ತಾಂತ್ರಿಕ ಕೌಶಲ್ಯಕ್ಕೆ ಹೆಚ್ಚಿನ ಮಹತ್ವ: ಮಲ್ಲೂರ
ಗಜೇಂದ್ರಗಡ: ಇಂದಿನ ವೈಜ್ಞಾನಿಕ ಯುಗದಲ್ಲಿ ತಾಂತ್ರಿಕ ಕೌಶಲ್ಯತೆಯ ತಂತ್ರಜ್ಞಾನಕ್ಕೆ ಹೆಚ್ಚು ಮಹತ್ವವಿದ್ದು, ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಪ್ರತಿಭಾವಂತ ತಂತ್ರಜ್ಞರಾಗಿ ವಿಶ್ವ ಮಟ್ಟದಲ್ಲಿ ರಾಷ್ಟ್ರದ ಗೌರವ ಹೆಚ್ಚಿಸಿ ಎಂದು ಸರ್ಕಾರಿ ಮಹಿಳಾ ಕೈಗಾರಿಕಾ ತರಬೇತಿ ಕೇಂದ್ರದ ಪ್ರಾಚಾರ್ಯ ಬಸವರಾಜ ಮಲ್ಲೂರ ಹೇಳಿದರು. ಅವರು ಸ್ಥಳೀಯ ಅನ್ನದಾನೇಶ್ವರ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆ ವಾರ್ಷಿಕೋತ್ಸವ ಹಾಗೂ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭವನ್ನು ಈಚೆಗೆ ಉದ್ಘಾಟಿಸಿ ಮಾತನಾಡಿದರು. ಇಂದು ದೇಶದಲ್ಲಿ ತಾಂಡವಾಡುತ್ತಿರುವ ನಿರುದ್ಯೋಗಕ್ಕೆ ತಾಂತ್ರಿಕ ಶಿಕ್ಷಣ ರಾಮ ಬಾಣ. ಯುವಕರು ತಾಂತ್ರಿಕ ಶಿಕ್ಷಣ ಪಡೆದು ತಂತ್ರಜ್ಞಾನ ಕ್ಷೇತ್ರವನ್ನು ಶ್ರೀಮಂತಗೊಳಿಸುವಲ್ಲಿ ವಿದ್ಯಾರ್ಥಿಗಳ ಪಾತ್ರ ಪ್ರಮುಖ. ಜತೆಗೆ ಸರ್ಕಾರವೂ ಕೂಡ ತಂತ್ರಜ್ಞಾನ ಕೈಗಾರಿಕಾ ಕ್ಷೇತ್ರಕ್ಕೆ ಮೊದಲಾದ್ಯತೆ ನೀಡುತ್ತಿದ್ದು, ವಿದ್ಯಾರ್ಥಿಗಳು ತಾಂತ್ರಿಕ ಕೌಶಲ್ಯತೆ ಹೆಚ್ಚಿಸಿಕೊಂಡು ದೇಶದ ತಂತ್ರಜ್ಞಾನಿಯಾಗಿ ಬಾಳಿ ಎಂದರು. ಡಾ. ಬಿ.ವಿ. ಕಂಬಳ್ಯಾಳ ಮಾತನಾಡಿದರು. ಇದೇ ಸಂದರ್ಭ 2 ವರ್ಷದ ತರಬೇತಿ ಪೂರೈಸಿದ ವಿದ್ಯಾರ್ಥಿಗಳನ್ನು ತರಬೇತಿ ಕೇಂದ್ರದ ವತಿಯಿಂದ ಬೀಳ್ಕೊಡಲಾಯಿತು. ಎಸ್.ಎಸ್. ಪಟ್ಟೇದ, ಪ್ರಭು ಚವಡಿ, ಎ.ಪಿ. ಗಾಣಗೇರ, ಬಸವರಾಜ ಚಿನಿವಾಲರ, ಐ.ಎಂ. ಗುರಿಕಾರ, ಎ.ಎಂ. ಪರಮಣ್ಣವರ ಇದ್ದರು.
ಪದವೀಧರರಿಗೆ ಸ್ಪಂದಿಸಲು ಪ್ರಾಮಾಣಿಕ ಪ್ರಯತ್ನ: ಸಂಕನೂರ
ಮುಂಡರಗಿ: ನನ್ನ ಮೇಲೆ ವಿಶ್ವಾಸವಿಟ್ಟು ವಿಧಾನ ಪರಿಷತ್ತಿಗೆ ದಾಖಲೆ ಗೆಲುವನ್ನು ತಂದುಕೊಟ್ಟಿದ್ದಕ್ಕೆ ಪದವೀಧರರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ಅಧಿಕಾರವಧಿಯಲ್ಲಿ ಪದವೀಧರರ ಮತ್ತು ಶಿಕ್ಷಕರ ಸಮಸ್ಯೆಗಳನ್ನು ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ನೂತನ ವಿಪ ಸದಸ್ಯ ಎಸ್.ವಿ. ಸಂಕನೂರ ಹೇಳಿದರು. ಅವರು ಶನಿವಾರ ರಾತ್ರಿ ಮುಂಡರಗಿ ಪ್ರವಾಸಿ ಮಂದಿರದಲ್ಲಿ ತಾಲೂಕು ಕಸಾಪ ಮತ್ತು ವಿವಿಧ ಸಂಘಟನೆಗಳು ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಪದವೀಧರರ ಸಮಸ್ಯೆಗಳನ್ನು ಬಗೆಹರಿಸುವ ಶಕ್ತಿಯನ್ನು ದಯಪಾಲಿಸು ಎಂದು ನಾನು ದಿನಾಲೂ ದೇವರಲ್ಲಿ ಬೇಡಿಕೊಳ್ಳುತ್ತಿದ್ದೇನೆ. ಪದವೀಧರರಿಗಾಗಿ ಮತ್ತು ಶಿಕ್ಷಕಕರಿಗಾಗಿ ಸಾಕಷ್ಟು ಯೋಜನೆಗಳನ್ನು ರೂಪಿಸಿದ್ದೇನೆ ಎಂದರು. ಪ್ರೊ. ಆರ್.ಎಲ್. ಪೊಲೀಸ್ಪಾಟೀಲ ಮಾತನಾಡಿದರು. ತಾಲೂಕು ಕಸಾಪ ಅಧ್ಯಕ್ಷ ಎಸ್.ಬಿ. ಹಿರೇಮಠ ಪ್ರಾ. ಸಂಕನೂರ ಅವರನ್ನು ಸನ್ಮಾನಿಸಿದರು. ಎಂ.ಜಿ. ಗಚ್ಚಣ್ಣವರ, ಡಾ. ಜಿ.ಬಿ. ಜವಳಿ, ಎಂ.ಎಸ್. ಹೊಟ್ಟಿನ, ಜಿ.ಆರ್. ಕಲಬುರ್ಗಿ, ಕಾಶೀನಾಥ ಶಿರಬಡಗಿ, ಡಾ. ನಿಂಗು ಸೊಲಗಿ, ಎ.ವಿ. ಹಳ್ಳಿಕೇರಿ, ಪ್ರಾ. ಎ.ಎನ್. ಶೇಡದಾಳೆ, ಮಂಜುನಾಥ, ಎಂ.ವಿ. ಬರಡೋಲ, ಎ.ಐ. ಮಾರನಬಸರಿ, ಎಸ್.ವಿ. ಪಾಟೀಲ, ಪುರಸಭೆಯ ವಿರೋಧ ಪಕ್ಷದ ನಾಯಕ ಪ್ರಭು ಅಬ್ಬಿಗೇರಿ, ಬಿ.ಕೆ. ಪಾಟೀಲ, ಎಸ್. ಶಿವರಾಜಸ್ವಾಮಿ, ಮರುಳರಾಧ್ಯ, ಸಿ.ಎಸ್. ಅರಸನಾಳ ಉಪಸ್ಥಿತರಿದ್ದರು.
ರಸ್ತೆ ಅಗಲೀಕರಣಗೊಳಿಸಿ
ನರಗುಂದ: ಶಿರೋಳ-ಹದಲಿ ರಸ್ತೆ ಅಗಲೀಕರಣ ಮತ್ತು ಚರಂಡಿ ನಿರ್ಮಾಣದಲ್ಲಿ ಗುತ್ತಿಗೆದಾರರು ಕಾಮಗಾರಿಗಳ ನಿಯಮ ಪಾಲಿಸಿಲ್ಲ. ಇದಕ್ಕಿರುವ ಸಮಸ್ಯೆಗಳನ್ನು ಕೂಡಲೇ ಇತ್ಯರ್ಥಪಡಿಸಬೇಕು ಮತ್ತು ರಸ್ತೆ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎಂದು ನಾಗನಗೌಡ ತಿಮ್ಮನಗೌಡ್ರ, ರಂಜಾನಸಾಬ್, ಈರಣ ಕೊಡಬಳ್ಳಿ, ಶಂಕ್ರಪ್ಪ ಗಾಣಿಗೇರ ಆಗ್ರಹಿಸಿದ್ದಾರೆ.
ಸಾಲ ಮರುಪಾವತಿ ಅತ್ಯಗತ್ಯ: ಗುಡಿ
ಗದಗ: ಸರ್ಕಾರದ ಯೋಜನೆಗಳಾದ ಹೈನುಗಾರಿಕೆ, ಗುಡಿಗಾರಿಕೆ, ನೇರ ಸಾಲ, ಚೈತನ್ಯ ಸಾಲ ಯೋಜನೆ ಮುಂತಾದವುಗಳ ಮೂಲಕ ಪಡೆದ ಸಾಲ ಪ್ರಾಮಾಣಿಕವಾಗಿ ಉಪಯೋಗಿಸಿಕೊಂಡು ಮರುಪಾವತಿ ಮಾಡಿದಾಗ ಮಾತ್ರ ಅಂತಹ ಯೋಜನೆಗಳು ಸಾರ್ಥಕತೆ ಹೊಂದುತ್ತವೆ ಎಂದು ಕೆವಿಜಿ ಬ್ಯಾಂಕ್ ವ್ಯವಸ್ಥಾಪಕ ಆರ್.ಕೆ. ಗುಡಿ ಹೇಳಿದರು. ಅವರು ಶನಿವಾರ ಸಮಾಜ ಕಲ್ಯಾಣ ಇಲಾಖೆ ಗದಗ, ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಂಯುಕ್ತಾಶ್ರಯದಲ್ಲಿ ಪ. ಜಾತಿ, ಪ. ವರ್ಗ ನಿರುದ್ಯೋಗ ಯುವಕ, ಯುವತಿಯರ ಉದ್ಯೋಗ ಮಾರ್ಗದರ್ಶಿ ಶಿಬಿರ ಉದ್ಘಾಟಿಸಿ ಮಾತನಾಡಿದರು. ರಾಷ್ಟ್ರ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಎಸ್.ಎನ್. ಬಳ್ಳಾರಿ, ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ಎಸ್.ಕೆ. ಚವ್ಹಾಣ, ರಾಜ್ಯ ದಸಂಸ ನಾಯಕ ಮೋಹನ ಆಲಮೇಲಕರ, ತಾಲೂಕು ಸಮಾಜ ಕಲ್ಯಾಣ ಅಧಿಕಾರಿ ಎಸ್.ಎಂ. ಹೆಬ್ಬಳ್ಳಿ ಇದ್ದರು.
ಮಳೆಗಾಗಿ ವಿಶೇಷ ಪೂಜೆ
ಗದಗ: ಮುನಿಸಿಕೊಂಡಿರುವ ಮಳೆಗಾಗಿ ಪ್ರಾರ್ಥಿಸಿ ಸೋಮವಾರ ಜೈ ಭೀಮ ಸೇನಾ ರಾಜ್ಯ ಸಂಘರ್ಷ ಸಮಿತಿ ವತಿಯಿಂದ ನಗರದ ವೀರೇಶ್ವರ ಪುಣ್ಯಾಶ್ರಮದಲ್ಲಿರುವ ಲಿಂ. ಡಾ. ಪಂಡಿತ ಪುಟ್ಟರಾಜ ಕವಿ ಗವಾಯಿಗಳ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು, ಜಿಲ್ಲಾ ಕಾರ್ಯದರ್ಶಿ ರಾಘವೇಂದ್ರ ಪರಾಪುರ, ಉಪಾಧ್ಯಕ್ಷ ಮಂಜುನಾಥ ತೌಜಲ್, ದೀಪಕ ಕಲ್ಮನಿ, ಪರಶುರಾಮ ಸಂಗಾಪುರ, ಓಬಳೇಶ ಯಶವಂತಪುರ, ಮಂಜುನಾಥ ಪರಾಪುರ, ವಿಶ್ವನಾಥ ಹುಬ್ಬಳ್ಳಿ, ಗಿರೀಶ ಬೇವಿನಕಟ್ಟಿ, ಬಾಬು, ರಾಷ್ಟ್ರೀಯನ್ ಜೋಸೆಫ್ ಇದ್ದರು.
ರಕ್ತದಾನ ಶಿಬಿರ ಇಂದು
ಗದಗ: ಗದಗ ಐಎಂಎ ವತಿಯಿಂದ ವೈದ್ಯರ ದಿನಾಚರಣೆಯ ಅಂಗವಾಗಿ ಜುಲೈ 1ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಮಲ್ಲಸಮುದ್ರ ಸಮೀಪದಲ್ಲಿರುವ ಜಿಲ್ಲಾ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದೆ. ಶಿಬಿರದಲ್ಲಿ ಐಎಂಎ ಸದಸ್ಯರು ಅವರ ಕುಟುಂಬ ವರ್ಗದವರು ಹಾಗೂ ಸಾರ್ವಜನಿಕರು ರಕ್ತದಾನ ಮಾಡಬಹುದಾಗಿದೆ. ಸಂಜೆ 7.30ಕ್ಕೆ ಹೋಟೆಲ್ ಕುಟೀರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಐಎಂಎ ಪ್ರಕಟಣೆ ತಿಳಿಸಿದೆ.
ರು. 5 ಸಾವಿರ ಚೆಕ್ ವಿತರಣೆ
ಸೋಮನಗೌಡ ಪರ್ವತಗೌಡರಿಗೆ ಸೇರಿದ ಎತ್ತು ಹೃದಯಾಘಾತದಿಂದ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ನರಗುಂದ ಪಂಚಗೃಹ ಗುಡ್ಡದ ಹಿರೇಮಠದ ಆವರಣದಲ್ಲಿ ಯಂಗ್ ಇಂಡಿಯಾ ವತಿಯಿಂದ ರೈತ ಸೋಮನಗೌಡರಿಗೆ ರು. 5 ಸಾವಿರ ಚೆಕ್ ವಿತರಿಸಲಾಯಿತು. ಸಿದ್ಧಲಿಂಗ ಶಿವಾಚಾರ್ಯ ಶ್ರೀ ಸಾನ್ನಿಧ್ಯ ವಹಿಸಿದ್ದರು.
ಎಲ್ಲರಲ್ಲೂ ಸೇವಾ ಮನೋಭಾವ ಇರಲಿ
ಗದಗ: ಪ್ರತಿಯೊಬ್ಬರಲ್ಲಿಯೂ ಸೇವಾ ಮನೋಭಾವ ಇರಬೇಕು. ಜೀವನದಲ್ಲಿ ಭಗವತ್ ಶಕ್ತಿಯನ್ನು ನಂಬಿದ್ದೇಯಾದಲ್ಲಿ ಅಂತಹ ಮನುಷ್ಯನಿಗೆ ಯಶಸ್ಸು ಸುಲಭವಾಗಿ ಲಭಿಸುತ್ತದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿಶ್ವ ವಿಭಾಗದ ಸಹ-ಸಂಯೋಜಕ ಶ್ಯಾಮ ಪರಾಂಡೆ ಹೇಳಿದರು. ಸೋಮವಾರ ನಗರದ ಪಂಚಮುಖಿ ದೇವಸ್ಥಾನದ ಹತ್ತಿರದ ಬ್ಯಾಂಕರ್ಸ್ ಕಾಲೋನಿಯ ಹತ್ತಿರ ಸೇವಾ ಭಾರತಿ ಟ್ರಸ್ಟ್ನ ಅರುಣೋದಯ ವಿಶೇಷ ಅಗತ್ಯವುಳ್ಳ ಮಕ್ಕಳ ಶಾಲಾ ಕಟ್ಟಡದ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಖಿಲ ಭಾರತ ವ್ಯವಸ್ಥೆ ಪ್ರಮುಖ ಮಂಗೇಶ ಭೇಂಡೆ ಮಾತನಾಡಿ, ಪಶುಗಳಿಗಿಂತ ಮನುಷ್ಯ ಭಿನ್ನ. ದೇಶದಲ್ಲಿ ಶೇ. 3ರಷ್ಟು ವಿಶೇಷ ಅಗತ್ಯವುಳ್ಳ ಮಕ್ಕಳಿದ್ದಾರೆ. ಅಂತಹ ಮಕ್ಕಳಿಗೂ ಸಮಾಜದಲ್ಲಿ ಉನ್ನತ ಸ್ಥಾನಮಾನ ಸಿಗುವಂತೆ ಮಾಡಬೇಕು. ಈ ನಿಟ್ಟಿನಲ್ಲಿ ಅರುಣೋದಯ ಶಾಲೆಯ ಆಡಳಿತ ಮಂಡಳಿ ಹಾಗೂ ಶಿಕ್ಷಕ ಸಿಬ್ಬಂದಿ ಸೇವಾ ಗುಣ ಶ್ಲಾಘಿಸಿದರು. ಹುಬ್ಬಳ್ಳಿ ಸೇವಾ ಭಾರತಿ ಟ್ರಸ್ಟ್ ಅಧ್ಯಕ್ಷ ಡಾ. ರಘು ಅಕಮಂಚಿ ಅಧ್ಯಕ್ಷತೆ ವಹಿಸಿದ್ದರು. ಶಿದ್ರಾಮಪ್ಪ ಸಂಶಿಮಠ, ಮಂಜುನಾಥ ಬೇಲೇರಿ, ಸಂಸದ ಶಿವಕುಮಾರ ಉದಾಸಿ, ವಿಪ ಸದಸ್ಯ ಎಸ್.ವಿ. ಸಂಕನೂರ, ಕಳಕಪ್ಪ ಬಂಡಿ, ಸಿ.ಸಿ. ಪಾಟೀಲ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ವಿದ್ಯಾರ್ಥಿಗಳು ಆರೋಗ್ಯದತ್ತ ಗಮನ ಹರಿಸಿ: ಕುಲಕರ್ಣಿ
ಗಜೇಂದ್ರಗಡ: ವಿದ್ಯಾರ್ಥಿಗಳು ವಿದ್ಯಾರ್ಜನೆ ಜತೆಗೆ ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಬೇಕು ಎಂದು ಮುಖ್ಯೋಪಾಧ್ಯಾಯ ಎಂ.ಟಿ. ಕುಲಕರ್ಣಿ ಹೇಳಿದರು. ಸ್ಥಳೀಯ ಎಸ್.ಎಂ. ಭೂಮರಡ್ಡಿ ಸಂಯುಕ್ತ ಪ್ರೌಢ ಶಾಲೆಯಲ್ಲಿ ನಡೆದ ಹೆಲ್ತ್ ಕ್ಲಬ್ ಹಾಗೂ ಇಕೋ ಕ್ಲಬ್ ಉದ್ಘಾಟಿಸಿ ಮಾತನಾಡಿದರು. ಆಧುನಿಕ ಆಹಾರ ಪದ್ಧತಿ ಭರಾಟೆಗೆ ಮಾರು ಹೋಗಿ ಸತ್ವಯುಕ್ತ ಆಹಾರ ಸೇವಿಸದಿರುವುದು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಪೌಷ್ಟಿಕಾಂಶಯುಳ್ಳ ಆಹಾರ ಸೇವಿಸಿ ಆರೋಗ್ಯ ರಕ್ಷಣೆಗೆ ಒತ್ತು ನೀಡುವುದು ಅವಶ್ಯ ಎಂದರು.
ಪಿಯು ಪೂರಕ ಪರೀಕ್ಷೆ 3ರಿಂದ ಆರಂಭ
ಗದಗ: ಜು. 3ರಂದು ಬೆಳಗಿನ ಅವಧಿಯಲ್ಲಿ ಸಮಾಜಶಾಸ್ತ್ರ, ಲೆಕ್ಕಶಾಸ್ತ್ರ, ಭೌತಶಾಸ್ತ್ರ, ಮಧ್ಯಾಹ್ನದ ಅವಧಿಯಲ್ಲಿ ಕರ್ನಾಟಕ, ಹಿಂದೂಸ್ತಾನಿ ಮ್ಯೂಜಿಕ್ ಹಾಗೂ ಮನಶಾಸ್ತ್ರ, ಜು. 4ರಂದು ರಾಜ್ಯಶಾಸ್ತ್ರ, ಸಾಂಖಿಕ ಶಾಸ್ತ್ರ, ಜೀವಶಾಸ್ತ್ರ. ಜು. 5ರಂದು ಬೆಳಗಿನ ಅವಧಿಯಲ್ಲಿ ಅರ್ಥಶಾಸ್ತ್ರ, ಗಣಿತ, ಮಧ್ಯಾಹ್ನದ ಅವಧಿಯಲ್ಲಿ ಲಾಜಿಕ್ ಮತ್ತು ಹೋಮ್ ಸೈನ್ಸ್, ಜು. 7ರಂದು ಬೆಳಗಿನ ಅವಧಿಯಲ್ಲಿ ಕನ್ನಡ, ತಮಿಳು, ತೆಲಗು, ಮಲಯಾಳಂ, ಉರ್ದು, ಫ್ರೆಂಚ್, ಮಧ್ಯಾಹ್ನದ ಅವಧಿಯಲ್ಲಿ ಮರಾಠಿ, ಅರೇಬಿಕ್, ಜು. 8ರಂದು ಬಿಸಿನೆಸ್ ಸ್ಟಡೀಸ್, ರಸಾಯನಶಾಸ್ತ್ರ, ಶಿಕ್ಷಣಶಾಸ್ತ್ರ. ಮಧ್ಯಾಹ್ನದ ಅವಧಿಯಲ್ಲಿ ಐಚ್ಛಿಕ ಕನ್ನಡ. ಜು. 9ರಂದು ಇಂಗ್ಲಿಷ್, ಜು. 10ರಂದು ಇತಿಹಾಸ, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್. ಜು. 11ರಂದು ಭೂಗೋಳಶಾಸ್ತ್ರ, ಜಿಯಾಲಜಿ, ಬೇಸಿಕ್ ಮ್ಯಾಥ್ಸ್, ಜು. 12ರಂದು ಹಿಂದಿ, ಸಂಸ್ಕೃತ ಪರೀಕ್ಷೆಗಳು ನಡೆಯಲಿವೆ. ಬೆಳಗಿನ ಅವಧಿಯ ಪರೀಕ್ಷೆಗಳು ಬೆಳಗ್ಗೆ 9ರಿಂದ 12.15ರ ವರೆಗೆ ಹಾಗೂ ಮಧ್ಯಾಹ್ನ ಅವಧಿಯ ಪರೀಕ್ಷೆಗಳು ಮಧ್ಯಾಹ್ನ 2ರಿಂದ ಸಂಜೆ 5.15 ರ ವರೆಗೆ ನಡೆಯುವವು.
ಟಂಟಂ ಪಲ್ಟಿ: ವೃದ್ಧ ಸಾವು, ಮೂವರಿಗೆ ಗಾಯ
ರೋಣ: ಟಂ ಟಂ ಪಲ್ಟಿಯಾಗಿ ಒಬ್ಬ ಮೃತನಾಗಿದ್ದು, ಮೂವರಿಗೆ ಗಾಯಗಳಾದ ಘಟನೆ ತಾಲೂಕಿನ ಮಲ್ಲಾಪುರ ಗ್ರಾಮದ ಹತ್ತಿರ ರಾಜ್ಯ ಹೆದ್ದಾರಿಯಲ್ಲಿ ಸೋಮವಾರ ಸಂಭವಿಸಿದೆ. ಮೃತನನ್ನು ಮಲ್ಲಾಪುರ ಗ್ರಾಮದ ಹಾಸಿಂಸಾಬ ತಟಗಾರ (65) ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನು ಮಲ್ಲಾಪುರ ಗ್ರಾಮದ ಮಮತಾಜ ಬೇಗಂ ತಟಗಾರ, ಮಲ್ಲವ್ವ ಮರಿಗಂಟೆನ್ನವರ, ಹನುಮವ್ವ ಮರಿಗಂಟೆನ್ನವರ ಎಂದು ಗುರುತಿಸಲಾಗಿದ್ದು, ಗಾಯಾಳುಗಳನ್ನು 108 ವಾಹನ ಮೂಲಕ ಪಟ್ಟಣದ ಡಾ. ಭೀಮಸೇನ ಜೋಶಿ ಸಾರ್ವಜನಿಕ ಆಸ್ಪತ್ರೆಗೆ ಕರೆ ತಂದು ಚಿಕಿತ್ಸೆ ನೀಡಲಾಯಿತು. ಗಂಭೀರ ಗಾಯಗೊಂಡಿದ್ದ ಹಾಸಿಂಸಾಬ ತಟಗಾರನನ್ನು ರೋಣ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಗದಗ ಜಿಲ್ಲಾಸ್ಪತ್ರೆಗೆ ಕೊಂಡ್ಯೊಯ್ಯುವ ಮಾರ್ಗ ಮದ್ಯ ಮೃತನಾಗಿದ್ದಾನೆ ಎಂದು ತಿಳಿದು ಬಂದಿದೆ. ರೋಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.