ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಮತದಾನ ಜಾಗೃತಿ ಮೂಡಿಸಿ: ತುರಮರಿ

Srinivasa Murthy VN
Updated On : 23 Mar 2014, 12:12 pm

ಕನ್ನಡಪ್ರಭ ವಾರ್ತೆ, ರೋಣ, ಮಾ. 22
ಜನರಲ್ಲಿ ಕಡ್ಡಾಯ ಮತದಾನ ಕುರಿತು ಜಾಗೃತಿ ಮೂಡಿಸುವಲ್ಲಿ ಮತ್ತು ಮತದಾನ ಪ್ರಮಾಣ ಹೆಚ್ಚಿಸುವಲ್ಲಿ ಪಪಂ, ಪುರಸಭೆ, ಗ್ರಾಪಂ ಅಧಿಕಾರಿಗಳು ಪಾತ್ರ ಪ್ರಮುಖವಾಗಿದೆ ಎಂದು ಜಿಪಂ ಸಿಇಒ, ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ವೀರಣ್ಣ ತುರಮರಿ       ಸೂಚಿಸಿದರು.
ಅವರು ಶನಿವಾರ ಪಟ್ಟಣದ ತಾಪಂ ಸಭಾಭವನದಲ್ಲಿ ಏರ್ಪಡಿಸಿದ್ದ ರೋಣ ತಾಲೂಕಿನ ಪಪಂ, ಪುರಸಭೆ, ಗ್ರಾಪಂ ಅಧಿಕಾರಿಗಳ ಸ್ವೀಪ್ ಸಮಿತಿ ಸಭೆಯಲ್ಲಿ ಮಾತನಾಡಿದರು. ಸ್ಥಳೀಯ ಸಂಸ್ಥೆಯ ವ್ಯಾಪ್ತಿಯಲ್ಲಿ ಜನತೆಗೆ ಕಡ್ಡಾಯ ಮತದಾನ, ಮತದಾನದ ಪಾವಿತ್ರ್ಯ ಮತ್ತು 2009ರ ಲೋಕಸಭೆ ಚುನಾವಣೆ ಹಾಗೂ ಈಚೆಗೆ ನಡೆದ(2013) ವಿಧಾನಸಭೆ ಚುನಾವಣೆಯಲ್ಲಿ ನಡೆದ ಮತದಾನಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಮತದಾನ ನಡೆಯುವಂತೆ ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಆಯಾ ಪಂಚಾಯಿತಿಯ ಮುಖ್ಯ ಅಧಿಕಾರಿಗಳು ಚುನಾವಣೆಯ ಆಯೋಗದ ನಿರ್ದೇಶನದಂತೆ ಮತ್ತು ಸ್ವೀಪ್ ಸಮಿತಿ ಸಲಹೆಯಂತೆ ಕಟ್ಟುನಿಟ್ಟಿನಿಂದ ಕರ್ತವ್ಯ ನಿರ್ವಹಿಸಬೇಕು. ಯಾವುದೇ ರೀತಿಯಲ್ಲಿ ನಿಷ್ಕಾಳಜಿ ವಹಿಸಕೂಡದು ಎಂದರು.
ಮತ ಸಂಕಲ್ಪ ಪತ್ರ ಬರೆಯಿಸಿ: ಮತದಾನ ನಮ್ಮ ಹಕ್ಕು, ಅದನ್ನು ನಾವು ಕಡ್ಡಾಯವಾಗಿ ಚಲಾಯಿಸುತ್ತೇವೆ. ಮತ ಪಾವಿತ್ರ್ಯ ಕಾಪಾಡುವ ದಿಶೆಯಲ್ಲಿ ಪ್ರಾಮಾಣಿಕರಿಸುತ್ತೇವೆ ಎಂಬ ಮತದಾನದ ಸಂಕಲ್ಪ ಪತ್ರವನ್ನು ಪ್ರತಿ ಮತದಾರನಿಂದ ಬರೆಯಿಸಿಕೊಳ್ಳುವ ಕಾರ್ಯಕ್ಕೆ ಚುನಾವಣೆ ಆಯೋಗ ಕಾಯಂ ಕೈಗೊಂಡಿದ್ದು, ಅದಕ್ಕಾಗಿ 50 ಸಾವಿರಕ್ಕೂ ಹೆಚ್ಚು ಮತದಾನ ಸಂಕಲ್ಪ ಪತ್ರ ಮುದ್ರಿಸಲಾಗಿದೆ. ಅವುಗಳನ್ನು ಮತದಾರರಿಗೆ ನೀಡಿ ಬರೆಯಿಸಿಕೊಳ್ಳುವ ನಿಟ್ಟಿನಲ್ಲಿ ಪಿಡಿಒಗಳು, ಅಂಗನವಾಡಿ, ಆಶಾ ಕಾರ್ಯಕರ್ತರು ಜನತೆಯಲ್ಲಿ ಜಾಗೃತಿ ಮಾಡಿಸಬೇಕು. ರೋಣ ಮತಕ್ಷೇತ್ರದ ಸರ್ಜಾಪುರ, ಸೂಡಿ, ಬೈರಾಪುರ, ನರೇಗಲ್ಲ, ರೋಣ ಸೇರಿದಂತೆ ಸುಮಾರು 29 ಮತಗಟ್ಟೆಯಲ್ಲಿ ಕಳೆದ ಚುನಾವಣೆಯಲ್ಲಿ ಶೇ. 50ಕ್ಕಿಂತ ಕಡಿಮೆ ಮತದಾನವಾಗಿದ್ದು, ಈ ಬಾರಿ ಶೇ. 100ರಷ್ಟು ಮತದಾನ ನಡೆಯುವಂತೆ ಅಧಿಕಾರಿಗಳು ಶ್ರಮ ವಹಿಸಬೇಕು.
ಮಾನವ ಸರಪಳಿ ನಿರ್ಮಿಸಿ: ಶಾಲಾ, ಕಾಲೇಜ್ ವಿದ್ಯಾರ್ಥಿಗಳಿಂದ ಡಿಡಿಪಿಐ, ತಾಪಂ ಇಒ, ಬಿಇಒ ನೇತೃತ್ವದಲ್ಲಿ ಏಪ್ರಿಲ್ 4 ಮತ್ತು 10ರಂದು ನರೇಗಲ್ಲ, ರೋಣ, ಗಜೇಂದ್ರಗಡದಲ್ಲಿ ಮಾನವ ಸರಪಳಿ ನಿರ್ಮಿಸಿ ಮತದಾನ ಜಾಗೃತಿ ಮೂಡಿಸಲಾಗುವುದು. ಮಾ. 24ರಿಂದ ಏಪ್ರಿಲ್ 16ರ ವರೆಗೆ ಪ್ರತಿ ಹಳ್ಳಿಗಳಲ್ಲಿ ಮತದಾನ ಕುರಿತು ಧ್ವನಿವರ್ಧಕದ ಮೂಲ ಜಾಗೃತಿ ಮೂಡಿಸುವಲ್ಲಿ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳ ಪಾತ್ರ ಪ್ರಮುಖವಾಗಿದೆ. ಮಾ. 28ರಂದು ತಾಲೂಕಿನ ಆಯಾ ಗ್ರಾಮಗಳ ಶಾಲಾ ಮಕ್ಕಳಿಂದ ಪ್ರಭಾತಫೇರಿ ನಡೆಸುವಲ್ಲಿ ಮುಖ್ಯೋಪಾಧ್ಯಾಯರು ಮುಂದಾಗಬೇಕು. ಮಾ. 25 ಮತ್ತು ಏ. 10ರಂದು ಪ್ರತಿ ಗ್ರಾಮದ ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು, ಸ್ವಸಹಾಯ ಸಂಘ, ಯುವಕ ಸಂಘ, ಯುವತಿ ಸಂಘಗಳ ಮೂಲಕ ಪ್ರತಿ ಓಣಿಯಲ್ಲಿ ಪ್ರಭಾತ ಫೇರಿ ಮೂಲಕ ತೆರಳಿ ಮತದಾನ ಜಾಗೃತಿ ಮೂಡಿಸುವ ಕಾರ್ಯವನ್ನು ಸಿಡಿಪಿಒ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು ವಹಿಕೊಳ್ಳಬೇಕು. ಈಗಾಗಲೇ ಸ್ಥಳೀಯ ಕೇಬಲ್ ಟಿವಿಯಲ್ಲಿ ಮತದಾನ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮ ಪ್ರಸಾರ ಮಾಡಲಾಗುತ್ತಿದೆ.
