ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ರಂಗ ಶಿಕ್ಷಣ: ಅರ್ಜಿ ಆಹ್ವಾನ

Srinivasa Murthy VN
Updated On : 30 Jun 2014, 11:08 am

ಗದಗ:  ಮೈಸೂರಿನ ರಂಗಾಯಣವು ಪ್ರತಿ ವರ್ಷದಂತೆ ಈ ವರ್ಷವು ಕರ್ನಾಟಕದ ಆಸಕ್ತ ರಂಗಾಭ್ಯಾಸಿಗಳಿಗಾಗಿ 1 ವರ್ಷದ ರಂಗ ಶಿಕ್ಷಣ ಡಿಪ್ಲೊಮಾ ಕೋರ್ಸ್‌ಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ರಂಗ ಶಿಕ್ಷಣದಲ್ಲಿ ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಉಪನಿರ್ದೇಶಕರು, ರಂಗಾಯಣ, ಮೈಸೂರು, ದೂರವಾಣಿ 9449842187 ಇಲ್ಲಿಗೆ ಸಂಪರ್ಕಿಸುವಂತೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಾದಕ ವಸ್ತು ದುಷ್ಪರಿಣಾಮ ಜಾಗೃತಿ
ಗದಗ: ಅಂತಾರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನಾಚರಣೆ ನಿಮಿತ್ತ ಗದಗ ಪೊಲೀಸ್ ಠಾಣಾ ವ್ಯಾಪ್ತಿಯ ಸಿದ್ಧಲಿಂಗ ನಗರದಲ್ಲಿನ ಬಸವೇಶ್ವರ ಪ್ರೌಢಶಾಲೆ ಮತ್ತು ಗಣೇಶ ಮಹಲ್, ಧನರಾಜ ಶಹಾ (ಲಯನ್ಸ್) ಆಂಗ್ಲ ಮಾಧ್ಯಮ ಪ್ರೌಢಶಾಲೆಗೆ ಈಚೆಗೆ ಠಾಣಾ ವತಿಯಿಂದ ಭೇಟಿ ನೀಡಿ ಕಾರ್ಯಕ್ರಮ ಕುರಿತು ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳಿಂದ ಆಗುವ ದುಷ್ಪರಿಣಾಮಗಳ ಕುರಿತು ಮನವರಿಕೆ ಮಾಡಲಾಯಿತು. ಮುಖ್ಯೋಪಾಧ್ಯಾಯರು, ಶಾಲಾ ಶಿಕ್ಷಕರು, ಶಹರ ಠಾಣೆಯ ಪಿಎಸ್‌ಐ ಟಿ. ಮಹಾಂತೇಶ, ಎಂ.ಆರ್. ಸತ್ಯರಡ್ಡಿ, ಪಿ.ಎಂ. ಹಳ್ಳಳ್ಳಿ ಉಪಸ್ಥಿತರಿದ್ದರು.

ಎಲ್ಲೆಡೆ 'ಕಸಬ್‌' ಚರ್ಚೆ
ಗದಗ: ಕನ್ನಡಪ್ರಭ ಕಳೆದ 10 ದಿನಗಳಿಂದ ಗದಗ-ಬೆಟಗೇರಿ ಅವಳಿ ನಗರ ಹಾಗೂ ಜಿಲ್ಲೆಯ ಹಲವು ಪಟ್ಟಣಗಳ ಸಮಸ್ಯೆಗಳ ಕುರಿತು ಸರಣಿ ವರದಿಗಳನ್ನು ಪ್ರಕಟಿಸಿತ್ತು. ವರದಿಗೆ ಸ್ಪಂದಿಸಿರುವ ಪುರಸಭೆ, ಪಟ್ಟಣ ಪಂಚಾಯ್ತಿ ಹಾಗೂ ನಗರಸಭೆ ಆಡಳಿತ ಮಂಡಳಿಗಳು ಸ್ವಚ್ಛತೆಗೆ ಗಮನ ನೀಡಲು ಆರಂಭಿಸಿವೆ. ಮುಂಡರಗಿ, ರೋಣ ಪುರಸಭೆಯಲ್ಲಿ ನಡೆದ ಸಾಮಾನ್ಯ ಸಭೆಗಳಲ್ಲೂ ಪತ್ರಿಕೆಯ ವರದಿಗಳು ಚರ್ಚೆಯಾಗಿವೆ.

