ಡೊನೇಷನ್ ಹಾವಳಿ: ನಿಯಂತ್ರಣ ಪ್ರಾಧಿಕಾರ ರಚಿಸಿ
ಕನ್ನಡಪ್ರಭ ವಾರ್ತೆ, ಗದಗ, ಮಾ. 21
ಡೊನೇಷನ್ ನಿಯಂತ್ರಣಕ್ಕಾಗಿ ಜಿಲ್ಲಾ ಶಿಕ್ಷಣ ನಿಯಂತ್ರಣ ಪ್ರಾಧಿಕಾರ ರಚಿಸಲು ಒತ್ತಾಯಿಸಿ ಶುಕ್ರವಾರ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ಗದಗ ಜಿಲ್ಲಾ ಸಮಿತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರ್ಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಎಸ್ಎಫ್ಐ ಜಿಲ್ಲಾಧ್ಯಕ್ಷ ಶಿವು ಚೌಹಾಣ್ ಮಾತನಾಡಿ, ರಾಜ್ಯದಲ್ಲಿ ಶಾಲಾ-ಕಾಲೇಜುಗಳಲ್ಲಿ ಪ್ರವೇಶ ಪ್ರಕ್ರಿಯೆಗಳು ನಡೆಯುತ್ತಿವೆ. ಖಾಸಗಿ ಶಿಕ್ಷಣ ಸಂಸ್ಥೆಗಳು (ಕೆಲವು ಸರ್ಕಾರಿ ಶಿಕ್ಷಣ ಸಂಸ್ಥೆಗಳು) ಸರ್ಕಾರದ ನೀತಿ-ನಿಯಮಗಳನ್ನು ಮೀರಿ ಡೊನೇಷನ್ ವಸೂಲಿಯಲ್ಲಿ ತೊಡಗಿವೆ. ದಾಖಲಾತಿ ಸಂಗ್ರಹಿಸಬೇಕಾದ ಶುಲ್ಕ, ಪಾಲಿಸಬೇಕಾದ ಮೀಸಲಾತಿ ನಿಯಮಗಳು, ಕುರಿತು ರಾಜ್ಯ ಸರ್ಕಾರ ಶಿಕ್ಷಣ ಇಲಾಖೆ ಆಯುಕ್ತರ ಕಚೇರಿ ಮೂಲಕ ಸುತ್ತೋಲೆ ಹೊರಡಿಸಿ ಆದೇಶಿಸಿದ್ದರೂ ಇಂದಿಗೂ ಡೊನೇಶನ್ ಹಾವಳಿ ತಪ್ಪಿಲ್ಲ.
1983ರ ಕರ್ನಾಟಕ ಶಿಕ್ಷಣ ಕಾಯಿದೆ ಅನ್ವಯ ಮತ್ತು 1995ರ ಕರ್ನಾಟಕ ಶಿಕ್ಷಣ ಸಂಸ್ಥೆಗಳ (ಕ್ಲಾಸಿಫಿಕೇಷನ್, ರೆಗ್ಯುಲೇಶನ್ ಮತ್ತು ಪ್ರಿಸ್ಕಿಪೇಶನ್ ಕರಿಕ್ಯುಲಂ) ರ ಕಾಯ್ದೆಯ ನಿಯಮಗಳು 28-10-1999ರಂದು ಜಾರಿಗೆ ಬರುವ ಮೂಲಕ ಶಿಕ್ಷಣದ ವ್ಯಾಪಾರೀಕರಣಕ್ಕೆ ಕಡಿವಾಣ ಹಾಕಲು ಉದ್ದೇಶಿಸಲಾಗಿತ್ತು. ಈ ನಿಯಮಗಳ ಪ್ರಕಾರ ಸರ್ಕಾರ ನಿಗದಿಪಡಿಸಿದಂತೆ ಅನುದಾನಿತ ಶಿಕ್ಷಣ ಸಂಸ್ಥೆಗಳು ರು. 500 ಅನುದಾನ ರಹಿತ ಶಿಕ್ಷಣ ಸಂಸ್ಥೆಗಳು ರು. 600ಗಳನ್ನು ಮಾತ್ರ ಅಭಿವೃದ್ಧಿ ಶುಲ್ಕ ಸಂಗ್ರಹಿಸಲು ಅವಕಾಶವಿದೆ. ಈ ಹಣ ಒತ್ತಾಯದ ಮೂಲಕ ಸಂಗ್ರಹಿಸುವಂತಿಲ್ಲ. ಇದಕ್ಕೂ ಹೆಚ್ಚು ಸಂಗ್ರಹಿಸುವುದು ಕಾನೂನಿನ ಪ್ರಕಾರ ಅಪರಾಧ.
ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿ ಪ್ರತಿನಿಧಿಗಳು, ಪೋಷಕರು ಶಿಕ್ಷಣ ಸಂಸ್ಥೆಗಳನ್ನೊಳಗೊಂಡಂತೆ ಸಮಿತಿ ರಚಿಸಿ ಅಲ್ಲಿ ಈ ಕುರಿತು ಚರ್ಚಿಸಬೇಕು. ಆದರೆ, ಅದು ಎಲ್ಲಿಯೂ ಜಾರಿಯಾಗುತ್ತಿಲ್ಲ. ಡೊನೇಷನ್ (ವಂತಿಗೆ) ವಸೂಲಿ ನಿಯಂತ್ರಿಸಲು ಜಿಲ್ಲಾ ಶಿಕ್ಷಣ ನಿಯಂತ್ರಣ ಪ್ರಾಧಿಕಾರ ರಚಿಸಬೇಕೆಂದು ನಿಯಮವಿದ್ದರೂ ಅದು ಕಾರ್ಯಸಾಧ್ಯವಾಗಿಲ್ಲ ಎಂದರು.
ಗದಗ ಜಿಲ್ಲಾ ಕಾರ್ಯದರ್ಶಿ ಶಿವಾನಂದ ಬೋಸ್ಲೆ ಮಾತನಾಡಿ, ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿರುವ ಈ ಪ್ರಾಧಿಕಾರಕ್ಕೆ ಡಿಡಿಪಿಐ, ಸಿಇಒ, ಡಿಡಿಪಿಯು ಜಿಲ್ಲಾ ಮುಖ್ಯ ಎಂಜಿನಿಯರ್ ಸೇರಿದಂತೆ ಪೋಷಕರು, ಶಿಕ್ಷಣ ಆಸಕ್ತರು, ವಿದ್ಯಾರ್ಥಿ ಪ್ರತಿನಿಧಿಗಳು ಸದಸ್ಯರಾಗಿರುವರು. ಈ ಸಮಿತಿಯು ಅಕ್ರಮವಾಗಿ ಡೊನೇಷನ್ ವಸೂಲಿ, ಪ್ರವೇಶ ಮೀಸಲಾತಿಯಲ್ಲಿ ಅನ್ಯಾಯವಾಗದಂತೆ ಕ್ರಮ ವಹಿಸಲು ಮುಂದಾಗಬೇಕೆಂಬ ನಿಯಮವಿದ್ದರೂ ಬಹುತೇಕ ಜಿಲ್ಲೆಗಳಲ್ಲಿ ಈ ಸಮಿತಿಯೇ ರಚನೆಯಾಗಿಲ್ಲ ಎಂದು ಆರೋಪಿಸಿದರು.
ಬೇಡಿಕೆಗಳು: ತಾಲೂಕು ಮಟ್ಟದಲ್ಲಿ ತಾಲೂಕು ಶಿಕ್ಷಣ ರೆಗ್ಯುಲೇಟಿಂಗ್ ಪ್ರಾಧಿಕಾರಗಳನ್ನು ತಕ್ಷಣ ರಚಿಸಬೇಕು. ವಂತಿಗೆ ವಸೂಲಿ ಮಾಡುತ್ತಿರುವ ಸಂಸ್ಥೆಗಳ ಮೇಲೆ ಕಠಿಣ ಕ್ರಮಕೈಗೊಳ್ಳಬೇಕು. ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಜಿಲ್ಲಾಧಿಕಾರಿ, ತಹಸೀಲ್ದಾರ್ ನೇತೃತ್ವದಲ್ಲಿ ಶಿಕ್ಷಣ ಸಂಸ್ಥೆ ಮುಖ್ಯಸ್ಥರು, ಶಿಕ್ಷಣ ಇಲಾಖೆ ಮುಖ್ಯಸ್ಥರು, ಪಾಲಕರು ಹಾಗೂ ಎಸ್ಎಫ್ಐ ಪ್ರತಿನಿಧಿಗಳ ಜಂಟಿ ಸಭೆಗಳನ್ನು ಕರೆಯಬೇಕು. ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ನಿಯಂತ್ರಿಸಲು ರಾಜ್ಯ ಸರ್ಕಾರಕ್ಕೆ ಅಧಿಕಾರವಿರುವ ಕೇಂದ್ರೀಯ ಶಾಸನ ಜಾರಿಗೆ ತರಬೇಕು. ಸರ್ಕಾರ ನಿಗದಿಗೊಳಿಸಿರುವ ಪ್ರವೇಶ ಶುಲ್ಕದ ವಿವರವನ್ನು ಮಾಧ್ಯಮಗಳ ಮೂಲಕ ಮತ್ತು ಭಿತ್ತಿಪತ್ರ, ಕರಪತ್ರಗಳ ಮೂಲಕ ಪ್ರಚಾರ ಪಡಿಸಬೇಕು.
ಶಿಕ್ಷಣ ಸಂಸ್ಥೆಗಳು ಪ್ರತಿ ತಿಂಗಳಿಗೊಮ್ಮೆ ಪಾಲಕರ ಸಭೆ ಕರೆದು ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಚರ್ಚಿಸುವಂತೆ ನಿರ್ದೇಶಿಸಬೇಕು. ಕೇಂದ್ರೀಯ ಪಠ್ಯಕ್ರಮ (ಸಿಬಿಎಸ್ಇ- ಐಸಿಎಸ್ಇ) ಬೋಧಿಸುವ ಶಾಲೆಗಳು ರಾಜ್ಯ ಶಿಕ್ಷಣ ಕಾಯ್ದೆ ವ್ಯಾಪ್ತಿಯಲ್ಲಿ ಬರುತ್ತಿವೆ ಎನ್ನುವ ಹೈಕೋರ್ಟ್ನ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಿರುವ ಖಾಸಗಿ ಶಿಕ್ಷಣ ಸಂಸ್ಥೆಗಳ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸುವಂತಾಗಲು ರಾಜ್ಯ ಸರ್ಕಾರ ಬಲವಾಗಿ ತೀರ್ಪಿನ ಪರ ವಾದಿಸಬೇಕು. ಶಿಕ್ಷಣ ಸಂಸ್ಥೆಗಳಿಗೆ ಅಗತ್ಯ ಮೂಲಸೌಲಭ್ಯ ಒದಗಿಸಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಎಸ್ಎಫ್ಐ ನೇತೃತ್ವದಲ್ಲಿ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದರು.
ಪ್ರತಿಭಟನೆಯಲ್ಲಿ ಜಿಲ್ಲಾ ಮುಖಂಡ ಶರಣಯ್ಯ ಸೂಗೀರಯ್ಯನಮಠ, ಮಹಾಂತೇಶ ರಾಠೋಡ್, ಮುತ್ತು ಪೂಜಾರ, ಮಲ್ಲು ತಳವಾರ, ರೇಖಾ ಗಂಜಿ, ರೇಣುಕಾ ಯಾದವ್ ಮುಂತಾದವರಿದ್ದರು.
ಡೊನೇಷನ್ ಹಾವಳಿಗೆ ಕಡಿವಾಣ ಹಾಕಲು ಒತ್ತಾಯ
ಗಜೇಂದ್ರಗಡ: ಶಿಕ್ಷಣ ಸಂಸ್ಥೆಗಳಲ್ಲಿ ಮಿತಿ ಮೀರಿರುವ ಡೊನೇಷನ್ ಹಾವಳಿಗೆ ಕಡಿವಾಣ ಹಾಕಲು ಸರ್ಕಾರ ಜಿಲ್ಲಾ ಎಜಕೇಶನ್ ರೆಗ್ಯುಲೇಟಿಂಗ್ ಅಥಾರಿಟಿ ರಚನೆಗೆ ಮುಂದಾಗಬೇಕೆಂದು ಆಗ್ರಹಿಸಿ ಶುಕ್ರವಾರ ಎಸ್ಎಫ್ಐ ಸಂಘಟನೆ ಸ್ಥಳೀಯ ವಿಶೇಷ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿತು.
ಈ ವೇಳೆ ಸಂಘಟನೆ ಮುಖಂಡ ಬಾಲಕೃಷ್ಣ ಜಾಡಬಂಡಿ ಮಾತನಾಡಿ, ರಾಜ್ಯದ ಶಾಲಾ ಕಾಲೇಜುಗಳಲ್ಲಿ ಈಗಾಗಲೇ ಪ್ರವೇಶ ಪ್ರಕಿಯೆ ಆರಂಭಗೊಂಡಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳು ಸರ್ಕಾರದ ನಿಯಮಾವಳಿ ಗಾಳಿಗೆ ತೂರಿ ಬೇಕಾ ಬಿಟ್ಟಿಯಾಗಿ ಡೊನೇಶನ್ ಸಂಗ್ರಹಿಸುತ್ತಿವೆ. ಇದರಿಂದ ಬಡ ವಿದ್ಯಾರ್ಥಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಸರ್ಕಾರ ಈಗಾಗಲೇ ಶಿಕ್ಷಣ ಇಲಾಖೆ ಆಯುಕ್ತರ ಕಚೇರಿ ಮೂಲಕ ವಿದ್ಯಾರ್ಥಿಗಳ ದಾಖಲಾತಿಗೆ ಸಂಬಂಧಿಸಿದಂತೆ ಸಂಗ್ರಹಿಸಬೇಕಾದ ಶುಲ್ಕ ಕುರಿತು ನಿಯಮಾವಳಿ ಪ್ರಕಟಿಸಿದ್ದರೂ ಖಾಸಗಿ ಶಿಕ್ಷಣ ಸಂಸ್ಥೆಗಳು ಸರ್ಕಾರದ ಆದೇಶಕ್ಕೆ ಬೆಲೆ ಕೊಡುತ್ತಿಲ್ಲ. ತಮಗೆ ಬೇಕಾದ ಹಾಗೆ ಡೊನೇಶನ್ ಸಂಗ್ರಹಕ್ಕೆ ಮುಂದಾಗಿರುವುದು ಖಂಡನೀಯ ಡೊನೇಶನ್ ಹಾವಳಿ ತಪ್ಪಿಸಲು ಸರ್ಕಾರ ಮುಂದಾಗದಿದ್ದಲ್ಲಿ ಎಸ್ಎಫ್ಐ ರಾಜ್ಯಾದ್ಯಾಂತ ಬೀದಿಗಿಳಿದು ಉಗ್ರ ಪ್ರತಿಭಟನೆಗೆ ಮುಂದಾಗಲಿದೆ ಎಂದರು.
ಇದೇ ಸಂದರ್ಭದಲ್ಲಿ ಸ್ಥಳೀಯ ವಿಶೇಷ ತಹಸೀಲ್ದಾರ್ ಪಿ.ಬಿ. ಮೇಲಿನಮನಿ, ಮನವಿ ಸ್ವೀಕರಿಸಿ ಸಂಬಂಧಿಸಿದ ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು. ಪ್ರಕಾಶ ಹೆಳವರ, ಕಳಕೇಶ್ ಉಕ್ಕಿಸಲ, ಪ್ರವೀಣ ಪೂಜಾರ, ಅನಿಲ ರಾಠೋಡ, ಗೋಪಾಲ ರಾಠೋಡ, ಶಿವಾನಂದ ರಾಠೋಡ, ಬಸವರಾಜ ಅಕ್ಕಿ, ಪರಶುರಾಮ ರಾಠೋಡ, ಮಹಾಂತೇಶ ಹೊಸಮನಿ, ನವೀನ ನಾಯಕ್, ಚಂದ್ರಶೇಖರ ಚೌಹಾಣ್, ಶಿವಾಜಿ ಗಡ್ಡದ ಉಪಸ್ಥಿತರಿದ್ದರು.