ಸ್ಕೌಟ್ ವಿದ್ಯಾರ್ಥಿಗಳಿಂದ ಸ್ವಚ್ಛತಾ ಕಾರ್ಯ
ಲಕ್ಷ್ಮೇಶ್ವರ: ಸಮೀಪದ ಶಿಗ್ಲಿ ಗ್ರಾಮದಲ್ಲಿ ಸ್ಕೌಟ್ ಮತ್ತು ಗೌಡ್ಸ್ನ ಸೇವಾರ್ಥಿಗಳು ಶನಿವಾರ ಸ್ವಚ್ಛತಾ ಆಂದೋಲನ ಹಮ್ಮಿಕೊಂಡು ಗ್ರಾಮದ ವಿವಿಧ ಸ್ಥಳಗಳಲ್ಲಿ ಕಸ ಗೂಡಿಸುವ ಹಾಗೂ ತ್ಯಾಜ್ಯ ವಸ್ತುಗಳನ್ನು ಆರಿಸಿ ಗ್ರಾಮ ಸ್ವಚ್ಛವಾಗಿಡುವ ಮೂಲಕ ಸಾರ್ವಜನಿಕರಲ್ಲಿ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಿದರು.
ಈ ಸಂದರ್ಭ ಭಾರತ ಸ್ಕೌಟ್ ಮತ್ತು ಗೈಡ್ಸ್ನ ಶಿರಹಟ್ಟಿ ತಾಲೂಕು ಕಾರ್ಯದರ್ಶಿ ಕೆ.ಆರ್. ಲಮಾಣಿ ಮಾತನಾಡಿ, ಮಕ್ಕಳಲ್ಲಿ ಸ್ವಚ್ಛತೆ ಬಗ್ಗೆ ಅರಿವು ಮೂಡಿಸುವ ಜತೆಯಲ್ಲಿ ಸಾರ್ವಜನಿಕರಿಗೂ ಕಸವನ್ನು ಎಲ್ಲಿ ಬೇಕೆಂದರಲ್ಲಿ ಚೆಲ್ಲದೆ ಕಸದ ತೊಟ್ಟಿಯಲ್ಲಿ ಹಾಕುವಂತೆ ಮನವಿ ಮಾಡುವುದು, ಜತೆಗೆ ಕಸ ಹೇಗೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂಬ ಬಗ್ಗೆ ತಿಳಿವಳಿಕೆ ನೀಡುವ ಕಾರ್ಯ ಮಾಡಲಾಯಿತು. ಅಲ್ಲದೇ ಟ್ರಾಫಿಕ್ನಲ್ಲಿ ಮಕ್ಕಳು ಹೇಗೆ ಸಂಚರಿಸಬೇಕು, ಯಾವ ಯಾವ ಸಿಗ್ನಲ್ಗಳು ಯಾವ ರೀತಿಯಾಗಿ ಕಾರ್ಯ ನಿರ್ವಹಿಸುತ್ತವೆ ಎನ್ನುವ ಕುರಿತು ಮಾಹಿತಿ ನೀಡಲಾಯಿತು.
ಪಶು ಆಸ್ಪತ್ರೆಯಲ್ಲಿ ಮಕ್ಕಳಿಗೆ, ಜಾನುವಾರುಗಳಿಗೆ ಬರುವ ರೋಗಗಳ ಬಗ್ಗೆ ತಿಳಿವಳಿಕೆ ಮೂಡಿಸುವುದು ಹಾಗೂ ಅವುಗಳಿಗೆ ಪ್ರಥಮ ಚಿಕಿತ್ಸೆಯನ್ನು ಹೇಗೆ ನೀಡಬೇಕು ಎನ್ನುವ ಬಗ್ಗೆ ತಿಳಿವಳಿಕೆ ನೀಡುವ ಕಾರ್ಯವನ್ನು ಶಿಗ್ಲಿಯ ಪಶು ವೈದ್ಯಾಧಿಕಾರಿ ಡಾ. ಸಜ್ಜನರ ಅವರಿಂದ ಮಾಹಿತಿ ನೀಡುವ ಕಾರ್ಯವನ್ನು ಮಾಡಲಾಯಿತು. ಈ ಸಂದರ್ಭ ರಾಮಗೇರಿ ಸರ್ಕಾರಿ ಪೌಢಶಾಲೆಯ ಸ್ಕೌಟ್ ಮತ್ತು ಗೌಡ್ಸ್ನ ಶಿಕ್ಷಕ ಡಿ.ಆರ್. ಗೋಂದಕರ, ಸಹಾಯಕ ಬಿ.ಬಿ. ಚಿಟಗಿ ಮುಂತಾದವರು ಉಪಸ್ಥಿತರಿದ್ದರು.