫೆ. 4
ಪಟ್ಟಣದ ಇಂದಿರಾನಗರ, ಮುಕ್ತಿನಗರ, ಬಸವೇಶ್ವರನಗರ ಸೇರಿದಂತೆ ಅನೇಕ ಪ್ರದೇಶಗಳಲ್ಲಿ ನೂರಾರು ಕುಟುಂಬಗಳು ಕೊಳಚೆ ಪ್ರದೇಶಗಳಲ್ಲಿ ವಸತಿ ರಹಿತರಾಗಿ ವಾಸಿಸುತ್ತಿದ್ದು, ಅವರಿಗೆ ವಸತಿ ಹಾಗೂ ಮೂಲ ಸೌಲಭ್ಯ ಒದಗಿಸುವಂತೆ ಒತ್ತಾಯಿಸಿ ತಾಲೂಕು ಬಿಜೆಪಿ ಸ್ಲಂ ಮೋರ್ಚಾ ಅಧ್ಯಕ್ಷ ಜಿ.ಪಿ. ಸಿಂದೂಳ್ಳಿಮಠ ನೇತೃತ್ವದಲ್ಲಿ ಸೋಮವಾರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸ್ಲಂ ನಿವಾಸಿಗಳು ಬೃಹತ್ ಮೆರವಣಿಗೆ ನಡೆಸಿ ನಂತರ ಪುರಸಭೆಯ ಎದುರಿನಲ್ಲಿ ಶಾಸಕ ರಾಮಕೃಷ್ಣ ದೊಡ್ಡಮನಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ತಾಲೂಕು ಬಿಜೆಪಿ ಸ್ಲಂ ಮೋರ್ಚಾ ಅಧ್ಯಕ್ಷ ಜಿ.ಪಿ. ಸಿಂದೂಳ್ಳಿಮಠ ಹಾಗೂ ಬಿಜೆಪಿ ನಗರ ಘಟಕದ ಅಧ್ಯಕ್ಷ ಬಸವರಾಜ ಅರಳಿ ಮಾತನಾಡಿ, ಪಟ್ಟಣದಲ್ಲಿ ಅಲ್ಪಸಂಖ್ಯಾತರು, ಬಡವರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಜನಾಂಗದವರು ವಾಸಿಸುವ ಸ್ಲಂ ಪ್ರದೇಶದಲ್ಲಿ 2500ಕ್ಕೂ ಹೆಚ್ಚು ಜನರು ವಾಸಿಸುತ್ತಿದ್ದು, 2-3 ದಶಕಗಳಿಂದ ಯಾವುದೇ ಮೂಲ ಸೌಲಭ್ಯಗಳು ದೊರೆಯದೆ ಸರ್ಕಾರದ ಯೋಜನೆಗಳಿಂದ ವಂಚಿತರಾಗುತ್ತಿದ್ದಾರೆ. ಇಲ್ಲಿನ ನಿವಾಸಿಗಳು ಪಡಿತರ, ಆಧಾರ್ ಹೊಂದಿದ್ದರೂ ಪುರಸಭೆಯಾಗಲಿ ಅಥವಾ ಜನಪ್ರತಿನಿಧಿಗಳಾಗಲಿ ಈ ಕುರಿತಂತೆ ಯಾವುದೇ ರೀತಿಯ ಕ್ರಮ ತೆಗೆದುಕೊಳ್ಳದಿರುವುದರಿಂದ ವಸತಿ ಹೀನರಾಗಿ ಜೀವನ ಸಾಗಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕೂಡಲೇ ಸ್ಲಂ ನಿವಾಸಿಗಳಿಗೆ ವಸತಿ ಹಾಗೂ ಮೂಲ ಸೌಲಭ್ಯಗಳನ್ನು ಆದಷ್ಟು ಶೀಘ್ರವಾಗಿ ನೀಡುವಂತೆ ಮನವಿ ಮಾಡಿದರು.
