ವೀರಶೈವ ಸಮಾಜ ಹೋಳಾಗುತ್ತಿದೆ
ಲಕ್ಷ್ಮೇಶ್ವರ: ವೀರಶೈವ ಧರ್ಮವು ಪುರಾತನ ಧರ್ಮವಾಗಿದ್ದು, ಆದಿಶಂಕರರ ಅಪರಾವತಾರವಾಗಿದ್ದು, ರೇಣುಕಾಚಾರ್ಯಯರು ಈ ಧರ್ಮದ ಸಂಸ್ಥಾಪಕರಾಗಿದ್ದು, ಅಂತಹ ವೀರಶೈವ ಧರ್ಮವು ಇಂದು ಹಲವಾರು ಪಂಗಡಗಳಾಗಿ ಹರಿದು ಹಂಚಿ ಹೋಗುತ್ತಿರುವುದು ನೋವಿನ ಸಂಗತಿಯಾಗಿದೆ ಎಂದು ಮುಕ್ತಿಮಂದಿರದ ವಿಮಲರೇಣುಕ ವೀರಮುಕ್ತಿಮುನಿ ಶ್ರೀಗಳು ಹೇಳಿದರು.
ಅವರು ಪಟ್ಟಣದ ಜ. ವೀರಗಂಗಾಧರ ಸಮುದಾಯ ಭವನದಲ್ಲಿ ಭಾನುವಾರ ಜರುಗಿದ ರೇಣುಕಾಚಾರ್ಯರ ಯುಗಮಾನೋತ್ಸವ ಸಮಾರಂಭದ ಸಾನ್ನಿಧ್ಯವಹಿಸಿ ಮಾತನಾಡಿದರು. ರಂಭಾಪುರಿ ಪೀಠದ ಜ. ಲಿಂ. ಗಂಗಾಧರ ಶ್ರೀಗಳು ಮಾನವ ಧರ್ಮಕ್ಕೆ ಜಯವಾಗಲಿ ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎನ್ನುವ ದಿವ್ಯ ಸಂದೇಶವನ್ನು ನೀಡಿ ಜಗತ್ತಿನ ಉದ್ಧಾರಕ್ಕೆ ಧರ್ಮಗಳು ಅವಶ್ಯವಾಗಿವೆ ಎಂದರು. ಇದೇ ಸಂದರ್ಭದಲ್ಲಿ ಪಟ್ಟಣದ ಕರೆವಾಡಿಮಠದ ಮಳೆಮಲ್ಲಿಕಾರ್ಜುನ ಶ್ರೀಗಳು, ಸೋಮಣ್ಣ ಮುಳಗುಂದ ಹಾಗೂ ಎನ್.ಎ. ಮುಳಗುಂದಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದಕ್ಕೂ ಪೂರ್ವದಲ್ಲಿ ಪಟ್ಟಣದ ಹಾಲೇವಾಡಿಮಠದಿಂದ ರೇಣುಕಾಚಾರ್ಯರ ಭಾವಚಿತ್ರದ ಮೆರವಣಿಗೆಯು ಕುಂಭ ಹೊತ್ತ ಮಹಿಳೆಯರು, ಸ್ಥಳೀಯ ವೀರಗಾಸೆ ತಂಡದವರು ವೀರಭದ್ರಸ್ವಾಮಿಯ ವಡಪುಗಳನ್ನು ಹೇಳುತ್ತಾ ಪ್ರಮುಖ ಬೀದಿಗಳಲ್ಲಿ ಸಾಗಿ ನಂತರ ರಂಭಾಪುರಿ ಶ್ರೀಗಳ ಕಲ್ಯಾಣ ಮಂಟಪಕ್ಕೆ ಆಗಮಿಸಿತು. ರುದ್ರಯ್ಯ ಪುರಾಣಿಕಮಠ, ಚಂಬಣ್ಣ ಬಾಳಿಕಾಯಿ, ಪುರಸಭೆ ಅಧ್ಯಕ್ಷೆ ಗಂಗಮ್ಮ ಫಕ್ಕೀರಸ್ವಾಮಿಮಠ, ಸೋಮಯ್ಯ ಬಾಳಿಹಳ್ಳಿಮಠ, ಎಂ. ಶಿದ್ದಲಿಂಗಯ್ಯ ಮುಂತಾದವರು ಉಪಸ್ಥಿತರಿದ್ದರು. ವೀರಯ್ಯ ಮಠಪತಿ ಸ್ವಾಗತಿಸಿದರು. ಎನ್.ಎ. ಮುಳಗುಂದಮಠ ನಿರೂಪಿಸಿ, ವಂದಿಸಿದರು.
ಮಹಿಳೆಯರು ಸಂಘಟಿತರಾಗಲಿ
ಗಜೇಂದ್ರಗಡ: ಮಹಿಳಾ ಸಮುದಾಯ ಅಭಿವೃದ್ಧಿ ನಿರೀಕ್ಷಿಸಿದಷ್ಟು ಸಾಧ್ಯವಾಗಿಲ್ಲ. ಈ ನಿಟ್ಟಿನಲ್ಲಿ ಮಹಿಳೆಯರು ಸಂಘಟಿತರಾಗುವುದು ಅವಶ್ಯ ಎಂದು ರೇವತಿ ಉದಾಸಿ ಹೇಳಿದರು.
ಅವರು ಸ್ಥಳೀಯ ಜಿ.ಕೆ. ಬಂಡಿ ಗಾರ್ಡನ್ನಲ್ಲಿ ಗಜೇಂದ್ರಗಡ ಉಣಚಗೇರಿ ಮಹಿಳಾ ಮಂಡಳದ ವತಿಯಿಂದ ಭಾನುವಾರ ಏರ್ಪಡಿಸಿದ್ದ ಅಂತರ್ರಾಷ್ಟ್ರೀಯ ಮಹಿಳಾ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಮಹಿಳೆಯರ ಸಾಧನೆಗೆ ಇಂದು ಸಾಕಷ್ಟು ಅವಕಾಶಗಳಿವೆ. ಸಂಘಟಿತರಾಗಿ ನಮ್ಮ ಪಾಲಿನ ಹಕ್ಕನ್ನು ಪಡೆದು ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಪ್ರಗತಿ ಹೊಂದೋಣ ಎಂದರು.
ಸ್ನೇಹಾ ಮಹಿಳಾ ಮಂಡಳ ಅಧ್ಯಕ್ಷೆ ಸಯುಂಕ್ತಾ ಬಂಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸರ್ಕಾರಗಳು ಮಹಿಳಾ ಸಬಲೀಕರಣದ ಮಾತನ್ನು ಭಾಷಣಕ್ಕೆ ಮೀಸಲಿರಿಸಿವೆ. ಹೀಗಾಗಿ ಮಹಿಳೆ ಸಮಾಜದ ಮುಖ್ಯವಾಹಿನಿಗೆ ಬರುವಲ್ಲಿ ವಿಫಲಳಾಗಿದ್ದಾಳೆ ಎಂದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಮಹಿಳೆಯರನ್ನು ಸನ್ಮಾನಿಸಲಾಯಿತು. ಬಳಿಕ ಮಹಿಳಾ ಮಂಡಳ ಸದಸ್ಯರಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಜನಾಕರ್ಷಿಸಿದವು. ಪುರಸಭೆ ಅಧ್ಯಕ್ಷೆ ಕವಿತಾ ಜಾಳಿಹಾಳ, ಉಪಾಧ್ಯಕ್ಷೆ ಅಕ್ಕಮ್ಮ ಜಾನಯಿ, ಸದಸ್ಯೆ ವಿಜಯಲಕ್ಷ್ಮಿ ಚೆಟ್ಟರ, ಸುಮಿತ್ರಾ ತೊಂಡಿಹಾಳ, ಡಾ. ರೇಷ್ಮಾ ಕೋಲಕಾರ, ಗೀತಾ ಕಂಬಳ್ಯಾಳ, ದೀಪಾ ಗೋಯಲ್, ವಿಜಯಾಬಾಯಿ ಬಾಗಮಾರ, ಕವಿತಾ ಹಿರೇಮನಿ, ಸಂಗೀತಾ ಗಾಣಗೇರ, ಮಾಬೂಬಿ ಮುಲ್ಲಾ, ಕಸ್ತೂರಿ ಹಿರೇಮಠ, ಪದ್ಮಾವತಿಗೌಡ, ಸ್ವಪ್ನ ಬನ್ನಿಕೊಪ್ಪ ಮುಂತಾದವರು ಉಪಸ್ಥಿತರಿದ್ದರು.