ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಯಲ್ಲಿ ಪಾಲ್ಗೊಳ್ಳಿ
ಗಜೇಂದ್ರಗಡ: ವಿದ್ಯಾರ್ಥಿಗಳು ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಯಲ್ಲಿ ತೊಡಗುವುದರಿಂದ ಆರೋಗ್ಯ ಸದೃಢಗೊಳ್ಳುವುದರ ಜತೆಗೆ ವ್ಯಕ್ತಿತ್ವ ವಿಕಸನ ಹೊಂದಲು ಸಹಕಾರಿಯಾಗಲಿದೆ ಎಂದು ಭಾರತೀಯ ಸ್ಟೇಟ್ ಬ್ಯಾಂಕಿನ ಪ್ರಬಂಧಕ ವಿನಾಯಕ ಶಿರ್ಶಿಕರ ಹೇಳಿದರು.
ಅವರು ಸ್ಥಳೀಯ ಭಗವಾನ ಮಹಾವೀರ ಜೈನ್ ಆಯುರ್ವೇದಿಕ್ ಮೆಡಿಕಲ್ ಕಾಲೇಜು ವತಿಯಿಂದ ವೈದ್ಯಕೀಯ ವಿದ್ಯಾರ್ಥಿಗಳಿಗೆ ಈಚೆಗೆ ನಡೆದ ರಸಪ್ರಶ್ನೆ ಕಾರ್ಯಕ್ರಮದಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು.
ವೈದ್ಯಕೀಯ ವಿದ್ಯಾರ್ಥಿಗಳಿಗಾಗಿ ನಡೆಸಿದ ಈ ರಸಪ್ರಶ್ನೆ ಕಾರ್ಯಕ್ರಮ ಅತ್ಯುತ್ತಮವಾದದ್ದು, ಸ್ಪರ್ಧೆಯಲ್ಲಿ ಸೋಲು-ಗೆಲುವಿಗಿಂತ ಭಾಗವಹಿಸುವಿಕೆ ಮಹತ್ವದ್ದು ಎಂದರು. ಸಂಸ್ಥೆಯ ಕಾರ್ಯದರ್ಶಿ ಅಜಿತ ಬಾಗಮಾರ ಅಧ್ಯಕ್ಷತೆ ವಹಿಸಿ ಮಾತನಾಡಿ, ವೈದ್ಯಕೀಯ ಶಿಕ್ಷಣ ಪಡೆದು ಸಾರ್ವಜನಿಕರ ಸೇವೆಗೆ ಸಮರ್ಪಿಸಿಕೊಳ್ಳಿ ಎಂದರು. ಸ್ಪರ್ಧೆಯಲ್ಲಿ ಸುಚಿತಾ, ಲಕ್ಷ್ಮಿ, ರಿಂಕಿ, ಮಹಾಲಕ್ಷ್ಮಿ, ಪ್ರಥಮ, ಕವಿತಾ, ಗೀತಾ, ಸ್ನೇಹಾ, ಫಾತೀಮಾ ದ್ವಿತೀಯ ಸ್ಥಾನದಲ್ಲಿ ವಿಜೇತರಾದರು. ಎಸ್‌ಬಿಐ ವತಿಯಿಂದ ಬಹುಮಾನ ನೀಡಲಾಯಿತು. ಎಸ್‌ಬಿಐನ ಎಚ್.ಡಿ. ಪಾಟೀಲ, ಪ್ರಾಚಾರ್ಯ ಜೆ.ಐ. ಹಿರೇಮಠ, ಡಾ. ರೇಷ್ಮಾ ಕೋಲಕಾರ, ಡಾ. ಎಸ್.ಕೆ. ಶ್ರೀನಿವಾಸ, ಡಾ. ಕೆ.ಬಿ. ಬಿರಾದಾರ, ಎಂ.ಕೆ. ಭಾರ್ಗವ, ಎಸ್.ಎಂ. ಮಾಡಲಗೇರಿ, ಎಂ.ವಿ. ಮಾಳಗಿ, ಕೆ.ಎಲ್. ಬೆಲ್ಲದ, ಎ.ಡಿ. ಕೋಲಕಾರ, ಸುಮಯ್ಯ, ವರ್ಧಮಾನ ಬಾಗಮಾರ, ಅರಿಹಂತ ಬಾಗಮಾರ ಮುಂತಾದವರು ಉಪಸ್ಥಿತರಿದ್ದರು.