ಬಲಿಷ್ಠ ಭಾರತಕ್ಕಾಗಿ ಬಿಜೆಪಿ ಸೇರ್ಪಡೆ
ರಾಣಿಬೆನ್ನೂರು: ದೇಶದ ಆರ್ಥಿಕ ವ್ಯವಸ್ಧೆ ಸುಧಾರಣೆ ಜತೆಗೆ ಭ್ರಷ್ಟಾಚಾರ ಕಿತ್ತೆಸೆದು ಸುಭದ್ರ ಆಡಳಿತ ನೀಡುವ ಮತ್ತು ಬಲಿಷ್ಠ ಭಾರತ ನಿರ್ಮಾಣದ ಕನಸು ಕಂಡ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರನ್ನು ದೇಶದ ಪ್ರಧಾನಮಂತ್ರಿಯನ್ನಾಗಿಸುವುದಕ್ಕಾಗಿ ಕಾಂಗ್ರೆಸ್ ತೊರೆದು ಬಿಜೆಪಿಗೆ ಮರಳಿ ಸೇರಿರುವುದಾಗಿ ಹಿರಿಯ ನ್ಯಾಯವಾದಿ ಕೆ. ಶಿವಲಿಂಗಪ್ಪ ಹೇಳಿದರು.
ಶುಕ್ರವಾರ ನಗರದ ತಮ್ಮ ನಿವಾಸದಲ್ಲಿ ನಡೆದ ಸರಳ ಸಮಾರಂಭದಲ್ಲಿ ಸಂಸದ ಶಿವಕುಮಾರ ಉದಾಸಿ, ಮಾಜಿ ಶಾಸಕ ಜಿ. ಶಿವಣ್ಣ, ಶಿವರಾಜ ಸಜ್ಜನರ ಹಾಗೂ ಪಕ್ಷದ ಅಧ್ಯಕ್ಷ ಕಾರ್ಯಕರ್ತರ ಸಮ್ಮುಖದಲ್ಲಿ ಕಾಂಗ್ರೆಸ್ ತೊರೆದು ಮರಳಿ ಬಿಜೆಪಿ ಸೇರಿದ ಬಳಿಕ ಮಾತನಾಡಿದರು.
ನರೇಂದ್ರ ಮೋದಿಯವರಿಗೆ ವೀಸಾ ನೀಡಲು ಹಿಂದೇಟು ಹಾಕಿದ್ದ ಅಮೆರಿಕ ಇಂದು ಗುಜರಾತ ಅಭಿವೃದ್ಧಿ ಗಮನಿಸಿ ಮೋದಿ ಬಗ್ಗೆ ಸಂತಸ ವ್ಯಕ್ತಪಡಿಸಿ, ಕಣ್ಮುಚ್ಚಿ ವೀಸಾ ನೀಡಲು ಮುಂದಾಗಿರುವಾಗ ನಾವೇಕೆ ಮೋದಿಯವರನ್ನು ಪ್ರಧಾನಿಯಾಗಿಸಲು ಮುಂದಾಗಬಾರದೆಂದು ಯೋಚಿಸಿ, ಕಾರಣಾಂತರದಿಂದ ಬಿಜೆಪಿ ಬಿಟ್ಟಿದ್ದ ನಾನು ಮೋದಿ ಪ್ರಧಾನಿಯಾಗಿಸಲು ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ ಗೆಲ್ಲಿಸುವುದಕ್ಕಾಗಿ ಸ್ವ-ಇಚ್ಛೆಯಿಂದ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರಿರುವುದಾಗಿ ಶಿವಲಿಂಗಪ್ಪ ತಿಳಿಸಿದರು.
ಹಾವೇರಿ ಲೋಕಸಭಾ ಕ್ಷೇತ್ರ ಬಿಜೆಪಿ ಅಧಿಕೃತ ಅಭ್ಯರ್ಥಿ ಶಿವಕುಮಾರ ಉದಾಸಿ ಮಾತನಾಡಿ, ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಘೋಷಣೆಯಾಗುತ್ತಿದ್ದಂತೆ ಕಾರ್ಯಕರ್ತರು, ಮುಖಂಡರು ಹಗಲಿರುಳೆನ್ನದೆ ಪಕ್ಷವನ್ನು ಬೂತ್ ಮಟ್ಟದಿಂದ ಬಲಪಡಿಸಲು ಮುಂದಾಗಿದ್ದು, ನಿತ್ಯ ನೂರಾರು ಯುವಕರು ಬಿಜೆಪಿ ಕಾರ್ಯಗಳನ್ನು ಮೆಚ್ಚಿ ಇತರ ಪಕ್ಷದವರು ಬಿಜೆಪಿಗೆ ಸೇರುತ್ತಿರುವುದು ನೋಡಿದರೆ ಗೆಲವು ನಮ್ಮದೆ ಎಂದು ಹೇಳಲು ತುಂಬಾ ಸಂತಸವೆನ್ನಿಸುತ್ತದೆ ಎಂದರು.
ಇದೇ ಸಂದರ್ಭ ಜೆಡಿಎಸ್ನಿಂದ ಬಿಜೆಪಿ ಸೇರಿದ ರತ್ನಾಕರ ಕುಂದಾಪುರ, ಆರ್. ಶಂಕರ ಅಭಿಮಾನಿ ಸಂಘದಿಂದ ಬಿಜೆಪಿ ಸೇರಿರುವ ಕರಬಸಪ್ಪ ಮೇದಾರ ಸೇರಿದಂತೆ 10 ಜನರನ್ನು ಶಿವಕುಮಾರ ಉದಾಸಿ ಪಕ್ಷಕ್ಕೆ ಬರಮಾಡಿಕೊಂಡರು.
ಈ ಸಂದರ್ಭ ಮಾಜಿ ಶಾಸಕ ಜಿ. ಶಿವಣ್ಣ, ಶಿವರಾಜ ಸಜ್ಜನರ, ಎಸ್.ಎಸ್. ರಾಮಲಿಂಗಣ್ಣನವರ, ಮೈಲಪ್ಪ ಗುಡಗೂರು, ಜಿಪಂ ಸದಸ್ಯ ಶಿವಕುಮಾರ ಮುದ್ದಪ್ಪಳವರ, ತಾಲೂಕು ಬಿಜೆಪಿ ಅಧ್ಯಕ್ಷ ಬಸವರಾಜ ಲಕ್ಷ್ಮೇಶ್ವರ,ಬಿಜೆಪಿ ನಗರಾಧ್ಯಕ್ಷ ವೀರಣ್ಣ ಅಂಗಡಿ, ನಗರ ಯೋಜನಾ ಪ್ರಾಧಿಕಾರ ಮಾಜಿ ಅಧ್ಯಕ್ಷ ವಿಶ್ವನಾಥ ಪಾಟೀಲ,ನಗರಸಭಾ ಸದಸ್ಯ ಪ್ರಭುಸ್ವಾಮಿ ಕರ್ಜಗಿಮಠ, ನಗರಸಭೆ ಮಾಜಿ ಅಧ್ಯಕ್ಷ ಪ್ರಕಾಶ ಪೂಜಾರ, ಡಾ. ಬಸವರಾಜ ಕೇಲಗಾರ, ಕೆ.ವಿ. ಶ್ರೀನಿವಾಸ, ಸಂಕಪ್ಪ ಮಾರನಾಳ, ಕೆ.ಎನ್. ಪಾಟೀಲ, ಯುವ ಬಿಜೆಪಿ ಅಧ್ಯಕ್ಷ ಕಿರಣ ಅಂಗಡಿ, ರಾಘವೇಂದ್ರ ಕುಲಕರ್ಣಿ ಇದ್ದರು.