ಉದಾಸಿ ಕುಟುಂಬದ ಸಾಧನೆ ಶೂನ್ಯ
ಕನ್ನಡಪ್ರಭ ವಾರ್ತೆ, ಗದಗ, ಮಾ. 21
ಹಲವಾರು ವರ್ಷಗಳ ಕಾಲ ಸಕ್ರಿಯ ರಾಜಕೀಯದಲ್ಲಿರುವ ಉದಾಸಿ ಕುಟುಂಬದವರು ಹಾವೇರಿ ಮತ್ತು ಗದಗ ಜಿಲ್ಲೆಗಳ ಅಭಿವೃದ್ದಿ ವಿಷಯದಲ್ಲಿ ಅನ್ಯಾಯ ಮಾಡಿ, ತಾವು ದೊಡ್ಡವರಾಗಿದ್ದಾರೆ ಎಂದು ಜೆಡಿಎಸ್ ಅಭ್ಯರ್ಥಿ ರವಿ ಮೆಣಸಿನಕಾಯಿ ಗಂಭೀರ ಆರೋಪ ಮಾಡಿದರು.
ಶುಕ್ರವಾರ ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಹಿರಿಯ ಉದಾಸಿಯವರು ಹಲವಾರು ವರ್ಷಗಳ ಕಾಲ ಈ ರಾಜ್ಯದ ಲೋಕೋಪಯೋಗಿ ಸಚಿವರಾಗಿ ಅಧಿಕಾರ ಅನುಭವಿಸಿದ್ದರೂ ಇಂದಿಗೂ ಅವರ ಸ್ವ-ಗ್ರಾಮದ ರಸ್ತೆ ಸುಧಾರಣೆ ಕಂಡಿಲ್ಲ. ಇನ್ನು ಸಂಸದ ಶಿವಕುಮಾರ ಉದಾಸಿ ಕೇಂದ್ರ ಸರ್ಕಾರದ ಹಲವಾರು ಯೋಜನೆ ಮತ್ತು ಸಂಸದರ ನಿಧಿಯನ್ನು ಸಮರ್ಪಕವಾಗಿ ಎಲ್ಲ ಗ್ರಾಮಗಳಿಗೂ ನೀಡದೇ ಕೇವಲ ತಮ್ಮ ಹಿಂಬಾಲಕರನ್ನೇ ಬೆಳೆಸಿದ್ದಾರೆ.
ಅವರೇ ಘೋಷಿಸಿಕೊಂಡಂತೆ ಹಲವಾರು ಕೋಟಿ ರುಪಾಯಿಗಳ ಆಸ್ತಿಯ ಒಡೆಯರಾಗಿದ್ದಾರೆ. ಇದು ಹಲವಾರು ಸಂಶಯಕ್ಕೆ ಕಾರಣವಾಗುತ್ತದೆ ಎಂದ ಮೆಣಸಿನಕಾಯಿ ತಮ್ಮ ಸುದ್ದಿಗೋಷ್ಠಿಯುದ್ದಕ್ಕೂ ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ ಅವರನ್ನೇ ಟಾರ್ಗೆಟ್ ಮಾಡಿ ಟೀಕೆ ಮಾಡಿದ್ದು ಹಾಗೂ ಅವರು ಸಾಕಷ್ಟು ಪ್ರಮಾಣದಲ್ಲಿ ಹಣ ಗಳಿಸಿದ್ದಾರೆ ಎಂದು ಹೇಳಿದ್ದು ಗಮನಾರ್ಹವಾಗಿತ್ತು.
ಹಣದ ಮದ: ಉದಾಸಿ ಕುಟುಂಬಕ್ಕೆ ಹಣದ ಮದವಿದೆ. ಹಣದಿಂದಲೇ ಎಲ್ಲವನ್ನು ಸಾಧಿಸಬಹುದು, ಮತದಾರರನ್ನು ಕೊಂಡುಕೊಳ್ಳಬಹುದು ಎನ್ನುವ ಹುಚ್ಚು ಕಲ್ಪನೆಯಲ್ಲಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಜನತೆ ಅವರಿಗೆ ತಕ್ಕ ಪಾಠ ಕಲಿಸುತ್ತಾರೆ. ಚುನಾವಣೆಯಲ್ಲಿ ಹಣವೇ ಮುಖ್ಯವಲ್ಲ. ಇದು ಪ್ರಜಾಪ್ರಭುತ್ವ ವ್ಯವಸ್ಥೆ. ಇಲ್ಲಿ ಆಯ್ಕೆಯಾಗುವ ವ್ಯಕ್ತಿಗಳು ಜನರ ಸೇವೆ ಮಾಡುವ ಭಾವನೆ ಹೊಂದಿರಬೇಕು. ಆದರೆ, ಉದಾಸಿ ಅವರಿಗೆ ಜನಪರ ಕಾಳಜಿ ಇಲ್ಲ. ಹಾಗಾಗಿ ಮತದಾರರು ಈ ಬಾರಿ ಅವರನ್ನು ಸ್ಪಷ್ಟವಾಗಿ ತಿರಸ್ಕರಿಸಲಿದ್ದಾರೆ ಎಂದರು.
ಇನ್ನು ಅವರು ಕ್ಷೇತ್ರದಲ್ಲಿಯೇ ಲಭ್ಯವಿರುತ್ತಿರಲಿಲ್ಲ ಎನ್ನುವ ಆರೋಪಗಳು ನಾವು ಪ್ರಚಾರಕ್ಕೆ ಹೋದಲೆಲ್ಲ ಕೇಳಿ ಬರುತ್ತಿವೆ. ಸಂಸದರಾಗಿ ಮಾಡಿದ್ದಾದರೂ ಏನು ಎಂದು ಸದ್ಯದಲ್ಲಿ ಜನತೆ ಅವರನ್ನು ಪ್ರಶ್ನಿಸುತ್ತಾರೆ ಎನ್ನುವ ವಿಶ್ವಾಸ ನನಗಿದೆ ಎಂದರು.
ನಾಮಪತ್ರ ಸಲ್ಲಿಸುವ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಇನ್ನು ದಿನಾಂಕ ನಿಗದಿಯಾಗಿಲ್ಲ. ಸದ್ಯದಲ್ಲಿಯೇ ಪ್ರಕಟಿಸುತ್ತೇನೆ. ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯ ಹಾಗೂ ಬಿಜೆಪಿ ಸಂಸದರ ವಿರೋಧಿ ಅಲೆ ನನಗೆ ವರವಾಗಿ ಪರಿಣಮಿಸಲಿದ್ದು, ಗೆಲುವು ಖಚಿತ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಅಂದಾನಯ್ಯ ಕುರ್ತಕೋಟಿಮಠ, ದಾವಲ ಮುಳಗುಂದ, ರಮೇಶ ಕಲಬುರ್ಗಿ, ಹಿರೇಗೌಡ್ರ ಸೇರಿದಂತೆ ಹಲವಾರು ಸ್ಥಳೀಯ ನಾಯಕರು ಹಾಗೂ ಹಾವೇರಿಯಿಂದ ಆಗಮಿಸಿದ್ದ ಪದಾಧಿಕಾರಿಗಳು ಹಾಜರಿದ್ದರು.