ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಡಿಸಿ, ಪಿಡಬ್ಲ್ಯುಡಿಗೆ ಕಾರಣ ಕೇಳಿ ನೋಟಿಸ್

Srinivasa Murthy VN
Updated On : 25 Mar 2014, 10:58 am

ಕನ್ನಡಪ್ರಭ ವಾರ್ತೆ, ಗದಗ, ಮಾ. 24
ಈಚೆಗೆ ಗದಗ ಜಿಲ್ಲಾ ಆಡಳಿತ ಭವನದ ಮುಂಭಾಗದಲ್ಲಿ ನಿರ್ಮಿಸಲಾದ ಕಾಂಪೌಂಡ್ ನಿರ್ಮಾಣ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ನಡೆಸದೇ ಕಾಮಗಾರಿಯಲ್ಲಿ ಅಕ್ರಮವೆಸಗಿದ್ದಾರೆ ಎನ್ನುವ ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಈಗಾಗಲೇ ಕಡತ ಪರಿಶೀಲನೆ ಮಾಡಿದ್ದು, ಜಿಲ್ಲಾಧಿಕಾರಿ ಮತ್ತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ನೀಡಲಾಗಿದೆ ಎಂದು ರಾಜ್ಯ ಉಪ ಲೋಕಾಯುಕ್ತ ಸುಭಾಷ ಆದಿ ಹೇಳಿದರು.
ಸೋಮವಾರ ನಗರದ ಪ್ರವಾಸಿ ಮಂದಿರದಲ್ಲಿ ಜರುಗಿದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದರು.
ಗದಗ ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ನಿರ್ಮಿಸಲಾಗಿರುವ ಕಾಂಪೌಂಡ್ ನಿರ್ಮಾಣ ಕಾಮಗಾರಿಗೆ ಯಾವುದೇ ರೀತಿಯ ಟೆಂಡರ್ ಕರೆಯದೇ ಕಾಮಗಾರಿಯಲ್ಲಿ ಅಕ್ರಮ ಎಸಲಾಗಿದೆ ಎಂದು ಎಂ.ಎಂ. ಮುಗಳಿ ಹಾಗೂ ಶಾಬಾಹುಸೇನ್ ಕೊಪ್ಪಳ ಎಂಬುವರು ದೂರು ನೀಡಿದ್ದರು. ದೂರಿಗೆ ಸ್ಪಂದಿಸಿ ಈ ಕುರಿತು ಸಂಬಂಧಿಸಿದ ಕಡತಗಳನ್ನು ಪರಿಶೀಲಿಸಲಾಗಿದೆ. ಗದಗ ಜಿಲ್ಲಾಡಳಿತ ಭವನದ ಮುಂಭಾಗದ ಗ್ರೀಲ್ ಕಾಂಪೌಂಡ್ ನಿರ್ಮಾಣ ಕಾಮಗಾರಿಗೆ ಅಂದಾಜು ರು. 30 ಲಕ್ಷ ವೆಚ್ಚದ್ದಾಗಿದ್ದು, ಈ ಬಗ್ಗೆ ಅಂದಾಜು ಪಟ್ಟಿ ತಯಾರಿಸಿಲ್ಲ. ಕೆಟಿಟಿಪಿ ಕಾಯ್ದೆ 2000ರ ಪ್ರಕಾರ ನಿರ್ಮಾಣ, ರಿಪೇರಿ, ನಿರ್ವಹಣೆ ಮತ್ತು ಇತರೆ ಕಾಮಗಾರಿಗಳ ವೆಚ್ಚ ರು. 5 ಲಕ್ಷಗಳಿಗಿಂತ ಮೇಲ್ಪಟ್ಟಿದ್ದರೆ ಈ ಕಾಯ್ದೆ ಮಾರ್ಗಸೂಚಿ ಅನ್ವಯ ಟೆಂಡರ್ ಪ್ರಕ್ರಿಯೆ ಮೂಲಕ ಕಾಮಗಾರಿಯನ್ನು ಗುತ್ತಿಗೆದಾರರಿಗೆ ವಹಿಸಿ, ಕಾಮಗಾರಿ ಅನುಷ್ಠಾನಗೊಳಿಸಬೇಕಾಗುತ್ತದೆ.
ಆದರೆ, ಕಾಮಗಾರಿಯಲ್ಲಿ ಟೆಂಡರ್ ಪ್ರಕ್ರಿಯೆ ಜರುಗಿಸಿದೇ ಪೂರ್ಣಗೊಳಿಸಲಾಗಿದೆ. ಈ ಕುರಿತು ಜಿಲ್ಲಾಧಿಕಾರಿಗೆ ವಿಚಾರಿಸಿದ್ದು, ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ 29-6-2013ರಂದು ನಡೆದ ಸಭೆಯ ನಡುವಳಿಯಲ್ಲಿ ಈ ಕಾಮಗಾರಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದ್ದಾರೆ. ಅಲ್ಲದೇ ಜಿಲ್ಲಾಧಿಕಾರಿ ಗದಗ ಜಿಲ್ಲಾಡಳಿತ ಭವನ ಕಟ್ಟಡ 2013-14ನೇ ಸಾಲಿನ ನಿರ್ವಹಣೆಗಾಗಿ ರು. 140 ಲಕ್ಷ ಅನುದಾನ ಬಿಡುಗಡೆಗೊಳಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಅದರಂತೆ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಜಿಲ್ಲಾಡಳಿತ ಭವನದ 2013-14ನೇ ಸಾಲಿನ ಕಟ್ಟಡ ನಿರ್ವಹಣೆಗಾಗಿ ರು. 200 ಲಕ್ಷ ಅನುದಾನ ನೀಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದು, ಆದರೆ, ಸರ್ಕಾರ ಅನುದಾನ ಬಿಡುಗಡೆಗೊಳಿಸಿಲ್ಲ.
ಈ ಪ್ರಕ್ರಿಯೆಯಲ್ಲಿ ಜಿಲ್ಲಾಧಿಕಾರಿ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಕಾಮಗಾರಿ ಕುರಿತು ಯಾವುದೇ ಟೆಂಡರ್ ನೀಡದೇ ಲೋಪವನ್ನೆಸಗಿದ್ದು ಮೇಲ್ನೋಟಕ್ಕೆ ಕಂಡುಬಂದಿದೆ. ಈ ಕುರಿತು ಸಮರ್ಪಕ ಉತ್ತರ ನೀಡುವಂತೆ ಜಿಲ್ಲಾಧಿಕಾರಿಗೆ ಹಾಗೂ ಪಿಡಬ್ಲ್ಯುಡಿ ಎಂಜನಿಯರ್‌ಗೆ ಕಾರಣ ಕೇಳಿ ನೋಟಿಸ್ ನೀಡಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಧಾರವಾಡ ಲೋಕೋಯುಕ್ತ ಎಸ್ಪಿ ಪರಶುರಾಮ ಉಪಸ್ಥಿತರಿದ್ದರು.

ಗದಗ ಜಿಲ್ಲಾಡಳಿತ ಭವನ ಮುಂಭಾಗದಲ್ಲಿ ನಿರ್ಮಿಸಲಾಗಿರುವ ಕಾಂಪೌಂಡ್ ನಿರ್ಮಾಣ ಕಾಮಗಾರಿಗೆ ಯಾವುದೇ ರೀತಿಯ ಟೆಂಡರ್ ಕರೆಯದೇ ಕಾಮಗಾರಿಯಲ್ಲಿ ಅಕ್ರಮ ಎಸಲಾಗಿದೆ ಎಂದು ಎಂ.ಎಂ. ಮುಗಳಿ ಹಾಗೂ ಶಾಬಾಹುಸೇನ್ ಕೊಪ್ಪಳ ಎಂಬುವರು ದೂರು ನೀಡಿದ್ದರು. ದೂರಿಗೆ ಸ್ಪಂದಿಸಿ ಈ ಕುರಿತು ಸಂಬಂಧಿಸಿದ ಕಡತಗಳನ್ನು ಪರಿಶೀಲಿಸಲಾಗಿದೆ.
- ಸುಭಾಷ ಆದಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement