ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ವಸತಿ ನಿಲಯ ಕಟ್ಟಡ ಉದ್ಘಾಟನೆ ಎಂದು?

Srinivasa Murthy VN
Updated On : 5 Feb 2014, 12:31 pm

ಪಟ್ಟಣದ ಅನೇಕ ಸರ್ಕಾರಿ ವಸತಿ ನಿಲಯಗಳು ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿವೆ. ಆದರೆ, ಪಟ್ಟಣದ ಮೆಟ್ರಿಕ್‌ಪೂರ್ವ ಅಲ್ಪಸಂಖ್ಯಾತ ಬಾಲಕಿಯರ ವಸತಿ ನಿಲಯದ ಕಟ್ಟಡದ ಕಾಮಗಾರಿ ಪೂರ್ಣಗೊಂಡು ವರ್ಷವಾದರೂ ಅದಕ್ಕೆ ಉದ್ಘಾಟನೆ ಭಾಗ್ಯ ಕೂಡಿಬಂದಿಲ್ಲ.
ರು. 70 ಲಕ್ಷ ವೆಚ್ಚದಲ್ಲಿ ನಿರ್ಮಿತಿ ಕೇಂದ್ರದಿಂದ ಈ ವಸತಿ ನಿಲಯದ ಕಟ್ಟಡದ ಕಾಮಗಾರಿ ನಡೆದಿದ್ದು, ಕಾಮಗಾರಿ ಸಂಪೂರ್ಣವಾಗಿ ವರ್ಷವಾದರೂ ಸಂಬಂಧಪಟ್ಟ ಇಲಾಖೆಗೆ ಇದನ್ನು ವರ್ಗಾಯಿಸಿಲ್ಲ. ಹೀಗಾಗಿ ಮೆಟ್ರಿಕ್‌ಪೂರ್ವ ಅಲ್ಪಸಂಖ್ಯಾತ ವಸತಿ ನಿಲಯವನ್ನು ಇನ್ನೂ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದೆ. ನೂತನ ಕಟ್ಟಡ ಸಂಪೂರ್ಣವಾಗಿ ಹಾಳು ಬಿದ್ದು ಸುತ್ತಲೂ ಮುಳ್ಳಿನ ಗಿಡಗಂಟಿಗಳು ಬೆಳೆದಿವೆ. ಇದೀಗ ಇದು ಅನೈತಿಕ ಚಟುವಟಿಕೆ ತಾಣವಾಗಿದೆ.
ಅಲ್ಪಸಂಖ್ಯಾತ ಇಲಾಖೆಗೆ ವರ್ಗಾಯಿಸಬೇಕಾಗಿದೆ: ಪಟ್ಟಣದಲ್ಲಿ ನಡೆಯುತ್ತಿರುವ ಮೆಟ್ರಿಕ್‌ಪೂರ್ವ ಅಲ್ಪಸಂಖ್ಯಾತ ವಿದ್ಯಾರ್ಥಿನಿಯರ ವಸತಿ ನಿಲಯದಲ್ಲಿ ಹೇಳಿಕೊಳ್ಳುವಷ್ಟು ಸೌಲಭ್ಯಗಳಿಲ್ಲ. ಸುತ್ತ-ಮುತ್ತ ಉತ್ತಮವಾದ ಪರಿಸರವಿಲ್ಲ. ಪಕ್ಕದಲ್ಲಿಯೇ ಚರಂಡಿ ಇದ್ದು, ಗಬ್ಬುವಾಸನೆ ಇದೆ. ನಿತ್ಯ ಅದರ ಸಮೀಪದಲ್ಲಿಯೇ ವಿದ್ಯಾರ್ಥಿನಿಯರು ಕಾಲ ಕಳೆಯಬೇಕಾಗಿದೆ. ಆದರೆ, ನೂತನ ವಸತಿ ನಿಲಯದ ಕಟ್ಟಡದಲ್ಲಿ ಎಲ್ಲ ರೀತಿಯ ಸೌಲಭ್ಯ ಒದಗಿಸಲಾಗಿದ್ದು, ವಸತಿ ನಿಲಯದ ಸುತ್ತಮುತ್ತ ಉತ್ತಮವಾದ ಪರಿಸರವಿದೆ. ಸ್ವಲ್ಪ ಮಟ್ಟಿನ ಆವರಣ ಹೊಂದಿದ್ದು, ಕಾಂಪೌಂಡ್ ನಿರ್ಮಿಸಲಾಗಿದೆ. ಆದ್ದರಿಂದ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ತ್ವರಿತವಾಗಿ ಈ ವಸತಿ ನಿಲಯವನ್ನು ಅಲ್ಪಸಂಖ್ಯಾತ ಇಲಾಖೆಗೆ ವರ್ಗಾಯಿಸಬೇಕಾಗಿದೆ.
ಶಾಸಕರು ಇತ್ತ ಗಮನಹರಿಸಲಿ: ಮುಂಡರಗಿ ಪಟ್ಟಣದಲ್ಲಿ ಇನ್ನು ಅನೇಕ ವಸತಿ ನಿಲಯಗಳಿಗೆ ಸ್ವಂತ ಕಟ್ಟಡಗಳಿಲ್ಲ. ಹೆಸರೂರ ರಸ್ತೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ವಿದ್ಯಾರ್ಥಿನಿಯರ ವಸತಿ ನಿಲಯವೊಂದರ ಕಟ್ಟಡ ಕಾಮಗಾರಿ ಸಂಪೂರ್ಣವಾಗಿದ್ದರೂ ಉದ್ಘಾಟನೆಗೊಂಡಿಲ್ಲ. ಆದರೆ, ಸಂಬಂಧಪಟ್ಟ ಸಮಾಜ ಕಲ್ಯಾಣ ಇಲಾಖೆ ಸಚಿವರು ಮಾತ್ರ ಇತ್ತ ನೋಡುತ್ತಿಲ್ಲ. ಶಿರಹಟ್ಟಿ ಹಾಗೂ ರೋಣ ಶಾಸಕರು ಇತ್ತ ಗಮನಹರಿಸಿ ಇವುಗಳ ಉದ್ಘಾಟನೆಗೆ ಕ್ರಮ ಜರುಗಿಸುವರೋ ಕಾದು ನೋಡಬೇಕಾಗಿದೆ.

ವಸತಿ ನಿಲಯವು ಮುಂಡರಗಿಯಿಂದ ಸ್ವಲ್ಪ ದೂರದಲ್ಲಿದೆ. ಈ ಪ್ರದೇಶದಲ್ಲಿ ಗ್ರಾಮೀಣ ಭಾಗದ ವಿದ್ಯುತ್ ಸರಬರಾಜು ಇದ್ದು, ರಾತ್ರಿ ಸಮಯದಲ್ಲಿ ಇದಕ್ಕೆ 6ಕ್ಕೆ ವಿದ್ಯುತ್ ಸರಬರಾಜು ಇದೆ. ಇದು ಬಾಲಕಿಯರ ವಸತಿ ನಿಲಯವಾಗಿದ್ದರಿಂದ ರಾತ್ರಿ ಸಮಯದಲ್ಲಿ ಇಲ್ಲಿ ಜನದಟ್ಟಣೆ ಕಡಿಮೆ ಇರುತ್ತದೆ. ಕತ್ತಲೆಯಲ್ಲಿ ವಿದ್ಯಾರ್ಥಿನಿಯರಿಗೆ ಉಳಿದುಕೊಳ್ಳಲು ತೊಂದರೆಯಾಗುತ್ತದೆ. ಪಟ್ಟಣಕ್ಕಿರುವ ವಿದ್ಯುತ್ ಸರಬರಾಜನ್ನು ಇಲ್ಲಿನ ವಸತಿ ನಿಲಯಕ್ಕೆ ಕೇಳಿದ್ದು, ಅದಕ್ಕಾಗಿ ಈಗ ವಿದ್ಯುತ್ ಇಲಾಖೆಯಿಂದ ಮಂಜೂರಾತಿ ದೊರೆತಿದೆ. ಇದೀಗ ಕೊಪ್ಪಳ ರಸ್ತೆಯಿಂದ ಅಲ್ಲಿಯವರೆಗೆ ನೂತನ ಕಂಬಗಳನ್ನು ಹಾಕಿ ನಿರಂತರ ವಿದ್ಯುತ್ ಸರಬರಾಜು ಆಗುವಂತೆ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ವಿದ್ಯುತ್ ಕಾಮಗಾರಿ ಮುಗಿದ ತಕ್ಷಣವೇ ಇದನ್ನು ಅಲ್ಪಸಂಖ್ಯಾತರ ಇಲಾಖೆಗೆ ಹಸ್ತಾಂತರಿಸಲಾಗುವುದು.
- ಜಿ.ವಿ. ಶಿರೋಳ, ನಿರ್ಮಿತಿ ಕೇಂದ್ರದ ಅಭಿಯಂತರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement