ಕೋಳಿವಾಡ ನೇತೃತ್ವದಲ್ಲಿ ಕಾಂಗ್ರೆಸ್ ಪಾದಯಾತ್ರೆ
ರಾಣಿಬೆನ್ನೂರು: ತಾಲೂಕಿನಲ್ಲಿ ಕಾಂಗ್ರೆಸ್ ಪಕ್ಷವನ್ನು ಸಂಘಟಿಸಿ ಬಲಪಡಿಸುವುದಕ್ಕಾಗಿ ಭಾನುವಾರ ಶಾಸಕ ಕೆ.ಬಿ. ಕೋಳಿವಾಡ ನೇತೃತ್ವದಲ್ಲಿ ಕಾರ್ಯಕರ್ತರು ನಗರದ ಪ್ರಮುಖ ಬೀದಿಗಳಲ್ಲಿ ಪಾದಯಾತ್ರೆ ನಡೆಸುವುದರೊಂದಿಗೆ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡಬೇಕೆಂದು ವಿನಂತಿಸಿದರು. ಕಾಂಗ್ರೆಸ್ ಮುಖಂಡರು ಹಾಗೂ ಮಾಜಿ ಸಂಸದ ಐ.ಜಿ. ಸನದಿ, ನಗರಸಭಾ ಅಧ್ಯಕ್ಷ ಶಿವಣ್ಣ ಮಣೇಗಾರ, ಸದಸ್ಯರಾದ ಶಶಿಧರ ಬಸೆನಾಯ್ಕರ, ಪ್ರಕಾಶ ಜೈನ್, ನೀಲಕಂಠಪ್ಪ ಕುಸಗೊರು, ಮಂಜುನಾಥ ದುಗ್ಗತ್ತಿ, ರವಿಂದ್ರಗೌಡ ಎಫ್. ಪಾಟೀಲ, ಪುಟ್ಟಪ್ಪ ಮರಿಯಮ್ಮನವರ, ಕೃಷ್ಣಪ್ಪ ಕಂಬಳಿ, ಬಸವರಾಜಪ್ಪ ಸವಣೂರು, ಇಕ್ಬಾಲ್ಸಾಬ ರಾಣಿಬೆನ್ನೂರು, ಶರಿನ್ ತಾಜ ಶೇಖ, ಇಂದಿರಾ ಗಡ್ಡದಗೊಳಿ, ರತ್ನಾ ಪುನಿತ ಸೇರಿದಂತೆ ನೂರಾರು ಕಾರ್ಯಕರ್ತರು ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು. ನಗರದ ಮೆಡ್ಲೇರಿ ರಸ್ತೆಯಲ್ಲಿರುವ ಆದಿ ಶಕ್ತಿ ದೇವಸ್ಥಾನದಿಂದ ಹೊರಟ ಪಾದಯಾತ್ರೆಯು ಮೆಡ್ಲೇರಿ ಕ್ರಾಸ್, ಪೋಸ್ಟ್ ಸರ್ಕಲ್, ಎಂ.ಜಿ. ರಸ್ತೆ, ದರ್ಗಾ ಸರ್ಕಲ್, ಕುರುಬಗೇರಿ ಕ್ರಾಸ್ ಮುಖಾಂತರ ಪಿಬಿ ರಸ್ತೆಯ ಮೂಲಕ ಕೆಇಬಿ ಗಣೇಶ ದೇವಸ್ಥಾನ ತಲುಪಿತು.
ಮತದಾನ ಜಾಗೃತಿ
ಮುಂಡರಗಿ: ಲೋಕಸಭಾ ಚುನಾವಣೆ ಹಿನ್ನೆಲೆಯುಲ್ಲಿ ಗದಗ ಜಿಲ್ಲಾದ್ಯಂತ ಗೌರವಾನ್ವಿತ ಮತದಾರರ ಸ್ವಾಭಿಮಾನ, ಜಾಗೃತಿ ಕಾರ್ಯಕ್ರಮಕ್ಕೆ ಶನಿವಾರ ಮುಂಡರಗಿಯಲ್ಲಿ ಚಾಲನೆ ನೀಡಲಾಯಿತು. ಸ್ಥಳೀಯ ಅಕ್ಕಮಹಾದೇವಿ ಮಹಿಳಾ ಸಂಘ, ಸಮಾಖ್ಯ ಕರ್ನಾಟಕ ಆಶ್ರಯದಲ್ಲಿ ಜರುಗಿದ ಕಾರ್ಯಕ್ರಮಕ್ಕೆ ಬಸಮ್ಮ ಹಿರೇಮಠ ಮಹಿಳಾ ಸದಸ್ಯರಿಗೆ ಪ್ರತಿಜ್ಞಾವಿಧಿ ಬೋಧಿಸುವ ಮೂಲಕ ಚಾಲನೆ ನೀಡಿದರು. ಬಸಮ್ಮ ಹಿರೇಮಠ, ರೇಣುಕಾ ಗದಗಿನ, ಚಂದ್ರಕಲಾ ಕೆ., ಜೈರುಂಬಿ ಇದ್ದರು
ಪ್ರತಿಜ್ಞಾವಿಧಿ ಬೋಧನೆ
ಶಿಗ್ಗಾಂವಿ: ರಾಜಕೀಯ ಪಕ್ಷಗಳ ಆಮಿಷಕ್ಕೆ ಒಳಗಾಗದೆ, ನಿರ್ಭೀತಿಯಿಂದ ಮತದಾನ ಮಾಡುವ ಮನೋಭಾವ ಮತದಾರರು ಬೆಳೆಸಿಕೊಳ್ಳಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಪಿ.ಎಂ. ಚಿನ್ನಪ್ಪನವರ ಹೇಳಿದರು. ಪಟ್ಟಣದ ಪುರಸಭೆಯ ಸಭಾ ಭವನದಲ್ಲಿ ಜರುಗಿದ ಲೋಕಸಭಾ ಸಾರ್ವತ್ರಿಕ ಚುನಾವಣೆ ಸ್ವೀಪ್ ಕಾರ್ಯಕ್ರಮದಲ್ಲಿ ಶಿಗ್ಗಾಂವಿ ಪುರಸಭೆ ಸಿ ಮತ್ತು ಡಿ ವರ್ಗದ ನೌಕರರಿಗೆ ಮತದಾನದ ಬಗ್ಗೆ ತರಬೇತಿ ಹಾಗೂ ಮತದಾರರಿಗೆ ಪ್ರತಿಜ್ಞಾವಿಧಿ ಬೋಧಿಸಿ ಅವರು ಮಾತನಾಡಿದರು.