ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಪಾವತಿ ಆಗದ ಬೆಂಬಲ ಬೆಲೆ: ಪರದಾಟ

Srinivasa Murthy VN
Updated On : 22 Mar 2014, 11:54 am

-ಮಹದೇವಪ್ಪ ಎಂ. ಸ್ವಾಮಿ
ಕನ್ನಡಪ್ರಭ ವಾರ್ತೆ, ಶಿರಹಟ್ಟಿ, ಮಾ. 21
ರೈತರು ಮೆಕ್ಕೆಜೋಳವನ್ನು ಖರೀದಿ ಕೇಂದ್ರಕ್ಕೆ ನೀಡಿದರೆ ಯಾವುದೇ ಅಡೆತಡೆಗಳಿಲ್ಲದೇ ಒಂದು ವಾರದಲ್ಲಿ ರೈತರಿಗೆ ಹಣ ಸಂದಾಯ ಮಾಡಲಾಗುವುದು ಎಂದು ಸರ್ಕಾರ ಮತ್ತು ಜಿಲ್ಲಾಡಳಿತ ಹೇಳುತ್ತಿದೆ. ತಾಲೂಕಿನ ಬೆಳ್ಳಟ್ಟಿ ಗ್ರಾಮದ ಖರೀದಿ ಕೇಂದ್ರಕ್ಕೆ 50 ದಿನಗಳ ಹಿಂದೆಯೇ ಗೋವಿನಜೋಳ ನೀಡಿದ್ದು, ರೈತರ ಬ್ಯಾಂಕ್ ಖಾತೆಗೆ ಹಣ ಜಮಾ ಆಗದಿರುವುದರಿಂದ ರೈತರು ಪರದಾಡುತ್ತಿದ್ದಾರೆ.
ಖರೀದಿ ಕೇಂದ್ರಕ್ಕೆ ವ್ಯಾಪಾರಸ್ಥರ ಮೆಕ್ಕೆಜೋಳಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಬರುತ್ತಿದ್ದು, ಅಧಿಕಾರಿಗಳು ಅವರೊಂದಿಗೆ ಶಾಮೀಲಾಗಿ ವಹಿವಾಟು ನಡೆಸುವುದಲ್ಲದೇ ರೈತರಿಗೆ ತೊಂದರೆ ನೀಡುತ್ತಿದ್ದಾರೆ ಎಂಬ ಗಂಭೀರ ಆರೋಪ ಕೂಡ ಕೇಳಿ ಬರುತ್ತಿದೆ.
ವ್ಯಾಪಾರಸ್ಥರು ಅಧಿಕಾರಿಗಳಿಗೆ ಹಣದ ಆಮಿಷವೊಡ್ಡಿ ತಮ್ಮ ಕೆಲಸಕ್ಕೆ ಅಡೆತಡೆಯಾಗದಂತೆ ನಡೆದುಕೊಳ್ಳುತ್ತಿದ್ದಾರೆ. ಸಾಲ ಶೂಲ ಮಾಡಿದ ರೈತರು ಅಧಿಕಾರಿಗಳಿಗೆ ಬೇಗನೇ ಹಣ ಪಾವತಿಸುವಂತೆ ಅಂಗಲಾಚಿದರೂ ಪ್ರಯೋಜನವಾಗುತ್ತಿಲ್ಲ ಎನ್ನುವ ಮಾತು ಕೇಳಿಬರುತ್ತಿದೆ.
ಕೂಲಿ ಕಾರ್ಮಿಕರು, ಅಧಿಕಾರಿಗಳೆಲ್ಲರಿಗೂ ವ್ಯಾಪಾರಸ್ಥರು ಪ್ರತಿ ಕ್ವಿಂಟಲ್‌ಗೆ ಹಾಗೂ ಚೀಲಕ್ಕೆ ಇಂತಿಷ್ಟು ಹಣ ನೀಡುವುದಾಗಿ ಮೊದಲೇ ಒಪ್ಪಂದ ಮಾಡಿಕೊಂಡಿದ್ದರಿಂದ ಅವರು ತಂದ ಮೆಕ್ಕೆಜೋಳವನ್ನು ಬೇಗನೇ ತೂಕ ಮಾಡಿ ಹಣ ನೀಡುತ್ತಾರೆ. ರೈತರು ಹಣ ಕೇಳಿದದರೆ ನಿಮ್ಮ ಮೆಕ್ಕೆಜೋಳ ಸರಿಯಾಗಿಲ್ಲ. ಸ್ವಚ್ಛಗೊಳಿಸಿದ ನಂತರ ತೂಕ ಮಾಡಿ ಬಿಲ್ ನೀಡುವುದಾಗಿ ಗದರಿಸಿ ಕಳುಹಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.
ಅಪಾರ ನಷ್ಟ: ರೈತರು ಖರೀದಿ ಕೇಂದ್ರಕ್ಕೆ ತಂದ ಗೋವಿನ ಜೋಳವನ್ನು ತೂಕ ಮಾಡಿಕೊಳ್ಳಲು ವಾರಗಟ್ಟಲೇ ಕಾಯಿಸುತ್ತಾರೆ. ವ್ಯಾಪಾರಸ್ಥರ ಮಾಲು ಎಷ್ಟೇ ಬಂದರೂ ಕೇವಲ 24 ಗಂಟೆಗಳಲ್ಲಿ ತೂಕ ಮಾಡುತ್ತಾರೆ. ಉತ್ತರ ಕರ್ನಾಟಕ ಭಾಗಗಳಲ್ಲಿ ಇತ್ತಿತ್ತಲಾಗಿ ವಾಣಿಜ್ಯ ಬೆಳೆಯಾಗಿ ಹೆಚ್ಚಿನ ಪ್ರಮಾಣದಲ್ಲಿ ರೈತರು ಗೋವಿನಜೋಳ ಬೆಳೆಯುತ್ತಿದ್ದು, ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಸಿಗದೇ, ಖರೀದಿ ಕೇಂದ್ರವೂ ಬೇಗನೆ ಪ್ರಾರಂಭವಾಗದಿರುವುದರಿಂದ ಅಪಾರ ನಷ್ಟ ಅನುಭವಿಸಿದ್ದಾರೆ ಎನ್ನುತ್ತಾರೆ ರೈತ ವಾಗೀಶ ಪಾಟೀಲ.
---
ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಲು ಒತ್ತಾಯ
ಗಜೇಂದ್ರಗಡ: ಗ್ರಾಮೀಣ ಪ್ರದೇಶದಲ್ಲಿ ಅವ್ಯಾಹತವಾಗಿ ನಡೆದಿರುವ ಅಕ್ರಮ ಮದ್ಯ ಮಾರಾಟದಿಂದಾಗಿ ಬಡ ಕುಟುಂಬಗಳ ಬದುಕು ಬೀದಿ ಪಾಲಾಗಿದೆ. ಕೂಡಲೇ ಹಳ್ಳಿಗಳಲ್ಲಿನ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಬೇಕೆಂದು ಒತ್ತಾಯಿಸಿ ಸಮೀಪದ ಬೇವಿನಕಟ್ಟಿ ಗ್ರಾಮದ ಮಹಿಳೆಯರು ಶುಕ್ರವಾರ ಪ್ರತಿಭಟನೆ ನಡೆಸಿದರು.
ನಗರ, ಪಟ್ಟಣಗಳಲ್ಲಿ ಮಾರಾಟವಾಗುತ್ತಿದ್ದ ಮದ್ಯ ಇದೀಗ ಗ್ರಾಮಗಳಲ್ಲಿನ ಪಾನ್ ಬೀಡಾ, ಕಿರಾಣಿ ಹಾಗೂ ಚಹಾದಂಗಡಿಗಳಲ್ಲಿಯೂ ಅವ್ಯಾಹತವಾಗಿ ಮಾರಾಟವಾಗುತ್ತಿದೆ.
ಇದರಿಂದ ಗ್ರಾಮದ ಜನರು, ಯುವಕರು ಕುಡಿತದ ಚಟಕ್ಕೆ ಬಲಿಯಾಗಿ ನೆಮ್ಮದಿ ಹಾಳಾಗಿದೆ. ಹೆಣ್ಣು ಮಕ್ಕಳು ಮಾನಸಿಕ ಮತ್ತು ದೈಹಿಕವಾಗಿ ತೀವ್ರ ತೊಂದರೆ ಅನುಭವಿಸುವಂತಾಗಿದ್ದು, ಸಂಜೆಯಾದರೆ ರಸ್ತೆಯಲ್ಲಿ ನಿರ್ಭೀತಿಯಿಂದ ತಿರುಗಾಡುವುದು ಕಷ್ಟಕರವಾಗಿದೆ ಎಂದು ದೂರಿದರು.
ಗ್ರಾಮದಲ್ಲಿ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟದಿ ಸಮಾಜಕ್ಕೆ ಕಂಟಕ ಪ್ರಾಯವಾಗಿದೆ. ಇದರಿಂದ ಹಳ್ಳಿಗಾಡಿನ ಬಡ ಹಾಗೂ ಶ್ರಮಿಕ ಕುಟುಂಬಗಳ ಬದುಕು ಬೀದಿ ಪಾಲಾಗುತ್ತಿದೆ ಎಂದು ಆಡಳಿತ ವ್ಯವಸ್ಥೆಯ ವಿರುದ್ಧ ಮಹಿಳೆಯರು ಹರಿಹಾಯ್ದರು.
ಗ್ರಾಮದಲ್ಲಿ ರಾಜಾರೋಷವಾಗಿ ಅಕ್ರಮ ಮಾರಾಟ ಮಾಡುತ್ತಿರುವ ದುಷ್ಕರ್ಮಿಗಳ ವಿರುದ್ಧ ಅಬಕಾರಿ ಇಲಾಖೆ ಕ್ರಮಕ್ಕೆ ಮುಂದಾಗಬೇಕು. ಇಲ್ಲದಿದ್ದಲ್ಲಿ ಗ್ರಾಮದ ಮಹಿಳೆಯರು ಬೀದಿಗಿಳಿದು ಹೋರಾಟ ಮಾಡುವುದಾಗಿ ಗ್ರಾಮದ ಪಾರವ್ವ ಸಂಗನಾಳ, ರತ್ನವ್ವ ಕುರಿ, ಈರಮ್ಮ ಹೊಸಳ್ಳಿ, ರೇಣುಕಾ ಸಂಗನಾಳ, ನೇತ್ರಾವತಿ ಹಿರೇಮಠ, ಮಂಜುಳಾ ಹೊಸಳ್ಳಿ, ಚೈತ್ರಾ ಹಿರೇಮಠ, ದೇವಿ ಕಾರಡಗಿ, ಶಾವಕ್ಕ ಹೊಸಳ್ಳಿ, ರೇಣವ್ವ ಕುರಿ, ಅಡಿವೆಮ್ಮ ಕಾರಡಗಿ ಎಚ್ಚರಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement