ಅಪಘಾತಕ್ಕೆ ಆಹ್ವಾನ ನೀಡುತ್ತಿರುವ ಟಿಸಿ
ಗಜೇಂದ್ರಗಡ ಪುರಸಭೆ ವ್ಯಾಪ್ತಿಯ ಕಲ್ಗುಡಿಯವರ ಪ್ಲಾಟಿನಲ್ಲಿ ಸಾರ್ವಜನಿಕರು ಸಂಚರಿಸುವ ರಸ್ತೆ ಬದಿಯಲ್ಲಿರುವ ಹೆಸ್ಕಾಂನ ವಿದ್ಯುತ್ ಟಾನ್ಸ್ಫಾರ್ಮರ್ (ಟಿಸಿ) ಸಾರ್ವಜನಿಕರ ಪ್ರಾಣಕ್ಕೆ ಸಂಚಕಾರ ತಂದೊಡ್ಡಿದೆ. ಅಪಾಯಕ್ಕೆ ಎಡೆಮಾಡಿಕೊಟ್ಟಿರುವ ವಿದ್ಯುತ್ ಟಿಸಿಯನ್ನು ಬೇರೆಡೆಗೆ ಸ್ಥಳಾಂತರಿಸಲು ಹೆಸ್ಕಾಂ ಅಧಿಕಾರಿಗಳಿಗೆ ಬೇಡಿಕೆಯ ಮನವಿಗೆ ಸ್ಪಂದನೆ ಇಲ್ಲದಂತಾಗಿದೆ.
ಬಡಾವಣೆಯ ಮುಖ್ಯ ರಸ್ತೆಯಲ್ಲಿ ಅಳವಡಿಸಿರುವ ಹೈ ವೋಲ್ಟೇಜ್ ವಿದ್ಯುತ್ ತಂತಿಗಳಿಂದ ಕೂಡಿದ ಟಿಸಿ ಸನಿಹದಲ್ಲೆ ನಿತ್ಯ ಸಾರ್ವಜನಿಕರು, ಶಾಲಾ ಮಕ್ಕಳು ರಸ್ತೆಯಲ್ಲಿ ಸಂಚರಿಸುತ್ತಾರೆ. ಟಿಸಿಯಿಂದ ಆಗಾಗ ವಿದ್ಯುತ್ ಸ್ಫೋಟಕ ಕಿಡಿಗಳು ಸಿಡಿಯುತ್ತವೆ. ಇದರಿಂದ ಬಡಾವಣೆ ನಿವಾಸಿಗಳು ಭಯದ ನೆರಳಲ್ಲಿ ಜೀವಿಸುವಂತಾಗಿದ್ದು, ಇದಕ್ಕೆಲ್ಲ ಹೆಸ್ಕಾಂ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯವೇ ಇದಕ್ಕೆ ಪ್ರಮುಖ ಕಾರಣವಾಗಿದೆ. 10 ವರ್ಷದಿಂದ ವಾಸವಾಗಿರುವ ಬಡಾವಣೆ ಜನತೆಗೆ ಇದರಿಂದ ತೀವ್ರ ತೊಂದರೆ ಎದುರಿಸುತ್ತಿದ್ದಾರೆ. ಈ ಕುರಿತು ಹೆಸ್ಕಾಂ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಕೇವಲ ಹೆಸ್ಕಾಂ ಅಧಿಕಾರಿಗಳು ಟಿಸಿ ಬೇರೆಡೆ ಸ್ಥಳಾಂತರಿಸಲಾಗುವುದು ಎನ್ನುವ ಭರವಸೆಯ ಮಾತನ್ನು ಹೊರತುಪಡಿಸಿ ಇಲ್ಲಿಯವರೆಗೂ ವಿದ್ಯುತ್ ಟ್ರಾನ್ಸ್ಫಾರ್ಮರ್ ಬೇರೆಡೆಗೆ ಸ್ಥಳಾಂತರಿಸಿಲ್ಲ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು, ಈ ಕೂಡಲೇ ಕಲ್ಗುಡಿ ಪ್ಲಾಟಿನಲ್ಲಿ ಅಳವಡಿಸಿರುವ ಟಿಸಿಯನ್ನು ಬೇರೆಡೆ ಸ್ಥಳಾಂತರಿಸಲು ಮುಂದಾಗದಿದ್ದಲ್ಲಿ ಪ್ಲಾಟಿನ ನಿವಾಸಿಗಳು ಹೆಸ್ಕಾಂ ಕಚೇರಿ ಬೀಗ ಜಡಿದು ಅಮರಣಾಂತ ಸತ್ಯಾಗ್ರಹಕ್ಕೆ ಮುಂದಾಗಲಿದ್ದೇವೆ.
-ರಜಾಕಸಾಬ್ ಅರಳಿಕಟ್ಟಿ, ಕಲ್ಗುಡಿಯವರ ಪ್ಲಾಟ್ ನಿವಾಸಿ