ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಗಜೇಂದ್ರಗಡ ಪುರಸಭೆ ಅಧ್ಯಕ್ಷೆ-ವಿಪಕ್ಷ ನಾಯಕರ ಆರೋಪ-ಪ್ರತ್ಯಾರೋಪ

Srinivasa Murthy VN
Updated On : 30 Jun 2014, 11:07 am

ಗಜೇಂದ್ರಗಡ: ಸ್ಥಳೀಯ ಪುರಸಭೆ ಆಡಳಿತ ಮತ್ತು ವಿರೋಧ ಪಕ್ಷದ ನಾಯಕರು ಭಾನುವಾರ ಪ್ರತ್ಯೇಕ ಪತ್ರಿಕಾಗೋಷ್ಠಿ ನಡೆಸಿ ಆರೋಪ ಪ್ರತ್ಯಾರೋಪಗಳ ಸುರಿಮಳೆ ಗೈದರು.
ಪುರಸಭೆ ಅಧ್ಯಕ್ಷೆ ಕವಿತಾ ಜಾಲಿಹಾಳ ಮಾತನಾಡಿ, ಪುರಸಭೆ ಆಡಳಿತ ನನಗೆ ಸಹಕಾರ ನೀಡುತ್ತಿಲ್ಲ. ಹೀಗಾಗಿ ಪಟ್ಟಣದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಆಗುತ್ತಿಲ್ಲ. ಕುಡಿಯುವ ನೀರಿನ ವಿಷಯದಲ್ಲಿ ರಾಜಕೀಯ ತಾರತಮ್ಯ ಕೈ ಬಿಡದಿದ್ದರೆ ಶಾಸಕರ ನಿವಾಸದೆದುರು ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.
ಇದಕ್ಕೆ ಪ್ರತಿಯಾಗಿ ಪುರಸಭೆ ವಿಪಕ್ಷ ನಾಯಕ ಶಿವರಾಜ ಘೋರ್ಪಡೆ ಮಾತನಾಡಿ, ಕುಣಿಯಲಿಕ್ಕೆ ಬಾರದವ ನೆಲ ಡೊಂಕು ಎನ್ನುವ ಗಾದೆ ಮಾತು ಪುರಸಭೆ ಆಡಳಿತಕ್ಕೆ ಹೇಳಿ ಮಾಡಿಸಿದಂತಾಗಿದೆ. ಈ ಮೊದಲು ಶಾಸಕ ಜಿ.ಎಸ್. ಪಾಟೀಲರು ಭಾಗವಹಿಸಿದ ಪುರಸಭೆ ಪ್ರಥಮ ಸಾಮಾನ್ಯ ಸಭೆಯಲ್ಲಿಯೇ ರಾಜಕೀಯ ಬದಿಗಿಟ್ಟು ಪಟ್ಟಣದ ಅಭಿವೃದ್ಧಿಗಾಗಿ ನಾವೆಲ್ಲರೂ ಪರಸ್ಪರ ಸಹಕಾರದಿಂದ ಶ್ರಮಿಸೋಣ ಎಂದು ಕಿವಿಮಾತು ಹೇಳಿದ್ದರು. ಆದರೂ ಸ್ಥಳೀಯ ಬಿಜೆಪಿ ಆಡಳಿತ ಶಾಸಕರ ಮಾತಿಗೆ ಕಿವಿಗೊಡುವುದಿಲ್ಲ ಎಂದರು.
ಗಜೇಂದ್ರಗಡ ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗಾಗಿ ಎಚ್‌ಡಿಎಂಎಫ್‌ನ ವಿಪತ್ತು ಪರಿಹಾರ ನಿಧಿ ಯೋಜನೆಯಡಿಯಲ್ಲಿ ಶಾಸಕ ಜಿ.ಎಸ್. ಪಾಟೀಲರು ಸರ್ಕಾರದಿಂದ ರು. 20.51 ಲಕ್ಷ ಅನುದಾನ ಬಿಡುಗಡೆ ಮಾಡಿಸಿದ್ದಾರೆ. ಅನುದಾನ ಸದ್ಬಳಕೆ ಮಾಡುವಲ್ಲಿ ಸ್ಥಳೀಯ ಆಡಳಿತ ವಿಫಲವಾಗಿ ವಿನಾಕಾರಣ ಶಾಸಕರ ಮೇಲೆ ಆರೋಪಿಸುತ್ತಿರುವುದು ರಾಜಕೀಯ ಪ್ರೇರಿತವಾಗಿದೆ ಎಂದು ವಿಪಕ್ಷ ನಾಯಕ ಶಿವರಾಜ ಘೋರ್ಪಡೆ ಹೇಳಿದರು.
ಹಿಂದಿನ ಸರ್ಕಾರದ ಅವಧಿಯಲ್ಲಿ ಮಾಜಿ ಸಚಿವ ಕಳಕಪ್ಪ ಬಂಡಿಯವರು ಪಟ್ಟಣದ ವಸತಿ ರಹಿತ ಬಡ ಕುಟುಂಬಗಳಿಗೆ ವಾಜಪೇಯಿ ವಸತಿ ಯೋಜನೆ ಅಡಿಯಲ್ಲಿ 1386 ಮನೆಗಳನ್ನು ಸರ್ಕಾರದಿಂದ ಮಂಜೂರು ಮಾಡಿಸಿದ್ದರು. ಆದರೆ ಈಗಿನ ಶಾಸಕರು ಆ ಎಲ್ಲ ಫಲಾನುಭವಿಗಳಿಗೆ ಚೆಕ್ ನೀಡುವಲ್ಲಿ ವಿಫಲರಾಗಿದ್ದಾರೆ ಎಂದು ಪುರಸಭೆ ಅಧ್ಯಕ್ಷ ಕವಿತಾ ಜಾಲಿಹಾಳ ದೂರಿದರು. ಸ್ಥಾಯಿ ಕಮಿಟಿ ಅಧ್ಯಕ್ಷ ಅಶೋಕ ವನ್ನಾಲ, ಸದಸ್ಯ ವಿಜಯಲಕ್ಷ್ಮೀ ಚೆಟ್ಟರ್, ರವಿ ಕಲಾಲ, ಶರಣಪ್ಪ ರೇವಡಿ, ಮಂಜುನಾಥ ಬಡಿಗೇರ, ಬುಡ್ಡಪ್ಪ ಮೂಲಿಮನಿ, ಕಳಕಪ್ಪ ಹಾಜರಿದ್ದರು.
ಸರ್ಕಾರದ ವಿಪತ್ತು ನಿಧಿಯಿಂದ ಬಿಡುಗಡೆಯಾದ ರು. 20.51 ಲಕ್ಷ ಅನುದಾನ, ಮೋಟಾರ್ ಪಂಪ ಮತ್ತು ಪೈಪ್‌ಲೈನ್ ಖರೀದಿಯಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ. ಹಿಂದಿನ ಮಾಜಿ ಸಚಿವರ ಅಧಿಕಾರವಧಿಯಲ್ಲಿ ಮಂಜೂರಾದ 1386 ಮನೆಗಳ ಫಲಾನುಭವಿಗಳಿಗೆ ಶಾಸಕ ಜಿ.ಎಸ್. ಪಾಟೀಲ ಚೆಕ್ ವಿತರಿಸುವ ಸಮಾರಂಭದಲ್ಲಿ ಸ್ಥಳೀಯ ಆಡಳಿತ ಪಕ್ಷದ ಯಾವೊಬ್ಬ ಸದಸ್ಯರು ಪಾಲ್ಗೊಳ್ಳದೇ ವಿನಾಕಾರಣ ರಾಜಕೀಯ ಮಾಡುವುದನ್ನು ಬಿಟ್ಟು ಇನ್ನಾದರೂ ತಾಲೂಕಿನ ಶಾಸಕರಿಗೆ ಸಹಕಾರ ನೀಡಿ ಪಟ್ಟಣದ ಅಭಿವೃದ್ಧಿಗೆ ಚಿಂತಿಸಲು ಮುಂದಾಗಿ ಶಿವರಾಜ ಘೋರ್ಪಡೆ ಹೇಳಿದರು. ಸದಸ್ಯರಾದ ಮಕ್ತುಂಬಿ ಹಣಗಿ, ಶಾರದಾ ರಾಠೋಡ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement