ನಿಷ್ಠಾವಂತ ಕಾರ್ಯಕರ್ತರಿಗೆ ಬೆಲೆಯಿಲ್ಲ
ನರಗುಂದ: ಇಂದಿನ ರಾಜಕಾರಣದಲ್ಲಿ ನಿಷ್ಠಾವಂತ ಕಾರ್ಯಕರ್ತರಿಗೆ ಬೆಲೆ ಇಲ್ಲದಾಗಿದೆ. ಜೆಡಿಎಸ್ ಸಂಘಟನೆ ಗೊತ್ತಿಲ್ಲದವರಿಗೆ ಇಂದು ರಾಜಕೀಯ ಪಕ್ಷಗಳು ಟಿಕೆಟ್ ನೀಡುತ್ತಿವೆ ಎಂದು ಜೆಡಿಎಸ್ ಬಂಡಾಯ ಅಭ್ಯರ್ಥಿ ಹನುಮಂತಗೌಡ ಕಲ್ಮನಿ ಆರೋಪಿಸಿದರು.
ಈಚೆಗೆ ಪಟ್ಟಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ನಾನು ಜೆಡಿಎಸ್ ಸಂಘಟನೆಗಾಗಿ ಸುಮಾರು 9 ವರ್ಷಗಳಿಂದ ದುಡಿದಿದ್ದೇನೆ. ನಿಷ್ಠಾವಂತ ಕಾರ್ಯಕರ್ತರಿಗೆ ಇಂದು ಬೆಲೆ ಇಲ್ಲದಂತಾಗಿದೆ. ಜೆಡಿಎಸ್ ಪದವಿದರ ಕ್ಷೇತ್ರದ ಟಿಕೆಟ್ ನೀಡದೆ ವಂಚಿಸಿದೆ. ಪಕ್ಷದ ಸಂಘಟನೆ ಗೊತ್ತಿಲ್ಲದವರಿಗೆ ಜೆಡಿಎಸ್ ವರಿಷ್ಠರು ಟಿಕೆಟ್ ನೀಡಿ ನಿಷ್ಠಾವಂತ ಕಾರ್ಯಕರ್ತರಿಗೆ ಅನ್ಯಾಯ ಮಾಡಿದೆ. ಕೇವಲ ಹಣ, ತೋಳ್ಬಲ ಹೊಂದಿದವರಿಗೆ ಮಾತ್ರ ಟಿಕೆಟ್ ನೀಡುವ ವ್ಯವಸ್ಥೆ ರಾಜಕೀಯ ಪಕ್ಷಗಳಲ್ಲಿ ನಡೆದಿದ್ದು ವಿಷಾದನೀಯ.
ಈ ಬಾರಿ ನನಗೆ ಜೆಡಿಎಸ್ ಟಿಕೆಟ್ ಕೊಡದಿದ್ದರೂ ಕೂಡ ನಾನು ಅತಿಥಿ ಉಪನ್ಯಾಸಕರ ಸಮಸ್ಯೆಗಳ ಬಗ್ಗೆ ಗದಗದಿಂದ ಧಾರವಾಡದವರಿಗೆ ಪಾದಯಾತ್ರೆ ಮಾಡಿ ವಿವಿಧ ಬೇಡಿಕೆಗಳ ಬಗ್ಗೆ ಹೋರಾಟ ಮಾಡಿದ್ದೇನೆ. ಮೇಲಾಗಿ ಕಾರವಾರ, ಅಂಕೋಲಾ, ಧಾರವಾಡ, ಗದಗ, ಹಾವೇರಿಗೆ ಭೇಟಿ ನೀಡಿದ ಸಂದರ್ಭ ಎಲ್ಲ ಪದವೀದರರು ನನಗೆ ಬೆಂಬಲಿಸಲು ಮುಂದಾಗಿದ್ದರಿಂದ ಈ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದು ಈ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಅಪ್ಪ-ಮಕ್ಕಳಿಗೆ ತಕ್ಕಪಾಠ ಕಲಿಸುತ್ತೇನೆ ಎಂದರು. ಮಂಜು ಗೊಲ್ಲರ, ವೀರೇಶ ಹೂಗಾರ, ಬಿ.ಎಚ್. ಘಟ್ಟನವರ ಉಪಸ್ಥಿತರಿದ್ದರು.