ಮೈಲಾರಪ್ಪ ಮೆಣಸಗಿ ಬದುಕು ಆದರ್ಶ
ಕನ್ನಡಪ್ರಭ ವಾರ್ತೆ, ಗದಗ, ಫೆ. 4
ಕಷ್ಟಕಾರ್ಪಣ್ಯಗಳ ನಡುವೆ ಪ್ರಾಮಾಣಿಕರಾಗಿ, ಬೆವರು ಸರಿಸಿ ದುಡಿದು ಸ್ವಸಾಮರ್ಥ್ಯದಿಂದ ಸಮಾಜದಲ್ಲಿ ಎತ್ತರದ ಸ್ಥಾನಕ್ಕೇರಿದವರು ಮೈಲಾರಪ್ಪ ಮೆಣಸಗಿಯವರು. ಅವರ ಪರಿಶ್ರಮ ಹಾಗೂ ಪ್ರಯತ್ನಗಳು ಇಂದಿನ ಯುವ ಜನತೆಗೆ ಆದರ್ಶಪ್ರಾಯವಾಗಿದೆ ಎಂದು ಸ್ಥಳೀಯ ಕನಕದಾಸ ಶಿಕ್ಷಣ ಸಮಿತಿಯ ಪದವಿ ಮಹಾವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಡಾ. ಎನ್.ಎಂ. ಅಂಬಲಿಯವರು ಹೇಳಿದರು.
ಅವರು ನಗರದ ಮುಂಡರಗಿ ರಸ್ತೆಯಲ್ಲಿರುವ ಲಯನ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಗದಗ ಜಿಲ್ಲಾ ಕಸಾಪ ಹಾಗೂ ಗದಗ ತಾಲೂಕು ಕಸಾಪ ಇವುಗಳ ಆಶ್ರಯದಲ್ಲಿ ಸೋಮವಾರ ಸಂಜೆ ಜರುಗಿದ ಕಾಯಕರತ್ನ ಮೈಲಾರಪ್ಪ ಮೆಣಸಗಿ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಮೈಲಾರಪ್ಪ ಮೆಣಸಗಿ ಅವರ ಸರಳತೆ, ಸೌಜನ್ಯತೆ ಇಂದಿಗೂ ಸ್ಮರಣೀಯ. ಹೊಸ ಹೊಸ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹ ನೀಡಿ ಬರವಣಿಗೆ ಕಾರ್ಯಕ್ಕೆ ತೊಡಗಿಸುವ ಅವರ ಪ್ರಯತ್ನವು ಶಿಕ್ಷಣದ ಬಗ್ಗೆ ಅವರಿಗಿದ್ದ ಕಳಕಳಿ ತೋರಿಸುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಗದಗ ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಶಿವಪ್ಪ ಎಂ. ಕುರಿ ಮಾತನಾಡಿ, ಹದಿನೈದು ನೂರಕ್ಕೂ ಹೆಚ್ಚು ದತ್ತಿಗಳನ್ನು ನಾಡಿನ ಜನತೆಗೆ ವಿಶೇಷವಾದ ಸೇವೆ ಸಲ್ಲಿಸಿದವರ ಸವಿನೆನಪಿಗಾಗಿ ದತ್ತಿನಿಧಿಗಳನ್ನು ದಾನಿಗಳು ಸ್ಥಾಪಿಸಿದ್ದಾರೆ. ಇವುಗಳಲ್ಲಿ ಐವತ್ತೆಂಟು ದತ್ತಿನಿಧಿಗಳು ಗದಗ ಜಿಲ್ಲೆಯಲ್ಲಿವೆ. ದತ್ತಿ ದಾನಿಗಳ ಅಪೇಕ್ಷೆಯಂತೆ ದತ್ತಿ ಕಾರ್ಯಕ್ರಮಗಳನ್ನು ಅರ್ಥಪೂರ್ಣವಾಗಿ ಹಮ್ಮಿಕೊಳ್ಳಲಾಗುತ್ತದೆ ಎಂದರು. ವಿದ್ಯಾನಿಧಿ ಪ್ರಕಾಶನದ ಮಾಲೀಕ ಜಯದೇವ ಮೆಣಸಗಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಲಯನ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಪ್ರಾ. ಹೇಮಂತ ದಳವಾಯಿ, ಪ್ರಾಧ್ಯಾಪಕ ಆರ್.ಎಲ್. ಪೊಲೀಸ್ಪಾಟೀಲ, ಜಿಲ್ಲಾ ಗೌರವ ಕಾರ್ಯದರ್ಶಿ ಶರಣು ಗೋಗೇರಿ, ಡಾ. ಸಂಗಮೇಶ ತಮ್ಮನಗೌಡ್ರ, ಮಲ್ಲೇಶ ಡಿ.ಎಚ್., ಕಿಶೋರಬಾಬು ನಾಗರಕಟ್ಟಿ, ಶಶಿಕಾಂತ ಕೊರ್ಲಹಳ್ಳಿ, ಎಸ್.ಎಸ್. ತಳ್ಳಿಹಾಳ, ಎಸ್.ಬಿ. ದೊಡ್ಡಣ್ಣವರ, ಬಸವರಾಜ ಮಡಿಕೇಶ್ವರ, ಈರಣ್ಣ ಕುರಿ, ಬಿ.ಜಿ. ಹಿರೇಮಠ, ಕವಿತಾ ದಂಡಿನ, ಪಿ.ಎಸ್. ನದಾಫ್, ಜಿ.ಎಸ್. ಯತ್ನಟ್ಟಿ ಮುಂತಾದವರು ಉಪಸ್ಥಿತರಿದ್ದರು. ಐಶ್ವರ್ಯ ಕುರಿ ಪ್ರಾರ್ಥಿಸಿದರು. ಎಸ್.ಎಚ್. ದಳವಾಯಿ ಸ್ವಾಗತಿಸಿದರು. ಎನ್.ಎಂ. ಖ್ಯಾವಿ ನಿರೂಪಿಸಿದರು. ಕೆ.ಯು. ಹೂಲಿಕಂಠಿಮಠ ವಂದಿಸಿದರು.