ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಚುನಾವಣಾ ವೆಚ್ಚ ಇರಲಿ ಚೊಕ್ಕ

Srinivasa Murthy VN
Updated On : 22 Mar 2014, 11:54 am

ಕನ್ನಡಪ್ರಭ ವಾರ್ತೆ, ಗದಗ, ಮಾ. 21
ಚುನಾವಣಾ ವೆಚ್ಚದ ಮೇಲೆ ನಿಗಾ ಹಾಗೂ ಅದರ ಲೆಕ್ಕಪತ್ರ ಬಹುಮುಖ್ಯವಾಗಿದ್ದು, ಸಂಬಂಧಿತ ಎಲ್ಲ ಅಧಿಕಾರಿಗಳು ಸಹಾಯಕ ಚುನಾವಣಾಧಿಕಾರಿಗಳು, ಪೊಲೀಸ್ ಹಾಗೂ ವಿವಿಧ ಪರಿಶೀಲನಾ ತಂಡಗಳಿಗೆ ಎಚ್ಚರಿಕೆ ಹಾಗೂ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕೆಂದು ಹಾವೇರಿ ಲೋಕಸಭಾ ಕ್ಷೇತ್ರದ ಚುನಾವಣಾ ವೆಚ್ಚದ ವೀಕ್ಷಕ ವಸಂತ ಗೆಸನ್ ಸೂಚಿಸಿದರು.
ಶುಕ್ರವಾರ ಗದಗ ಜಿಲ್ಲಾಡಳಿತ ಭವನದ ಜಿಪಂ ಸಭಾಂಗಣದಲ್ಲಿ ಆಯೋಜಿದ್ದ ಹಾವೇರಿ ಲೋಕಸಭಾ ವ್ಯಾಪ್ತಿಯ ಗದಗ ಶಿರಹಟ್ಟಿ ಹಾಗೂ ರೋಣ ವಿಧಾನಸಭಾ ಕ್ಷೇತ್ರಗಳ ಚುನಾವಣಾ ವೆಚ್ಚದ ಅಧಿಕಾರಿಗಳ ಹಾಗೂ ವಿವಿಧ ನೋಡಲ್ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಚೆಕ್‌ಪೋಸ್ಟ್‌ಗಳಲ್ಲಿ ವಿಡಿಯೋ ಚಿತ್ರೀಕರಣ ಹಾಗೂ ಅದನ್ನು ವೀಕ್ಷಿಸುವ ತಂಡಗಳು, ಚುನಾವಣಾಧಿಕಾರಿಗಳು, ಸದಾಚಾರ ಸಂಹಿತೆ ಉಲ್ಲಂಘನೆಯ ಅಂಶಗಳನ್ನು ಚೆನ್ನಾಗಿ ತಿಳಿದಿರಬೇಕು. ಅವುಗಳ ಕುರಿತು ತರಬೇತಿ ಕೊಡಲಾಗುತ್ತಿದೆ. ಹಿಂದಿನ ಅನುಭವ ಸಾರ್ವಜನಿಕರಿಗೆ ಅನವಶ್ಯಕ ತೊಂದರೆಯಾಗದಂತೆ ಕಾರ್ಯನಿರ್ವಹಿಸಬೇಕು. ಇಂತಹ ಸಂದರ್ಭದಲ್ಲಿ ಸಂಶಯ ಬೀರುವ ಯಾವುದೇ ಘಟನೆಗಳನ್ನು ಕೂಲಂಕಷವಾಗಿ ನೋಡಿ ದಾಖಲೆಗಳನ್ನು ಕೇಳಿ ಪರಿಶೀಲಿಸಬೇಕು. ತಕ್ಷಣ ಮೇಲಧಿಕಾರಿಗಳಿಗೆ ಮಾಹಿತಿ ನೀಡಿ ಚುನಾವಣಾ ಆಯೋಗದ ನಿಗದಿಪಡಿಸಿದ ರೀತಿಯಲ್ಲಿ ಕ್ರಮ ಜರುಗಿಸಬೇಕು. ಮುಖ್ಯವಾಗಿ ಸಾಕ್ಷ್ಯಾಧಾರಗಳು ನಾಶವಾಗದಂತೆ ನೋಡಿಕೊಳ್ಳಬೇಕು.
ವಿಡಿಯೋ ರಿಕಾರ್ಡಿಂಗ್ ತಂಡಗಳು ಹೆಚ್ಚಿನ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು. ಜಿಲ್ಲೆಯಲ್ಲಿ ಆಂತರಿಕ ಬೇಹುಗಾರಿಕೆ ಹೆಚ್ಚು ಬಲವಾಗಿರಬೇಕು. ಚೆಕ್‌ಪೋಸ್ಟ್ ಅಥವಾ ಇತರೆಡೆ ಪರಿಶೀಲಿಸುವಾಗ ಸಾರ್ವಜನಿಕರು ಹೇಗೆ ವರ್ತಿಸಿದರೂ ತಾಳ್ಮೆ ಕಳೆದುಕೊಳ್ಳದೇ ವಿಷಯ ವಿವರಿಸಿ ಅಗತ್ಯದ ಪರಿಶೀಲನೆ ಜರುಗಿಸಬೇಕು. ಹಣ, ಮದ್ಯ, ಗೃಹೋಪಯೋಗಿ ಸಾಮಾನು ಇತ್ಯಾದಿ ಮತದಾರರಿಗೆ ಅಮಿಷ ಒಡ್ಡುವ ವಸ್ತುಗಳು ಅವುಗಳ ಸಾಗಣೆ ಇತ್ಯಾದಿಗಳ ಕುರಿತು ವಿಶೇಷ ಗಮನ ಇರಬೇಕು.  ಎಲ್ಲ ಸೂಚಿತ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಉಲ್ಲಂಘನೆ ಪ್ರಕರಣಗಳಲ್ಲಿ ಅವುಗಳನ್ನು ದಾಖಲಿಸುವುದು ಹಾಗೂ ಆ ಕುರಿತು ಸಾಕ್ಷಿಗಳನ್ನು ಸೂಕ್ಷ್ಮವಾಗಿ ರಕ್ಷಿಸಿ ಇಡಬೇಕು ಎಂದರು.
ಜಿಲ್ಲಾಧಿಕಾರಿ ಎನ್.ಎಸ್. ಪ್ರಸನ್ನಕುಮಾರ ಲೋಕಸಭೆ ಚುನಾವಣೆ ಕುರಿತಂತೆ ಜಿಲ್ಲಾಡಳಿತ ಕೈಕೊಂಡಿರುವ ವಿವಿಧ ಕ್ರಮಗಳ ಮಾಹಿತಿ ನೀಡಿದರು.  ಅಧಿಕಾರಿಗಳ ಉದಾಸೀನತೆ ಹಾಗೂ ನಿರ್ಲಕ್ಷ್ಯತೆ ಕಂಡುಬಂದಲ್ಲಿ ಆಯೋಗ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸುತ್ತದೆ. ಅಂಥ ಯಾವುದೇ ಕ್ರಮಕ್ಕೆ ಅವಕಾಶ ನೀಡದೇ ಜವಾಬ್ದಾರಿಯಿಂದ ಚುನಾವಣಾ ಕಾರ್ಯ ನಿರ್ವಹಿಸಬೇಕು. ಸಾರ್ವಜನಿಕರು ರಾಜಕೀಯ ಪಕ್ಷಗಳು ಎಲ್ಲರಿಗೂ ಮಾಹಿತಿ ದೊರಕುವಂತೆ ಜಿಲ್ಲಾಡಳಿತ ತೆಗೆದುಕೊಂಡಿರುವ ಎಲ್ಲ ಕ್ರಮಗಳು ನಿಯಮಿಸಿದ ತಂಡಗಳು ಅವುಗಳ ವಿವರ ಇವೆಲ್ಲವೂ ಗದಗ ಎನ್‌ಐಸಿ ವೆಬ್‌ಸೈಟಿನ ಲಿಂಕ್‌ನಿಂದ ಪಡೆಯಬಹುದು. ಏನಾದರೂ ತೊಂದರೆಗಳಿದ್ದಲ್ಲಿ ಆಯಾ ಸಹಾಯಕ ಚುನಾವಣಾಧಿಕಾರಿಗಳ ಕಚೇರಿ, ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಹಾಯವಾಣಿಗಳಿದ್ದು, ಅವುಗಳನ್ನು ಸಂಪರ್ಕಿಸಬಹುದಾಗಿದೆ ಎಂದರು.
ಜಿಲ್ಲಾ ಸ್ವೀಪ್ ಅಧ್ಯಕ್ಷ ವೀರಣ್ಣ ತುರಮರಿ ಮಾತನಾಡಿ, ಎಲ್ಲ 106 ಗ್ರಾಪಂಗಳ ತಾಲೂಕು ಕೇಂದ್ರ, ಸ್ಥಳೀಯ ಸಂಸ್ಥೆಗಳ ಪ್ರಭಾತ ಫೇರಿ, ವಿಶೇಷ ಮತದಾರ ನೋಂದಣಿ ಕಾರ್ಯಕ್ರಮ, ಅರ್ಹ ಮತದಾರರು ತಪ್ಪದೇ ಮತ ಚಲಾಯಿಸಿ ಎನ್ನುವ ಸಂದೇಶ, ಬ್ಯಾನರ್‌ಗಳನ್ನು ಪ್ರದರ್ಶಿಸಲಾಗಿದೆ. ತಾಲೂಕು ಸ್ವೀಪ್ ಸಮಿತಿ, ವಾರ್ತಾ ಇಲಾಖೆ, ವಿವಿಧ ಸಂಘ-ಸಂಸ್ಥೆಗಳು, ಸ್ಥಳೀಯ ಸಂಸ್ಥೆಗಳು, ಗ್ರಾಪಂಗಳು ಈ ಕಾರ್ಯದಲ್ಲಿ ತೊಡಗಿದ್ದು, ವ್ಯವಸ್ಥಿತವಾಗಿ ಮತದಾರರ ಜಾಗೃತಿ ಹೊಸ ಮತದಾನ ಯಂತ್ರಗಳ ಕುರಿತು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಗದಗ ಉಪ ವಿಭಾಗಾಧಿಕಾರಿ ಐ.ಜಿ. ಗದ್ಯಾಳ, ಅಪರ ಜಿಲ್ಲಾಧಿಕಾರಿ ನಾಗರಾಜ, ಎಸ್ಪಿ ಟಿ. ಬಾಲಕೃಷ್ಣ, ಜಿಪಂ ಉಪ ಕಾರ್ಯದರ್ಶಿ ಷಡಕ್ಷರಪ್ಪ, ಚುನಾವಣಾ ವಿಭಾಗದ ತಹಸೀಲ್ದಾರ್ ಪಾಪಣ್ಣ ಇದ್ದರು.

ಚುನಾವಣಾ ಆಕ್ರಮಗಳು ಜಿಲ್ಲೆಯ ವ್ಯಾಪ್ತಿಯಲ್ಲಿ ಜರುಗದಂತೆ ಎಲ್ಲ ಪರಿಶೀಲನಾ ಹಾಗೂ ಜಾಗೃತ ಮತ್ತು ಚೆಕ್‌ಪೋಸ್ಟ್ ತಂಡಗಳು ಕಾರ್ಯನಿರ್ವಹಿಸಬೇಕು. ಅಧಿಕಾರಿಗಳ ಉದಾಸೀನತೆ ಹಾಗೂ ನಿರ್ಲಕ್ಷ್ಯತೆ ಕಂಡುಬಂದಲ್ಲಿ ಆಯೋಗ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸುತ್ತದೆ. ಅಂಥ ಯಾವುದೇ ಕ್ರಮಕ್ಕೆ ಅವಕಾಶ ನೀಡದೇ ಜವಾಬ್ದಾರಿಯಿಂದ ಚುನಾವಣಾ ಕಾರ್ಯ ನಿರ್ವಹಿಸಬೇಕು.
- ಎನ್.ಎಸ್. ಪ್ರಸನ್ನಕುಮಾರ,
ಜಿಲ್ಲಾಧಿಕಾರಿ, ಗದಗ

ತಾಲೂಕು ಸ್ವೀಪ್ ಸಮಿತಿ, ವಾರ್ತಾ ಇಲಾಖೆ, ವಿವಿಧ ಸಂಘ-ಸಂಸ್ಥೆಗಳು, ಸ್ಥಳೀಯ ಸಂಸ್ಥೆಗಳು, ಗ್ರಾಪಂಗಳು ಈ ಕಾರ್ಯದಲ್ಲಿ ತೊಡಗಿದ್ದು, ವ್ಯವಸ್ಥಿತವಾಗಿ ಮತದಾರರ ಜಾಗೃತಿ ಹೊಸ ಮತದಾನ ಯಂತ್ರಗಳ ಕುರಿತು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ.
- ವೀರಣ್ಣ ತುರಮರಿ,
ಜಿಲ್ಲಾ ಸ್ವೀಪ್ ಅಧ್ಯಕ್ಷ, ಗದಗ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement