ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಕ್ಷೇತ್ರ ಕಳಕೊಂಡ್ರೂ ಗದಗ ನಿರ್ಣಾಯಕ

Srinivasa Murthy VN
Updated On : 25 Mar 2014, 10:58 am

ಕನ್ನಡಪ್ರಭ ವಾರ್ತೆ ಗದಗ ಮಾ. 24
ದೇಶಾದ್ಯಂತ ಲೋಕಸಭೆ ಚುನಾವಣೆ ಕಾವು ಜೋರಾಗಿದೆ. ಗದಗ ಜಿಲ್ಲೆ ಹೆಸರು ಮಾತ್ರ ಎಲ್ಲಿಯೂ ಕೇಳಿ ಬರುತ್ತಿಲ್ಲ. 2008ರ ಕ್ಷೇತ್ರ ಮರುವಿಂಗಡಣೆಯಲ್ಲಿ ಜಿಲ್ಲೆಯ ಎಲ್ಲ 4 ವಿಧಾನಸಭಾ ಕ್ಷೇತ್ರಗಳು ಹಾವೇರಿ ಹಾಗೂ ಬಾಗಲಕೋಟೆ ಲೋಕಸಭೆ ಕ್ಷೇತ್ರಕ್ಕೆ ಹರಿದು ಹಂಚಿಹೋಗಿ 'ಗದಗ' ಹೆಸರೇ ಮಾಯವಾಗಿದೆ. ಆದರೆ, ಈ ಎರಡೂ ಕ್ಷೇತ್ರಗಳ ಫಲಿತಾಂಶ ನಿರ್ಧರಿಸುವಲ್ಲಿ ಗದಗ ಜಿಲ್ಲೆಯ ಪಾತ್ರ ಪ್ರಮುಖವಾಗಿದೆ.
2008ರಲ್ಲಿ ಕ್ಷೇತ್ರ ಮರುವಿಂಗಡಣಾ ಸಮಿತಿ ಅಧ್ಯಕ್ಷರಾಗಿದ್ದ ಕುಲದೀಪ್ ಸಿಂಗ್ ಬೆಳಗಾವಿಯಲ್ಲಿ ಈ ಭಾಗದ ಎಲ್ಲ ಪಕ್ಷಗಳ ರಾಜಕೀಯ ನಾಯಕರ ಸಭೆಯನ್ನು ನಡೆಸಿ, ಸಮಸ್ಯೆಗಳನ್ನು ಆಲಿಸಿದ್ದರು. ಆಗ ಜಿಲ್ಲೆಯ ಜನತೆ ಹಾವೇರಿ ಲೋಕಸಭಾ ಕ್ಷೇತ್ರವನ್ನು ಹಾವೇರಿ-ಗದಗ (ಉಡುಪಿ-ಚಿಕ್ಕಮಗಳೂರು ಇದ್ದಂತೆ) ಎಂದು ಘೋಷಿಸುವಂತೆ ಮನವಿ ಮಾಡಿದ್ದರು. ಆದರೆ, ಆ ಮನವಿಗೆ ಪುರಸ್ಕಾರ ಸಿಗಲಿಲ್ಲ. ಜಿಲ್ಲೆಯ ಮುಖಂಡರೂ ಗಮನ ಹರಿಸಲಿಲ್ಲ. ಹೀಗಾಗಿ, ಲೋಕಸಭೆಯ ದಾಖಲೆಯಲ್ಲಿ ಈಗ 'ಗದಗ' ಹೆಸರು ಮಾಯವಾಗಿದೆ.
ಅಭ್ಯರ್ಥಿಗಳ ಬಗ್ಗೆ ಮಾಹಿತಿಯೇ ಇಲ್ಲ:  
ನರಗುಂದ ವಿಧಾನಸಭೆ ಕ್ಷೇತ್ರ ಬಾಗಲಕೋಟೆ ಲೋಕಸಭೆ ಕ್ಷೇತ್ರಕ್ಕೆ ಒಳಪಟ್ಟಿದೆ. ವಿಧಾನಸಭೆ ಕ್ಷೇತ್ರ ಮರುವಿಂಗಡಣೆ ವೇಳೆ ಗೊಂದಲವಾಗಿತ್ತು. ನರಗುಂದ ವಿಧಾನಸಭೆ ಕ್ಷೇತ್ರಕ್ಕೆ ಬೆಟಗೇರಿ ಹೋಬಳಿಯ ಹಲವಾರು ಹಳ್ಳಿಗಳನ್ನು ಸೇರಿಸಿದ್ದರಿಂದ ಗದಗ ತಾಲೂಕಿನ ಹಲವು ಗ್ರಾಮಗಳು ನರಗುಂದ ವಿಧಾನಸಭೆ ಕ್ಷೇತ್ರದ ತೆಕ್ಕೆಗೆ ಹೋಗಿವೆ. ಗದಗ ತಾಲೂಕಿನ ಲಿಂಗದಾಳ, ಹುಯಿಲಗೋಳ, ದುಂದೂರು ಹಳ್ಳಿಗಳು ನರಗುಂದದಿಂದ 70 ಕಿ.ಮೀ. ದೂರದಲ್ಲಿವೆ. ಲೋಕಸಭಾ ಕ್ಷೇತ್ರದ ಕೇಂದ್ರ ಸ್ಥಾನ ಬಾಗಲಕೋಟೆ ಈ ಹಳ್ಳಿಗಳಿಂದ ನೂರಾರು ಕಿ.ಮೀ. ದೂರದಲ್ಲಿದೆ. ಇವರೆಲ್ಲರಿಗೂ ಗದಗ ಕೇವಲ 10 ಕಿ.ಮೀ. ದೂರ. ಆದರೂ, ಕಚೇರಿ ಕೆಲಸಗಳಿಗೆ ನರಗುಂದ, ಬಾಗಲಕೋಟೆಗೆ ಅಲೆಯುವ ಶಿಕ್ಷೆ. ಸಾಲದ್ದಕ್ಕೆ, ಈ ಹಳ್ಳಿಗಳ ಜನರಿಗೆ, ಲೋಕಸಭಾ ಕ್ಷೇತ್ರಕ್ಕೆ ಸ್ಪರ್ಧಿಸಿರುವ ಉಮೇದುವಾರರ ಹೆಸರೂ ಗೊತ್ತಿಲ್ಲ!
ನಿರ್ಣಾಯಕ: ರೋಣ, ಗದಗ ಹಾಗೂ ಶಿರಹಟ್ಟಿ ವಿಧಾನಸಭೆ ಕ್ಷೇತ್ರಗಳು ಹಾವೇರಿ ಕ್ಷೇತ್ರದ ವ್ಯಾಪ್ತಿಗಿವೆ. ಹಾವೇರಿ ಜಿಲ್ಲೆಯ 5 ವಿಧಾನಸಭೆ ಕ್ಷೇತ್ರಗಳಿದ್ದರೂ ಫಲಿತಾಂಶ ನಿರ್ಧಾರವಾಗುವುದು ಗದಗ ಜಿಲ್ಲೆಯ ಮತಗಳಿಂದಲೇ ಎನ್ನುವುದು ಸಾಬೀತಾಗಿದೆ. ಇದಕ್ಕಾಗಿ ಪ್ರಮುಖ ಪಕ್ಷಗಳು ಹಾವೇರಿ ಬಿಟ್ಟು ಗದಗ ಜಿಲ್ಲೆಯಲ್ಲೇ ಪ್ರಚಾರ ಕಾರ್ಯಕ್ಕೆ ಆದ್ಯತೆ ನೀಡುತ್ತಿದ್ದಾರೆ.
ಮತದಾರರ ವಿವರ: ಹಾವೇರಿ ಲೋಕಸಭೆ ಮತಕ್ಷೇತ್ರದಲ್ಲಿ ಒಟ್ಟು 15,12,151 ಮತದಾರರಿದ್ದು, ಅವರಲ್ಲಿ 7,84,464 ಪುರುಷರು, 7,27,634 ಮಹಿಳೆಯರು. ಈ ಪೈಕಿ 5,85,370 ಮತಗಳು ಗದಗ ಜಿಲ್ಲೆಯ ವ್ಯಾಪ್ತಿಯಲ್ಲಿವೆ. 2,98,443 ಪುರುಷರು, 2,86,927 ಮಹಿಳೆಯರು. ಕಳೆದ ಚುನಾವಣೆಯಿಂದ ಹಾವೇರಿ ಲೋಕಸಭೆ ಕ್ಷೇತ್ರದ ಎಲ್ಲ ಚಟುವಟಿಕೆ ಹಾವೇರಿಯಲ್ಲಿ ಕೇಂದ್ರೀಕೃತವಾಗುತ್ತಿದೆ. ರಾಜಕೀಯ ಪಕ್ಷಗಳು ಹಾವೇರಿ ಭಾಗದವರನ್ನೇ ಅಭ್ಯರ್ಥಿಗಳನ್ನಾಗಿ ಘೋಷಿಸುತ್ತಿದ್ದಾರೆ. ಆದರೆ, ಗದಗ ಜಿಲ್ಲಾ ವ್ಯಾಪ್ತಿಯಲ್ಲಿರುವ (3 ವಿಧಾನಸಭೆ ಕ್ಷೇತ್ರದ) 5 ಲಕ್ಷಕ್ಕೂ ಅಧಿಕ ಮತದಾರರನ್ನು ಸೆಳೆಯಲಷ್ಟೇ ಆದ್ಯತೆ ನೀಡುತ್ತಿದ್ದಾರೆ. ನರಗುಂದ ಕ್ಷೇತ್ರ ಬಾಗಲಕೋಟೆ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿದ್ದು, ಇಲ್ಲಿಯ ಮತದಾರರು ಯಾವ ಅಭ್ಯರ್ಥಿಯತ್ತ ಹೊರಳುತ್ತಾರೋ, ಅವರ ಗೆಲವೂ ನಿಶ್ಚಿತ ಎಂಬ ಮಾತುಗಳು ಜಿಲ್ಲೆಯಲ್ಲಿ ಕೇಳಿ ಬರುತ್ತಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement