ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ವ್ಯಕ್ತಿ ತೇಜೋವಧೆ ಸರಿಯಲ್ಲ: ಕೊಟಗಿ

Srinivasa Murthy VN
Updated On : 5 Jun 2014, 12:52 pm

ಲಕ್ಷ್ಮೇಶ್ವರ: ಪಶ್ಚಿಮ ಪದವೀಧರ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ವಸಂತ ಹೊರಟ್ಟಿ ಅವರು ಮಾಜಿ ಸಚಿವ ಬಸವರಾಜ ಹೊರಟ್ಟಿ ಅವರ ಪುತ್ರ ಎನ್ನುವುದು ಮಾತ್ರ ಬಿಜೆಪಿ ಹಾಗೂ ಕಾಂಗ್ರೆಸ್ ಆಪಾದನೆಯಾಗಿದೆ. ಆದರೆ ಎಲೆಮರೆಯ ಕಾಯಿಯಂತೆ ಹಲವಾರು ಸಂಘಟನೆಗಳಲ್ಲಿ ತೊಡಗಿಸಿಕೊಂಡಿರುವ ವಸಂತ ಹೊರಟ್ಟಿ ಕೂಡ ಹೋರಾಟಗಾರ ಎಂಬುದನ್ನು ಮರೆಯುವಂತಿಲ್ಲ ಎಂದು ಗದಗ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶರಣಬಸಪ್ಪ ಕೊಟಗಿ ಹೇಳಿದ್ದಾರೆ.
ಅವರು ಪಟ್ಟಣದ ಎಸ್.ಎಸ್. ನಾಗಲೋಟಿ ಅವರ ನಿವಾಸದಲ್ಲಿ ಬುಧವಾರ ಜೆಡಿಎಸ್ ಅಭ್ಯರ್ಥಿ ವಸಂತ ಹೊರಟ್ಟಿ ಪರ ಪ್ರಚಾರ ನಡೆಸಿದ ಅನಂತರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಪ್ರಾ. ಎಸ್.ವಿ. ಸಂಕನೂರ ಅವರು 30 ವರ್ಷಗಳಿಂದ ಮಾಜಿ ಸಚಿವ ಬಸವರಾಜ ಹೊರಟ್ಟಿ ಅವರ ನೆರಳಿನಂತೆ ಕೆಲಸ ಮಾಡಿದ್ದಾರೆ. ಹೊರಟ್ಟಿ ಅವರ ಪ್ರಭಾವದೊಂದಿಗೆ ಬೆಳೆದಿರುವ ಸಂಕನೂರ ಈಗ ಹೊರಟ್ಟಿ ಅವರನ್ನು ದೂಷಿಸುವುದರಲ್ಲಿ ಸರಿಯಲ್ಲ. ವೈಯಕ್ತಿಕ ನಿಂದನೆ ಮಾಡುವುದನ್ನು ಬಿಟ್ಟು ತಾವು ಮಾಡಿದ ಕೆಲಸ-ಕಾರ್ಯ ಆಧಾರದ ಮೇಲೆ ಮತ ಕೇಳಬೇಕು. ಪ್ರಜ್ಞಾವಂತ ಮತದಾರರನ್ನು ದಾರಿ ತಪ್ಪಿಸುವ ಕೆಲಸ ಮಾಡುವುದು ತರವಲ್ಲ ಎಂದರು. ಬಸವರಾಜ ಧಾರವಾಡ ಮಾತನಾಡಿದರು. ಎಸ್.ಟಿ. ಬ್ಯಾಕೋಡ, ಎಂ.ಎಸ್. ಚಿನ್ನೂರ, ಮಹಾಂತೇಶ ನೆಲವಿಗಿ, ಶಂಕರ ಬಾಳಿಕಾಯಿ, ಎಂ.ಕೆ. ಲಮಾಣಿ, ಎಚ್.ಎಂ. ಮುಳಗುಂದ, ಕೊಣ್ಣೂರ, ವೀರೇಂದ್ರಗೌಡ ಪಾಟೀಲ, ಲಿಂಗಶೆಟ್ಟಿ, ಪಿ.ಜಿ. ಯಲುವಿಗಿ, ಜೆ. ಶಿವಾಜಿ ಹಾಜರಿದ್ದರು.

ಸಂಕನೂರ ಬೆಂಬಲ: ಪಾಟೀಲ
ಗದಗ: ಶಿಕ್ಷಣ ರಂಗದ ಹೋರಾಟಗಾರ ಪ್ರಾ. ಎಸ್.ವಿ. ಸಂಕನೂರ ಅವರನ್ನು ಬೆಂಬಲಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಡಿಜಿಎಂ ಆಯುರ್ವೇದಿಕ್ ಕಾಲೇಜಿನ ಪ್ರಾಚಾರ್ಯ ಡಾ. ಜಿ.ಬಿ. ಪಾಟೀಲ ಹೇಳಿದರು. ಈಚೆಗೆ ಡಿಜಿಎಂ ಕಾಲೇಜಿನಲ್ಲಿ ಪಶ್ಚಿಮ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಾ. ಎಸ್.ವಿ. ಸಂಕನೂರ ಪ್ರಚಾರ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರಾ. ಸಂಕನೂರ ಅವರು ಕಳೆದ 4 ದಶಕಗಳಿಂದ ಉಪನ್ಯಾಸಕರಾಗಿ, ಪ್ರಾಚಾರ್ಯರಾಗಿ ಅಲ್ಲದೇ ರಾಜ್ಯ ವಿಜ್ಞಾನ ಪರಿಷತ್ ಅಧ್ಯಕ್ಷರಾಗಿ ಕೈಗೊಂಡ ಶೈಕ್ಷಣಿಕ ಜಾಗೃತಿ ಅಲ್ಲದೇ ಶಿಕ್ಷಣ ಪ್ರಸಾರ ರಂಗಕ್ಕೆ ಅವರು ನೀಡಿದ ಕೊಡುಗೆ ಅವಿಸ್ಮರಣೀಯ, ಆದರ್ಶ ವ್ಯಕ್ತಿ ಪ್ರಾ. ಸಂಕನೂರ ಅವರಿಗೆ ಪದವೀಧರ ಕ್ಷೇತ್ರದ ಪ್ರಜ್ಞಾವಂತ ಮತದಾರರು ಈ ಬಾರಿ ಬೆಂಬಲದ ಆಶೀರ್ವಾದ ನೀಡಬೇಕು ಎಂದರು. ಪ್ರಾ. ಎಸ್.ವಿ. ಸಂಕನೂರ ಮಾತನಾಡಿದರು. ಡಾ. ಗೋವಿಂದಪ್ಪನವರ, ಡಾ. ಕಮಲಾಕ್ಷಿ, ಡಾ. ಉಮೇಶ ಪುರದ, ಡಾವಣಗೆರೆ, ಡಾ. ಜಿ.ಎಸ್. ಹಿರೇಮಠ, ಎನ್.ಎಫ್. ಬಡಿಗೇರ, ಡಾ. ಯರಗೇರಿ, ಎಂ.ಸಿ. ಪಾಟೀಲ ಇದ್ದರು.

ಗಣೇಶ ಸುಲ್ತಾನ್‌ಪುರ ಆಯ್ಕೆ
ಗದಗ: ಕರ್ನಾಟಕ ವಚನ ಸಾಹಿತ್ಯ ಪರಿಷತ್ ಮುಂಡರಗಿ ತಾಲೂಕು ಘಟಕದ ಪದಾಧಿಕಾರಿಗಳನ್ನು ಈಚೆಗೆ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಡಾ. ಗಣೇಶ ಸುಲ್ತಾನಪುರ ಅಧ್ಯಕ್ಷತೆಯಲ್ಲಿ ಆಯ್ಕೆ ಮಾಡಲಾಯಿತು. ಮುಂಡರಗಿ ತಾಲೂಕ ಘಟಕದ ಅಧ್ಯಕ್ಷರಾಗಿ ಶಿಕ್ಷಕ ಬಿ.ಬಿ. ಬೆನಕನವಾರಿ, ಉಪಾಧ್ಯಕ್ಷರಾಗಿ ವೈ.ಎಚ್. ಬಚೇನಹಳ್ಳಿ, ಪ್ರಧಾನ ಕಾರ್ಯದರ್ಶಿಯಾಗಿ ಎಸ್.ಎಚ್. ಹೊಸಮನಿ, ಸಹ ಕಾರ್ಯದರ್ಶಿಯಾಗಿ ಯು.ಎಂ. ಬೂದಿಹಾಳ, ಕೋಶಾಧ್ಯಕ್ಷರಾಗಿ ಎಸ್.ಐ. ಅರಹುಣಸಿ, ಕಾರ್ಯಕಾರಿಣಿ ಸದಸ್ಯರಾಗಿ ಮಂಜುನಾಥ ಬಳ್ಳಾರಿ, ಸುಜಾತಾ ಬೆಟಗೇರಿ, ಎಸ್.ಎಂ. ಪೂಜಾರ, ಜೆ.ಎಂ. ವಡ್ಡಟ್ಟಿ, ಎಸ್.ಎನ್. ಹಾಲಗಿ, ಎಂ.ಬಿ. ಕನ್ಯಾಳ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಕರ್ನಾಟಕ ವಚನ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಡಾ. ಗಣೇಶ ಸುಲ್ತಾನಪುರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ದಾಖಲಾತಿ ಆಂದೋಲನ
ಮುಂಡರಗಿ: ಶಾಲೆ ಬಿಟ್ಟ ಮಕ್ಕಳನ್ನು ಸೇರಿಸುವ ದಾಖಲಾತಿ ಹಾಜರಾತಿ ಆಂದೋಲನದ ಉದ್ದೇಶವಾಗಿದ್ದು, ತಾಲೂಕಿನ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಈಗಾಗಲೇ ಶೇ. 5ರಷ್ಟು ಮಕ್ಕಳ ಹಾಜರಾತಿಯಾಗಿದ್ದು ಶೇ. 90ರಷ್ಟಾಗಲು ಬುಧವಾರದಿಂದ ಜೂ. 12ರ ವರೆಗೆ ದಾಖಲಾತಿ ಹಾಜರಾತಿ ಆಂದೋಲನ ಹಮ್ಮಿಕೊಳ್ಳಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎ. ರಡ್ಡೇರ ಹೇಳಿದರು.ಸ್ಥಳೀಯ ಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ದಾಖಲಾತಿ ಹಾಜರಾತಿ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದರು. ಶಾಲಾ ಮಕ್ಕಳಿಗೆ ಪಠ್ಯಪುಸ್ತಕ ವಿತರಣೆ ಮಾಡಲಾಗಿದ್ದು, ಸಮವಸ್ತ್ರ ಪೂರೈಸಲಾಗುವುದು. ಹಾಜರಾತಿ ಆಂದೋಲನದ ಉದ್ದೇಶ ಒಟ್ಟಾರೆ ಮಕ್ಕಳು ಶಾಲೆಯಿಂದ ವಂಚಿತಗೊಳ್ಳಬಾರದು ಎಂದು ಜಾಗೃತಿ ಮೂಡಿಸುವ ಆಂದೋಲನ ಹಮ್ಮಿಕೊಳ್ಳಲಾಗಿದೆ. 5ನೇ ತರಗತಿ ಮುಗಿಸಿದ ವಿದ್ಯಾರ್ಥಿಗೆ ಪಕ್ಕದ ಶಾಲೆಯಲ್ಲಿ 6ನೇ ತರಗತಿಗೆ ಹಾಗೂ 7ನೇ ತರಗತಿ ಪೂರ್ಣಗೊಳಿಸಿದ ವಿದ್ಯಾರ್ಥಿಗೆ ಪ್ರೌಢಶಾಲೆಗೆ ಸೇರಿಸುವ ವ್ಯವಸ್ಥೆ ಕಲ್ಪಿಸಿಕೊಡಲಾಗುವುದು ಎಂದರು.