ಕಲಾ ತಂಡಗಳಿಂದ ಜಾಗೃತಿ: ಏ. 9ರಿಂದ ಏ. 15ರ ವರೆಗೆ ವಿವಿಧ ಕಲಾ ತಂಡಗಳಿಂದ ಬೀದಿ ನಾಟಕ, ಹಾಡು, ನೃತ್ಯ, ರೂಪಕ, ಗೀಗೀ ಪದ, ಲಾವಣಿ ಪದಗಳ ಮೂಲಕ ಕಡ್ಡಾಯ ಮತದಾನ ಕುರಿತು ಜಾಗೃತಿ ಮೂಡಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ. ಚುನಾವಣೆ ಆಯೋಗವು ಸ್ಪರ್ಧಾತ್ಮಕವಾಗಿ ಕಾಯಂ ಕೈಗೊಂಡಿದ್ದು, ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಮತದಾನ ಕೈಗೊಳ್ಳಲು 14 ಅಂಶಗಳ ಯೋಜನೆ ಹಾಕಿಕೊಂಡಿದೆ. ರೋಣ, ನರೇಗಲ್ಲ, ಗಜೇಂದ್ರಗಡ ಪಟ್ಟಣಗಳಲ್ಲಿ ತಲಾ ಕನಿಷ್ಠ 50 ಬ್ಯಾನರ್‌ಗಳನ್ನು ಅಲ್ಲಲ್ಲಿ ಕಟ್ಟಿಸಲಾಗುವುದು. ಪ್ರತಿ ಗ್ರಾಪಂನಲ್ಲಿ ಕನಿಷ್ಠ 10 ಬ್ಯಾನರ್ ಕಟ್ಟಿಸಲಾಗುವುದು. ಅದರಂತೆ ಜಿಲ್ಲೆಯ 370 ಔಷಧಿ ಅಂಗಡಿಗಳ ಮುಂದೆ ಒಂದೊಂದು ಬ್ಯಾನರ್ ನಿರ್ಮಿಸಲಾಗುವುದು. ಅಲ್ಲದೇ ಸ್ವ ಇಚ್ಛೆಯಿಂದ ಯಾರಾದರೂ ತಮ್ಮ ಅಂಗಡಿ ಮುಂದೆ ಮತದಾನ ಜಾಗೃತಿ ಬ್ಯಾನರ್ ಕಟ್ಟಲಿಚ್ಛಿಸುವವರಿಗೆ ಒಪ್ಪಿಗೆ ನೀಡಲಾಗುವುದು ಎಂದರು.
ನಿಷ್ಕಾಳಜಿ ಮಾಡಿದಲ್ಲಿ ಕ್ರಮ: ಚುನಾವಣೆಗೆ ಸಂಬಂಧಿಸಿದಂತೆ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಿಗೆ ವಹಿಸಲಾಗಿದ್ದ ಜವಾಬ್ದಾರಿಯನ್ನು ಸಮರ್ಪಕವಾಗಿ ನಿಭಾಯಿಸಬೇಕು. ಒಂದು ವೇಳೆ ನಿಷ್ಕಾಳಜಿ ವಹಿಸಿದಲ್ಲಿ ಅಂತವರ ಮೇಲೆ ನಿರ್ದಾಕ್ಷ್ಯಿಣ್ಯವಾಗಿ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಜಿಪಂ ಸಿಇಒ ವೀರಣ್ಣ ತುರಮುರಿ ಸಭೆಯಲ್ಲಿ ಪಿಡಿಒಗಳಿಗೆ ಎಚ್ಚರಿಸಿದರು. ಸಭೆಯಲ್ಲಿ ಜಿಪಂ ಯೋಜನಾ ನಿರ್ದೇಶಕ ಟಿ. ದಿನೇಶ, ರೋಣ ತಾಲೂಕು ಚುನಾವಣಾ ನೋಡಲ್ ಅಧಿಕಾರಿ, ಡಿಡಿಪಿಐ ರಾಜೇಂದ್ರ ಪ್ರಸಾದ, ಸ್ವೀಪ್ ತಾಲೂಕು ಅಧ್ಯಕ್ಷ, ತಾಪಂ ಇಒ ಎಸ್.ಎಂ. ಪಿಡಶೆಟ್ಟಿ ಮುಂತಾದವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement