ಶುದ್ಧಬರಹದಿಂದ ಶೈಕ್ಷಣಿಕ ಗುಣಮಟ್ಟ ಹೆಚ್ಚಳ: ಗದ್ಯಾಳ
ಕನ್ನಡಪ್ರಭ ವಾರ್ತೆ, ಗದಗ, ಫೆ. 4
ಮಗುವಿನ ಬೌದ್ಧಿಕ ಮತ್ತು ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವಲ್ಲಿ ಶುದ್ಧ ಬರಹವು ಪ್ರಮುಖ ಸಾಧನವಾಗಿದೆ ಎಂದು ಗದಗ ಉಪವಿಭಾಗಾಧಿಕಾರಿ ಐ.ಜಿ. ಗದ್ಯಾಳ ಹೇಳಿದರು.
ಅವರು ನಗರದ ಆಂಗ್ಲೋ ಉರ್ದು ಸ್ಕೂಲ್‌ದ ಸಭಾಂಗಣದಲ್ಲಿ ಗದಗ ಜಿಪಂ, ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ, ರಾಜ್ಯ ಉರ್ದು ಶಿಕ್ಷಕರ ಸಂಘಟನೆ ಗದಗ ಜಿಲ್ಲಾ ಶಾಖೆಯ ಆಶ್ರಯದಲ್ಲಿ ಸೋಮವಾರ ಗದಗ ಜಿಲ್ಲೆಯ ಉರ್ದು ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಉರ್ದು ಭಾಷಾ ಶಿಕ್ಷಕರಿಗೆ 5 ದಿನಗಳ ಕ್ಯಾಲಿಗ್ರಾಫಿ (ಶುದ್ಧ ಬರಹ) ತರಬೇತಿಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಬರವಣಿಗೆಗಳು ಮನಸ್ಸಿನ ಭಾವನೆಗಳನ್ನು ವ್ಯಕ್ತಪಡಿಸುವ ಪ್ರಮುಖ ಸಾಧನ, ಶುದ್ಧ ಮತ್ತು ಸ್ಪಷ್ಟವಾಗಿ ಬರೆಯುವ ಶುದ್ಧ ಬರಹವನ್ನು ಮಕ್ಕಳು ರೂಢಿಸಿಕೊಂಡಲ್ಲಿ ಏಕಾಗ್ರತೆ ಉಂಟಾಗಿ ವಿಷಯ ಮನನವಾಗುತ್ತದೆ. ಮಕ್ಕಳ ಪ್ರತಿಭೆಗೆ ಅವಕಾಶಗಳನ್ನು ಕಲ್ಪಿಸಿಕೊಟ್ಟು ಮಗುವಿನ ಸರ್ವೋತ್ತಮ ಬೆಳವಣಿಗೆಗೆ ಶ್ರಮಿಸುವಲ್ಲಿ ಶಿಕ್ಷಕರು ಮುಂದಾಗಬೇಕು. ಉರ್ದು ಭಾಷೆಯಾಗಿದ್ದರೂ ಅದನ್ನು ಇನ್ನಷ್ಟು ಸರಳೀಕರಣಗೊಳಿಸಿ ಮಕ್ಕಳ ಮಟ್ಟಕ್ಕಿಳಿದು ಬೋಧಿಸಿದಲ್ಲಿ ಮಕ್ಕಳಿಗೆ ಮನದಟ್ಟಾಗುವುದು. ಅದಕ್ಕಾಗಿ ಉರ್ದು ಶಿಕ್ಷಕರಿಗೆ ಇಂತಹ ತರಬೇತಿಗಳನ್ನು ನೀಡಲಾಗುತ್ತಿದ್ದು, ಇವುಗಳಲ್ಲಿನ ಹೊಸತನ ಮತ್ತು ಹೊಸ ಆವಿಷ್ಕಾರಗಳನ್ನು ಶಿಕ್ಷಕರು ಬೋಧನೆಯಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಗದಗ ಶಹರ ವಲಯದ ಉರ್ದು ಸಿಆರ್‌ಪಿ ಸಲ್ಮಾ ಬೆಳಗಾಂವವಾಲೆ, ಗ್ರಾಮೀಣ ವಲಯದ ಸಿಆರ್‌ಪಿ ಗದ್ದಿ ಮುಂತಾದವರು ಉಪಸ್ಥಿತರಿದ್ದರು. ಡಿ.ಎ. ಬಾಣಿ ಪ್ರಾರ್ಥಿಸಿದರು. ಡಿಡಿಪಿಐ ಕಾರ್ಯಾಲಯದ ವಿಷಯ ಪರಿವೀಕ್ಷಕ ಎ.ಎ. ಖಾಜಿ ಸ್ವಾಗತಿಸಿದರು. ಉರ್ದು ಸಂಯೋಜಕ ಡಾ. ಎಂ.ಎನ್. ಮಕಾನದಾರ ನಿರೂಪಿಸಿದರು. ವಿಷಯ ಪರಿವೀಕ್ಷಕ ಎಚ್.ಎ. ಫಾರೂಖಿ ವಂದಿಸಿದರು. 5 ದಿನಗಳ ಕಾಲ ನಡೆದ ಈ ತರಬೇತಿ ಶಿಬಿರದಲ್ಲಿ ಗದಗ ಜಿಲ್ಲೆಯ 70ಕ್ಕೂ ಹೆಚ್ಚು ಉರ್ದು ಶಿಕ್ಷಕ-ಶಿಕ್ಷಕಿಯರು ಇದ್ದರು.