ಮಹಿಳೆಯರ ಸಂಘಟನೆ ಸಾಧನೆಗೆ ಮೆಟ್ಟಿಲು: ಶಾಸಕ ದೊಡ್ಡಮನಿ
ಮುಂಡರಗಿ: ಇಂದಿನ ಮಹಿಳೆ ಎಲ್ಲ ವಿಭಾಗದಲ್ಲೂ ಸಾಧನೆ ಮಾಡುತ್ತಿದ್ದಾಳೆ. ವಿವಿಧ ಮಹಿಳಾ ಸಂಘಟನೆಗಳ ಮೂಲಕ ನಿಮ್ಮಲ್ಲಿರುವ ಪ್ರತಿಭೆಗಳನ್ನು ಪ್ರದರ್ಶಿಸಿ ಹೆಸರು ಮಾಡಲು ಅವಕಾಶವಿರುತ್ತದೆ ಎಂದು ಶಿರಹಟ್ಟಿ ಶಾಸಕ ರಾಮಕೃಷ್ಣ ದೊಡ್ಡಮನಿ ಹೇಳಿದರು.
ಅವರು ಶನಿವಾರ ಸಂಜೆ ಇಲ್ಲಿನ ಪುರಸಭೆ ಆವರಣದಲ್ಲಿರುವ ಗಾಂಧಿಭವನದಲ್ಲಿ ಸಮೃದ್ಧಿ ಮಹಿಳಾ ವಿವಿಧೋದ್ದೇಶಗಳ ಸಂಸ್ಥೆಯನ್ನು ಉದ್ಘಾಟಿಸಿ ಮಾತನಾಡಿದರು. ಮಹಿಳೆಯರು ವಿವಿಧೋದ್ದೇಶ ಸಂಘಗಳನ್ನು ಹುಟ್ಟುಹಾಕಿ, ಅನೇಕ ಚಟುವಟಿಕೆ ಮಾಡುವುದರ ಮೂಲಕ ಯಾವುದರಲ್ಲಿ ಕಡಿಮೆ ಇಲ್ಲ ಎನ್ನುವುದನ್ನು ಪದೇ ಪದೆ ತೋರಿಸಬೇಕು. ಅನೇಕ ತರಹದ ಆಹಾರ ಉತ್ಪನ್ನಗಳನ್ನು ತಯಾರಿಸಿ ಮಾರುವುದರಿಂದ ನಿರುದ್ಯೋಗ ಸಮಸ್ಯೆ ನಿವಾರಣೆಯಾಗುವುದಲ್ಲದೆ ಆರ್ಥಿಕವಾಗಿ ಸಬಲಳಾಗಲು ಸಾಧ್ಯವಾಗುತ್ತದೆ.
ಶಾಸಕರ ಅಭಿವೃದ್ಧಿ ಅನುದಾನದಲ್ಲಿ ಆಹಾರ ಉತ್ಪನ್ನಗಳನ್ನು ತಯಾರಿಸಲು ಅನುಕೂಲವಾಗುವ ಶೆಡ್ ನಿರ್ಮಿಸುವುದಾಗಿ ಭರವಸೆ ನೀಡಿದರು.
ಅತಿಥಿಯಾಗಿ ಆಗಮಿಸಿದ್ದ ಪತ್ರಕರ್ತೆ ಸಾವಿತ್ರಿ ಮುಜುಮದಾರ ಹಾಗೂ ಸಂಘದಿಂದ ತಯಾರಿಸಿದ ಅನೇಕ ಆಹಾರ ಉತ್ಪನ್ನಗಳನ್ನು ವಿಶ್ರಾಂತ ಪ್ರಾಚಾರ್ಯ ಎಸ್.ಬಿ. ಕರಿಭರಮಗೌಡರ ಉದ್ಘಾಟಿಸಿ ಮಾತನಾಡಿದರು. ಸಂಘದ ಅಧ್ಯಕ್ಷೆ ಅನಿತಾ ಸೀತಾರಾಮರಾಜು ಅಧ್ಯಕ್ಷತೆ ವಹಿಸಿದ್ದರು. ಪುರಸಭೆಯ ಅಧ್ಯಕ್ಷೆ ಭಾರತಿ ಹಕ್ಕಿ, ಸದಸ್ಯೆ ದಾನೇಶ್ವರಿ ಭಜಂತ್ರಿ, ಭಾಗ್ಯಜ್ಯೋತಿ ಹುಬ್ಬಳ್ಳಿ, ಪ್ರತಿಭಾ ಹೊಸಮನಿ, ವೀಣಾ ಪಾಟೀಲ, ಅನುರಾಧಾ ಪುರಾಣಿಕ, ಗೀತಾ ತಲೆಗೌಡರ, ಸುನಿತಾ ಪಾಟೀಲ, ದೇವಕ್ಕ ದಂಡಿನ ಮತ್ತು ಡಾ. ಸವಿತಾ ಬಳ್ಳಾರಿ ಮುಂತಾದವು ಉಪಸ್ಥಿತರಿದ್ದರು. ಸಂಘದ ಕಾರ್ಯದರ್ಶಿ ಪ್ರತಿಭಾ ಹೊಸಮನಿ ಸ್ವಾಗತಿಸಿದರು.