ಕಾಮ-ರತಿ ಉತ್ಸವ ಸಮಿತಿ ಪದಾಧಿಕಾರಿಗಳ ಆಯ್ಕೆ
ಗದಗ: ನಗರದ ಹಳೇ ಸರಾಫ ಬಜಾರದಲ್ಲಿರುವ ಜಗದಂಬಾ ದೇವಸ್ಥಾನದ ಸಹಸ್ರಾರ್ಜುನ ಸಮುದಾಯ ಭವನದ ಲಕ್ಷ್ಮಣಸಾ ಸಭಾಗೃಹದಲ್ಲಿ ಎಸ್ಎಸ್ಕೆ ತರುಣ ಸಂಘದ ಅಧ್ಯಕ್ಷ ಕಿಶನ್ ಮೇರವಾಡೆ ಅಧ್ಯಕ್ಷತೆಯಲ್ಲಿ ಈಚೆಗೆ ನಡೆದ ಸಭೆಯಲ್ಲಿ 2014ನೇ ಸಾಲಿನ ಕಾಮ-ರತಿ ಉತ್ಸವ ಸಮಿತಿಯ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಎಸ್ಎಸ್ಕೆ ಕಾಮ-ರತಿ ಉತ್ಸವ ಸಮಿತಿಯ ಚೇರ್ಮನ್ರಾಗಿ ಶ್ರೀಕಾಂತ ಅರಸಿದ್ದಿ, ವೈಸ್ ಚೇರ್ಮನ್ರಾಗಿ ವೆಂಕಟೇಶ ಹಬೀಬ, ಗೌರವ ಕಾರ್ಯದರ್ಶಿಯಾಗಿ ಮಂಜು ಮೇರವಾಡೆ, ಸಹ ಕಾರ್ಯದರ್ಶಿಯಾಗಿ ರಾಜು ಮಗಜಿ, ಖಜಾಂಚಿಯಾಗಿ ರಮೇಶ ನಾಕೋಡ ಆಯ್ಕೆಯಾದರು. ಕಾಮ-ರತಿ ಉತ್ಸವ ಪ್ರತಿ ವರ್ಷದಂತೆ ಈ ವರ್ಷವೂ ಅತಿ ವಿಜೃಂಭಣೆಯಿಂದ ಆಚರಿಸಲಾಗುವುದು. ಉತ್ಸವದಲ್ಲಿ ಯಾವುದೇ ಅಹಿತಕರವಾದ ಘಟನೆಗಳು ಸಂಭವಿಸದಂತೆ ನಿಗಾ ವಹಿಸಿ ಶಾಂತ ರೀತಿಯಿಂದ ಸಂಭ್ರಮದಿಂದ ಕಾಮ-ರತಿ ಉತ್ಸವವನ್ನು ಸೌಹಾರ್ದ ಪೂರ್ವಕವಾಗಿ ಆಚರಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಮಾ. 20ರಂದು ರಂಗಪಂಚಮಿ ನಿಮಿತ್ತವಾಗಿ ರಂಗು-ರಂಗಿನ ಕಾರಂಜಿ ನೃತ್ಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮಗಳಲ್ಲಿ ಸಮಾಜ ಬಾಂಧವರು ಪಾಲ್ಗೊಳ್ಳುವಂತೆ ಕಿಶನ್ ಮೇರವಾಡೆ ಕೋರಿದರು. ಎಸ್ಎಸ್ಕೆ ತರುಣ ಸಂಘ, ಜಗದಂಬಾ ಪಾಲಕಿ ಸೇವಾ ಸಮಿತಿ ಹಾಗೂ ಕಾಮ-ರತಿ ಉತ್ಸವ ಸಮಿತಿ ಅಧ್ಯಕ್ಷರು, ಪದಾಧಿಕಾರಗಳು, ಸದಸ್ಯರು ಹಾಗೂ ಸಮಾಜ ಬಾಂಧವರು ಉಪಸ್ಥಿತರಿದ್ದರು ಎಂದು ಎಸ್ಎಸ್ಕೆ ತರುಣ ಸಂಘದ ಗೌರವ ಕಾರ್ಯದರ್ಶಿ ಸುಧೀರ ಕಾಟೀಗರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನರಗುಂದದಲ್ಲಿಂದು ಹೋಳಿ ಆಚರಣೆ
ನರಗುಂದ: ನರಗುಂದ ಪಟ್ಟಣ ಸೇರಿದಂತೆ ತಾಲೂಕಿನ ಎಲ್ಲ ಗ್ರಾಮಗಳಲ್ಲಿನ ಎಲ್ಲ ಸಮಾಜ ಬಾಂಧವರು ಪರಸ್ಪರ ಬಣ್ಣ ಎರಚುವ ಮೂಲಕ ಈ ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ.
ನರಗುಂದ ಪಟ್ಟಣದ ಹಲವು ಕಡೆಗಳಲ್ಲಿ ಕಾಮ-ರತಿಯನ್ನು ಪ್ರತಿಷ್ಠಾಪಿಸಲಾಗಿದೆ. ಹೋಳಿ ಹುಣ್ಣಿಮೆಯ ಅಂಗವಾಗಿ ಜನತೆ ಬಣ್ಣ ಖರೀದಿಸುವ ಕಾರ್ಯದಲ್ಲಿ ತೊಡಗಿರುವುದು ಕಂಡು ಬಂದಿತು. ತಾಲೂಕಿನ ಹಲವು ಗ್ರಾಮಗಳಲ್ಲಿ ಮಾ. 17ರಂದು ಸೋಮವಾರ ಹೋಳಿಹುಣ್ಣಿಮೆ ಆಚರಿಸುತ್ತಿದ್ದು, ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಭಾನುವಾರ ಬಣ್ಣ ಖರೀದಿಸುವ ದೃಶ್ಯ ಕಂಡು ಬಂದಿತು.