ಸಿಇಟಿ ಕಾರ್ಯಾಗಾರ
ಗದಗ: ನಗರದ ಮಹೇಂದ್ರಕರ ವೃತ್ತದ ಬಳಿಯ ಕರ್ನಾಟಕ ಬ್ಯಾಂಕ್ ಹತ್ತಿರವಿರುವ ಎಂ.ಎಸ್. ಹುಲ್ಲೂರ ಫೌಂಡೇಶನ್ ಟ್ರಸ್ಟನ ನ್ಯೂ ಎಕ್ಸಲೆಂಟ್ ಸಿಇಟಿ ಕೋಚಿಂಗ್ ಸೆಂಟರಿನಲ್ಲಿ 1 ದಿನದ ವಿಶೇಷ ಪೊಲೀಸ್ ಸಿಇಟಿ ಕಾರ್ಯಾಗಾರವನ್ನು ಜೂ. 5ರಂದು ಬೆಳಗ್ಗೆ 9.30 ರಿಂದ ಸಂಜೆ 4 ಗಂಟೆಯ ವರೆಗೆ ವಿಷಯ ಸಂಪನ್ಮೂಲ ವ್ಯಕ್ತಿಗಳಿಂದ ಹಮ್ಮಿಕೊಳ್ಳಲಾಗಿದೆ. ಇದರ ಸದುಪಯೋಗವನ್ನು ಎಲ್ಲ ಸ್ಪರ್ಧಾರ್ಥಿಗಳು ಪಡೆದುಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂ. 9972611521, 8095545748 ಇಲ್ಲಿಗೆ ಸಂಪರ್ಕಿಸುವಂತೆ ಕೋಚಿಂಗ್ ಸೆಂಟರ್‌ನ ನಿರ್ದೇಶಕ ಎಂ.ಎಸ್. ಹುಲ್ಲೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇಂದು ಪ್ರಶಸ್ತಿ ಪ್ರದಾನ
ಗದಗ: ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಪ್ರಾದೇಶಿಕ ಕಚೇರಿ ಗದಗ ಹಾಗೂ ಪ್ರಾದೇಶಿಕ ಸಾರಿಗೆ ಇಲಾಖೆ ಗದಗ ಇವುಗಳ ಸಂಯುಕ್ತ ಆಶ್ರಯದಲ್ಲಿ ಜೂ. 5ರಂದು ಮಧ್ಯಾಹ್ನ 4ಕ್ಕೆ ನಗರದ ಮುಂಡರಗಿ ರಸ್ತೆಯಲ್ಲಿ ಬಿಫಿನ್ ಚಿಕ್ಕಟ್ಟಿ ಶಿಕ್ಷಣ ಸಂಸ್ಥೆಯಲ್ಲಿ ವಿಶ್ವ ಪರಿಸರ ದಿನಾಚರಣೆ 2014-15ರ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ. ಬಿಫಿನ್ ಚಿಕ್ಕಟ್ಟಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಸ್.ವೈ. ಚಿಕ್ಕಟ್ಟಿ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ಜಿಲ್ಲಾಧಿಕಾರಿ ಎನ್.ಎಸ್. ಪ್ರಸನ್ನಕುಮಾರ, ಪ್ರಾದೇಶಿಕ ಸಾರಿಗೆ ಅಧಿಕಾರಿ ಪುರುಶೋತ್ತಮ ಜೆ, ವಿಷಯ ಪರಿಣಿತರಾಗಿ ಸುಮಿತ್ರಾ ಶ್ರೀಗಿರಿ, ಅನ್ನದಾನಿ ಹಿರೇಮಠ ಆಗಮಿಸುವರು ಎಂದು ಹಿರಿಯ ಪರಿಸರ ಅಧಿಕಾರಿ ಸಿ.ಎಂ. ಸತೀಶ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಂಪಿಯಲ್ಲಿ 11ರಂದುಹಿಂದೂ ಸಾಮ್ರಾಜ್ಯೋತ್ಸವ
ಗದಗ: ಜೂ. 11 ರಂದು ಬುಧವಾರ ಬೆಳಗ್ಗೆ 10ಕ್ಕೆ ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕು ಹಂಪಿ ಹೇಮಕೂಟದ ಶಿವರಾಮ ಅವಧೂತರ ಆಶ್ರಮದಲ್ಲಿ ಹಿಂದೂ ಪದಶಾಹಿ ಛತ್ರಪತಿ ಶಿವಾಜಿ ಮಹಾರಾಜರ ಪಟ್ಟಾಭಿಷೇಕ ಸ್ಮರಣಾರ್ಥವಾಗಿ ಅಖಿಲ ಭಾರತ ಹಿಂದೂ ಮಹಾಸಭಾದ ಆಶ್ರಯದಲ್ಲಿ ಹಿಂದೂ ಸಾಮ್ರಾಜ್ಯೋತ್ಸವ ಮತ್ತು ರಾಜ್ಯ ಹಿಂದೂ ಸಂಘಟನೆಗಳ, ಮಠಾಧೀಶರ ಮತ್ತು ಹಿಂದೂ ಕಾರ್ಯಕರ್ತರ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. ಸಮಾವೇಶದ ಸಾನ್ನಿಧ್ಯವನ್ನು ಹಗರಿ ಬೊಮ್ಮನಹಳ್ಳಿಯ ಹಾಲಶಂಕರ ಶ್ರೀಗಳು ವಹಿಸುವರು. ಅಧ್ಯಕ್ಷತೆಯನ್ನು ಹಿಂದೂ ಮಹಾಸಭಾದ ರಾಜ್ಯಾಧ್ಯಕ್ಷ ಶ್ರವಣಕುಮಾರ ರಾಯ್ಕರ ವಹಿಸುವರು. ಸಮಾವೇಶದ ಉದ್ಘಾಟನೆಯನ್ನು ಆನೆಗುಂದಿ ವಿಜಯನಗರ ಸಾಮ್ರಾಜ್ಯದ ವಂಶಸ್ಥ ರಾಜಾ ಶ್ರೀಕೃಷ್ಣದೇವರಾಯರು ನೆರವೇರಿಸುವರು. ಮುಖ್ಯ ವಕ್ತಾರರಾಗಿ ಬಸವಾನಂದ ಶ್ರೀಗಳು, ಹಿಂದು ಮಹಾಸಭಾ ಕರ್ನಾಟಕ ರಾಜ್ಯಪ್ರಭಾರಿ ಸುಬ್ರಹ್ಮಣ್ಯಂರಾಜು ವಹಿಸಲಿದ್ದಾರೆ. ಈ ಸಮಾವೇಶಕ್ಕೆ ಜಿಲ್ಲೆಯಿಂದ ಬೃಹತ್ ಸಂಖ್ಯೆಯಲ್ಲಿ ಹಿಂದೂ ಬಾಂಧವರು, ಅಭಿಮಾನಿಗಳು ಆಗಮಿಸಿ ಯಶಸ್ವಿಗೊಳಿಸಬೇಕೆಂದು ಹಿಂದೂ ಮಹಾಸಭಾ ಗದಗ ಜಿಲ್ಲಾ ಸಂಚಾಲಕ ವಿನಿತಕುಮಾರ ಜಗತಾಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಡಿವಾಳಪ್ಪ ನೇಮಕ
ಗದಗ: ಗದಗ ಜಿಲ್ಲಾ ಜೆಡಿಎಸ್ ರೈತ ಘಟಕಕ್ಕೆ ಹಿರಿಯ ಉಪಾಧ್ಯಾಕ್ಷರನ್ನಾಗಿ ನಾಗಸಮುದ್ರ ಗ್ರಾಮದ ಪ್ರಗತಿಪರ ರೈತ ಮಡಿವಾಳಪ್ಪ ಕಟಗಿ ಅವರನ್ನು ನೇಮಕ ಮಾಡಲಾಗಿದೆ ಎಂದು ಜಿಲ್ಲಾ ಜೆಡಿಎಸ್ ಅಧ್ಯಕ್ಷ ಅಂದಾನಯ್ಯ ಕರ್ತಕೋಟಿಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇಂದು ವಿಶ್ವ ಪರಿಸರ ದಿನ
ಮುಂಡರಗಿ: ವಲಯ ಅರಣ್ಯ ಇಲಾಖೆ ಕಪ್ಪತಹಿಲ್ಸ್, ತಾಲೂಕಾಡಳಿತ, ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಕಪ್ಪತಗುಡ್ಡ ಸಂರಕ್ಷಣಾ ವೇದಿಕೆ ಆಶ್ರಯದಲ್ಲಿ ಹೆಸರೂರು ರಸ್ತೆಗೆ ಬಳಿಯ ಮೆಟ್ರಿಕ್ ನಂತರ ಹೆಣ್ಣು ಮಕ್ಕಳ ವಸತಿ ನಿಲಯದಲ್ಲಿ ಜೂ. 5ರಂದು ಬೆಳಗ್ಗೆ 9ಕ್ಕೆ ವಿಶ್ವ ಪರಿಸರ ದಿನಾಚರಣೆ ಹಮ್ಮಿಕೊಳ್ಳಲಾಗಿದೆ. ವನಮಹೋತ್ಸವ, ಶಾಲಾ ಮಕ್ಕಳಿಗೆ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿದೆ. ದೃವಕುಮಾರ ಹೊಸಮನಿ, ಕರಬಸಪ್ಪ ಹಂಚಿನಾಳ, ಹೇಮಂತಗೌಡ ಪಾಟೀಲ, ಕೊಟ್ರೇಶ ಅಂಗಡಿ, ರವಿ ಉಪ್ಪಿನಬೆಟಗೇರಿ, ತಹಸೀಲ್ದಾರ್ ಡಿ.ಐ. ಹೆಗ್ಗೊಂಡ, ತಾಪಂ ಇಒ ಡಿ. ಮೋಹನ, ಸಿಪಿಐ ಶ್ರೀಪಾದ ಜಲ್ದೆ, ಬಿಇಒ ಎಂ.ಎ. ರಡ್ಡೇರ, ಮುಖ್ಯಾಧಿಕಾರಿ ಆರ್.ಎಸ್. ಸುಣಗಾರ, ಆರ್‌ಎಫ್‌ಒ ಪ್ರಕಾಶ ದೊಡ್ಡಮನಿ, ದಿವಾಣಿ ನ್ಯಾಯಾದೀಶೆ ಸುಜಾತಾ ಸವರ್ಣ ಬಿ., ಜೂ. 5ರಂದು ಬೆಳಗ್ಗೆ 8.30ಕ್ಕೆ ಸಸಿಗಳನ್ನು ನೆಟ್ಟು ವಿಶ್ವ ಪರಿಸರ ದಿನಾಚರಣೆಗೆ ಚಾಲನೆ ನೀಡುವರು.

ನಾಳೆ ವಿದ್ಯುತ್ ವ್ಯತ್ಯಯ
ಗದಗ: 110 ಕೆವಿ ಬೆಳ್ಳಟ್ಟಿ ಉಪ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣ ಕೆಲಸ ಕೈಗೊಳ್ಳುತ್ತಿರುವುದರಿಂದ ಜೂ. 6ರಂದು ಬೆಳಗ್ಗೆ 10ರಿಂದ ಸಂಜೆ 5ರ ವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದ್ದು, 110 ಕೆವಿ ಬೆಳ್ಳಟ್ಟಿ ಉಪ ಕೇಂದ್ರದಿಂದ ವಿದ್ಯುತ್ ಪೂರೈಕೆಯಾಗುತ್ತಿರುವ 33 ಕೆವಿ ಸೂರಣಗಿ, 33 ಕೆವಿ ಹೊಳೆ ಇಟಗಿ, 11 ಕೆವಿ ವಿತರಣಾ ಮಾರ್ಗಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಸಾರ್ವಜನಿಕರು ಗಮನಿಸಿ ಸಹಕರಿಸುವಂತೆ ಹೆಸ್ಕಾಂನ ಕಾರ್ಯನಿರ್ವಾಹಕ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement