ಮತದಾನದಿಂದ ಯಾರೂ ವಿಮುಖರಾಗಬೇಡಿ: ರವಿ
ಲಕ್ಷ್ಮೇಶ್ವರ: ಪ್ರಜಾಪ್ರಭುತ್ವದ ಮಹತ್ವದ ಘಟ್ಟವೆ ಚುನಾವಣೆಯಾಗಿದೆ. ನಮ್ಮನ್ನು ಆಳುವವರ ಕರ್ತವ್ಯಗಳೇನು? ಅವರು ಮಾಡುವ ಜವಾಬ್ದಾರಿಗಳೇನು? ಎನ್ನುವ ಕಲ್ಪನೆ ಇಟ್ಟುಕೊಂಡು ನಾವು ಮತವನ್ನು ಚಲಾಯಿಸಬೇಕಾಗಿದೆ ಎಂದು ಸರ್ಕಾರಿ ಪ್ರೌಢಶಾಲೆಯ ಮುಖ್ಯಾಧ್ಯಾಪಕ ರವಿ ಬೆಂಚಳ್ಳಿ ಅಭಿಪ್ರಾಯಪಟ್ಟರು.
ಸಮೀಪದ ಗೊಜನೂರು ಗ್ರಾಪಂನ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಮತದಾರರ ಜಾಗೃತಿ ಆಂದೋಲನ ಉದ್ಘಾಟಿಸಿ ಅವರು ಮಾತನಾಡಿದರು. ಪ್ರಜಾಪ್ರಭುತ್ವದ ಭದ್ರವಾದ ಬುನಾದಿಯು ಚುನಾವಣೆಯಾಗಿದ್ದು ನಮ್ಮ ಮತ ಚಲಾಯಿಸುವ ಮುನ್ನ ಹಲವು ಬಾರಿ ಯೋಚನೆ ಮಾಡಿ ಯೋಗ್ಯ ಅಭ್ಯರ್ಥಿಗೆ ಮತವನ್ನು ನೀಡಬೇಕು, ಯಾವುದೇ ಆಸೆ ಆಮಿಷಗಳಿಗೆ ಬಲಿಯಾಗದೇ ಮತ ಹಾಕಬೇಕು ಎಂದರು.
ಇದೇ ಸಂದರ್ಭ ಗ್ರಾಪಂ ಪಿಡಿಓ ಎನ್.ಎಫ್. ನದಾಫ್ ಹಾಗೂ ಗ್ರಾಮಲೆಕ್ಕಾಧಿಕಾರಿ ಜಗದೀಶ ಕುರಬರ, ಪಂಚಾಯತಿಯ ಇತರೆ ಸಿಬ್ಬಂದಿ ಹಾಜರಿದ್ದರು. ಗ್ರಾಮದ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ವಿದ್ಯಾರ್ಥಿಗಳು ಮಾನವ ಸರಪಳಿ ನಿರ್ಮಿಸುವುದು, ಸೈಕಲ್ ಜಾಥಾ ಮಾಡುವ ಮೂಲಕ ಸಾರ್ವಜನಿಕರಲ್ಲಿ ಮತ ಜಾಗೃತಿ ಮೂಡಿಸುವ ಕಾರ್ಯವನ್ನು ಯಶಸ್ವಿಯಾಗಿ ಮಾಡಲಾಯಿತು.