ಗುಬ್ಬಿ ವೀರಣ್ಣ ಪ್ರಶಸ್ತಿಗೆ ಕಲಾವಿದೆ ಫ್ಲೋರಿನಾಬಾಯಿ ಹೆಸರು ಶಿಫಾರಸು
ಗದಗ: ಹಿರಿಯ ರಂಗಕರ್ಮಿ ಫ್ಲೋರಿನಾಬಾಯಿ ಅವರಿಗೆ ಗುಬ್ಬಿ ವೀರಣ್ಣ ಪ್ರಶಸ್ತಿ ನೀಡುವಂತೆ ಶಿಫಾರಸು ಮಾಡಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು. ಅವರು ಭಾನುವಾರ ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಫ್ಲೋರಿನಾಬಾಯಿ ಚಿಕಿತ್ಸಾ ವೆಚ್ಚಕ್ಕಾಗಿ ಸರ್ಕಾರ ನೀಡಿರುವ 1.17 ಲಕ್ಷ ಚೆಕ್ ವಿತರಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು. ನಾಟಕಗಳಲ್ಲಿ ದಶಕಗಳ ಕಾಲ ಹಾಸ್ಯ ಪಾತ್ರಗಳ ಮೂಲಕ ಎಲ್ಲರನ್ನು ನಗಿಸುತ್ತಿದ್ದ ಕಲಾವಿದೆ ಫ್ಲೋರಿನಾಬಾಯಿ ಈಗ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದಾರೆ. ಅವರಿಗೆ ಸ್ಪಂದಿಸುವ ನಿಟ್ಟಿನಲ್ಲಿ ಸರ್ಕಾರ ಅಗತ್ಯ ಕ್ರಮ ತೆಗೆದುಕೊಂಡಿದೆ. ಅವರ ಜೀವನ ಚರಿತ್ರೆಯನ್ನು ಸಾಕ್ಷ್ಯಚಿತ್ರವಾಗಿ ರೂಪಿಸುವ ನಿಟ್ಟಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಾರ್ತಾ ಇಲಾಖೆಯ ಅಧಿಕಾರಿಗಳು ಗಮನಹರಿಸಿ, ಶೀಘ್ರ ಪೂರ್ಣಗೊಳಿಸಲು ಸೂಚಿಸಿದ್ದೇನೆ ಎಂದರು.