ಬತ್ತಿದ ಮಲಪ್ರಭೆ: ರೋಣಕ್ಕೆ ನೀರಿನ ಬಿಸಿ
-ಪಿ.ಎಸ್. ಪಾಟೀಲ್
ಕನ್ನಡಪ್ರಭ ವಾರ್ತೆ ರೋಣ. ಫೆ. 7
ರೋಣ ಪಟ್ಟಣದ ಜನತೆಯ ಕುಡಿವ ನೀರಿನ ಮೂಲವಾದ ಮಲಪ್ರಭೆ ನದಿ ಬೇಸಿಗೆ ಪೂರ್ವದಲ್ಲಿಯೇ ಸಂಪೂರ್ಣ ಬತ್ತಿದ್ದು. ಬೇಸಿಗೆ ಪ್ರಾರಂಭವಾಗುವ ಮೊದಲೇ ರೋಣ ಪಟ್ಟಣದಲ್ಲಿ ನೀರಿನ ಬರ ಎದುರಾಗುವ ಸಾಧ್ಯತೆ ನಿಚ್ಚಳವಾಗಿ ಕಂಡು ಬರುತ್ತಿದೆ. ಈಗಿನಿಂದಲೇ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕಾದ ಪುರಸಭೆ ಮಾತ್ರ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದಿರುವುದು ಜನತೆಯ ಆತಂಕಕ್ಕೆ ಕಾರಣವಾಗಿದೆ.
ಈಗಲೇ 7 ದಿನಕ್ಕೊಮ್ಮೆ ನೀರು: ಬೇಸಿಗೆ ಆರಂಭಕ್ಕೂ ಮುನ್ನವೇ ರೋಣದ ಜನತೆ ನೀರಿನ ಸಮಸ್ಯೆ ಎದುರಿಸುವಂತಾಗಿದೆ. ಈ ಮೊದಲು 2 ದಿನಕ್ಕೊಮ್ಮೆ ನೀರು ಪೂರೈಕೆಯಾಗುತ್ತಿತ್ತು. ಈಗ ನದಿಯಲ್ಲಿ ನೀರು ಇಲ್ಲದ ಪರಿಣಾಮ ಕಳೆದ 1 ತಿಂಗಳಿಂದ 7 ದಿನಕ್ಕೊಮ್ಮೆ ನೀರು ಪೂರೈಕೆಯಾಗುತ್ತಿದೆ. ವಾರಕ್ಕೊಮ್ಮೆ ಪೂರೈಕೆಯಾಗುವ ನೀರು ಮಲಿನವಾಗದಂತೆ ಸಂಗ್ರಹಿಸಿಡುವಲ್ಲಿ ಜನತೆ ಪರದಾಡುತ್ತಿದ್ದಾರೆ.
ಸದ್ಯ ಪುರಸಭೆಯು ಜನತೆಗೆ ಕೊಳವೆ ಬಾವಿಗಳಿಂದ ನೀರು ಪೂರೈಕೆ ಮಾಡುತ್ತಿದ್ದು, ಗಡಸು ಮತ್ತು ಸವಳು ಮಿಶ್ರಿತವಾಗಿದ್ದು, ಕುಡಿಯಲು ಯೋಗ್ಯವಾಗಿಲ್ಲ. ಜನತೆ ಶುದ್ಧ ಕುಡಿಯುವ ನೀರಿಗಾಗಿ ಎತ್ತು ಚಕ್ಕಡಿ, ದ್ವಿಚಕ್ರ ವಾಹನ, ಟಂಟಂ, ಸೈಕಲ್, ತಳ್ಳುಗಾಡಿ. ಟಾಂಗಾ ಮೂಲಕ ನೀರು ತರಲು ದೂರದ ಸ್ಥಳಗಳಿಗೆ ತೆರಳುತ್ತಿದ್ದಾರೆ. ಸಾಲದ್ದಕ್ಕೆ ದುಬಾರಿ ಮಿನರಲ್ ವಾಟರ್ ಮತ್ತು ಟ್ಯಾಂಕರ್ ನೀರನ್ನು ಆಶ್ರಯಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ಇದು ಪ್ರತಿ ವರ್ಷದ ಸಮಸ್ಯೆ: 2 ದಶಕಗಳಿಂದ ಪ್ರತಿವರ್ಷ ಬೇಸಿಗೆಯಲ್ಲಿ ರೋಣ ಪಟ್ಟಣದ ಜನತೆ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ಏಪ್ರಿಲ್, ಮೇ ತಿಂಗಳಲ್ಲಿ ನೀರಿನ ಸಮಸ್ಯೆ ಉಲ್ಬಣವಾಗುತ್ತಿತ್ತು. ಈ ಬಾರಿ ಫೆಬ್ರವರಿಯಲ್ಲಿ ಸಮಸ್ಯೆಯುಂಟಾಗಿದ್ದು, ಬರುವ ದಿನಗಳಲ್ಲಿ ಇದಕ್ಕಿಂತ ಸಮಸ್ಯೆ ಹೆಚ್ಚಾಗುವ ಸಾಧ್ಯತೆ ನಿಚ್ಚಳವಾಗಿದೆ.
30 ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿದ ರೋಣ ಪಟ್ಟಣವು 23 ವಾರ್ಡ್‌ಗಳನ್ನು ಒಳಗೊಂಡು ತಾಲೂಕು ಕೇಂದ್ರ ಸ್ಥಾನವಾಗಿದೆ. ರೋಣಕ್ಕೆ ಒಂದು ದಿನಕ್ಕೆ 18 ಲಕ್ಷಕ್ಕೂ ಹೆಚ್ಚು ಲೀಟರ್ ನೀರಿನ ಅವಶ್ಯಕತೆ ಇದ್ದು, ಪಟ್ಟಣಕ್ಕೆ ಬದಾಮಿ ತಾಲೂಕಿನ ಚೋಳಚಗುಡ್ಡದ ಹತ್ತಿರದಲ್ಲಿ ಹರಿಯುವ ಮಲಪ್ರಭೆ ನದಿಗೆ ಅಳವಡಿಸಲಾದ ಜಾಕ್‌ವೆಲ್‌ದಿಂದ ನೀರು ಸರಬರಾಜಾಗುತ್ತಿದೆ.
ಜಾಕ್‌ವೆಲ್ ರಿಪೇರಿ ಮಾಡಿ: ಬೆಳಗಾವಿ ಜಿಲ್ಲೆಯ ನವಿಲತೀರ್ಥ ಜಲಾಶಯದಿಂದ ನೀರು ಹರಿಸಿದಾಗ ಮಾತ್ರ ನದಿಯಲ್ಲಿ ನೀರು. ಆದರೆ, ಡ್ಯಾಂನಲ್ಲಿ ನೀರಿಲ್ಲದ ಪರಿಣಾಮವಾಗಿ ನದಿಯಲ್ಲಿ ನೀರು ಹರಿಯುತ್ತಿಲ್ಲ.
ಅಲ್ಲದೇ ಪಟ್ಟಣಕ್ಕೆ ನೀರು ಪೂರೈಕೆಗೆ ನೀರು ಸಂಗ್ರಹಿಸಲು ನದಿಗೆ ಅಡ್ಡಲಾಗಿ ಜಾಕ್‌ವೆಲ್ ಅಳವಡಿಸಲಾಗಿದ್ದು, ಅದು ಸಂಪೂರ್ಣ ಹಾಳಾಗಿದೆ.
ಅಲ್ಲಲ್ಲಿ ದೊಡ್ಡ ದೊಡ್ಡ ರಂಧ್ರಗಳು ಬಿದ್ದಿದ್ದು, ಜಾಕ್‌ವೇಲ್‌ನ ಕಬ್ಬಿನ ಗೇಟ್‌ಗಳು ತುಕ್ಕು ಹಿಡಿದಿವೆ. ಇದರಿಂದ ನೀರು ಸಂಗ್ರಹವಾಗದೇ ಹರಿದು ಹೋಗುತ್ತಿದೆ.
ಮಲಪ್ರಭೆ ನದಿಯಲ್ಲಿ ನೀರು ಸಂಪೂರ್ಣ ಖಾಲಿಯಾಗಿದ್ದರಿಂದ ಸಮಸ್ಯೆಯುಂಟಾಗಿದೆ. ಸದ್ಯ ಕೊಳವೆ ಬಾವಿಗಳ ಮೂಲಕ 6 ದಿನಗಳಿಗೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿದೆ. ನೀರು ಮಿತವ್ಯಯವಾಗಿ ಬಳಸುವಂತೆ ಡಂಗುರ ಸಾರಲಾಗಿದೆ. ಜಲಾಶಯದಿಂದ ಮಲಪ್ರಭೆ ನದಿಗೆ ನೀರು ಹರಿದು ಬಿಡುವಂತೆ ಗದಗ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿಕೊಳ್ಳಲಾಗಿದೆ.
- ಮುತ್ತಣ್ಣ ಸಂಗಳದ, ಅಧ್ಯಕ್ಷರು. ಪುರಸಭೆ ರೋಣ
ನದಿಯಲ್ಲಿ ನೀರು ಬತ್ತಿರುವ ಹಿನ್ನೆಲೆಯಲ್ಲಿ ಪಟ್ಟಣಕ್ಕೆ ನೀರಿನ ಸಮಸ್ಯೆಯಾಗದಂತೆ ಸದ್ಯ ಪುರಸಭೆಯ 18 ಕೊಳವೆ ಬಾವಿಗಳ ಮೂಲಕ ನೀರು ಪೂರೈಸಲಾಗುತ್ತಿದೆ. ಕೊಳವೆ ಬಾವಿಗಳ ಪೈಪ್‌ಲೈನ್ ಶುದ್ಧೀಕರಣ ಘಟಕಕ್ಕೆ ಅಳವಡಿಸಿಲ್ಲ. ನೇರವಾಗಿ ನೀರು ಪೂರೈಕೆ ಮಾಡಲಾಗುತ್ತಿದ್ದು, ಫ್ಲೋರೈಡ್ ಅಂಶ ತಡೆಯಲು ಕ್ರಮ ಕೈಗೊಳ್ಳಲಾಗುವುದು. ಪಟ್ಟಣದ ನೀರಿನ ಸಮಸ್ಯೆ ನಿವಾರಣೆಗೆ ಇನ್ನೂ 20 ಹೆಚ್ಚುವರಿ ಕೊಳವೆ ಬಾವಿಗಳನ್ನು ಕೊರೆಯಿಸಲು ಜಿಲ್ಲಾಧಿಕಾರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.
- ಬಾಬುರಾವ್ ಕಮತಗಿ, ಮುಖ್ಯಾಧಿಕಾರಿ ಪುರಸಭೆ, ರೋಣ
ಪ್ರತಿ ವರ್ಷ ಬೇಸಿಗೆಯಲ್ಲಿಯೂ ನೀರಿನ ಸಮಸ್ಯೆಯನ್ನು ಪಟ್ಟಣದ ಜನತೆ ಎದುರಿಸುತ್ತಿದ್ದಾರೆ. ಸರ್ಕಾರದಿಂದ ಕೋಟಿಗಟ್ಟಲೆ ಅನುದಾನ ಬಂದರೂ ನೀರಿನ ಸಮಸ್ಯೆ ನಿವಾರಿಸುವಲ್ಲಿ ಮತ್ತು ಬೇಸಿಗೆಯಲ್ಲಿ ನೀರಿಗಾಗಿ ಪರ್ಯಾಯ ವ್ಯವಸ್ಥೆ ಕಂಡುಕೊಳ್ಳುವಲ್ಲಿ ಪುರಸಭೆ ಆಡಳಿತ ಮತ್ತು ಅಧಿಕಾರಿಗಳು ವಿಫಲರಾಗಿದ್ದಾರೆ. ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದ ಜನತೆ ತೊಂದರೆ ಅನುಭವಿಸುವಂತಾಗಿದೆ. ಇನ್ನಾದರೂ ಜನತೆ ಸಮಸ್ಯೆಗೆ ಸ್ಪಂದಿಸುವಲ್ಲಿ ಮುಂದಾಗಿ.
- ವೀರೇಶ ದೊಡ್ಡಣ್ಣವರ, ರೋಣದ 15ನೇ ವಾರ್ಡ್ ನಿವಾಸಿ