ಮನವಿ ಸ್ವೀಕರಿಸಿದ ಶಾಸಕ ರಾಮಕೃಷ್ಣ ದೊಡ್ಡಮನಿ ಮಾತನಾಡಿ, ಸ್ಲಂಗಳಲ್ಲಿ ವಾಸಿಸುವ ಜನರ ಕಷ್ಟಗಳ ಬಗ್ಗೆ ತಮಗೆ ಅರಿವಿದ್ದು, ಈಗಾಗಲೇ ಪಟ್ಟಣದಲ್ಲಿ ವಸತಿ ಇಲ್ಲದವರಿಗಾಗಿ ಸುಮಾರು 17 ಎಕರೆ ಭೂಮಿ ಖರೀದಿಸುವ ಪ್ರಕ್ರಿಯೆ ನಡೆದಿದೆ. ಅಲ್ಲದೇ ಇನ್ನೂ 30 ಎಕರೆ ಭೂಮಿಯನ್ನೂ ಖರೀದಿಸಿ ನಿಜವಾದ ವಸತಿ ರಹಿತರಿಗೆ ನಿವೇಶನ ನೀಡುವ ನಿಟ್ಟಿನಲ್ಲಿ ವಿಶೇಷ ಆದ್ಯತೆ ನೀಡಲಾಗುತ್ತಿದೆ. ಅಲ್ಲದೇ ಕೆಡಬ್ಲ್ಯೂಎಸ್ ವತಿಯಿಂದ ಸ್ಲಂ ಪ್ರದೇಶಗಳಲ್ಲಿ 6 ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ ಕಾರ್ಯ ಸದ್ಯದಲ್ಲಿಯೇ ಪ್ರಾರಂಭವಾಗಲಿದೆ. ಪಟ್ಟಣದಲ್ಲಿನ ಮೂಲ ಸೌಲಭ್ಯಗಳಿಗಾಗಿ ಪುರಸಭೆಗೆ ರು. 50 ಕೋಟಿ ಅನುದಾನಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದ್ದು, ಆದಷ್ಟು ಶೀಘ್ರವಾಗಿ ಈ ಯೋಜನೆಯನ್ನು ಜಾರಿಗೆ ತರುವ ನಿಟ್ಟಿನಲ್ಲಿ ಮತ್ತು ತಮ್ಮ ನೋವಿಗೆ ಸ್ಪಂದಿಸುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದರು. ಪುರಸಭೆ ಅಧ್ಯಕ್ಷೆ ಗಂಗಮ್ಮ ಫಕ್ಕೀರಸ್ವಾಮಿಮಠ, ಮುಖ್ಯಾಧಿಕಾರಿ ಹಾಗೂ ಸದಸ್ಯರು ಹಾಜರಿದ್ದರು. ಚಂಬಣ್ಣ ಬಾಳಿಕಾಯಿ, ಸೋಮಣ್ಣ ಮುಳಗುಂದ, ಮಂಜುನಾಥ ಮಾಗಡಿ, ರಾಘು ಪೂಜಾರ, ಗಂಗಾಧರ ಮೆಣಸಿನಕಾಯಿ, ತಾಲೂಕು ಬಿಜೆಪಿ ಸ್ಲಂ ಮೋರ್ಚಾ ಉಪಾಧ್ಯಕ್ಷ ಸಂತೋಷ ಚೌಹಾಣ, ಕಾರ್ಯದರ್ಶಿ ವಿನಾಯಕ ಜಾಧವ, ಎನ್.ಎನ್. ಬಾಡಗಿ, ನಿಂಗಪ್ಪ ಮನ್ನಂಗಿ, ಹನುಮಂತ ಶಿರಹಟ್ಟಿ, ಚಂದ್ರು ಗುಡಿಸಲಮನಿ, ಸಂತೋಷ ಭಂಡಾರಿ, ಗುಡ್ಡಪ್ಪ ಭಂಡಾರಿ, ಬಸವರಾಜ ಮಾನನೂರ, ಅಬ್ದುಲಗನಿ ಮುಳಗುಂದ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement