ಕಪ್ಪುಚುಕ್ಕೆ ಬಂದರೆ ರಾಜಕೀಯ ನಿವೃತ್ತಿ
ಬಳ್ಳಾರಿ: ಅಭಿವ್ಯಕ್ತಿ ಸ್ವಾತಂತ್ರ್ಯ ಎಲ್ಲರಿಗೂ ಇದೆ. 30 ವರ್ಷ ಕಪ್ಪುಚುಕ್ಕೆ ಇಲ್ಲದಂತೆ ರಾಜಕೀಯ ಜೀವನ ಮಾಡಿದ್ದೇನೆ. ಲೋಕಾಯುಕ್ತ ವರದಿಯಲ್ಲಿ ತಮ್ಮ ಹೆಸರು ಬಂದಿದೆ ಎಂಬ ಕಾರಣಕ್ಕೆ ಸ್ವಾಭಿಮಾನದಿಂದ ರಾಜಿನಾಮೆ ಕೊಟ್ಟಿದ್ದೆ. ಮತದಾರರ ಮುಂದೆ ಹೋಗಿ, ಅವರಿಂದ ತೀರ್ಪು ಪಡೆದಿದ್ದೇನೆ. ರಾಜಕೀಯ ಜೀವನದಲ್ಲಿ ಒಂದು ಕಪ್ಪುಚುಕ್ಕೆ ಬಂದರೂ ನಿವೃತ್ತಿ ಘೋಷಿಸುತ್ತೇನೆ ಎಂದು ಬಳ್ಳಾರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ. ಶ್ರೀರಾಮುಲು ಹೇಳಿದ್ದಾರೆ.
ಶುಕ್ರವಾರ ನಗರದಲ್ಲಿ ಬಿಜೆಪಿ ಚುನಾವಣಾ ಕಚೇರಿ ಉದ್ಘಾಟಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀರಾಮುಲು, ಭ್ರಷ್ಟರ ಪಟ್ಟಿಯಲ್ಲಿ ಕೇಜ್ರಿವಾಲ್ ತಮಗೆ ಸ್ಥಾನ ನೀಡಿದ್ದಕ್ಕೆ ಈ ರೀತಿ ಪ್ರಕಟಿಸಿದ್ದಾರೆ.
ಚುನಾವಣೆ ನಂತರ ವಿಲೀನ: ಚುನಾವಣೆ ಬಳಿಕ ಬಿಜೆಪಿಯಲ್ಲಿ ಬಿಎಸ್ಸಾರ್ ವಿಲೀನವಾಗುತ್ತದೆ. ಪಕ್ಷದ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ಬಿಜೆಪಿಯಲ್ಲೇ ಗುರುತಿಸಿಕೊಳ್ಳುತ್ತಾರೆ, ಬಿಎಸ್ಸಾರ್ನ ಶಾಸಕರು ಬಿಜೆಪಿಗೆ ಬೆಂಬಲ ನೀಡುತ್ತಾರೆ. ಕುಡಚಿ ಶಾಸಕ ರಾಜೀವ್ ಮಾತ್ರ ತಮ್ಮ ಹಿಂದೆ ಬರುತ್ತಿಲ್ಲ. ತಾಂತ್ರಿಕ ದೋಷದ ಹಿನ್ನೆಲೆಯಲ್ಲಿ ಈಗ ಬಿಜೆಪಿಯಲ್ಲಿ ಬಿಎಸ್ಸಾರ್ ವಿಲೀನ ಸಾಧ್ಯವಾಗಿಲ್ಲ. ವಿಲೀನ ಪ್ರಕ್ರಿಯೆ ವಿಳಂಬವಾದರೆ ಚುನಾವಣಾ ಸಿದ್ಧತೆಗೆ ಅಡ್ಡಿಯಾಗುತ್ತಿತ್ತು. ಚುನಾವಣೆ ಬಳಿಕ ವಿಲೀನ ಪ್ರಕ್ರಿಯೆ ನಡೆಯಯಲಿದೆ ಎಂದರು.
ನನ್ನ ಕೊನೆಯ ಉಸಿರು ಇರುವವರೆಗೆ ಪಕ್ಷ ಹೇಳಿದಂತೆ ಕೇಳುತ್ತೇನೆ, ಪಕ್ಷದ ಮಾರ್ಗದರ್ಶನದಂತೆ ನಡೆಯುತ್ತೇನೆ. ಪಕ್ಷ ಕೈಗೊಳ್ಳುವ ತೀರ್ಮಾನಕ್ಕೆ ನಾನು ಬದ್ಧ. ಯಾರನ್ನು ಪ್ರಚಾರಕ್ಕೆ ಕಳಿಸುತ್ತಾರೆ ಎಂಬುದು ಪಕ್ಷದ ವರಿಷ್ಠರಿಗೆ ಬಿಟ್ಟ ವಿಚಾರ, ಇಂಥವರೇ ಬರಲಿ ಎಂದು ನಾವೂ ಕೇಳಿಲ್ಲ. ಐದು ದಿನ ರಾಜ್ಯದ ಇತರ ಜಿಲ್ಲೆಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಮಾಡುವಂತೆ ವರಿಷ್ಠರು ತಮಗೆ ಸೂಚಿಸಿದ್ದಾರೆ ಎಂದರು.
ಇಂದಿನಿಂದ ಪ್ರಚಾರ: ಮಾ. 22ರ ಬೆಳಗ್ಗೆ ಬಳ್ಳಾರಿ ತಾಲೂಕಿನ ಚೇಳ್ಳಗುರ್ಕಿಯ ಶ್ರೀ ಎರ್ರಿತಾತ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸಿ, ಹೂವಿನಹಡಗಲಿಯಿಂದ ಪ್ರಚಾರ ಆರಂಭಿಸುತ್ತೇನೆ. ಮಾ. 24 ಅಥವಾ 26ರಂದು ನಾಮಪತ್ರ ಸಲ್ಲಿಸಲಾಗುತ್ತದೆ ಎಂದು ಹೇಳಿದರು.
ಶಾಂತಾ ಅವರೇ ಸ್ಪರ್ಧಿಸಿದ್ದರೆ ಬಳ್ಳಾರಿ ಗ್ರಾಮೀಣ ಕ್ಷೇತ್ರಕ್ಕೆ ಉಪ ಚುನಾವಣೆ ಅಗತ್ಯವಿರಲಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಶ್ರೀರಾಮುಲು, ನಾನೇ ಸ್ಪರ್ಧಿಸುವಂತೆ ಸೋದರಿ ಶಾಂತಾ ಹೇಳಿದ್ದಾರೆ. ನರೇಂದ್ರ ಮೋದಿ ಪ್ರಧಾನಿಯಾಗಬೇಕು ಎಂಬ ಉದ್ದೇಶದಿಂದ ಕಣಕ್ಕಿಳಿದಿದ್ದೇನೆ ಎಂದರು.
ಸಂಸದೆ ಜೆ. ಶಾಂತಾ, ವಿಧಾನ ಪರಿಷತ್ ಸದಸ್ಯ ಮೃತ್ಯುಂಜಯ ಜಿನಗಾ, ಬಿಜೆಪಿ ಜಿಲ್ಲಾಧ್ಯಕ್ಷ ನೇಮಿರಾಜ್ ನಾಯ್ಕ, ಮಾಜಿ ಶಾಸಕ ಚಂದ್ರನಾಯ್ಕ, ಮುಖಂಡ ಗೋನಾಳ ರಾಜಶೇಖರ್ಗೌಡ, ಗುತ್ತಿನಗನೂರು ವಿರೂಪಾಕ್ಷಗೌಡ, ರಾಮಲಿಂಗಪ್ಪ, ಎಚ್. ಹನುಮಂತಪ್ಪ, ಗುರುಲಿಂಗನಗೌಡ, ಡಾ ಮಹಿಪಾಲ್, ಮುರಾಹರಿಗೌಡ, ಸಂಜಯ್, ಶಿವಾರೆಡ್ಡಿ, ಮುದ್ದನಗೌಡ, ಸಂಜಯ್, ದಿವಾಕರ್, ಮಂಜುಮ್ಮ ಇದ್ದರು.
ಮುಜುಗರಕ್ಕೆ ಸಿಲುಕಿಸಬೇಡಿ: ಬಿಜೆಪಿ ಸೇರಿ ಇಷ್ಟು ದಿನವಾದರೂ ಟಿಕೆಟ್ ಘೋಷಣೆ ವಿಳಂಬವಾಯಿತೇಕೆ ಎಂಬ ಪ್ರಶ್ನೆಗೆ ಶ್ರೀರಾಮುಲು ಉತ್ತರಿಸದೆ ನುಣುಚಿಕೊಂಡರು. ಆದರೂ ಪತ್ರಕರ್ತರು ಒತ್ತಾಯಿಸಿದಾಗ, ಅದು ವರಿಷ್ಠರು ನಿರ್ಣಯಿಸುವ ವಿಚಾರ ಎಂದಷ್ಟೇ ಹೇಳಿದರು. ವಾಲ್ಮೀಕಿ ಕುರಿತಾಗಿ ಕೆ.ಎಸ್. ನಾರಾಯಣಾಚಾರ್ಯರು ಬರೆದ ಕೃತಿ ಬಗ್ಗೆ ಪ್ರಶ್ನಿಸಿದಾಗ, ನನ್ನನ್ನು ಮುಜುಗರಕ್ಕೆ ಈಡು ಮಾಡಬೇಡಿ ಎಂದು ಹೇಳಿದರು.
ಚುನಾವಣೆ ಬಳಿಕ ಬಿಜೆಪಿಯಲ್ಲಿ ಬಿಎಸ್ಸಾರ್ ವಿಲೀನವಾಗುತ್ತದೆ. ಪಕ್ಷದ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ಬಿಜೆಪಿಯಲ್ಲೇ ಗುರುತಿಸಿಕೊಳ್ಳುತ್ತಾರೆ, ಬಿಎಸ್ಸಾರ್ನ ಶಾಸಕರು ಬಿಜೆಪಿಗೆ ಬೆಂಬಲ ನೀಡುತ್ತಾರೆ. ಕುಡಚಿ ಶಾಸಕ ರಾಜೀವ್ ಮಾತ್ರ ತಮ್ಮ ಹಿಂದೆ ಬರುತ್ತಿಲ್ಲ. ತಾಂತ್ರಿಕ ದೋಷದ ಹಿನ್ನೆಲೆಯಲ್ಲಿ ಈಗ ಬಿಜೆಪಿಯಲ್ಲಿ ಬಿಎಸ್ಸಾರ್ ವಿಲೀನ ಸಾಧ್ಯವಾಗಿಲ್ಲ. ವಿಲೀನ ಪ್ರಕ್ರಿಯೆ ವಿಳಂಬವಾದರೆ ಚುನಾವಣಾ ಸಿದ್ಧತೆಗೆ ಅಡ್ಡಿಯಾಗುತ್ತಿತ್ತು. ಚುನಾವಣೆ ಬಳಿಕ ವಿಲೀನ ಪ್ರಕ್ರಿಯೆ ನಡೆಯಲಿದೆ.
- ಬಿ. ಶ್ರೀರಾಮುಲು, ಬಳ್ಳಾರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