ಮಗು ವಿಕಾಸಕ್ಕೆ ಬೇಸಿಗೆ ಶಿಬಿರ
ಕನ್ನಡಪ್ರಭ ವಾರ್ತೆ, ಗದಗ, ಜೂ. 4
ಜಾನಪದ ನೃತ್ಯ, ದೇಶಭಕ್ತಿಗೀತೆ, ಕೌಶಲ್ಯಗಳ ತರಬೇತಿ ಮತ್ತು ಕಲಿಕಾ ಪ್ರಕ್ರಿಯೆ ಜತೆಗೂಡಿ ಸಾಗುವುದರಿಂದ ಮಗುವಿನ ಸರ್ವತೋಮುಖ ಅಭಿವೃದ್ಧಿಯಾಗುವುದರಲ್ಲಿ ಸಂದೇಹವಿಲ್ಲ ಎಂದು ಗದಗ ಗ್ರಾಮೀಣ ಕ್ಷೇತ್ರ ಸಮನ್ವಯಾಧಿಕಾರಿ ವಿ.ವಿ. ನಡುವಿನಮನಿ ಹೇಳಿದರು.
ತಾಲೂಕಿನ ಕದಡಿ ಗ್ರಾಮದ ಕಲ್ಲಿನಾಥ ದೇವಸ್ಥಾನ ಜೀರ್ಣೋದ್ಧಾರ ಸೇವಾ ಸಮಿತಿ ನೇತೃತ್ವದಲ್ಲಿ ಈಚೆಗೆ ಜರುಗಿದ 2013-14ನೇ ಸಾಲಿನ ಪ್ರಥಮ ವರ್ಷದ ಮಕ್ಕಳ ಬೇಸಿಗೆ ಶಿಬಿರ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ನಾಡಕವಿ ಹುಯಿಲಗೋಳ ನಾರಾಯಣರಾವ್ ಕಲಾ ಮತ್ತು ಸಂಸ್ಕೃತಿ ರಾಜ್ಯ ಸಮಿತಿ ಉಪಾಧ್ಯಕ್ಷ ಎನ್.ಕೆ. ಕೊರ್ಲಹಳ್ಳಿ ಮಾತನಾಡಿ, ಮಕ್ಕಳ ಬೇಸಿಗೆ ರಜಾ ತರಬೇತಿಗಳಲ್ಲಿ ಪ್ರಸ್ತುತದಲ್ಲಿರುವ ನವೋದಯ, ಮೊರಾರ್ಜಿ ಶಾಲೆ ಪ್ರವೇಶ ಪರೀಕ್ಷೆಗೆ, ತರಬೇತಿ ನೀಡುವ ತರಬೇತಿ ಸಂಸ್ಥೆಗಳ ಕೌಶಲ್ಯ ಪೂರಕ ವ್ಯಕ್ತಿಗಳಿಂದ ಪಠ್ಯಕ್ರಮಕ್ಕೆ ಆಧಾರಿತವಾಗಿ ವಿಶೇಷ ಕೌಶಲ್ಯಗಳನ್ನು ಹೊಂದಿದ ಶಿಕ್ಷಕರಿಂದ ಮಾರ್ಗದರ್ಶನ ನೀಡುವುದರಿಂದ ಅವು ಇನ್ನೂ ಮಹತ್ವಪೂರ್ಣವೆನಿಸುವವು ಎಂದರು.
ಗದಗ ಬಿಆರ್ಸಿ ಕೆ.ಬಿ. ಕೊಲ್ಲೂರ, ಗದಗನ ನ್ಯೂ ಎಕ್ಸ್ಲಂಟ್ ಸಿಇಟಿ ಕೋಚಿಂಗ್ ಸೆಂಟರ್ ಹಾಗೂ ಕರುನಾಡು ನವೋದಯ ಸೆಂಟರ್ ನಿರ್ದೇಶಕ ಎಂ.ಎಸ್. ಹುಲ್ಲೂರ, ಕಲ್ಲಿನಾಥ ದೇವಸ್ಥಾನ ಜೀರ್ಣೋದ್ಧಾರ ಸೇವಾ ಸಮಿತಿ ಅಧ್ಯಕ್ಷ ಮೂಲಿಮನಿ, ಕದಡಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯ ಎಂ.ಎಲ್. ಅಯ್ಯನಗೌಡರ ಪ್ರಾಸ್ತಾವಿಕ ಮಾತನಾಡಿದರು.
ಶಿಕ್ಷಕ ಜಿ.ಬಿ. ಪೊಲೀಸ್ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.