ಇಂದಿನಿಂದ ತರಬೇತಿ
ಶಿರಹಟ್ಟಿ: ಗದಗ ಜಿಲ್ಲೆಯ ಸರ್ಕಾರಿ ಪ್ರೌಢಶಾಲೆಗಳಲ್ಲಿ ಇಂಗ್ಲಿಷ್ ವಿಷಯ ಬೋಧಿಸುವ ಶಿಕ್ಷಕರಿಗೆ ಜಿಲ್ಲಾ ಉಪನಿರ್ದೇಶಕರ ಕಚೇರಿ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಶಿರಹಟ್ಟಿ ಇವರ ಸಂಯುಕ್ತ ಆಶ್ರಯದಲ್ಲಿ ಜೂ. 30ರಿಂದ ಜುಲೈ 2ರ ವರೆಗೆ ಪಟ್ಟಣದ ಹರಿಪುರ ರಸ್ತೆಯಲ್ಲಿರುವ ಸಿ.ಸಿ. ನೂರಶೆಟ್ಟರ ಪ್ರೌಢಶಾಲೆಯಲ್ಲಿ ಹೊಸ ಪಠ್ಯ ಪುಸ್ತಕ ಕುರಿತು ತರಬೇತಿ ಕಾರ್ಯಾಗಾರ ಏರ್ಪಡಿಸಲಾಗಿದೆ. ತರಬೇತಿ ಕಾರ್ಯಾಗಾರದಲ್ಲಿ ಚುನಾಯಿತ ಜನಪ್ರತಿನಿಧಿಗಳು, ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಬಿ.ವಿ. ರಾಜೇಂದ್ರಪ್ರಸಾದ, ಜಿಲ್ಲೆಯ ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳು, ವಿಷಯ ಪರಿವೀಕ್ಷಕರು, ಶಿಕ್ಷಣಾಭಿಮಾನಿಗಳು ಭಾಗವಹಿಸಲಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್. ಬುರಡಿ ಪ್ರಕಟಣೆಯಲ್ಲಿತಿಳಿಸಿದ್ದಾರೆ.

ನೌಕರರ  ಪ್ರತಿಭಟನೆ ನಾಳೆ
ಶಿರಹಟ್ಟಿ:  ಕನಿಷ್ಠ ಕೂಲಿ, ಕೆಲಸದ ಭದ್ರತೆ, ಕೇಂದ್ರ ಸರ್ಕಾರ ಘೋಷಿಸಿರುವಂತೆ ಈ ತಕ್ಷಣ ರು. 1 ಸಾವಿರ ಪಾವತಿಸುವುದು, ರಾಜ್ಯ ಸರ್ಕಾರ ಸಿಐಟಿಯು ಹೋರಾಟದ ಸಂದರ್ಭದಲ್ಲಿ ಒಪ್ಪಿಕೊಂಡಂತೆ ಹೆಚ್ಚಿಸಿರುವ ರು. 500 ಡಿ. 2013ರಿಂದಲೇ ಜಾರಿ ಮಾಡುವುದು, ಅಕ್ಷರದಾಸೋಹ ಯೋಜನೆಯನ್ನು ಖಾಸಗೀಕರಣ ಮಾಡಬಾರದು. ಈ ನೌಕರರನ್ನು ಶಿಕ್ಷಣ ಇಲಾಖೆಯಡಿಯಲ್ಲಿ ಕಾಯಂ ಮಾಡುವುದು ಸೇರಿದಂತೆ ಇನ್ನೂ ಹತ್ತಾರು ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಜು. 1ರಂದು ತಾಪಂ ಕಾರ್ಯಾಲಯದ ಎದುರು ತಾಲೂಕಿನ ಅಕ್ಷರ ದಾಸೋಹ ನೌಕರರು ಪ್ರತಿಭಟನೆ ನಡೆಸಲಿದ್ದಾರೆ. ಬಿಸಿಯೂಟ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಮೆರವಣಿಗೆ ಮತ್ತು ಪ್ರಟಿಭಟನೆಯಲ್ಲಿ ಭಾಗವಹಿಸಬೇಕೆಂದು ತಾಲೂಕು ಅಕ್ಷರ ದಾಸೋಹ ನೌಖರ ಸಂಘದ ಅಧ್ಯಕ್ಷೆ ಪುಪ್ಷಾ ಚವ್ಹಾಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಿಲ್ಲಾ ಯೋಜನಾ ಸಮಿತಿ ಸದಸ್ಯರ ಆಯ್ಕೆಗೆ ಚುನಾವಣೆ ಘೋಷಣೆ
ಗದಗ: ರಾಜ್ಯ ಪಂಚಾಯತ್ ರಾಜ್ ಅಧಿನಿಯಮದಡಿ ಗದಗ ಜಿಲ್ಲಾ ಯೋಜನಾ ಸಮಿತಿಗೆ ಸದಸ್ಯರ ಆಯ್ಕೆಗೆ ಚುನಾವಣಾ ವೇಳಾ ಪಟ್ಟಿ ಘೋಷಿಸಲಾಗಿದೆ. ಜಿಪಂ ಕ್ಷೇತ್ರದಿಂದ ಒಬ್ಬ ಸದಸ್ಯರ ಹಾಗೂ ಜಿಲ್ಲೆಯ ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿ ಕ್ಷೇತ್ರದಿಂದ 8 ಸದಸ್ಯ ಆಯ್ಕೆಯಾಗಬೇಕಾಗಿದೆ. ಅರ್ಹ ಆಸಕ್ತ ಅಭ್ಯರ್ಥಿಗಳು ರಜಾ ದಿನ ಹೊರತುಪಡಿಸಿ ಜುಲೈ 1ರಿಂದ 8ರ ವರೆಗೆ ಜಿಪಂ ಸಭಾಂಗಣದಲ್ಲಿ ಬೆಳಗ್ಗೆ 11 ರಿಂದ ಮಧ್ಯಾಹ್ನ 3ರ ಅವಧಿಯಲ್ಲಿ ನಾಮಪತ್ರ ಸಲ್ಲಿಸಬೇಕು. ಅದೇ ಸ್ಥಳದಲ್ಲಿ ಜು. 10 ಬೆಳಗ್ಗೆ 11 ಗಂಟೆಗೆ ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನಾಮಪತ್ರ ಹಿಂಪಡೆಯಲು ಜುಲೈ 14 ಕೊನೆಯ ದಿನವಾಗಿದ್ದು, ಅಗತ್ಯ ಬಿದ್ದಲ್ಲಿ ಜುಲೈ 16ರಂದು ಜಿಪಂ ಸಭಾಂಗಣದಲ್ಲಿ ಬೆಳಗ್ಗೆ 9ರಿಂದ ಸಂಜೆ 4ರ ವರೆಗೆ ಮತದಾನ, ತದನಂತರ 5 ಗಂಟೆಗೆ ಮತ ಎಣಿಕೆ ನಡೆಯಲಿದೆ ಎಂದು ಚುನಾವಣಾಧಿಕಾರಿ ಹಾಗೂ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಕಟಣೆ ತಿಳಿಸಿದೆ.್ಙ

ಅಭಿನಂದನಾ ಸಮಾರಂಭ ಇಂದು
ಗಜೇಂದ್ರಗಡ: ಸ್ಥಳೀಯ ಬಿಜೆಪಿ ಕಾರ್ಯಕರ್ತರ ಹಾಗೂ ಮತದಾರರ ಅಭಿನಂದನಾ ಸಮಾರಂಭ ಜೂ. 30ರಂದು ಮಧ್ಯಾಹ್ನ 1 ಗಂಟೆಗೆ ಜಿ.ಕೆ. ಬಂಡಿ ಗಾರ್ಡನ್‌ನಲ್ಲಿ ನಡೆಯಲಿದೆ. ಬಿಜೆಪಿ ಜಿಲ್ಲಾಧ್ಯಕ್ಷ, ಮಾಜಿ ಸಚಿವ ಕಳಕಪ್ಪ ಬಂಡಿ ಉದ್ಘಾಟಿಸುವರು. ಬಿಜೆಪಿ ರೋಣ ಮಂಡಳ ಅಧ್ಯಕ್ಷ ಸೋಮಶೇಖರ ಚನ್ನಳ್ಳಿ ಅಧ್ಯಕ್ಷತೆ ವಹಿಸುವರು. ಸಂಸದ ಶಿವಕುಮಾರ ಉದಾಸಿ, ಪಿ.ಸಿ. ಗದ್ದಿಗೌಡರ, ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಮಾಜಿ ಸಚಿವ ಸಿ.ಸಿ. ಪಾಟೀಲ ಪಾಲ್ಗೊಳ್ಳುವರು ಎಂದು ಬಿಜೆಪಿ ನಗರ ಘಟಕ ಅಧ್ಯಕ್ಷ ಭಾಸ್ಕರ ರಾಯಬಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಧ್ಯಾತ್ಮದಿಂದ  ನೆಮ್ಮದಿ: ಯಾವಗಲ್
 ನರಗುಂದ:  ಮನುಷ್ಯನಿಗೆ ಈ ಆಧುನಿಕ ಯುಗದಲ್ಲಿ ನೆಮ್ಮದಿ ಬಹಳ ಕಡಿಮೆಯಾಗಿದೆ. ಅದಕ್ಕೆ ಪ್ರತಿಯೊಬ್ಬರೂ ಅಧ್ಯಾತ್ಮದ ಕಡೆ ಗಮನಹರಿಸಿ ನಮ್ಮ ಇತಿಹಾಸ, ಮಹಾತ್ಮರ ಗ್ರಂಥಗಳಲ್ಲಿನ ಜ್ಞಾನವನ್ನು ಅಳವಡಿಸಿಕೊಳ್ಳಬೇಕಾಗಿದೆ ಎಂದು ಚಿಕ್ಕನರಗುಂದ ಸಂಯುಕ್ತ ಪಪೂ ಕಾಲೇಜಿನ ಪ್ರಭಾರಿ ಪ್ರಾಚಾರ್ಯ ಎಂ.ಎಸ್. ಯಾವಗಲ್ ಹೇಳಿದರು.  ಅವರು ಪಟ್ಟಣದ ಪಂಚಗೃಹ ಗುಡ್ಡದ ಹಿರೇಮಠದಲ್ಲಿ ಈಚೆಗೆ 4ನೇ ಶಿವಾನುಭವ ಹಾಗೂ ಮಹಾದೇವಿ ಹೇಮಾದ್ರಪ್ಪ ತಡಸದ ಇವರ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಸಮಾಜದಲ್ಲಿ ಬದುಕುವ ಪ್ರತಿಯೊಬ್ಬರಿಗೆ ಆಧ್ಯಾತ್ಮಿಕ ಜ್ಞಾನ ಅಳವಡಿಸಿಕೊಳ್ಳವುದು ಅವಶ್ಯ. ಇಂದಿನ ಯುಗದ ವೇಗದ ದಿನಗಳಲ್ಲಿ ಹೊಂದಿಕೊಳ್ಳಲಾಗದೆ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗಿದೆ. ಹಾಗಾಗಿ ಬಹು ಇತಿಹಾಸ ಹೊಂದಿರುವ ಹಿಂದೂ ಧರ್ಮದಲ್ಲಿ ಆಧ್ಯಾತ್ಮಿಕತೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ನೆಮ್ಮದಿಯ ಜೀವನ ಸಾಗಿಸುವಂತೆ ಕೋರಿದರು. ಪಂಚಗೃಹ ಗುಡ್ಡದ ಹಿರೇಮಠದ ಸಿದ್ಧಲಿಂಗ ಶ್ರೀಗಳು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ತಹಸೀಲ್ದಾರ್ ಎಚ್.ಡಿ. ನಾಗಾವಿ, ಎಸ್.ಬಿ. ಕುಷ್ಟಗಿ, ಮಲ್ಲಿಕಾರ್ಜುನ ರಡ್ಡೇರ, ಎಸ್.ಜಿ. ಮಣ್ಣೂರಮಠ, ಹೇಮಾವತಿ ತಡಸದ, ಕೆ.ಎಚ್. ತಾಲೀಮನವರ, ಪರಶುರಾಮ ಹೊನಕೇರಿ, ತಿಪ್ಪಣ್ಣ ತಳವಾರ, ಎಸ್.ಜಿ. ಅಂಗಡಿ, ಅಡಿಯ್ಯಸ್ವಾಮಿ ಕಲ್ಯಾಣಮಠ ಮುಂತಾದವರು ಉಪಸ್ಥಿತರಿದ್ದರು.

ಲಕ್ಷ್ಮೇಶ್ವರ: ಪಂಚಮಸಾಲಿ ಸೊಸೈಟಿ ಉದ್ಘಾಟನೆ ನಾಳೆ
ಲಕ್ಷ್ಮೇಶ್ವರ: ಪಟ್ಟಣದ ಪಂಚಮಸಾಲಿ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿ ಕಚೇರಿ ಉದ್ಘಾಟನಾ ಸಮಾರಂಭವು ಜುಲೈ 1ರಂದು ಬೆಳಗ್ಗೆ 11ಕ್ಕೆ ಟಿಎಪಿಸಿಎಂಎಸ್ ಕಚೇರಿ ಕಟ್ಟಡದಲ್ಲಿ ನೆರವೇರಲಿದೆ. ಮುಕ್ತಿಮಂದಿರ ಧರ್ಮಕ್ಷೇತ್ರದ ವಿಮಲ ರೇಣುಕ ವೀರಮುಕ್ತಿಮುನಿ ಶಿವಾಚಾರ್ಯ ಶ್ರೀಗಳು ಸಾನ್ನಿಧ್ಯ ವಹಿಸಲಿದ್ದು, ಮಾಜಿ ಶಾಸಕ ಗಂಗಣ್ಣ ಮಹಾಂತಶೆಟ್ಟರ ಕಚೇರಿಯನ್ನು ಉದ್ಘಾಟಿಸಲಿದ್ದಾರೆ. ಶಿರಹಟ್ಟಿ ತಾಲೂಕು ವೀರಶೈವ ಪಂಚಮಸಾಲಿ ಸಂಘದ ಅಧ್ಯಕ್ಷ ಡಾ. ಎಸ್.ಬಿ. ಜವಾಯಿ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ಸೋಮಣ್ಣ ಮುಳಗುಂದ, ಚಂದ್ರಶೇಖರ ಕುಲಕರ್ಣಿ, ಶಕುಂತಲಾ ಹೊರಟ್ಟಿ, ದೇವೇಂದ್ರಪ್ಪ ಪಲ್ಲೇದ, ವೀರಣ್ಣ ಹತ್ತಿಕಾಳ, ಬಸಣ್ಣ ಹೊಸೂರು, ಸೊಸೈಟಿಯ ಅಧ್ಯಕ್ಷ ಎಸ್.ಪಿ. ಪಾಟೀಲ, ಮುಖ್ಯ ಕಾರ್ಯನಿರ್ವಾಹಕ ಎನ್.ಪಿ. ಪಾಟೀಲ ಆಗಮಿಸಲಿದ್ದಾರೆ. ಗಣ್ಯ ವರ್ತಕ ವಿಜಯಕುಮಾರ ಗಡ್ಡಿ ಪಿಗ್ಮಿ ಕಾರ್ಡ್ ವಿತರಣೆ ಮಾಡಲಿದ್ದು, ಎನ್.ಎಸ್.ಪಾಟೀಲ ಸಾಲದ ಚೆಕ್ಕುಗಳನ್ನು ವಿತರಣೆ ಮಾಡಲಿದ್ದಾರೆ. ಪ್ರೊ. ಸಿ.ವಿ. ಕೆರಿಮನಿ ಠೇವಣಿ ಸರ್ಟಿಫಿಕೇಟ್ ವಿತರಣೆ ಮಾಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಜು. 3ರಿಂದ ದ್ವಿತೀಯ ಪಿಯು ಪೂರಕ ಪರೀಕ್ಷೆ
ಗದಗ:  ಜಿಲ್ಲೆಯಲ್ಲಿ ಜುಲೈ 3ರಿಂದ 12ರ ವರೆಗೆ ಜರುಗುವ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಗಳನ್ನು ವ್ಯವಸ್ಥಿತವಾಗಿ ಹಾಗೂ ಅಕ್ರಮಗಳಿಗೆ ಅವಕಾಶ ನೀಡದಂತೆ ನಡೆಸಲು ಜಿಪಂ ಸಿಇಓ ವೀರಣ್ಣ ತುರಮರಿ ಅವರು ಪದವಿ ಪೂರ್ವ ಶಿಕ್ಷಣ ಇಲಾಖೆಗೆ ಸೂಚಿಸಿದ್ದಾರೆ. ಜಿಲ್ಲೆಯ 89 ಕಾಲೇಜುಗಳ 6067 ವಿದ್ಯಾರ್ಥಿಗಳಿಗಾಗಿ ಒಟ್ಟು 8 ಪರೀಕ್ಷಾ ಕೇಂದ್ರಗಳನ್ನು ನಿಗದಿಗೊಳಿಸಲಾಗಿದೆ. ಪರೀಕ್ಷಾ ಸಮಯದಲ್ಲಿ ನಕಲು ಮಾಡುವುದು, ಪರೀಕ್ಷಾರ್ಥಿಗಳ ಬದಲು ಬೇರೆಯವರು ಪರೀಕ್ಷೆಗೆ ಹಾಜರಾಗುವುದು ಮುಂತಾದ ಅವ್ಯವಹಾರ ತಡೆಗಟ್ಟಲು ಮತ್ತು ಬೇರೆಯವರು ಪರೀಕ್ಷೆಗೆ ಹಾಜರಾಗುವುದು ಮುಂತಾದ ಅವ್ಯವಹಾರ ತಡೆಗಟ್ಟಲು ಕ್ರಮ ಜರುಗಿಸಲಾಗಿದೆ. ಪರೀಕ್ಷಾ ಕೇಂದ್ರಗಳ ಸುತ್ತಲೂ ಶಿಸ್ತು, ಶಾಂತಿ ಕಾಪಾಡುವ ದೃಷ್ಟಿಯಿಂದ ನಿಷೇಧಿತ ಪ್ರದೇಶವೆಂದು ಘೋಷಿಸಲು ಹಾಗೂ ಜಿಲ್ಲಾ ಮಟ್ಟದ, ತಾಲೂಕು ಮಟ್ಟದ ಅಧಿಕಾರಿಗಳ ವೀಕ್ಷಕರ ಜಾಗ್ರತ ದಳ ನೇಮಕ, ಸೂಕ್ತ ಬಂದೋಬಸ್ತ್ ಮತ್ತು ವಿದ್ಯಾರ್ಥಿಗಳಿಗೆ ಕುಡಿಯುವ ನೀರು ವ್ಯವಸ್ಥೆ, ಆಸನದ ವ್ಯವಸ್ಥೆ ಕುರಿತು ಕ್ರಮ ಜರುಗಿಸಲಾಗಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಬಿ.ಎಸ್.ಗೌಡರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಲಕ್ಷ್ಮವ್ವ ಗಾಣಿಗೇರ ನಿಧನ
ನರಗುಂದ:  ತಾಲೂಕಿನ ಯಾವಗಲ್ ಗ್ರಾಮದ ಲಕ್ಷ್ಮವ್ವ ಗಾಣಿಗೇರ (78) ಗುರುವಾರ ನಿಧನರಾದರು. ಮೃತರಿಗೆ ಪುತ್ರರು, ಮೂವರು ಪುತ್ರಿಯರು ಹಾಗೂ ಅಪಾರ ಬಂಧು ಬಳಗ ಇದ್ದಾರೆ.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement