ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಗಜೇಂದ್ರಗಡ ಸುತ್ತ ಮರಗಳ್ಳರ ಹಾವಳಿ

Srinivasa Murthy VN
Updated On : 5 Jun 2014, 12:52 pm

ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮದಲ್ಲಿ ಮರಗಳ್ಳರು ಹಾಡಹಗಲೇ ಮೌಲ್ಯಯುತ ಮರಗಳನ್ನು ಕಡಿಯುತ್ತಿದ್ದರೂ ಕ್ರಮಕ್ಕೆ ಮುಂದಾಗದ ಅರಣ್ಯ ಇಲಾಖೆಯ ಅಧಿಕಾರಿಗಳ ವರ್ತನೆ ಪರಿಸರ ಪ್ರೇಮಿಗಳನ್ನು ಕೆರಳಿಸುವಂತೆ ಮಾಡಿದೆ.
ಸಮೀಪದ ಲಕ್ಕಲಕಟ್ಟಿ, ನಾಗೇಂದ್ರಗಡ, ನೆಲ್ಲೂರ, ಕುಂಟೋಜಿ, ವದೇಗೋಳ ಗ್ರಾಮಗಳ ಗುಡ್ಡದ ಅರಣ್ಯ ಸಂಪತ್ತು ಮತ್ತು ರಸ್ತೆ ಬದಿಯ ಮರಗಳನ್ನು ದುಷ್ಕರ್ಮಿಗಳು ಕೊಳ್ಳೆ ಹೊಡೆಯುತ್ತಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಮಾತ್ರ ನಮಗೇನು ಗೊತ್ತಿಲ್ಲ ಎಂಬಂತೆ ವರ್ತಿಸುತ್ತಿರುವುದು ಹಲವಾರು ಗುಮಾನಿಗೆ ಎಡೆ ಮಾಡಿದೆ ಎಂದು ಜನ ದೂರುತ್ತಾರೆ.
ಪರೋಪಕಾರಿಗೆ ಕೊಡಲಿ ಪೆಟ್ಟು: ಮಾನವನ ದುರಾಸೆಗೆ ಅರಣ್ಯ ಸಂಪತ್ತು ನಿತ್ಯ ಹರಣವಾಗುತ್ತಿದೆ. ಇನ್ನೊಂದೆಡೆ ಪರಿಸರ ಸಂಪತ್ತು ಉಳಿಸಿ ಬೆಳೆಸುವತ್ತ ವನಮಹೋತ್ಸವದಂತಹ ಕಾರ್ಯಕ್ರಮಗಳನ್ನು ವಿವಿಧ ಸಂಘ-ಸಂಸ್ಥೆಗಳು ಹಮ್ಮಿಕೊಂಡು ಶ್ರಮಿಸುತ್ತಿವೆ. ಜತೆಗೆ ಪರಿಸರ ನಾಶದಿಂದ ಎದುರಾಗಲಿರುವ ಅನಾಹುತಗಳ ಬಗ್ಗೆ ಜನರಲ್ಲಿ ಜಾಗೃತಿ ಕಾರ್ಯವೂ ನಡೆದಿದೆ. ಆದರೂ ಕಾನೂನಿನ ಯಾವುದೇ ಭಯವಿಲ್ಲದೆ ಗಿಡ, ಮರಗಳನ್ನು ಕಡಿಯುತ್ತಿರುವ ದುಷ್ಕರ್ಮಿಗಳ ಅಟ್ಟಹಾಸ ಮುಂದುವರಿದಿದೆ. ನಿಸ್ವಾರ್ಥ ಸೇವೆ ಕೈಗೊಂಡ ಪರಿಸರ ಪ್ರೇಮಿಗಳ ಮೂಲ ಉದ್ದೇಶಕ್ಕೆ ಕೊಡ್ಲಿ ಪೆಟ್ಟು ಕೊಡುತ್ತಿದ್ದಾರೆಂದು ಪ್ರಜ್ಞಾವಂತರು ಹೇಳುತ್ತಾರೆ.
ಪರಿಸರ ಪ್ರೇಮಿಗಳ ಕೆಂಗಣ್ಣು: ರಸ್ತೆ ಬದಿಯ ಸರ್ಕಾರಿ ಸ್ವಾಮ್ಯದ ಗಿಡ-ಮರಗಳನ್ನು ದುಷ್ಕರ್ಮಿಗಳು ಹಾಡುಹಗಲೇ ಕಡಿದು ಲೂಟಿ ಮಾಡುತ್ತಿರುವುದನ್ನು ವಿರೋಧಿಸಿ ಸಾರ್ವಜನಿಕರು, ಪರಿಸರ ಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಲವಾರು ವರ್ಷಗಳ ಹಿಂದೆ ಅರಣ್ಯ ಇಲಾಖೆ ವತಿಯಿಂದ ನೆಟ್ಟಿರುವ ಈ ಮರಗಳು ದಾರಿ ಹೊಕರಿಗೆ ಮತ್ತು ಕೃಷಿಕರಿಗೆ ನೆರಳು ನೀಡುತ್ತಿದ್ದವು. ಈ ಭಾಗದಲ್ಲಿ ಜನಕ್ಕೆ ಪರೋಪಕಾರಿಗಳಾಗಿದ್ದವು. ಅವುಗಳನ್ನು ದುಷ್ಕರ್ಮಿಗಳು ದಿನಕ್ಕೆ ಒಂದೆರಡರಂತೆ ನಿತ್ಯ ಮರಗಳ ಮಾರಣಹೋಮ ನಡೆಸಿದ್ದಾರೆ. ದುಷ್ಕೃತ್ಯ ಹೀಗೆ ಬಿಟ್ಟರೆ ಕೆಲ ದಿನದಲ್ಲಿ ಎಲ್ಲ ಹಸಿರು ಸಂಪತ್ತು ನಾಶವಾಗಲಿದೆ ಎಂದು ಪರಿಸರ ಪ್ರೇಮಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಅರಣ್ಯ ಅಧಿಕಾರಿಗಳ ಮೌನ: ರಸ್ತೆ ಪಕ್ಕದಲ್ಲಿ ಈ ಕೃತ್ಯ ನಡೆದಿದ್ದರಿಂದ ಎಲ್ಲರಿಗೂ ಗೋಚರಿಸುತ್ತದೆ. ಆದರೆ, ಇಲ್ಲಿನ ಗುಡ್ಡದ ಬಹು ಅಮೂಲ್ಯ ಅರಣ್ಯ ಸಸ್ಯ ಸಂಪತ್ತನ್ನು ಹಲವಾರು ವರ್ಷಗಳಿಂದ ದುಷ್ಕರ್ಮಿಗಳು ಕೊಳ್ಳೆ ಹೊಡೆಯುತ್ತಿರುವುದು ಇನ್ನೂ ಬೆಳಕಿಗೆ ಬಂದಿಲ್ಲ. ಆಯುರ್ವೇದಿಕ ಔಷಧಿ ಗುಣ ಸಸ್ಯಗಳು ಹೊಂದಿರುವ ಈ ಬೆಟ್ಟಗುಡ್ಡಗಳು ಸುತ್ತಲಿನ ಹಳ್ಳಿಗಳ ಜಾನುವಾರುಗಳಿಗೆ ಸಂಜೀವಿನಿಯಾಗಿವೆ. ಜನರ ಒಡನಾಟದಲ್ಲಿ ವಿಶಾಲತೆಯ ಪ್ರತೀಕದಂತೆ ತೊರುತ್ತಿರುವ ಈ ಬೆಟ್ಟಗುಡ್ಡಗಳು ಅರಣ್ಯದಿಂದ ಈ ಮೊದಲು ಕಂಗೊಳಿಸುತ್ತಿದ್ದವು. ಆದರೆ, ಇವುಗಳ ರಕ್ಷಣೆ ಹೊಣೆ ಹೊತ್ತ ಸರ್ಕಾರದ ಬೇಜವಾಬ್ದಾರಿಯಿಂದ ಈ ಗುಡ್ಡಗಳ ಸೌಂದರ್ಯ ಹಾಳಾಗಿ ಬೋಳಾಕಾರ ಹಂತ ತಲುಪಿರುವುದು ಈ ಭಾಗದ ದುರ್ದೈವ ಸಂಗತಿ.

ಪ್ರಕೃತಿ ನಿರ್ಮಿತ, ಅರಣ್ಯ ಇಲಾಖೆ ಹಾಗೂ ಸಾರ್ವಜನಿಕರಿಂದ ನೆಟ್ಟಿರುವ ಯಾವುದೇ ಗಿಡ-ಮರಗಳನ್ನು ಕಡಿಯುವ ಮುನ್ನ ಅರಣ್ಯ ಇಲಾಖೆಯ ಪರವಾನಗಿ ಅಗತ್ಯ. ಈ ನಿಟ್ಟಿನಲ್ಲಿ ಪರವಾನಗಿ ಇಲ್ಲದೇ ಗಿಡ-ಮರಗಳನ್ನು ಕಡಿದರೆ ಅರಣ್ಯ ಇಲಾಖೆ ಕಾನೂನು ಕ್ರಮ ಜರುಗಿಸಲಾಗುವುದು.
-ಎಸ್.ಎಂ. ತಳವಾರ, ಪ್ರಭಾರಿ ಉಪ ವಲಯ ಅರಣ್ಯಾಧಿಕಾರಿ
ಮುನುಷ್ಯನ ಸ್ವಾರ್ಥಕ್ಕೆ ಪ್ರಕೃತಿ ನಿರ್ಮಿತ ಅರಣ್ಯ ಸಂಪತ್ತು ನಶಿಸುತ್ತಿದೆ. ಈ ನಿಟ್ಟಿನಲ್ಲಿ ರೋಣ ತಾಲೂಕಿನಲ್ಲಿ ಅರಣ್ಯ ಇಲಾಖೆ ಇದೆಯೋ, ಇಲ್ಲವೋ ಎನ್ನುವ ಪ್ರಶ್ನೆಗಳು ಕಾಡುತ್ತಿವೆ. ಕಾರಣ ನಿತ್ಯ ಗಿಡ-ಮರಗಳ ಮಾರಣ ಹೋಮ ತಡೆಯುವವರು ಯಾರು?
-ಮಹಾಂತೇಶ್ವರ ಹೊಸಮನಿ,
 ಪರಿಸರ ಪ್ರೇಮಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement