ಗದಗ ನಗರದಲ್ಲಿ ಮೂಲ ಸೌಲಭ್ಯಕ್ಕೆ ಆಗ್ರಹ: ಮನವಿ
ಕನ್ನಡಪ್ರಭ ವಾರ್ತೆ, ಗದಗ, ಮಾ. 15
ತುಂಗಭದ್ರಾ ಕುಡಿಯುವ 2ನೇ ಹಂತದ ಕಾಮಗಾರಿಯನ್ನು ತೀವ್ರಗೊಳಿಸಿ ಗದಗ-ಬೆಟಗೇರಿ ಅವಳಿ ನಗರಕ್ಕೆ ಪ್ರತಿದಿನ ನೀರು ಪೂರೈಸಲು ಕ್ರಮ ಕೈಗೊಳ್ಳಬೇಕು ಎಂದು ನಗರಸಭೆ ನೂತನ ಅಧ್ಯಕ್ಷೆ ರುದ್ರಮ್ಮ ಕೆರಕಲಮಟ್ಟಿ ಹಾಗೂ ಉಪಾಧ್ಯಕ್ಷ ಕೃಷ್ಣಾ ಪರಾಪುರಗೆ ಶನಿವಾರ ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಪದಾಧಿಕಾರಿಗಳ ನಿಯೋಗ ಮನವಿ ಸಲ್ಲಿಸಿತು.
ಅವಳಿ ನಗರದ ಮೂಲ ಸೌಲಭ್ಯ ಹಾಗೂ ಈಗಾಗಲೇ ಕೈಗೊಂಡ ಕಾಮಗಾರಿಗಳನ್ನು ತೀವ್ರಗತಿಯಲ್ಲಿ ಪೂರ್ಣಗೊಳಿಸಬೇಕು. ಒಳಚರಂಡಿ ಯೋಜನೆಯ ಉಳಿದ ಕಾಮಗಾರಿಯನ್ನು ತೀವ್ರಗತಿಯಲ್ಲಿ ಕೈಗೊಳ್ಳುವುದು, ಅವಳಿ ನಗರದಲ್ಲಿ ಇರುವಂತಹ ಉದ್ಯಾನ ಮತ್ತು ವಿವಿಧ ಕಡೆಯಲ್ಲಿ ಉದ್ಯಾನವನಕ್ಕಾಗಿ ಕಾಯ್ದಿರಿಸಿರುವ ಜಾಗೆಗಳಲ್ಲಿ ಉದ್ಯಾನ ನಿರ್ಮಿಸಿ ಸಂರಕ್ಷಣೆ ಮಾಡುವುದು, ನಗರದ ಕೆಲ ರಸ್ತೆಗಳ ಕಾಮಗಾರಿ ಕಳಪೆಯಾಗಿದ್ದು ಅವುಗಳನ್ನು ಸಿಸಿ ರಸ್ತೆ ಮಾಡುವಾಗ ಅಗಲಕ್ಕೆ ಗಟಾರದಿಂದ ಗಟಾರಿನವರೆಗೆ ಎಸ್ಟಿಮೇಟ್ ಮಾಡಿ ಕೆಲಸ ಪ್ರಾರಂಭಿಸುವುದು. ರಸ್ತೆಯ ಎರಡೂ ಬದಿಯಲ್ಲಿ ಕನಿಷ್ಠ 10-10 ಅಡಿ ಅಗಲದ ಫುಟ್ಪಾತ್ಗಳನ್ನು ನಿರ್ಮಿಸಿ ಪಾದಚಾರಿಗಳಿಗೆ ಮತ್ತು ಚಿಕ್ಕ ಮಕ್ಕಳಿಗೆ ಸುರಕ್ಷತೆ ಒದಗಿಸುವುದು, ನಗರದಲ್ಲಿ ವಾಹನಗಳ ಸಂಖ್ಯೆ ಮಿತಿಮೀರಿದ್ದರಿಂದ ಪ್ರಮುಖ ಸ್ಥಳಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡುವುದು, ಟಂಟಂ ವಾಹನಗಳಲ್ಲಿ ಪ್ರಯಾಣಿಕರ ಸಂಖ್ಯೆ ಮಿತಿಗೊಳಿಸಿ ಅಪಘಾತ ತಡೆಗಟ್ಟುವುದು, ಮುಳಗುಂದ ನಾಕಾದಲ್ಲಿ ಆಗುತ್ತಿರುವ ವಾಹನಗಳ ದಟ್ಟಣೆ ಕಡಿಮೆ ಮಾಡಲು ಒಂದು ಹೊಸ ರಸ್ತೆ ನಿರ್ಮಾಣ, ಓವರ್ಹೆಡ್ ಟ್ಯಾಂಕಿಗೆ ತುಂಗಭದ್ರಾ ನದಿಯಿಂದ ನೀರು ಬಿಟ್ಟು ಆ ಟ್ಯಾಂಕ್ ಮೂಲಕ ಅವಳಿ ನಗರಕ್ಕೆ ಪ್ರತಿದಿನ ನೀರು ಪೂರೈಕೆ ಮಾಡುವುದು, ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕುಡಿಯುವ ನೀರಿನ ತೊಂದರೆ ಸಾಕಷ್ಟು ತೊಂದರೆ ಇರುತ್ತದೆ. ಕಾರಣ ತುಂಗಭದ್ರಾ ನದಿಯ ನೀರನ್ನು ಮಾರುಕಟ್ಟೆಗೆ ಪೂರೈಸಲು ಕ್ರಮ ಕೈಗೊಳ್ಳುವುದು. ಅವಳಿ ನಗರದಲ್ಲಿ ಪ್ರತಿ ದಿವಸ ಕಸವನ್ನು ವಿಲೇವಾರಿ ಮಾಡುವುದರ ಜತೆಗೆ ಔಷಧಿ ಸಿಂಪರಣೆ ಮಾಡಿ ನಗರದ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುವುದು, ಪುರಾತನ ಕಾಲದ ಭೀಷ್ಮ ಕೆರೆಯನ್ನು ನಗರದ ಸೌಂದರ್ಯದ ದೃಷ್ಠಿಯಿಂದ ಅಭಿವೃದ್ಧಿಪಡಿಸುವುದರ ಜತೆಗೆ ತುಂಗಭದ್ರಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಿಗೆ ಇದ್ದಾಗ ಕೆರೆಗೆ ನೀರು ಬಿಡುವಂತಹ ವ್ಯವಸ್ಥೆ ಮಾಡುವುದು, ಮುಳಗುಂದ ನಾಕಾದಲ್ಲಿ ವಾಹನ ಸಂಚಾರವು ಸಾಕಷ್ಟು ಇರುತ್ತದೆ. ಕಾರಣ ಮೇಲ್ಸೇತುವೆ ನಿರ್ಮಾಣ ಮಾಡುವುದು. ನಗರದ ಹಳೆ ಬಸ್ ನಿಲ್ದಾಣದಿಂದ ವೀರಶೈವ ಲೈಬ್ರರಿವರೆಗೂ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಕೂಡಲೇ ದುರಸ್ತಿಗೊಳಿಸುವುದು ಸೇರಿದಂತೆ ಅನೇಕ ಸಮಸ್ಯೆಗಳ ಕುರಿತು ಒತ್ತಾಯಿಸಲಾಯಿತು. ಸಂಸ್ಥೆಯ ಉಪಾಧ್ಯಕ್ಷ ತೋಂಟೇಶ ಕುರಡಗಿ, ದೇವದಾಸ ಕಾಮತ, ಗೌರವ ಕಾರ್ಯದರ್ಶಿ ವೀರಣ್ಣ ಬೇವಿನಮರದ, ಅರವಿಂದ ಪಟೇಲ್, ತಾತನಗೌಡ ಪಾಟೀಲ, ಕೋಶಾಧ್ಯಕ್ಷ ಆರ್.ಬಿ. ದಾನಪ್ಪಗೌಡ್ರ, ಸೋಮನಾಥ ಜಾಲಿ ಉಪಸ್ಥಿತರಿದ್ದರು.