ಸಂಘಟನೆಗೆ ಅನುದಾನ: ಪುರಸಭೆಯಲ್ಲಿ ಗೊಂದಲ
ಗಜೇಂದ್ರಗಡ: ಸ್ಥಳೀಯ ಪುರಸಭೆ ಆಡಳಿತ ಸಾರ್ವಜನಿಕರ ತೆರಿಗೆ ಹಣ ಸದ್ಬಳಕೆ ಮಾಡುವಲ್ಲಿ ವಿಫಲವಾಗಿ ಬೇಕಾಬಿಟ್ಟಿಯಾಗಿ ಜನವಿರೋಧಿ ಆಡಳಿತ ನಡೆಸುತ್ತಿದೆ ಎನ್ನುವ ವಿಪಕ್ಷ ನಾಯಕರ ಹೇಳಿಕೆಗೆ ಪಟ್ಟಣದ ಜನತೆ ಪುರಸಭೆಯಲ್ಲಿ ಅಗತ್ಯಕ್ಕಿಂತಲೂ ಹೆಚ್ಚು ಬಹುಮತ ನೀಡಿದ್ದಾರೆ. ಹೀಗಾಗಿ ಯಾವುದೇ ನಿರ್ಧಾರ ಕೈಗೊಳ್ಳಲು ನಾವು ಸಮರ್ಥರಿದ್ದೇವೆ. ಅದಕ್ಕೆ ನಿಮ್ಮ ವಿರೋಧವಿದ್ದರೆ ಆಕ್ಷೇಪಿಸಿ, ಅಗತ್ಯ ಬಿದ್ದರೆ ಮತದಾನ ಮೂಲಕ ಠರಾವು ಪಾಸು ಮಾಡುತ್ತೇವೆ ಎಂದು ಪುರಸಭೆ ಅಧ್ಯಕ್ಷೆ ಕವಿತಾ ಜಾಲಿಹಾಳರ ವಿರೋಧ ಪಕ್ಷದವರಿಗೆ ಪ್ರತ್ಯುತ್ತರ ನೀಡಿದರು.
ಪಟ್ಟಣದ ಪುರಸಭೆ ಸಭಾ ಭವನದಲ್ಲಿ ನಾಲ್ಕು ತಿಂಗಳ ಬಳಿಕ ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ನಡೆದ ಮಾತಿನ ಚಕಮಕಿ ನಡೆಯಿತು.
ಪುರಸಭೆಯಿಂದ ಯಾವುದೇ ಸಂಘ-ಸಂಸ್ಥೆಗಳಿಗೆ ಸಹಾಯಧನ ನೀಡಲು ಆಡಳಿತ ಮಂಡಳಿಗೆ ಯಾವುದೇ ಅಧಿಕಾರ ಇಲ್ಲ. ಈಗಾಗಲೇ ಪಟ್ಟಣದ ವಿವಿಧ ಸಂಘಟನೆಗಳು ಸಹಾಯಧನಕ್ಕಾಗಿ ಮನವಿ ಸಲ್ಲಿಸಿದ್ದಾರೆ.
ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಿ ಬಳಿಕ ಅವರಿಂದ ಅನುಮೋದನೆ ಸಿಕ್ಕ ಬಳಿಕ ಸಹಾಯಧನ ನೀಡಲಾಗುತ್ತದೆ ಎಂದು ಹಿಂದಿನ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಜತೆಗೆ ಠರಾವಿನಲ್ಲಿ ನಮೂದಿಸಲಾಗಿದೆ. ಆದರೆ, ಜಿಲ್ಲಾಧಿಕಾರಿಗಳ ಆದೇಶವಿಲ್ಲದೆ ಕರ್ನಾಟಕ ಜನಹಿತ ವೇದಿಕೆಗೆ ರು. 1 ಲಕ್ಷ ನಗದು ದಾನ ನೀಡಿರುವ ಬಗ್ಗೆ ಸಾಮಾನ್ಯ ಸಭೆಯಲ್ಲಿ ಬಿಸಿ ಬಿಸಿ ಚರ್ಚೆಗೆ ಗ್ರಾಸವಾಗಿ ಆಡಳಿತ ಮತ್ತು ವಿರೋಧ ಪಕ್ಷ ನಾಯಕರ ಪರಸ್ಪರ ವಾಕ್ಸಮರಕ್ಕೆ ಕಾರಣವಾಯಿತು.
ಇನ್ನೂ ಲಕ್ಷ ಕೊಡುತ್ತೇವೆ: ಪುರಸಭೆಯಲ್ಲಿ ನಮಗೆ ಬಹುಮತವಿದೆ. ಹೀಗಾಗಿ ಸದಸ್ಯರ ಒಪ್ಪಿಗೆ ಪಡೆದು ಜನಹಿತ ವೇದಿಕೆಗೆ ಒಂದು ಲಕ್ಷ ರು. ದೇಣಿಗೆ ನೀಡಲಾಗಿದೆ. ಇನ್ನೂ 1 ಲಕ್ಷ ಕೊಡುತ್ತೇವೆ ಎಂದು ಅಧ್ಯಕ್ಷೆ ಕವಿತಾ ಜಾಲಿಹಾಳ ಹೇಳುತ್ತಿದ್ದಂತೆ ಸಭೆಯಲ್ಲಿ ಕೊಲಾಹಲ ಉಂಟಾಯಿತು. ತಕ್ಷಣ ಮದ್ಯ ಪ್ರವೇಶಿಸಿದ ವಿಪಕ್ಷ ನಾಯಕ ಶಿವರಾಜ ಘೋರ್ಪಡೆ ನಿಯಮನುಸಾರ ತೆರಿಗೆ ಹಣ ದೇಣಿಗೆ ಕೊಡಲು ಬರುವದಿಲ್ಲ ಎಂದು ಠರಾವು ಪಾಸು ಮಾಡಿದ್ದಿರೇಕೆ ಎಂದು ಠರಾವು ಪ್ರತಿ ಪ್ರದರ್ಶಿಸಿದರು.
ತರಾಟೆ: ಬಳಿಕ ಮುಖ್ಯಾಧಿಕಾರಿ ಬಿ.ಟಿ. ಬಂಡಿವಡ್ಡರ ಮಾತನಾಡಿ, ನಿಯಮಾವಳಿ ಪ್ರಕಾರ ಲಕ್ಷಾಂತರ ಹಣ ಸಹಾಯಧನ ರೂಪದಲ್ಲಿ ನೀಡಲು ಕಾನೂನಿನಲ್ಲಿ ಅವಕಾಶವಿಲ್ಲ. ಎನ್ನುತ್ತಿದ್ದಂತೆ ಆಡಳಿತ ಮತ್ತು ವಿರೋಧ ಪಕ್ಷದವರಿಗೆ ದಾರಿ ತಪ್ಪಿಸುತ್ತಿದ್ದೀರಿ ಎಂದು ವಿಪಕ್ಷ ನಾಯಕ ಶಿವರಾಜ ಘೋರ್ಪಡೆ ಮುಖ್ಯಾಧಿಕಾರಿ ತರಾಟೆಗೆ ತೆಗೆದುಕೊಂಡರು.
ಉಪಾಧ್ಯಕ್ಷೆ ಅಕ್ಕಮ್ಮಾ ಜಾನಾಯಿ, ಅಶೋಕ ವನ್ನಾಲ, ವಿಜಯಲಕ್ಷ್ಮೀ ಚೆಟ್ಟರ್, ಸುಮಿತ್ರಾ ತೊಂಡಿಹಾಳ, ಸಿದ್ದಪ್ಪ ಬಂಡಿ, ರವಿ ಕಲಾಲ, ಶರಣಪ್ಪ ರೇವಡಿ, ಪ್ರಭು ಚವಡಿ, ಮಂಜುನಾಥ ಬಡಿಗೇರ್, ಚಂದ್ರು ಚಳಗೇರಿ, ಬುಡ್ಡಪ್ಪ ಮೂಲಿಮನಿ, ಷಣ್ಮುಕಪ್ಪ ಚಿಲಝರಿ, ಎಂ.ಎಸ್. ಹಡಪದ, ಶಾರದಾ ರಾಠೋಡ, ಶಾರಮ್ಮ ತಳವಾರ, ಸಿ.ವಿ. ಕುಲಕರ್ಣಿ, ಬಸವರಾಜ ಬಳಗಾನೂರ, ಸಿ.ಡಿ. ದೊಡ್ಡಮನಿ, ಪಿ.ಎನ್. ದೊಡ್ಡಮನಿ, ಜಿ.ಎನ್. ಕಾಳೆ, ಹೇಮಾವತಿ ಮಾದಗುಂಡಿ, ಎ.ಎಸ್. ಗದಗಿನ, ಎ.ಎಸ್. ನಾವಳ್ಳಿ, ಎಸ್.ಜಿ. ಕಡೇತೋಟದ ಇದ್ದರು.
ಕರ್ನಾಟಕ ಜನಹಿತ ವೇದಿಕೆಗೆ ಮತ್ತೊಮ್ಮೆ ಠರಾವು ಪಾಸು ಮಾಡಿ ಇನ್ನೊಂದು ಲಕ್ಷ ಸಹಾಯಧನ ನೀಡುತ್ತೇವೆ. ಈ ಸಭೆಯಲ್ಲಿ ಮಂಡಿಸಿರುವ ಠರಾವಿಗೆ ನಿಮ್ಮ ವಿರೋಧವಿದ್ದರೆ ತಿಳಿಸಿ. ಅದನ್ನು ಠರಾವಿನಲ್ಲಿ ಬರೆದಿಡುತ್ತೇವೆ.
- ಕವಿತಾ ಜಾಲಿಹಾಳ, ಪುರಸಭೆ ಅಧ್ಯಕ್ಷೆ
ಪುರಸಭೆಯಲ್ಲಿ ನಮಗೆ ಸ್ಪಷ್ಟ ಬಹುಮತವಿದೆ ಎಂಬ ಹಂಗಿನಿಂದ ಬೀಗುತ್ತಿರುವ ಆಡಳಿತ ಪಕ್ಷದವರು ತಾವೇ ಹಿಂದಿನ ಸಭೆಯಲ್ಲಿ ಅನುಮೋದಿಸಿದ ಠರಾವಿಗೆ ಬದ್ಧರಿಲ್ಲದ ಆಡಳಿತದಿಂದ ಪಟ್ಟಣದ ಅಭಿವೃದ್ಧಿ ಅಸಾಧ್ಯ. ಕಾನೂನು ಬಾಹಿರವಾಗಿ ಸಾರ್ವಜನಿಕರ ಹಣ ಖರ್ಚು ಮಾಡಿದರೆ ಸಾರ್ವಜನಿಕ ಹಿತಾಸಕ್ತಿ ಮೇರೆಗೆ ನ್ಯಾಯಾಲದ ಮೊರೆ ಹೋಗುತ್ತೆವೆ.
- ಶಿವರಾಜ ಘೋರ್ಪಡೆ, ಪುರಸಭೆ ವಿರೋಧ ಪಕ್ಷ ನಾಯಕ
ಪುರಸಭೆ ಆಡಳಿತ ಚುಕ್ಕಾಣಿ ಹಿಡಿದು ವರ್ಷ ಕಳೆದಿದೆ. ಪಟ್ಟಣದಲ್ಲಿ ಒಂದೂ ಹೇಳಿಕೊಳ್ಳುವಂತ ಅಭಿವೃದ್ಧಿ ಕಾಮಗಾರಿ ನಡೆದಿಲ್ಲ. ಸಾರ್ವಜನಿಕರು ಆಡಳಿತ ವ್ಯವಸ್ಥೆಗೆ ಛೀಮಾರಿ ಹಾಕುತ್ತಿದ್ದಾರೆ. ಜನರ ಹಣ ದಾನ, ಧರ್ಮ ಮಾಡೋದು ಬಿಟ್ಟು ಅಭಿವೃದ್ಧಿ ಕೆಲಸಕ್ಕೆ ಉಪಯೋಗಿಸಿ. ಇಲ್ಲದಿದ್ರ ಜನ ತಕ್ಕಪಾಠ ಕಲಿಸ್ತಾರ.
- ಎಂ.ಎಸ್. ಹಡಪದ, ಸಿಪಿಐಎಂ ಪುರಸಭೆ ಸದಸ್ಯ