ಬಿಸಿಲು: ತಂಪು ಪಾನೀಯಕ್ಕೆ ಮೊರ
-ವಿಶೇಷ ವರದಿ
ಗಜೇಂದ್ರಗಡ: ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಬೇಸಿಗೆ ಪ್ರಾರಂಭದಲ್ಲೇ ವಿಪರೀತ ಬಿಸಿಲಿನ ತಾಪಕ್ಕೆ ತತ್ತರಿಸಿದ ಜನತೆ ಬಿಸಿಲಿನ ದಾಹ ತಣಿಸಿಕೊಳ್ಳಲು ಕಬ್ಬಿನಹಾಲು, ಹಣ್ಣಿನ ರಸ, ಕಲ್ಲಂಗಡಿ, ಫೈನಾಪಲ್, ಕರಬೂಜ ಹಣ್ಣುಗಳಂಥ ತಂಪಾದ ಪಾನೀಯಗಳ ಖರೀದಿ ಭರಾಟೆಯಲ್ಲಿ ತೊಡಗಿದ್ದಾರೆ. ಪ್ರತಿ ವರ್ಷದಂತೆ ಈ ಬಾರಿ ತುಸು ತಡವಾಗಿ ಬೇಸಿಗೆ ಆರಂಭವಾದರೂ ಕಳೆದೊಂದು ವಾರದಲ್ಲಿ ಮೈ ಸುಡುವಂತ ಬೀರು ಬಿಸಿಲು ಜನರನ್ನು ಚಿಂತೆಗೀಡು ಮಾಡಿದೆ.
ಬರುವ ಏಪ್ರಿಲ್, ಮೇ ತಿಂಗಳಲ್ಲಿ ಬಿಸಿಲಿನ ತಾಪ ಹೆಚ್ಚಾಗಬಹುದು ಎಂದು ಉಹಿಸಿಕೊಂಡು ಜನತೆ ದಿಗ್ಭ್ರಾಂತರಾಗಿದ್ದಾರೆ. ಬೆಳಗ್ಗೆ ಸೂರ್ಯನ ಅರ್ಭಟ ಆರಂಭಗೊಂಡು ಮಧ್ಯಾಹ್ನದ ವೇಳೆಗೆ ರುದ್ರ ನರ್ತನದಿಂದ ಜನ ತಮ್ಮ ಕೆಲಸ ಕಾರ್ಯಕ್ಕಾಗಿ ಮನೆ ಬಿಟ್ಟು ತೆರಳಲು ಹಿಂಜರಿಯುತ್ತಿದ್ದು, ಬಿಸಿಲಿನ ಝಳ ತಗ್ಗಿಸಿಕೊಳ್ಳಲು ಮನೆಯಲ್ಲಿ ಫ್ಯಾನ್ಗೆ ಮೋರೆ ಹೋಗಿದ್ದಾರೆ.
ಮಧ್ಯಾಹ್ನ ಸಮಯದಲ್ಲಿ ಪಟ್ಟಣದ ವಾಣಿಜ್ಯ ಮಾರುಕಟ್ಟೆಗಳಾದ ಜೋಡು ರಸ್ತೆ ಅಕ್ಕ ಪಕ್ಕ, ಬಸವೇಶ್ವರ ವೃತ್ತ, ಕಾಲಕಾಲೇಶ್ವರ ವೃತ್ತದಿಂದ ಬಸ್ ನಿಲ್ದಾಣದವರೆಗೆ ಹುಡುಕಿದರೂ ನೆರಳು ನೀಡಲು ಮರ ಇಲ್ಲ. ಜತೆಗೆ ಮರ ಬೆಳೆಸುವ ಪ್ರಯತ್ನ ಕೂಡಾ ಮಾಡಿಲ್ಲ. ಹೀಗಾಗಿ ಈ ರಸ್ತೆಗಳಲ್ಲಿ ವಾಣಿಜ್ಯ ವಹಿವಾಟುಗಳು ಕಳೆಗುಂದಿವೆ. ಕೆಲ ವರ್ತಕರು ನಿದ್ದೆಗೆ ಶರಣರಾಗಿರುತ್ತಾರೆ. ಸದಾ ಜನರಿಂದ ಗಿಜಿಗುಡುತ್ತಿದ್ದ ಮುಖ್ಯ ವ್ಯಾಪಾರ ಕೇಂದ್ರಗಳಲ್ಲಿ ಸೂರ್ಯನ ಪ್ರಕರತೆ ಪಟ್ಟಣವನ್ನು ನಿರ್ಜನ ಪ್ರದೇಶವನ್ನಾಗಿಸಿದೆ. ಇದರಿಂದ ವಾಣಿಜ್ಯ ವಹಿವಾಟುಗಳ ಮೇಲೆ ಭಾರಿ ದುಷ್ಪರಿಣಾಮ ಬೀರಿದೆ ಎಂದು ವರ್ತಕರು ಗೋಳಿಡುತ್ತಾರೆ.
ಹಗಲು ಹೊತ್ತಿನಲ್ಲಿ ಬಿಸಿಲಿನ ತಾಪದ ಜತೆ ಉಷ್ಣ ಗಾಳಿ ನಾಗರಿಕರ ನಿತ್ಯದ ಬದುಕಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದ್ದರಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಪ್ರಮುಖವಾಗಿ ಅಲ್ಪರೋಗ ಪೀಡಿತ ಇಳಿ ವಯಸ್ಸಿನವರು, ಮಹಿಳೆಯರು, ಮಕ್ಕಳ ಮೇಲೆ ಮಾರಕವಾಗಿ ಪರಿಣಮಿಸಿದೆ. ಗ್ರಾಮಗಳ ರೈತಾಪಿ ವರ್ಗವನ್ನು ಕಂಗೆಡಿಸಿದೆ. ಜನತೆಗೆ ತಾಪದ ಜತೆ ಧಗ ಧಗಿಸುವ ಬಿಸಿಲಿನ ಝಳ ಒಡಲೂರಿಯನ್ನು ಹೆಚ್ಚಿಸಿದೆ.
ಇನ್ನೊಂದೆಡೆ ಎಲ್ಲ ಶಾಲೆ, ಕಾಲೇಜುಗಳ ವಾರ್ಷಿಕ ಪರಿಕ್ಷೆಗಳು ಆರಂಭವಾಗಿವೆ. ವಿದ್ಯಾರ್ಥಿಗಳು ಗಂಭಿರ ಅಭ್ಯಾಸದಲ್ಲಿ ತೊಡಗಿದ್ದಾರೆ. ಆದರೆ, ಹಗಲು ಹೊತ್ತಿನಲ್ಲಿ ಬಿಸಿಲಿನ ತಾಪಕ್ಕೆ ತತ್ತರಿಸುತ್ತಿದ್ದಾರೆ. ಹಗಲೆಲ್ಲಾ ಬಿಸಿಲಿನ ತಾಪಕ್ಕೆ ಕಾಯ್ದು ಕೆಂಡವಾದ ಗುಡ್ಡದ ಬಂಡೆಗಲ್ಲುಗಳು ರಾತ್ರಿ ಹೊತ್ತು ಬಿಸಿ ಉಷ್ಣ ಹೊರಸೂಸುವ ಮೂಲಕ ಜನರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಇದೆಲ್ಲದರ ಮಧ್ಯ ರೈತರು ಬಿಸಿಲಿನ ತಾಪಕ್ಕೆ ಜಗ್ಗದೆ ಮುಂಬರುವ ಮುಂಗಾರು ಹಂಗಾಮಿನ ತಯಾರಿಗಾಗಿ ತಮ್ಮ ಹೊಲದಲ್ಲಿ ನೇಗಿಲು, ರೆಂಟೆಯಂತಹ ಜಮೀನು ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವ ದೃಶ್ಯ ಸಾಮಾನ್ಯವಾಗಿದೆ. ಒಟ್ಟಾರೆ ಪ್ರತಿ ವರ್ಷಕ್ಕಿಂತ ಈ ಬಾರಿ ಬಿಸಿಲಿನ ತಾಪ ಹೆಚ್ಚಾಗಲಿದೆ ಎನ್ನುವ ಹವಾಮಾನ ತಜ್ಞರ ಅಭಿಪ್ರಾಯ ಜನರನ್ನು ಮತ್ತಷ್ಟು ಚಿಂತೆಗೀಡು ಮಾಡಿದೆ.