ಪರಿಸರ ಜಾಗೃತಿಯೊಂದಿಗೆ ರೈತರಿಗೆ ಆದಾಯ
-ಶಿವಕುಮಾರ ಕುಷ್ಟಗಿ
ಕನ್ನಡಪ್ರಭ ವಾರ್ತೆ. ಗದಗ. ಜೂ. 4
ಇಂದು ವಿಶ್ವ ಪರಿಸರ ದಿನ. ನಾವೆಲ್ಲಾ ಪರಿಸರ ಕಾಳಜಿ ಮತ್ತು ಅದರ ಉಳಿವಿಗಾಗಿ ಶ್ರಮಿಸಬೇಕಿದೆ. ಗದಗ ವಲಯ ಅರಣ್ಯ ಇಲಾಖೆ ಸಿಬ್ಬಂದಿ, ಸಾರ್ವಜನಿಕರು ಹಾಗೂ ರೈತರಲ್ಲಿ ಪರಿಸರ ಜಾಗೃತಿ ಮೂಡಿಸುವುದರೊಟ್ಟಿಗೆ ಅವರ ಆದಾಯ ಹೆಚ್ಚಳಕ್ಕೆ ಕಾರಣವಾಗಿದ್ದು, ಇದು ಇತರರಿಗೆ ಮಾದರಿಯಾಗಿದೆ.
ರೈತರು ದಿನದ ತಮ್ಮೆಲ್ಲ ಸಮಯವನ್ನು ಕೃಷಿ ಕಾಯಕದಲ್ಲಿಯೇ ಕಳೆಯುವುದರಿಂದ ಅವರಿಗೆ ಪರಿಸರ ಮತ್ತು ಅದರ ಉಳಿವಿನ ಬಗ್ಗೆ ಜಾಗೃತಿ ಮೂಡಿಸಿದಲ್ಲಿ ಹೆಚ್ಚಿನ ಲಾಭವಾಗುತ್ತದೆ ಎನ್ನುವುದನ್ನು ಮನಗಂಡ ಗದಗ ವಲಯ ಅಧಿಕಾರಿಗಳು, ಪರಿಸರಕ್ಕೆ ಅನುಕೂಲವಾಗುವ ಹಾಗೂ ರೈತರ ಆದಾಯ ಹೆಚ್ಚಿಸುವ ಗಿಡಗಳನ್ನು ಬೆಳೆಸುವ ಕಾರ್ಯದಲ್ಲಿ ಮಗ್ನರಾಗಿ ಶೇ. 65ರಷ್ಟು ಯಶಸ್ಸು ಕಂಡಿದ್ದು, ಇದು ಈಚೆಗೆ ಕೇಂದ್ರ ಸರ್ಕಾರ ನಡೆಸಿದ ಸಮೀಕ್ಷೆಯಲ್ಲಿ ಸಾಬೀತಾಗಿದೆ.
2 ಲಕ್ಷ 25 ಸಾವಿರ ಗಿಡ ನಾಟಿ: ಅರಣ್ಯ ಇಲಾಖೆ ಸಿಬ್ಬಂದಿ ತಮ್ಮ ಇಲಾಖೆಯಡಿ ಅರಣ್ಯ ಉತ್ತೇಜನಕ್ಕಾಗಿ ನೀಡುವ ಅನುದಾನದಲ್ಲಿ 2013-14ನೇ ಸಾಲಿನಲ್ಲಿ ಇದುವರೆಗೂ 2.25 ಲಕ್ಷಕ್ಕೂ ಹೆಚ್ಚಿನ ಗಿಡಗಳನ್ನು ಬೆಳೆಸಿದ್ದಾರೆ. ಇದರಲ್ಲಿ ಮುಖ್ಯವಾಗಿ ರೈತರಿಗೆ 1. 75 ಲಕ್ಷದಷ್ಟು ಗಿಡಗಳನ್ನು ವಿತರಣೆ ಮಾಡಿದ್ದು, ಆಸಕ್ತ ರೈತರು ತಮ್ಮ ಹೊಲದ ಬದುವಿನಲ್ಲಿ ಗಿಡಗಳನ್ನು ಬೆಳೆಸುತ್ತಿರುವುದರಿಂದ ರೈತರಿಗೆ ತಮ್ಮ ಜಮೀನಿನಲ್ಲಿರುವ ಮಣ್ಣು ರಭಸದ ಮಳೆಗೆ ಕೊಚ್ಚಿ ಹೋಗದಂತೆ ತಡೆಯಲು ಹಾಗೂ ಬಳಕೆಯಾಗದೇ ಇರುವ ಭೂಮಿಯಲ್ಲಿ ಇವುಗಳನ್ನು ಬೆಳೆಯುತ್ತಿರುವುದರಿಂದ ಅವರಿಗೆ ಹೆಚ್ಚಿನ ಅನುಕೂಲವಾಗಿದೆ.
ಆದಾಯಕ್ಕೆ ದಾರಿ: ಅರಣ್ಯ ಇಲಾಖೆ ರೈತರಿಗೆ ವಿತರಣೆ ಮಾಡಿರುವ ಹಾಗೂ ಅರಣ್ಯ ಪ್ರದೇಶದಲ್ಲಿ ನಾಟಿ ಮಾಡಿರುವ ಬಹುತೇಕ ಗಿಡಗಳಲ್ಲಿ ಹೊಂಗೆ ಮತ್ತು ಬೇವು ಹೆಚ್ಚಿನ ಸಂಖ್ಯೆಯಲ್ಲಿ ಬೇವು ಪರಿಸರಕ್ಕೆ ಅತ್ಯಂತ ಅನುಕೂಲಕರ ಮರವಾಗಿದ್ದು, ಇದರೊಟ್ಟಿಗೆ ವರ್ಷಕ್ಕೊಮ್ಮೆ ಗುಣಮಟ್ಟದ ಬೇವಿನ ಬೀಜಗಳನ್ನು ನೀಡುವುದರಿಂದ, ಆಯ್ದು ಬೇರೆಡೆ ಮಾರಾಟ ಮಾಡುವುದರಿಂದ ಬೇಸಿಗೆ ಸಂದರ್ಭ ಕೃಷಿ ಇಲ್ಲದ ವೇಳೆಯಲ್ಲಿ ಕಾರ್ಮಿಕರಿಗೆ ದೊಡ್ಡ ಕೂಲಿಯನ್ನು ಬೇವಿನ ಮರಗಳು ನೀಡುತ್ತಿವೆ.
ಇನ್ನು ರೈತರ ಜಮೀನಿನ ಬದುವಿನಲ್ಲಿರುವ ಹೊಂಗೆ ಮರಗಳು ಬಿಡುವ ಕಾಯಿಗಳಿಂದ ಅಪಾರ ಪ್ರಮಾಣದ ಜೈವಿಕ ಇಂಧನ ಉತ್ಪತ್ತಿಯಾಗಲಿದ್ದು, ಇದು ರೈತರ ಆದಾಯಕ್ಕೆ ದಾರಿಯಾಗಿದೆ.
ಗದಗ ತಾಲೂಕಿನ ಕಪ್ಪತ್ತಗುಡ್ಡ, ಕಬಲಾಯತಕಟ್ಟಿ ವಿವಿಧ ಗ್ರಾಮಗಳಲ್ಲಿ ಪರಿಸರ ಜಾಗೃತಿಯೊಂದಿಗೆ ರೈತರ ಆದಾಯ ಹೆಚ್ಚಳವಾಗುವ ನಿಟ್ಟಿನಲ್ಲಿ ಇಲಾಖೆ ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದೆ. ಸಾರ್ವಜನಿಕರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಗದಗ ನಗರದ ಎಲ್ಲ ಶಾಲೆ, ಕಾಲೇಜುಗಳ ಆವರಣದಲ್ಲೂ ಗಿಡ ನೆಟ್ಟು ಮಕ್ಕಳಲ್ಲಿ ಪರಿಸರ ಜಾಗೃತಿ, ಕಾಲೇಜು ಆವರಣದಲ್ಲಿ ಉತ್ತಮ ಪರಿಸರ ನಿರ್ಮಾಣ ಮಾಡಿದ್ದೇವೆ. ಇದು ಇಲಾಖೆಗೆ ಸಾರ್ವಜನಿಕರ ಸಹಕಾರದಿಂದ ಸಾಧ್ಯವಾಗಿದೆ.
- ಎಸ್.ವೈ. ಬೀಳಗಿ,
ವಲಯ ಅರಣ್ಯ ಅಧಿಕಾರಿ, ಗದಗ