ಅಕ್ರಮ ಹಣ, ಮದ್ಯ ತಡೆಗಟ್ಟಿ
ಕನ್ನಡಪ್ರಭ ವಾರ್ತೆ, ರೋಣ, ಮಾ. 23
ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಅಕ್ರಮ ಹಣ, ಮದ್ಯ ಮತ್ತು ಅಹಿತಕರ ಚಟುವಟಿಕೆ ನಡೆಯದಂತೆ ತಡೆಗಟ್ಟುವಲ್ಲಿ ರಚನೆಗೊಂಡ ತಂಡಗಳ ಮುಖ್ಯಸ್ಥರು ಜಾಗೃತಿಯಿಂದ ಕಾರ್ಯ ನಿರ್ವಹಿಸಬೇಕು ಎಂದು ರೋಣ ವಿಧಾನಸಭೆ ಮತಕ್ಷೇತ್ರದ ಸಹಾಯಕ ಚುನಾವಣಾ ಅಧಿಕಾರಿ ಷಡಕ್ಷರಪ್ಪ ಹೇಳಿದರು.
ಅವರು ಭಾನುವಾರ ಪಟ್ಟಣದ ತಾಪಂ ಸಭಾಭವನದಲ್ಲಿ ಮಾದರಿ ನೀತಿ ಸಂಹಿತೆ ತಂಡ, ಸಂಚಾರಿ ದಳ, ವಿಡಿಯೋ ವಿವೀಂಗ್ ತಂಡ, ಕ್ಷೇತ್ರಾಧಿಕಾರಿಗಳ ತಂಡ, ಚೆಕ್ ಪೋಸ್ಟ್ ತಂಡ, ಗ್ರಾಪಂ ಪಿಡಿಒ, ಪುರಸಭೆ, ಪಪಂ ಮುಖ್ಯಾಧಿಕಾರಿಗಳು ಸೇರಿದಂತೆ ವಿವಿಧ ತಂಡಗಳ ಮಾಹಿತಿ ಕಾರ್ಯಾಗಾರದಲ್ಲಿ ಮಾತನಾಡಿದರು.
ಹಾವೇರಿ ಲೋಕಸಭೆ ಚುನಾವಣೆ ವ್ಯಾಪ್ತಿಗೆ ಒಳಪಡುವ ರೋಣ ವಿಧಾನಸಭೆ ಮತಕ್ಷೇತ್ರದಲ್ಲಿ ಯಾವುದೇ ರೀತಿಯ ಅಕ್ರಮ, ಅವ್ಯವಹಾರ ನಡೆಯದಂತೆ ಮಾದರಿ ನೀತಿ ಸಂಹಿತೆ ತಂಡ (ಎಂಸಿಸಿ), ಸಂಚಾರಿ ದಳ (ಪ್ಲೇಯಿಂಗ್ ಸ್ಕ್ವಾಡ್) ಚುನಾವಣಾ ಲೆಕ್ಕ ಪರಿಶೀಲನಾ ತಂಡ, ವಿಡಿಯೋ ವಿವೀಂಗ್ ತಂಡ, ಕ್ಷೇತ್ರಾಧಿಕಾರಿಗಳ ತಂಡ (ಸೆಕ್ಟರ್ ಆಫೀಸರ್), ಅಲ್ಲಲ್ಲಿ 6 ಚೆಕ್ ಪೋಸ್ಟ್ ನೇಮಕ ಸೇರಿದಂತೆ ಅನೇಕ ತಂಡಗಳನ್ನು ರಚಿಸಲಾಗಿದೆ. ಆ ಮೂಲಕ ಈಗಾಗಲೇ ಕಾರ್ಯ ನಿರ್ವಹಿಸಲಾಗುತ್ತಿದ್ದು, ಈ ತಂಡದ ಮುಖ್ಯ ಅಧಿಕಾರಿಗಳು ದಿನದ 24 ಗಂಟೆ ಜಾಗ್ರತರಿದ್ದು, ಯಾವುದೇ ಸಂದರ್ಭದಲ್ಲಿ ಎಲ್ಲಿಯಾದರೂ ಅಕ್ರಮ ಚಟುವಟಿಕೆ ನಡೆದ ಕುರಿತು ಸಾರ್ವಜನಿಕರಿಂದ ದೂರು ಬಂದಲ್ಲಿ ತಕ್ಷಣವೇ ಸ್ಥಳಕ್ಕೆ ಹೋಗಿ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು ಎಂದರು.
ರೋಣ ವಿಧಾನಸಭೆ ಮತಕ್ಷೇತ್ರದಲ್ಲಿ ಒಟ್ಟು 97 ಗ್ರಾಮ, ಪಟ್ಟಣಗಳಿದ್ದು, 258 ಮತಗಟ್ಟೆಗಳನ್ನು ತೆರೆಯಲಾಗಿದ್ದು, ಇದರಲ್ಲಿ 68 ಅತಿ ಸೂಕ್ಷ್ಮ ಮತಗಟ್ಟೆಗಳು, 77 ಸೂಕ್ಷ್ಮ ಮತಗಟ್ಟೆಗಳು, 25 ಧಂಗೆ ನಡೆಯಬಹುದಾದ ಮತಗಟ್ಟೆಗಳು, 11 ಕ್ಲೀಷ್ಟಕರ ಮತಗಟ್ಟೆಗಳು ಎಂದು ಗುರುತಿಸಲಾಗಿದೆ. ಇಂತಹ ಮತಗಟ್ಟೆಯಲ್ಲಿ ಚುನಾವಣಾ ಸಿಬ್ಬಂದಿ ಅತಿ ಜಾಗುರೂಕತೆಯಿಂದ ಕಾರ್ಯ ನಿರ್ವಹಿಸಬೇಕು.
ತಮ್ಮ ವ್ಯಾಪ್ತಿಗೆ ಬರುವ ಮತಗಟ್ಟೆಗಳಲ್ಲಿ ಅಗತ್ಯ ಸೌಕರ್ಯ ಒದಗಿಸುವಲ್ಲಿ ಮತಗಟ್ಟೆಗಳನ್ನು ವೀಕ್ಷಿಸಿ ಕ್ಷೇತ್ರಾಧಿಕಾರಿಗಳು (ಸೆಕ್ಟರ್ ಆಫೀಸರ್) ಅಗತ್ಯವಿರುವ ವಿದ್ಯುತ್, ನೀರು, ಬೆಳಕು, ನೆರಳು, ಆಸನದ ವ್ಯವಸ್ಥೆ ಕಲ್ಪಿಸುವಲ್ಲಿ ಕ್ರಮ ಕೈಗೊಳ್ಳಬೇಕು. ಮತಗಟ್ಟೆ ವೀಕ್ಷಣೆಗೆ ತೆರಳಲು ನೇಮಕಗೊಂಡ ಚುನಾವಣೆ ಸಿಬ್ಬಂದಿಗೆ ವಾಹನ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.
ಮತದಾನ ಯಶಸ್ಸಿಗೆ ಶ್ರಮಿಸಿ: ಯಾವುದೇ ಸಂದರ್ಭದಲ್ಲಿ ಅಹಿತಕರ ಘಟನೆಗಳು ನಡೆಯಬಹುದಾಗಿದ್ದು, ಹಾಗಾಗದಂತೆ ತಡೆಯುವಲ್ಲಿ ಮುಂಜಾಗ್ರತವಾಗಿ ಚುನಾವಣೆ ಸಿಬ್ಬಂದಿ ಶ್ರಮಿಸಬೇಕು. ಕಳೆದ ಚುನಾವಣೆಗಿಂತ ಈ ಬಾರಿ ಹೆಚ್ಚಿನ ಮತದಾನ ನಡೆಯುವಂತೆ ಮತದಾರರಲ್ಲಿ ಜಾಗೃತಿ ಮೂಡಿಸಬೇಕು. ಅದಕ್ಕೆ ಬೇಕಾದ ಎಲ್ಲ ಸಿದ್ಧತೆ ಮಾಡಿಕೊಳ್ಳಬೇಕು. ಜತೆಗೆ ಎಲ್ಲಿಯೂ ಹಣ ಹಂಚುವುದು, ಸೀರೆ, ಬಟ್ಟೆ, ಸಾರಾಯಿ ಹಂಚುವುದು, ಯಾವುದೇ ಆಮಿಷ ಒಡ್ಡುವುದು ಸೇರಿದಂತೆ ಯಾವುದೇ ರೀತಿಯ ಅಕ್ರಮ ಚಟುವಟಿಕೆ ನಡೆಯದಂತೆ ನೋಡಿಕೊಳ್ಳಬೇಕು. ಹಾಗೇನಿದ್ದರೂ ಕಂಡು ಬಂದಲ್ಲಿ ಅದರ ವಿಡಿಯೋ ಚಿತ್ರಿಕರಿಸಬೇಕು. ಚುನಾವಣೆಗೆ ನೇಮಿಸಿ ಸಿಬ್ಬಂದಿಯು ನಿರಂತರವಾಗಿ ಚುನಾವಣೆ ಅಧಿಕಾರಿಗಳ ಸಂಪರ್ಕದಲ್ಲಿದ್ದು ಮಾಹಿತಿ ನೀಡಬೇಕು ಎಂದರು.
ಸಭೆಯಲ್ಲಿ ತಹಸೀಲ್ದಾರ್ ಎ.ಜಿ. ಪಂಡಿತ, ತಾಪಂ ಇಒ ಎಸ್.ಎಂ. ಪಿಡಶೆಟ್ಟಿ, ಉಪತಹಸೀಲ್ದಾರ್ ಎನ್.ಎಸ್. ಕೂಡಲ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.