ಮತ ಚಲಾಯಿಸಲು ಪ್ರೇರೇಪಿಸಿ
ಕನ್ನಡಪ್ರಭ ವಾರ್ತೆ ಗದಗ ಮಾ. 24
ಪ್ರತಿಯೊಬ್ಬರೂ ತಪ್ಪದೇ ಮತ ಚಲಾಯಿಸುವಂತೆ ಪ್ರೇರೇಪಿಸುವ ಜತೆಗೆ ಮತದಾರರು ಮತದಾನಕ್ಕೆ ಬಂದಾಗ ಸರಿಯಾದ ಮಾಹಿತಿ ಒದಗಿಸಬೇಕು ಎಂದು ಜಿಲ್ಲಾಧಿಕಾರಿ ಎನ್.ಎಸ್. ಪ್ರಸನ್ನಕುಮಾರ ಹೇಳಿದರು.
ಸೋಮವಾರ ನಗರದ ನಗರಸಭೆ ಸಭಾಂಗಣದಲ್ಲಿ ಜರುಗಿದ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಎಲ್ಲೆಲ್ಲಿ ಹಿಂದಿನ ಚುನಾವಣೆಯಲ್ಲಿ ಕಡಿಮೆ ಮತದಾನ ಆಗಿದೆಯೋ ಅಂಥ ಬೂತ ವ್ಯಾಪ್ತಿಯಲ್ಲಿ ಹೆಚ್ಚಿನ ಗಮನ ಹರಿಸಿ ಕಡಿಮೆ ಮತದಾನವಾದ ಕಾರಣಗಳಿದ್ದರೆ ಆ ಕುರಿತು ಆಯಾ ಗ್ರಾಪಂ ಅಧಿಕಾರಿ ಅಥವಾ ನಗರ, ಪುರಸಭೆ ಮುಖ್ಯಾಧಿಕಾರಿಗಳು, ಆಯುಕ್ತರ ಗಮನಕ್ಕೆ ತರಬೇಕು. ಈ ಬಾರಿ ಅಂಥ ಪ್ರದೇಶಗಳಿಂದ ಹೆಚ್ಚಿನ ಮತದಾನ ಆಗುವಂತೆ ತಮ್ಮ ಮತದಾನ ಕೇಂದ್ರ ವ್ಯಾಪ್ತಿಯ ಮನೆ ಮನೆಗಳಿಗೆ ಭೇಟಿ ನೀಡಿ ಮನವೊಲಿಸಬೇಕು ಎಂದರು.
ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಹಾಗೂ ಜಿಪಂ ಸಿಇಒ ವೀರಣ್ಣ ತುರಮರಿ ಮಾತನಾಡಿ, ಈಗಾಗಲೇ ಜಿಲ್ಲೆಯ ಎಲ್ಲ ಗ್ರಾಪಂ ವ್ಯಾಪ್ತಿಯಲ್ಲಿ ಮತದಾರ ಜಾಗೃತಿ ಕಾರ್ಯಕ್ರಮಗಳನ್ನು ಜರುಗಿಸಲಾಗುತ್ತಿದೆ. ಪ್ರಚಾರ ಭಿತ್ತಿಗಳ ಪ್ರದರ್ಶನ, ಧ್ವನಿವರ್ಧಕಗಳ ಬಳಕೆ, ವಿದ್ಯಾರ್ಥಿಗಳಿಂದ ಸೈಕಲ್ ಜಾಥಾ, ಪ್ರಭಾತ ಪೇರಿ ಜತೆ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ನಗರ, ಗ್ರಾಮಗಳ ಹಿರಿಯರು, ವಿದ್ಯಾರ್ಥಿಗಳು ಮಾನವ ಸರಪಳಿ ಕಾರ್ಯಕ್ರಮ ಜರುಗಿಸಲಾಗುತ್ತಿದೆ. ಗದಗ ನಗರದಲ್ಲಿ ಮಾನವ ಸರಪಳಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದ್ದು, ಇದೇ ರೀತಿ ತಾಲೂಕು ಹಾಗೂ ಗ್ರಾಮ ಮಟ್ಟದಲ್ಲೂ ಮಾನವ ಸರಪಳಿ ವಿಶಿಷ್ಟ ಕಾರ್ಯಕ್ರಮ ಮೂಲಕ ಮತದಾರರ ಜಾಗೃತಿಗೆ ಕ್ರಮ ಜರುಗಿಸಲಾಗುತ್ತಿದೆ.
ಜಿಲ್ಲಾ ಸ್ವೀಪ್ ಸಮಿತಿ ಜತೆಗೆ ಆಯಾ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿಗಳ ಅಧ್ಯಕ್ಷತೆಯ ತಾಲೂಕು ಸ್ವೀಪ್ ಸಮಿತಿಗಳು ಮೇಲ್ವಿಚಾರಣೆ ಹಾಗೂ ತಾಲೂಕಿನಲ್ಲಿಯ ಮತದಾರ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುವ ಹೊಣೆಗಾರಿಕೆ ಹೊಂದಿವೆ. ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಮತದಾರರಿಗೆ ಹತ್ತಿರದವರಾಗಿರುವುದರಿಂದ ಎಲ್ಲ ಮತದಾರರು ಬರುವ ಲೋಕಸಭಾ ಚುನಾವಣೆಯಲ್ಲಿ ಮತ ಚಲಾಯಿಸುವಂತೆ ನೋಡಿಕೊಳ್ಳಬೇಕೆಂದರು.
ನಂತರ ನಗರದ ಗಾಂಧಿ ವೃತ್ತದಲ್ಲಿ ಮತದಾರರು ಬರುವ ಲೋಕಸಭಾ ಚುನಾವಣೆಯಲ್ಲಿ ತಪ್ಪದೇ ಮತ ಚಲಾಯಿಸುವಂತೆ ಆಗ್ರಹಿಸುವ ಜನಜಾಗೃತಿಯ ಗದಗ ಜಿಲ್ಲಾ ಸ್ವೀಪ್ ಸಮಿತಿಯ ಮಾನವ ಸರಪಳಿ ನಿರ್ಮಿಸಲಾಯಿತು. ಈ ಸಂದರ್ಭ ಜಿಪಂ ಯೋಜನಾಧಿಕಾರಿ ಟಿ. ದಿನೇಶ, ತಾಪಂ ಇಒ ರೇವಣ್ಣ, ಬಿಇಒ ಬೆನಕೊಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.