ಬೆಳೆ ಹಾನಿ: ರೈತನಿಂದ ಲೋಕಾಯುಕ್ತಗೆ ದೂರು
ಕನ್ನಡಪ್ರಭ ವಾರ್ತೆ, ನರಗುಂದ, ಜೂ. 4
ತಾಲೂಕಿನ ಗುರ್ಲಕಟ್ಟಿ ಗ್ರಾಮದ ರೈತ ವಸಂತರಡ್ಡಿ ರಂಗರಡ್ಡಿಯವರು 2013ನೇ ಸಾಲಿನಲ್ಲಿ ಮುಂಗಾರು ಹಂಗಾಮಿನಲ್ಲಿ ಬಿತ್ತನೆಗೊಂಡ ಗೋವಿನ ಜೋಳ ಬೆಳೆಗೆ ಅತಿ ವೃಷ್ಟಿಯಾಗಿ ತುಂಬಾ ನಷ್ಟವಾಗಿದ್ದು, ಈ ಕುರಿತು ಪರಿಹಾರಕ್ಕೆ ಕಂದಾಯ ಇಲಾಖೆಗೆ ಮನವಿ ನೀಡಿದರೂ ಪರಿಹಾರ ದೊರೆತಿಲ್ಲ ಎಂದು ಆರೋಪಿಸಿ ಲೋಕಾಯುಕ್ತ ಡಿಸಿಪಿ ಕೆ.ಎಸ್. ಅಸುಂಡಿ ಅವರಿಗೆ ದೂರು ಸಲ್ಲಿಸಿದರು.
ಅವರು ತಾಲೂಕಿನ ಹಳೇ ತಹಸೀಲ್ದಾರ್ ಕಾರ್ಯಾಲಯದಲ್ಲಿ ಗುರುವಾರ ಲೋಕಾಯುಕ್ತರು ಭೇಟಿ ನೀಡಿದ ಸಂದರ್ಭದಲ್ಲಿ ಲೋಕಾಯುಕ್ತರಿಗೆ ವಸಂತರಡ್ಡಿ ರಂಗರಡ್ಡಿ ದೂರು ಸಲ್ಲಿಸಿದರು.
ನಮ್ಮ ಗೋವಿನ ಜೋಳದ ಪರಿಹಾರ ಹಾನಿ ನೀಡುವಂತೆ 1 ವರ್ಷ ಗತಿಸಿದರೂ ಕೂಡ ಇಲ್ಲಿಯ ವರೆಗೂ ಪರಿಹಾರ ನೀಡಿಲ್ಲವಲ್ಲ ಏಕೆ ಎಂದು ತಹಸೀಲ್ದಾರರನ್ನು ಕೇಳಿದಾಗ ಈ ಸಂದರ್ಭದಲ್ಲಿ ಮಾತನಾಡಿದ ತಹಸೀಲ್ದಾರರು ಬೆಳೆಹಾನಿಯಾಗಿರುವ ಕುರಿತು ಈ ಕೂಡಲೇ ಸಂಪೂರ್ಣ ಮಾಹಿತಿಯನ್ನು ಗ್ರಾಮ ಲೆಕ್ಕಾಧಿಕಾರಿಗಳಿಂದ ಮಾಹಿತಿ ಪಡೆದುಕೊಂಡು ಪರಿಹಾರ ಕುರಿತು ನಿರ್ಣಯ ತಗೆದುಕೊಳ್ಳುವುದಾಗಿ ತಿಳಿಸಿದರು.
ಪಟ್ಟಣದ ದಂಡಾಪುರ ಓಣಿಯ ವಿ.ಎಂ. ದೇಶಪಾಂಡೆ ಅವರು ಚರಂಡಿ ಕಾಮಗಾರಿ ಖಾಸಗಿ ಗುತ್ತಿಗೆದಾರರ ಕಳಪೆ ಮಟ್ಟದ ಕಾಮಗಾರಿ ಮಾಡಿದ್ದು ಈ ಕುರಿತು ಪುರಸಭಯ ಅಧಿಕಾರಿಗಳಿಗೆ ತಿಳಿಸಿದರೂ ಕೂಡ ಇಲ್ಲಿಯವರಿಗೆ ಗುತ್ತಿಗೆದಾರರ ಮೇಲೆ ಯಾವುದೇ ಕ್ರಮ ತೆಗೆದುಕೊಂಡಿಲ್ಲವೆಂದು ತಿಳಿಸಿದಾಗ ಲೋಕಾಯುಕ್ತರು ಮಾತನಾಡಿ, ಆದಷ್ಟು ಬೇಗನೆ ಈ ಕುರಿತು ಸಂಬಂಧಿಸಿದ ಅಧಿಕಾರಿಗಳ ಜತೆ ಮಾತನಾಡಿ ಸೂಕ್ತ ಕ್ರಮ ತೆಗೆದುಕೊಳ್ಳುವಾಗಿ ತಿಳಿಸಿದರು. ತಹಸೀಲ್ದಾರ್ ಎಚ್.ಡಿ. ನಾಗವಿ, ತಾಪಂ ಅಧಿಕಾರಿ ನಂದಕುಮಾರ ಗುಂಡಾ, ಗೀತಾ ಬಿರಸಲ್, ನಾರಾಯಣ ತಾಯನ್ನವರ, ಹುಣಸಿಮರದ ಇದ್ದರು.