ಸಂಭಾಜಿ ಹೇಳಿಕೆ ಖಂಡಿಸಿ ಟೈರ್‌ಗೆ ಬೆಂಕಿ
ಕನ್ನಡಪ್ರಭ ವಾರ್ತೆ, ಗದಗ, ಜೂ. 30
ಬೆಳಗಾವಿಯಲ್ಲಿ ಶಾಸಕ ಸಂಭಾಜಿ ಪಾಟೀಲ ಕನ್ನಡಿಗರ ಮೇಲೆ ದೌರ್ಜನ್ಯ ಹಾಗೂ ಮರಾಠಿಯಲ್ಲಿ ನಾಮಫಲಕ ಮಾಡಬೇಕು ಎಂದು ಅಲ್ಲಿನ ಜಿಲ್ಲಾಧಿಕಾರಿಗೆ ಗಡುವು ನೀಡಿರುವ ಕ್ರಮ ವಿರೋಧಿಸಿ ಸೋಮವಾರ ಕರ್ನಾಟಕ ಯುವಶಕ್ತಿ ವೇದಿಕೆಯಿಂದ ನಗರದ ಗಾಂಧಿ ವೃತ್ತದಲ್ಲಿ ಟೈರ್‌ಗೆ ಬೆಂಕಿ ಹಚ್ಚಿ ಪ್ರತಿಭಟಿಸಲಾಯಿತು.
ಶಾಸಕ ಸಂಭಾಜಿ ಪಾಟೀಲ ಕರ್ನಾಟಕದಲ್ಲಿಯೇ ಇದ್ದುಕೊಂಡು, ಕರ್ನಾಟಕದ ಅನ್ನ ತಿಂದು ಪದೇ ಪದೇ ಕನ್ನಡಿಗರ ಮೇಲೆ ದೌರ್ಜನ್ಯ ಮಾಡುತ್ತ ಗಲಭೆ ಎಬ್ಬಿಸುತ್ತಿದ್ದಾರೆ. ಎಂಇಎಸ್ ಕಟ್ಟಿಕೊಂಡು ಕನ್ನಡಿಗರ ಮೇಲೆ ಗೂಂಡಾಗಿರಿ ಮಾಡುತ್ತಿದ್ದಾರೆ. ಬೆಳಗಾವಿ ಜಿಲ್ಲಾಧಿಕಾರಿಯವರಿಗೆ ರೇಲ್ವೆ, ಬಸ್ ನಿಲ್ದಾಣ, ಸರ್ಕಾರಿ ಇಲಾಖೆಯಲ್ಲಿ ಮರಾಠಿ ಭಾಷೆಯಲ್ಲಿ ನಾಮಫಲಕ ಹಾಕಬೇಕೆಂದು ಎಂದು ಒಂದು ತಿಂಗಳವರೆಗೆ ಗಡುವು ನೀಡಿದ್ದು ಖಂಡನಾರ್ಹವಾಗಿದೆ.
ಕರ್ನಾಟಕಲ್ಲಿದ್ದುಕೊಂಡು ಮರಾಠಿ ಭಾಷೆ ಪ್ರೇರೇಪಿಸುತ್ತಿರುವ ಶಾಸಕ ಸಂಭಾಜಿ ವಿರುದ್ಧ ರಾಜ್ಯದ ಮುಖ್ಯಮಂತ್ರಿಗಳು ಕೂಡಲೇ ಶಾಸಕ ಸಂಭಾಜಿ ಸ್ಥಾನ ಅನರ್ಹಗೊಳಿಸಬೇಕು ಹಾಗೂ ಸಂಭಾಜಿಯನ್ನು ರಾಜ್ಯದಿಂದ ಗಡಿಪಾರು ಮಾಡಬೇಕು. ಇಲ್ಲದಿದ್ದಲ್ಲಿ ಕರ್ನಾಟಕ ಯುವಶಕ್ತಿ ವೇದಿಕೆಯಿಂದ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಬಿ.ಎಂ. ಚಲ್ಲಣ್ಣವರ. ಬಸವರಾಜ ಚಲ್ಲಣ್ಣವರ, ಶ್ರೀಶೈಲಪ್ಪ ಗೋಳಸಂಗಿ, ಶಾಂತಾ ಗೋಳಸಂಗಿ, ಲಲಿತಾ ಹುಬ್ಬಳ್ಳಿ, ತಾರಾ ಬಳ್ಳಾರಿ, ನಾಗಮ್ಮ ನಾಲವಾಡ, ರಾಜೇಶ್ವರಿ ಬಳ್ಳಾರಿ, ಎ. ವಿಜಯಲಕ್ಷ್ಮೀ, ಶೈಲಜಾ ಸಜ್ಜನರ, ಮಂಜುಳಾ ಹಿರೇಮಠ, ಶಬ್ಬೀರ ರೋಣದ, ಉಮೇಶ ಮ್ಯಾಗೇರಿ, ಬಸಯ್ಯ ನಂದಿಕೋಲ, ಜಿ.ಜಿ. ನರಸಾಪುರ, ಬಿ.ಎಂ. ಆರಟ್ಟಿ, ಎಸ್.ಬಿ. ಚವಡಿ ಇತರರಿದ್ದರು.