ರಾಜ್ಯದಲ್ಲಿ 1 ಸಾವಿರ ಶುದ್ಧ ನೀರಿನ ಘಟಕ: ಎಚ್‌ಕೆಪಿ
ಗದಗ: ರಾಜ್ಯದಲ್ಲಿ ಶೀಘ್ರವೇ 1 ಸಾವಿರ ಶುದ್ಧ ಕುಡಿವ ನೀರಿನ ಘಟಕಗಳನ್ನು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಇಲಾಖೆ ವತಿಯಿಂದ ಪ್ರಾರಂಭಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ. ಪಾಟೀಲ್ ಹೇಳಿದರು.
ಸೋಮವಾರ ಗದಗಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಈ ಕುರಿತು ರಾಜ್ಯಪಾಲರ ಭಾಷಣದಲ್ಲಿ ಪ್ರಸ್ತಾಪವಾಗಿದ್ದು, ಅದನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಬೇಸಿಗೆಯಲ್ಲಿ ಜನತೆಗೆ ಶುದ್ಧ ಕುಡಿವ ನೀರು ಪೂರೈಕೆ ಮಾಡಲು ಇಲಾಖೆ ಗಂಭೀರ ಚಿಂತನೆ ನಡೆಸಿದೆ. 1 ಸಾವಿರ ಘಟಕಗಳನ್ನು ಮಾರ್ಚ್ ಅಂತ್ಯಕ್ಕೆ ಪೂರ್ಣಗೊಳಿಸುವ ಯೋಜನೆ ಹಾಕಿಕೊಳ್ಳಲಾಗಿದೆ. ಗ್ರಾಮೀಣ ಜನತೆಗೆ ಶುದ್ಧವಾದ ಕುಡಿವ ನೀರು ನೀಡಲು ಸರ್ಕಾರ ಸನ್ನದ್ಧವಾಗಿದೆ ಎಂದರು. ಸಚಿವ ಸಂಪುಟದಲ್ಲಿನ ಪ್ರಾತಿನಿಧ್ಯದ ಕುರಿತು ಕೇಳಿ ಬರುತ್ತಿರುವ ಅಪಸ್ವರದ ಬಗ್ಗೆ ಪ್ರಶ್ನಿಸಿದ ವೇಳೆ, ಉತ್ತರಿಸಿದ ಅವರು, ಈ ವಿಷಯದಲ್ಲಿ ಸಿಎಂ ಸೂಕ್ತ ನಿರ್ಣಯವನ್ನು ತೆಗೆದುಕೊಳ್ಳುತ್ತಾರೆ ಎಂದರು.