ಗದಗದಲ್ಲಿ ಬಿಜೆಪಿ ಬಿರುಸಿನ ಪ್ರಚಾರ
ಕನ್ನಡಪ್ರಭ ವಾರ್ತೆ, ಗದಗ, ಮಾ. 22
ಹಾವೇರಿ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಶನಿವಾರ ಬೆಳಗ್ಗೆಯಿಂದ ಗದಗ, ಬೆಟಗೇರಿ ಅವಳಿ ನಗರದಲ್ಲಿ ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ ತಮ್ಮ ಬೆಂಬಲಿಗರೊಂದಿಗೆ ಪಾದಯಾತ್ರೆಯ ಮೂಲಕ ಮತಯಾಚನೆ ಮಾಡಿದರು.
ಬೆಳಗ್ಗೆ ನಗರದ ಮುಳಗುಂದ ನಾಕಾದಿಂದ ಪ್ರಾರಂಭವಾದ ಪಾದಯಾತ್ರೆಗೆ ಹಿರಿಯ ಮುಖಂಡ, ಮಾಜಿ ಶಾಸಕ ಸಿ.ಎಸ್. ಮುತ್ತಿನಪೆಂಡಿಮಠ ಚಾಲನೆ ನೀಡಿದರು. ಅಲ್ಲಿಂದ ಪ್ರಾರಂಭವಾದ ಪಾದಯಾತ್ರೆಯು ನಗರದ ಜೋಡು ಮಾರುತಿ ದೇವಸ್ಥಾನ, ಒಕ್ಕಲಗೇರಿ, ಹನುಮನ ಗರಡಿ, ಖಾನ್ತೋಟ, ವೀರನಾರಾಯಣ ದೇವಸ್ಥಾನ, ಹಳೇ ಸರಾಫ್ ಬಜಾರ್, ಜುಮ್ಮಾ ಮಸಿದಿ, ತಿಲಕ್ ಪಾರ್ಕ್, ಬಸವೇಶ್ವರ ವೃತ್ತ, ಹುಯಿಲಗೋಳ ನಾರಾಯಣರಾವ್ ವೃತ್ತ, ಗಾಂಧಿ ವೃತ್ತದ ಮೂಲಕ ಪಿ.ಬಿ. ರಸ್ತೆಯಲ್ಲಿರುವ ಸಂಸದರ ಕಚೇರಿಗೆ ತೆರಳಿತು.ಕಾರ್ಯಕರ್ತರು ನರೇಂದ್ರ ಮೋದಿ ಹಾಗೂ ಬಿಜೆಪಿಗೆ ಜಯಘೋಷಗಳನ್ನು ಹಾಕುತ್ತಾ, ರಸ್ತೆಯ ಇಕ್ಕೆಲಗಳಲ್ಲಿ ಸಂಚರಿಸುತ್ತಿದ್ದ ಸಾರ್ವಜನಿಕರಲ್ಲಿ ಬಿಜೆಪಿ ಪರ ಮತಚಲಾಯಿಸಬೇಕು. ಅಭಿವೃದ್ಧಿಗಾಗಿ ಮೋದಿ ಬೆಂಬಲಿಸುವಂತೆ ಮನವಿ ಮಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಪಾದಯಾತ್ರೆಯಲ್ಲಿ ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರ, ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಎಂ.ಎಸ್. ಕರಿಗೌಡ್ರ, ಕಾಂತಿಲಾಲ್ ಬನ್ಸಾಲಿ, ಸಿರಾಜ್ ಬಳ್ಳಾರಿ, ಮೋಹನ ಮಾಳಶೆಟ್ಟಿ, ಪ್ರಶಾಂತ ನಾಯ್ಕರ, ಲಕ್ಷ್ಮಣ ದೊಡ್ಡಮನಿ, ಸಿದ್ದು ಪಲ್ಲೇದ, ಅರವಿಂದ ಹುಲ್ಲೂರ, ವಿಜಯಲಕ್ಷ್ಮಿ ಅಂಗಡಿ, ಛಗನ್ ರಾಜಪುರೋಹಿತ, ಸದಾನಂದ ಪಿಳ್ಳಿ, ಪರಶುರಾಮ ಹೆಬಸೂರ, ರಾಜು ಕುರುಡಗಿ, ರವಿ ಶಿದ್ಲಿಂಗ, ಆನಂದ ಶೇಠ್, ಶ್ರೀನಿವಾಸ ಬಾಂಡಗೆ, ಶ್ರೀನಿವಾಸ ಹುಬ್ಬಳ್ಳಿ ಸೇರಿದಂತೆ ವಿವಿಧ ಘಟಕದ ಪದಾಧಿಕಾರಿಗಳು, ಮಹಿಳಾ ಘಟಕದ ಸದಸ್ಯರು, ಕಾರ್ಯಕರ್ತರು ಹಾಜರಿದ್ದರು.