ಬಿಸಿಲಿನ ಅಬ್ಬರ: ಜನತೆ ತತ್ತರ
-ವೀರೇಶ ಮಡ್ಲೂರ
ಕನ್ನಡಪ್ರಭ ವಾರ್ತೆ, ಹಾವೇರಿ, ಮಾ. 21
ಅಂದು ಅತಿವೃಷ್ಟಿ, ನಂತರ ಗಡಗಡ ನಡುಗಿಸುವ ಚಳಿ, ಈಗ ನೆತ್ತಿ ಸುಡುವ ಬಿಸಿಲು. ಕಳೆದ ನಾಲ್ಕೈದು ದಿನಗಳಿಂದ ಅಬ್ಬಬ್ಬಾ.. ಎನ್ನಿಸುವಷ್ಟು ಬಿಸಿಲು ಹಾಗೂ ಸೆಕೆಯಿಂದ ಜಿಲ್ಲೆಯ ಜನತೆ ಕಂಗಾಲಾಗಿದ್ದಾರೆ. ದಿನದಿಂದ ದಿನಕ್ಕೆ ಸೂರ್ಯ ಪ್ರಖರಗೊಳ್ಳುತ್ತಿದ್ದು, ಬೇಸಿಗೆ ಕಳೆಯುವುದು ಹೇಗಪ್ಪಾ ಎಂಬ ಚಿಂತೆ ಕಾಡತೊಡಗಿದೆ.
ಹೌದು, ಜಿಲ್ಲೆಯಲ್ಲಿ ಚುನಾವಣೆ ಕಾವಿನ ಜತೆಗೆ ಸೂರ್ಯ ಕೂಡ ಸಾಥ್ ನೀಡುತ್ತಿದ್ದಾನೆ. ಹೀಗಾಗಿ ಜಿಲ್ಲೆಯಲ್ಲಿ ಬಿಸಿಲಿನ ಬೇಗೆಗೆ ಜನತೆ ತತ್ತರಿಸುವಂತಾಗಿದೆ. ಚುನಾವಣೆ ಮಹಾಯುದ್ಧದಲ್ಲಿ ಮತದಾರ ಯಾವ ಪಕ್ಷದ ಅಭ್ಯರ್ಥಿಗೆ ಬೆವರಿಳಿಸುತ್ತಾನೋ ಗೊತ್ತಿಲ್ಲ, ಆದರೆ, ಸೂರ್ಯದೇವ ಮಾತ್ರ ನಿತ್ಯ ಜಿಲ್ಲೆಯ ಜನತೆಯ ಬೆವರಿಳಿಸುತ್ತಿದ್ದಾನೆ. ಅಲ್ಲದೇ ತಂಪು ನೀರು ಕುಡಿಸುತ್ತಿದ್ದಾನೆ. ಉತ್ತರ ಕರ್ನಾಟಕ ಹೆಬ್ಬಾಗಿಲು ಎಂದು ಕರೆಯಿಸಿಕೊಂಡಿರುವ ಹಾವೇರಿ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಸೂರ್ಯನ ಶಾಖದ ಪ್ರಮಾಣ ಹೆಚ್ಚುತ್ತಿದೆ. ಶಿವರಾತ್ರಿ ಕಳೆದ ಮೇಲೆ ಶಿವ ಶಿವ ಎನ್ನುವ ರೀತಿಯಲ್ಲಿ ಬಿಸಿಲಿನ ತಾಪ ಏರುತ್ತಿದೆ. ಮಾರ್ಚ್ ಮಧ್ಯ ಭಾಗದಿಂದಲೆ ಬಿಸಿಲಿನ ಝಳ ಶುರುವಾಗಿದ್ದು, ಮುಂದಿನ ಏಪ್ರಿಲ್ ವೇಳೆಗೆ ಇನ್ನೂ ತೀವ್ರವಾಗುವ ಸಾಧ್ಯತೆ ಇದೆ. ಮೇ ವೇಳೆಗೆ ಹಾಗೂ ಮುಂಗಾರು ಪ್ರವೇಶದವರೆಗೂ ಇದೇ ವಾತಾವರಣದಲ್ಲಿ ಕಾಲ ಕಳೆಯಬೇಕಾದ ಅನಿವಾರ್ಯತೆಯಿದೆ.
ಕಾದ ಕಬ್ಬಿಣದಂತಾಗುವ ನೆಲ: ಬಿಸಿಲಿನ ಬೇಗೆಯ ಜತೆಯಲ್ಲಿ ಹಾವೇರಿ ನಗರದಲ್ಲಿ ಧೂಳಿನ ಸಮಸ್ಯೆ ಹೆಚ್ಚಾಗಿದ್ದು, ಮುಖಕ್ಕೆ ಸ್ಕಾರ್ಪ್ ಕಟ್ಟಿಕೊಂಡು ಓಡಾಡುವಂತಾಗಿದೆ. ಬೆಳಗ್ಗೆ 9 ಗಂಟೆಯಿಂದ ಬಿಸಿಲಿನ ಝಳ ಆರಂಭವಾಗಿ ಸಂಜೆ 5 ಗಂಟೆವರೆಗೂ ಜೋರಾಗಿರುತ್ತದೆ. ಅದರಲ್ಲೂ ಮಧ್ಯಾಹ್ನ 12 ಗಂಟೆಯಾದರೆ ಸಾಕು, ತಲೆ ಮೇಲೆ ತಣ್ಣೀರುಪಟ್ಟಿ ಹಾಕಿಕೊಳ್ಳುವಷ್ಟು ಪ್ರಖರ ಬಿಸಿಲು ಜನರನ್ನು ಕಂಗಾಲಾಗಿಸಿದೆ. ಸಂಜೆ 4 ಗಂಟೆವರೆಗೆ ಸೂರ್ಯದೇವನ ಶಾಖದಿಂದ ಭೂಮಿ ಕಾದ ಕಬ್ಬಿಣದಂತಾಗಿರುತ್ತದೆ. ಏನೇ ಕೆಲಸ ಕಾರ್ಯಗಳಿದ್ದರೂ ತಂಪೊತ್ತಿನಲ್ಲಿಯೇ ಮಾಡಿ ಮುಗಿಸುವ ಲೆಕ್ಕಾಚಾರದಲ್ಲಿ ಜಿಲ್ಲೆಯ ಜನತೆ ತೊಡಗಿದ್ದಾರೆ. ಬಿಸಿಲ ಬೇಗೆಯಿಂದ ತುರ್ತಾಗಿ ಆರಾಮ ಪಡೆಯಲು ತಂಪು ಪಾನೀಯ, ಉದ್ಯಾನವನ, ಹಣ್ಣುಗಳಿಗೆ ಮೊರೆಹೋಗುತ್ತಿದ್ದಾರೆ.
ತಂಪಿಗಾಗಿ ಹುಡುಕಾಟ: ಇಂದಿನ ಆಧುನಿಕ ಯುಗದಲ್ಲಿ ಫ್ರಿಜ್ಗಳ ಭರಾಟೆ ಹೆಚ್ಚಾಗಿದ್ದು, ಬಡವರ ಫ್ರಿಜ್ ಎಂದು ಕರೆಯಿಸಿಕೊಂಡಿದ್ದ ಮಣ್ಣಿನ ಮಡಿಕೆಗಳು ಮೂಲೆ ಸೇರುವಂತಾಗಿದೆ. ಇದರಿಂದಾಗಿ ಮಡಿಕೆ ತಯಾರಿಸುವ ಮೂಲಕವೇ ಜೀವನ ಕಂಡುಕೊಂಡ ಕುಂಬಾರರ ಜೀವನ ದುಸ್ಥಿತಿಗೆ ಒಳಗಾಗಿದೆ. ನಮ್ಮ ಕೆಲಸ ಮೊದಲ ಹಂಗ ಇಲ್ರೀ.. ಬಳಹ ತ್ರಾಸ ಆಗೈತಿ. ಮಾಡಿದ ಕೂಲಿಗೂ ಬಂದ ದುಡ್ಡು ಸಾಕಾಗಲ್ರೀ. ಪ್ರತಿ ಮಡಕೆಯನ್ನು ರು. 50-100ಕ್ಕೆ ಮಾರಾಟ ಮಾಡ್ಲಿಕತ್ತೀವಿ. ಇದರಿಂದ ಪ್ರತಿದಿನ ರು. 100-150 ಆದಾಯ ಸಿಗತೈತ್ರೀ.. ಇದರಿಂದಲೇ ನಮ್ಮ ಜೀವನ ಆಗಬೇಕ್ರಿ. ಒಂದೊಂದ ದಿನ ಅಂತೂ ರು. 50 ಕೂಡ ಗಿಟ್ಟಾಂಗಿಲ್ಲ ಎಂದು ಮಡಕೆ ವ್ಯಾಪಾರಿ ಮಲ್ಲಪ್ಪ ಕುಂಬಾರ ಬೇಸರ ವ್ಯಕ್ತಪಡಿಸಿದರು. ಇತ್ತ ಜನತೆ ಬಿಸಿಲಿನ ಬೇಗೆ ತಣಿಸಿಕೊಳ್ಳಲು ಎಳನೀರು, ಹಣ್ಣು, ಜ್ಯೂಸ್ ಅಂಗಡಿಗಳಿಗೆ ಮೊರೆ ಹೋಗುತ್ತಿರುವ ದೃಶ್ಯ ಸಾಮಾನ್ಯವಾಗಿ ಕಂಡುಬರುತ್ತಿದೆ. ಈ ವರ್ಷ ಬಿಸಿಲು ಬಾಳ ಬಿಳಾಕತ್ತೈತಿ. ಇದರಿಂದ ನಮ್ಮ ವ್ಯಾಪಾರ ಕಳೆದ ವರ್ಷಕ್ಕಿಂತ ಜೋರಾಗೈತ್ರಿ ಎಂದು ಎಳನೀರು ವ್ಯಾಪಾರಿ ಸುರೇಶ ತುಂದ ಖುಷಿಯಿಂದ ಹೇಳಿದರು. ಜಿಲ್ಲೆಯಲ್ಲಿ ಬಿಸಿಲಿನ ತಾಪ ಕೆಲವರಿಗೆ ಉದ್ಯೋಗ, ಬದುಕನ್ನು ಕಟ್ಟಿಕೊಟ್ಟರೆ, ಬಹುತೇಕ ಜನರಿಗೆ ಬಿಸಿಲಿನಿಂದ ನರಳುವ ಹಾಗೆ ಮಾಡಿದೆ.
ಉದ್ಯಾನವನದಲ್ಲೇ ನಿದ್ದೆ: ದೂರದ ಊರುಗಳಿಂದ ಕೆಲಸ ಕಾರ್ಯಗಳಿಗಾಗಿ ಬರುವ ಅನೇಕರು ಮಧ್ಯಾಹ್ನದ ಬಿಸಿಲಿನಿಂದ ರಕ್ಷಿಸಿಕೊಳ್ಳಲು ಉಪಾಯ ಕಂಡುಕೊಳ್ಳುತ್ತಿದ್ದಾರೆ. ತಂಪು ಪಾನೀಯ ಕುಡಿದು, ಹೋಟೆಲ್ಗಳಲ್ಲಿ ಊಟ ಮಾಡಿ ನಂತರ ಉದ್ಯಾನವನಗಳಲ್ಲಿ ಮಲಗಿ ಹಾಯಾಗಿ ನಿದ್ರಿಸುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಬಿಸಿಲು ತಣ್ಣಗಾಗುವವರೆಗೂ ಉದ್ಯಾನವನದ ನೆರಳಿನಲ್ಲೇ ಕಾಲ ಕಳೆದು ನಂತರ ಬಂದ ಕೆಲಸಕ್ಕೆ ತೆರಳುತ್ತಾರೆ. ಇನ್ನು ಕೆಲವರು ದೇವಸ್ಥಾನಗಳಿಗೆ ಹೋಗಿ ವಿರಾಮ ಪಡೆಯುತ್ತಾರೆ. ಬಿಸಿಲು ಎಲ್ಲರನ್ನೂ ಹೈರಾಣು ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಕುಡಿವ ನೀರಿಗೂ ತತ್ವಾರವಾಗುವ ಸಾಧ್ಯತೆಯಿದೆ.