ಗದಗ ಕಿಲ್ಲಾ ಕಾಮ-ರತಿಗೆ 150 ವರ್ಷ
-ಶಿವಕುಮಾರ ಕುಷ್ಟಗಿ
ಗದಗ: ನಗರದ ಕಿಲ್ಲಾ ಓಣಿಯಲ್ಲಿರುವ ಕಾಮ-ರತಿಗೆ 150 ವರ್ಷ. 150 ವರ್ಷಗಳಿಂದ ಇಲ್ಲಿ ಕಾಮ-ರತಿಯನ್ನು ಪ್ರತಿಷ್ಠಾಪಿಸುತ್ತಾ ಬರಲಾಗುತ್ತಿದೆ. ಈ ಸರ್ಕಾರಿ ಕಾಮ-ರತಿಗೆ ಜಿಲ್ಲೆಯಲ್ಲದೇ ಹೊರ ಜಿಲ್ಲೆಗಳಿಂದಲೂ ಆಗಮಿಸಿ ಪೂಜೆ ಸಲ್ಲಿಸುವುದು ವಿಶೇಷ. ಇಲ್ಲಿರುವ ಕಾಮ-ರತಿಗೆ ಸಾರ್ವಜನಿಕರಿಂದ ಸಂಗ್ರಹಿಸಲಾಗುವ 20-25ಕ್ಕೂ ಅಧಿಕ ಕೆಜಿ ಚಿನ್ನಾಭರಣ ಹಾಕಿ ಇಲ್ಲಿನ ಜನತೆ ಸಂಭ್ರಮಿಸುವ ಮೂಲಕ ಸಂಭ್ರಮದ ಹೋಳಿ ಆಚರಿಸುವುದು ವಿಶೇಷ.
ಹೋಳಿ ಎಂದರೆ ಎಲ್ಲರಿಗೂ ನೆನಪಿಗೆ ಬರುವುದು ಗ್ರಾಮ, ಪಟ್ಟಣ, ನಗರ ಪ್ರದೇಶಗಳಲ್ಲಿ ಪ್ರತಿಷ್ಠಾಪಿಸಿರುವ ಅಲಂಕೃತ ಕಾಮ-ರತಿ ನೋಡುವುದೇ ಒಂದು ವಿಶೇಷ. ಈ ಹೋಳಿ ಹಬ್ಬವನ್ನು ಪ್ರಾಚೀನ ಕಾಲದಿಂದಲು ಆಚರಿಸಿಕೊಂಡು ಬರುತ್ತಿರುವ ಹಬ್ಬವಾಗಿದ್ದು, ಇದಕ್ಕೆ ವೈಜ್ಞಾನಿಕ ಹಿನ್ನೆಲೆಯಿದೆ ಎಂಬುದು ವಿಶೇಷ. ಅಲ್ಲದೇ ಯುವಕ-ಯುವತಿಯರಿಗೆ ಈ ಹೋಳಿ ಹಬ್ಬವೆಂದರೆ ಎಲ್ಲಿಲ್ಲದ ಖುಷಿ. ಯುವಕ-ಯುವಕರು, ಯುವತಿಯರು ಪರಸ್ಪರ ಬಣ್ಣ ಎರಚಿ ಸಂತಸ ಹಂಚಿಕೊಳ್ಳುವುದು ಈ ಹಬ್ಬದ ವಿಶೇಷ.
ನಗರದ ಕಿಲ್ಲಾ ಓಣಿಯಲ್ಲಿ ಪ್ರತಿಷ್ಠಾಪಿಸಲಾಗುವ ಕಾಮ-ರತಿಯು ಗದಗ-ಬೆಟಗೇರಿ ನಗರದಲ್ಲಿಯೇ ಪ್ರಸಿದ್ಧ ಪಡೆದಿದೆ. ಇದಕ್ಕೆ ಸರ್ಕಾರಿ ಕಾಮ-ರತಿ ಎಂದು ಕರೆಯಲಾಗುತ್ತದೆ. 150 ವರ್ಷಗಳಿಂದ ಕಿಲ್ಲಾ ಓಣಿಯಲ್ಲಿ ಸರ್ಕಾರಿ ಕಾಮ-ರತಿಯನ್ನು ಸಮಾಜದ ಎಲ್ಲರೂ ಒಂದೂ ಗೂಡಿ ಪ್ರತಿಷ್ಠಾಪಿಸುತ್ತಾ ಬರುತ್ತಿರುವುದು ವಿಶೇಷ.
ಹಿನ್ನೆಲೆ: ಕೊಪ್ಪಳ ಜಿಲ್ಲೆಯ ಕಿನ್ನಾಳ ಗ್ರಾಮವು ಬಣ್ಣ-ಬಣ್ಣದ ಗೊಂಬೆಗಳ ತಯಾರಿಕೆಯಲ್ಲಿ ಪ್ರಸಿದ್ಧಿ ಪಡೆದ ಗ್ರಾಮ. ನೂರಾರು ವರ್ಷಗಳ ಹಿಂದೆ ಅಂದಿನ ಹಿರಿಯರು ಒಂದುಗೂಡಿ ನಗರದಲ್ಲಿ ವಿಜೃಂಭಣೆಯ ಹೋಳಿ ಹುಣ್ಣಿಮೆ ಹಬ್ಬವನ್ನು ಆಚರಿಸುವ ಉದ್ದೇಶದಿಂದ ಕಾಮ-ರತಿಯನ್ನು ಕಿನ್ನಾಳದಲ್ಲಿ ತಯಾರಿಸಿಕೊಂಡು ತಂದು ಪ್ರತಿಷ್ಠಾಪಿಸಲಾಯಿತು. ಅಂದು ಯಾವುದೇ ರೀತಿಯ ವಾಹನ ಸೌಕರ್ಯವಿರದೇ ಇರುವುದರಿಂದ ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಕಿನ್ನಾಳದಿಂದ ಕಾಮ-ರತಿಯನ್ನು ಹೊರಸಿನ ಮೇಲೆ ಹೊತ್ತು ಭವ್ಯ ಮೆರವಣಿಗೆಯ ಮೂಲಕ ತಂದು ಪ್ರತಿಷ್ಠಾಪಿಸಿದರು.
ಸಾರ್ವಜನಿಕರ ಆಭರಣ ಬಳಕೆ: ಕಿಲ್ಲಾ ಓಣಿಯ ಈ ಸರ್ಕಾರಿ ಕಾಮ-ರತಿಗೆ ನಗರದ ಭಾವಸಾರ ಕ್ಷತ್ರಿಯ ಸಮಾಜದ ಬಾಂಧವರು ಹಾಗೂ ಓಣಿಯ ಸಾರ್ವಜನಿಕರು ತಮ್ಮ ಮನೆಯಲ್ಲಿನ ಬಂಗಾರದ ಒಡವೆಗಳನ್ನು ತಂದು ಕಾಮ-ರತಿಗೆ ಶೃಂಗರಿಸುವರು. ಅಲ್ಲದೇ ಹಿಂದಿನಿಂದ ಆಚರಿಸಿಕೊಂಡು ಬಂದಿರುವ ಈ ಪದ್ಧತಿಯನ್ನು ಇಂದಿನ ಯುವ ಸಮೂಹವು ಮುಂದುವರಿಸಿಕೊಂಡು ಬಂದಿರುವುದು ವಿಶೇಷ. ಕಾಮ-ರತಿಗೆ ತಾಳಿಸರ, ಚಪ್ಲಹಾರ, ನತ್ತು, ನಡಪಟ್ಟಿ, ಮೂಗುತಿ, ಸರಗಿ, ಬೋರಮಾಳ, ವಂಡಿ-ಡಾಬು, ತೀಕಿ, ಬಾಜುಬಂದ, ಕಿವಿಓಲೆ, ಮೇಲಗುಂಡಿನ ಸರ, ಗುಂಡಗಡಗಿ ಸೇರಿದಂತೆ ನೂರಕ್ಕೂ ಹೆಚ್ಚು ಬಗೆಯ ಆಭರಣ ಹಾಕಲಾಗುತ್ತದೆ.
ಇಷ್ಟಾರ್ಥ ಸಿದ್ಧಿಗೆ ಆಭರಣ ಬಳಕೆ: ಇಲ್ಲಿ ಸಾರ್ವಜನಿಕರು ತಮ್ಮ ಬಂಗಾರದ ಆಭರಣಗಳನ್ನು ಮನೆಯಿಂದ ತಂದು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಈ ರತಿ-ಕಾಮರಿಗೆ ಅಲಂಕರಿಸುತ್ತಿದ್ದು, 20-25 ಕೆಜಿಗೂ ಅಧಿಕ ಬಂಗಾರದ ಆಭರಣಗಳಿಂದ ಶೃಂಗರಿಸುತ್ತಾರೆ.
ಮಾ. 19ರಂದು ರಾತ್ರಿ ಸಾರ್ವಜನಿಕರಿಂದ ಸಂಗ್ರಹಿಸುವ ಈ ಆಭರಣಗಳ ಮೇಲೆ ವಾರಸುದಾರರ ಹೆಸರಿರುವ ಚೀಟಿಯನ್ನು ಹಾಕಲಾಗುತ್ತದೆ. ಮಾ. 20ರಂದು ಬೆಳಗ್ಗೆಯಿಂದ ಸಂಜೆಯ ವರೆಗೆ ಮೆರವಣಿಗೆ ನಡೆಸಲಾಗುತ್ತದೆ. ನಂತರ ಬಂಗಾರದ ಆಭರಣಗಳನ್ನು ಮರಳಿ ವಾರಸುದಾರರಿಗೆ ಮರಳಿಸಲಾಗುತ್ತದೆ.