ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಅನುದಾನ ಅಭಾವ: ಮುಗಿಯದ ಕಾಮಗಾರಿ

Srinivasa Murthy VN
Updated On : 8 Feb 2014, 1:50 am

-ಡಿ.ಜಿ. ಮೋಮಿನ್.
ಕನ್ನಡಪ್ರಭ ವಾರ್ತೆ, ಗಜೇಂದ್ರಗಡ, ಫೆ. 7
ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ಸಮೀಪದ ಕಾಲಕಾಲೇಶ್ವರ ದೇಗುಲ ಎದುರಿನ ವಿಶಾಲವಾದ ಬೆಟ್ಟಗಳ ಮಧ್ಯೆ ಸಮಾಜ ಕಲ್ಯಾಣ ಇಲಾಖೆಯಿಂದ # 5.15 ಕೋಟಿ ಅನುದಾನದಲ್ಲಿ ನಿರ್ಮಾಣಗೊಳ್ಳುತ್ತಿರುವ ಕಿತ್ತೂರು ರಾಣಿ ಚನ್ನಮ್ಮ ಮಹಿಳಾ ವಸತಿ ಶಾಲೆ ಕಟ್ಟಡ ಕಾಮಗಾರಿ ಕುಂಟುತ್ತ, ತೆವಳುತ್ತ ಸಾಗಿರುವುದು ಜನರ ಕೆಂಗಣ್ಣಿಗೆ ಗುರಿಯಾಗಿದೆ.
ಅನುದಾನ ಕೊರತೆ: ಹದಿಮೂರು ಎಕರೆ ವಿಸ್ತೀರ್ಣದ ಜಮೀನಿನಲ್ಲಿ ನಿರ್ಮಾಣವಾಗುತ್ತಿರುವ ಈ ವಸತಿ ಶಾಲೆ ಕಟ್ಟಡ 150 ಬಾಲಕಿಯರ ಉಜ್ವಲ ಭವಿಷ್ಯಕ್ಕೆ ನಾಂದಿಯಾಗಲಿದೆ. ಗಜೇಂದ್ರಗಡ ಭಾಗದ ಶೈಕ್ಷಣಿಕ ಪ್ರಗತಿ ಪಟ್ಟಿಯಲ್ಲಿ ವೀರರಾಣಿ ಕಿತ್ತೂರು ಚನ್ನಮ್ಮ ವಸತಿ ಶಾಲೆ ಕಟ್ಟಡ ಪ್ರಮುಖ ಪಾತ್ರವಹಿಸುತ್ತದೆ. ಶಾಲೆ, ಹಾಸ್ಟೆಲ್ ಕಟ್ಟಡದ ಕಾಮಗಾರಿ 2012ರಲ್ಲಿ ಆರಂಭಗೊಂಡು ಹದಿನೆಂಟು ತಿಂಗಳಲ್ಲಿ ವಸತಿ ಶಾಲೆ ಕಟ್ಟಡ ಕಾಮಗಾರಿ ಪೂರ್ಣಗೊಳ್ಳಬೇಕಿದೆ. ಆದರೆ ಅನುದಾನ ಕೊರತೆಯಿಂದಾಗಿ ಕಟ್ಟಡದ ಕಾಮಗಾರಿ ವಿಳಂಬಗೊಂಡಿದೆ ಎನ್ನುತ್ತಾರೆ ಗುತ್ತಿಗೆದಾರರು.
ವಸತಿ ಕಟ್ಟಡದಲ್ಲಿ ಒಟ್ಟು 16 ಕೊಠಡಿಗಳಿದ್ದು 2 ವಸತಿ ಗೃಹಗಳು, 6 ತರಗತಿ ಕೊಠಡಿ, ನಿರ್ಮಾಣಗೊಳ್ಳುತ್ತಿವೆ. ಈಗಾಗಲೇ ನೆಲ ಮಹಡಿಯಲ್ಲಿ 80 ವಿದ್ಯಾರ್ಥಿಗಳ ಮೂರು ತರಗತಿ ಕೊಠಡಿ, ಬೃಹತ್ ಪ್ರಯೋಗಾಲಯ, ಪ್ರಾಂಶುಪಾಲರು, ಶಿಕ್ಷಕರು, ದಾಖಲೆ ಕೊಣೆಗಳು ಜತೆ ಮಹಿಳೆಯರ, ಪುರುಷರ ಶೌಚಾಲಯಗಳ ಬುನಾದಿ ಕಾಮಗಾರಿ ಪೂರ್ಣಗೊಂಡಿದೆ. ಕಾಲಂ ಜತೆ ಗೋಡೆಗಳು ತಲೆ ಎತ್ತಿವೆ. ಆದಷ್ಟು ಬೇಗನೆ ಕಾಮಗಾರಿ ಮುಗಿಸಿ ಸೇವೆಗೆ ನೀಡಬೇಕಿದೆ.
ದುರ್ಗಮ ಹಾದಿ: ಗಜೇಂದ್ರಗಡದಿಂದ ಕಾಲಕಾಲೇಶ್ವರ ಗ್ರಾಮಕ್ಕೆ ತೆರಳುವ ಮಾರ್ಗ ಮಧ್ಯದ ರಸ್ತೆಯಿಂದ ಒಳದಾರಿ ಮಣ್ಣಿನಿಂದ ಕೂಡಿದ್ದು, ಎರಡೂವರೆ ಕಿಲೋ ಮೀಟರ್ ಕ್ರಮಿಸಿದಾಗ ಎರಡು ಗುಡ್ಡಗಳ ಮಧ್ಯೆ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ ಕಟ್ಟಡ ತಲೆ ಎತ್ತಿದ್ದು, ಈ ಎರಡೂವರೆ ಕಿಲೋ ಮೀಟರ್ ರಸ್ತೆ ಡಾಂಬರೀಕರಣ ಆಗಬೇಕಾಗಿದೆ. 2012ರ ನವಂಬರ್ 4ರಂದು ಪ್ರಾರಂಭಿಸಿರುವ ಈ ವಸತಿ ಶಾಲೆ ಕಟ್ಟಡದ ಕಾಮಗಾರಿ ಬಗ್ಗೆ ಹಲ ಸಂಶಯ ಮೂಡುತ್ತಿದೆ.
ಬೇಗನೇ ನಿರ್ಮಿಸಿ: ವೀರವನಿತೆ ಕಿತ್ತೂರು ರಾಣಿ ಚನ್ನಮ್ಮ ಹೆಸರಿನ ವಸತಿ ಶಾಲೆ ಕಟ್ಟಡ ಈ ಭಾಗದ ಶೈಕ್ಷಣಿಕ ಪ್ರಗತಿಗೆ ಮುಕುಟವಾಗಲಿದೆ. ಹಲವಾರು ವರ್ಷಗಳ ಜನರ ಬೇಡಿಕೆ ಈಗ ಈಡೇರಿದೆ. ಕಟ್ಟಡ ಕೊರತೆಯಿಂದ ಕಾಲಕಾಲೇಶ್ವರ ಗ್ರಾಮದ ಬಳಿಯ ಮೊರಾರ್ಜಿ ವಸತಿ ಶಾಲೆಯಲ್ಲಿ ಆ ಶಾಲೆ ಮಕ್ಕಳು ಈಗ ಶಿಕ್ಷಣ ಪಡೆಯುತ್ತಿದ್ದಾರೆ. ವಸತಿ ಶಾಲೆ ಕಟ್ಟಡ ಪೂರ್ಣಗೊಂಡ ಬಳಿಕ ಈ ಕೊರತೆ ನೀಗಲಿದೆ ಎನ್ನುತ್ತಾರೆ ರಾಜೂರು ಗ್ರಾಪಂ ಸದಸ್ಯ ಪರಶುರಾಮ ಚಿಲ್‌ಝರಿ.

ಸರ್ಕಾರ ಗಜೇಂದ್ರಗಡ ಭಾಗದಲ್ಲಿ ವೀರವನಿತೆ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ ಕಟ್ಟಡ ಆರಂಭಿಸಿರುವುದು ಶೈಕ್ಷಣಿಕ ಪ್ರಗತಿಗೆ ಸಹಕಾರಿಯಾಗಲಿದೆ. ಕಾಲಕಾಲೇಶ್ವರ ಮೊರಾರ್ಜಿ ವಸತಿ ಶಾಲೆಯಲ್ಲಿ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ ಮಕ್ಕಳ ಶಿಕ್ಷಣ ನಡೆಯುತ್ತಿದೆ. ಈ ಕಟ್ಟಡ ಶೀಘ್ರದಲ್ಲಿ ಸೇವೆಗೆ ದೊರೆತರೆ ಕೊರತೆ ನೀಗಲಿದೆ. ಜತೆಗೆ ವಿದ್ಯಾರ್ಥಿಗಳು ನಿರಾಳವಾಗಿ ಅಭ್ಯಾಸ ಮಾಡಲು ಅನುಕೂಲಕರವಾಗಲಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಹೆಚ್ಚಿನ ಗಮನ ನೀಡಲಿ.
- ಪೀರು ರಾಠೋಡ,
ಎಸ್‌ಎಫ್‌ಐ ಜಿಲ್ಲಾಧ್ಯಕ್ಷ

ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿ, ವಿದ್ಯಾರ್ಥಿಗಳ ಶಿಕ್ಷಣಕ್ಕೆ ಹೆಚ್ಚಿನ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ನಾವು ಶ್ರಮಿಸುತ್ತಿದ್ದೇವೆ ಎಂದು ಕಾಮಗಾರಿ ಗುತ್ತಿಗೆ ಪಡೆದಿರುವ ಧಾರವಾಡ ಜಲವಾಹಿನಿ ಮ್ಯಾನೇಜ್‌ಮೆಂಟ್ ಸರ್ವೀಸ್ ಎಂಜಿನಿಯರ್ ನವೀನಕುಮಾರ ಶಿವಪುರ, ಸಹಾಯಕ ಶಿವಕುಮಾರ ಮಠದ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement