ಪೌರ ಕಾರ್ಮಿಕರಿಂದ ಸ್ವಚ್ಛ ನಗರ
ಗದಗ: ನಗರದ ಸ್ವಚ್ಛತೆ ಮತ್ತು ಸೌಂದರ್ಯ ವೃದ್ಧಿಯಲ್ಲಿ ಪೌರ ಕಾರ್ಮಿಕರ ಸೇವೆ ಪ್ರಮುಖವಾಗಿದೆ ಎಂದು ಗದಗ-ಬೆಟಗೇರಿ ನಗರಸಭೆ ಅಧ್ಯಕ್ಷೆ ರುದ್ರವ್ವ ಕೆರಕಲಮಟ್ಟಿ ಹೇಳಿದರು.
ಅವರು ಸೋಮವಾರ ಗದಗ ಜಿಲ್ಲಾ ಪೌರ ಕಾರ್ಮಿಕರ ಸಂಘದ ವತಿಯಿಂದ ನಗರದ ವೀರನಾರಾಯಣ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ನಿವೃತ್ತ ಪೌರ ಕಾರ್ಮಿಕರ ಸನ್ಮಾನ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಮಾತನಾಡಿದರು.
ಪೌರ ಕಾರ್ಮಿಕರು ನಿತ್ಯ ಬೆಳಗ್ಗೆ ಕರ್ತವ್ಯಕ್ಕೆ ಹಾಜರಾಗಿ ನಗರದ ವಿವಿಧ ರಸ್ತೆ, ಬಡಾವಣೆಗಳಲ್ಲಿ ಸ್ವಚ್ಛತೆ ಕಾರ್ಯ ಕೈಗೊಳ್ಳುತ್ತಿರುವುದರಿಂದ, ಉದ್ಯಾನವನ ನಿರ್ವಹಣೆ ಮಾಡುತ್ತಿರುವುದರಿಂದ ನಗರ ಸುಂದರವಾಗಿ ಕಂಗೊಳಿಸುತ್ತಿದೆ. ಅವಳಿ ನಗರದ ಅಭಿವೃದ್ಧಿಯಲ್ಲಿ ನಗರಸಭೆ ಪೌರ ಕಾರ್ಮಿಕರು ಸೇರಿದಂತೆ ನಗರಸಭೆ ಅಧಿಕಾರಿಗಳು, ಸಿಬ್ಬಂದಿ ಕಾರ್ಯ ಶ್ಲಾಘನೀಯ. ನಿವೃತ್ತ ನಗರಸಭೆ ಕಾರ್ಮಿಕರ ವಿಶ್ರಾಂತ ಜೀವನ ಸುಖಮಯವಾಗಿರಲಿ ಎಂದು ಹಾರೈಸಿದರು.
ನಗರಸಭೆ ಉಪಾಧ್ಯಕ್ಷ ಕೃಷ್ಣಾ ಪರಾಪುರ, ಅಧ್ಯಕ್ಷತೆ ವಹಿಸಿದ್ದ ಗದಗ ಜಿಲ್ಲಾ ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ವಿರೂಪಾಕ್ಷಪ್ಪ ರಾಮಗಿರಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಜಿಲ್ಲಾ ಪೌರ ಕಾರ್ಮಿಕರ ಸಂಘದಿಂದ ನಿವೃತ್ತ ಕಾರ್ಮಿಕರಾದ ಹಿರಿಯ ನೈರ್ಮಲ್ಯ ನಿರೀಕ್ಷಕ ಬಿ.ಬಿ. ಕರ್ಜಗಿ, ಉದ್ಯಾನವನ ನಿರ್ವಹಣೆಗಾರರಾದ ಉಮಾಬಾಯಿ ಕಲ್ಮನಿ, ನಗರಸಭೆ ಕಾಮಗಾರಿ ವಿಭಾಗದ ಚಂದವ್ವ ದೊಡ್ಡಮನಿ ಅವರನ್ನು ಸನ್ಮಾನಿಸಲಾಯಿತು.
ತಾಯಪ್ಪ ಗೌಡರ, ಸುರೇಶ ಕಲ್ಮನಿ, ನಗರಸಭೆ ಸದಸ್ಯೆ ಕಮಲಾಕ್ಷಿ ಹಾದಿಮನಿ, ಮಂಜುನಾಥ ಪೂಜಾರ, ನಾಗರಾಜ ಬಳ್ಳಾರಿ, ವೆಂಕಟೇಶ ಬಳ್ಳಾರಿ, ಸಣ್ಣರಾಮಪ್ಪ ಬಳ್ಳಾರಿ, ಹೇಮೇಶ ಯಟ್ಟಿ, ಮೃತ್ಯುಂಜಯ ದೊಡ್ಡಮನಿ, ಜಂಬಣ್ಣ ಹಾದಿಮನಿ, ಈರವ್ವ ಹಾದಿಮನಿ, ಕೆಂಚವ್ವ ಯಟ್ಟಿ, ದ್ಯಾಮಣ್ಣ ರಾಮಗಿರಿ, ಅರವಿಂದ ಕುರ್ತಕೋಟಿ, ಭೀಮಪ್ಪ ಕಲ್ಲೂರ, ಫಕ್ಕೀರಪ್ಪ ಬಳ್ಳಾರಿ, ಲಕ್ಷ್ಮಣ ಚಲವಾದಿ, ಅರವಿಂದ ಕುರ್ತಕೋಟಿ, ಬಸವ್ವ ಬೇವಿನಮರದ, ವಿಜಯಲಕ್ಷ್ಮೀ ಬಳ್ಳಾರಿ ಇದ್ದರು.