ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಬರದ ಭೀತಿಯಲ್ಲಿ ಲಕ್ಷ್ಮೇಶ್ವರ ಹೋಬಳಿ

Srinivasa Murthy VN
Updated On : 30 Jun 2014, 11:05 am

-ಅಶೋಕ ಸೊರಟೂರ
ಕನ್ನಡಪ್ರಭ ವಾರ್ತೆ, ಲಕ್ಷ್ಮೇಶ್ವರ, ಜೂ. 29
ಮಳೆ ಕೈಕೊಟ್ಟಿದ್ದು, ಲಕ್ಷ್ಮೇಶ್ವರ ಹೋಬಳಿಯ ಬಹುತೇಕ ಹಳ್ಳಿಗಳು ಬರಗಾಲದ ಬವಣೆಗೆ ಸಿಲುಕಿವೆ. ರೈತರು ಮುಂದೇನು ಎಂದು ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ. ಇದು ಜನಸಮೂಹ ಹಾಗೂ ಜಾನುವಾರುಗಳ ಮೇಲೆ ದುಷ್ಪರಿಣಾಮವನ್ನು ಬೀರುವುದು ಖಂಡಿತ. ಬಿತ್ತಿದ ಬೀಜವು ಮೊಳಕೆಯೊಡೆಯುವ ಹೊತ್ತಿನಲ್ಲಿ ಕೈಕೊಟ್ಟಿರುವ ಮಳೆಯು ರೈತರ ಎದೆಯಲ್ಲಿ ನಡುಕ ಹುಟ್ಟಿಸಿದೆ.
ಶಿರಹಟ್ಟಿ ತಾಲೂಕಿನಲ್ಲಿ ವಾಡಿಕೆ ಮಳೆಯು ಜೂನ್‌ನಲ್ಲಿ ಸರಾಸರಿ 223 ಮಿಲಿಮೀಟರ್ ಇದ್ದು, 225 ಮಿಮಿಯಷ್ಟು ಮಾತ್ರ ಮಳೆ ಸುರಿದಿದೆ. ಕೇವಲ ಒಂದೆರಡು ದಿನಗಳಲ್ಲಿ ಹೆಚ್ಚಿನ ಮಳೆ ಸುರಿದರೆ ರೈತರಿಗೆ ಅದರಿಂದ ಅನುಕೂಲವಿಲ್ಲ.
ತಾಲೂಕಿನಲ್ಲಿ ಬಿಟಿ ಹತ್ತಿ, ಹೆಸರು, ಗೋವಿನ ಜೋಳ, ಶೇಂಗಾ, ಈರುಳ್ಳಿ, ಹೈಬ್ರೀಡ್ ಜೋಳ ಮುಂತಾದ  ಬೀಜಗಳನ್ನು ಬಿತ್ತನೆ ಮಾಡಲಾಗಿದ್ದು, ಮಳೆಗಾಗಿ ರೈತರು ಆಕಾಶದತ್ತ ಮುಖ ಮಾಡಿದ್ದಾರೆ. ಸಾಲ ಸೋಲ ಮಾಡಿ ಲಕ್ಷಾಂತರ ಖರ್ಚು ಮಾಡಿ ಬಿತ್ತಿರುವ ಬೀಜಗಳು ಹಾಗೆ ಮಣ್ಣಲ್ಲಿ ಮಣ್ಣಾಗಿ ಹೋಗುವುದನ್ನು ಕಂಡು ಯಾವ ಪಾಪಿಯ ಎದೆಯು ಗಟ್ಟಿ ಉಳಿದಿತು.
ಶಿರಹಟ್ಟಿ ತಾಲೂಕಿನಲ್ಲಿ ಈಗಾಗಲೇ ಸುಮಾರು 64 ಸಾವಿರ ಹೆಕ್ಟೇರ್ ಪ್ರದೇಶವು ಬಿತ್ತನೆಯಾಗಿದೆ. ಇನ್ನೂ ಸಾವಿರಾರು ಹೆಕ್ಟೇರ್ ಪ್ರದೇಶವು ಬಿತ್ತನೆಯಾಗದೆ ಬಾಕಿ ಉಳಿದಿದೆ. ಲಕ್ಷ್ಮೇಶ್ವರ ಹೋಬಳಿಯಲ್ಲಿ ಅಡರಕಟ್ಟಿ, ಸೂರಣಗಿ, ಗೊಜನೂರ, ಶಿಗ್ಲಿ, ಪು. ಬಡ್ನಿ, ಯತ್ತಿನಹಳ್ಳಿ, ಮಾಗಡಿ, ಮಾಡಳ್ಳಿ, ಯಳವತ್ತಿ ರಾಮಗೇರಿ, ಬಸಾಪುರ, ಗೋವನಾಳ, ಬೂದಿಹಾಳ, ಬಾಲೆಹೊಸೂರ ಮುಂತಾದ ಗ್ರಾಮಗಳಲ್ಲಿ ಮಳೆಯಾಶ್ರಿತ ಪ್ರದೇಶದಲ್ಲಿ ಕಪ್ಪು ಮಣ್ಣಿನ ಭೂಮಿಯು ಹೆಚ್ಚಾಗಿದ್ದು, ಮಳೆ ಬಾರದೆ ಹೋದಲ್ಲಿ ಶೇ 30ಕ್ಕೂ ಹೆಚ್ಚಿನ ಬೆಳೆ ಹಾನಿ ಸಂಭವಿಸುವುದು ನಿಶ್ಚಿತವಾಗಿದೆ ಎನ್ನುತ್ತಾರೆ ಕೃಷಿ ಸಹಾಯಕ ಅಧಿಕಾರಿ ಸೋಮು ಲಮಾಣಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement