ಇಂದು ಎಸ್ಸೆಸ್ಸೆಲ್ಸಿ ಪರೀಕ್ಷೆ: ಪರಿಶೀಲನೆ
ಗಜೇಂದ್ರಗಡ: ವಿದ್ಯಾರ್ಥಿ ಜೀವನದ ಮಹತ್ವದ ಘಟ್ಟವೆನಿಸಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆ ಮಾ. 28ರಿಂದ ರಾಜ್ಯಾದ್ಯಂತ ಆರಂಭಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಗುರುವಾರ ಕ್ಷೇತ್ರ ಶಿಕ್ಷಣಾಧಿಕಾರಿ ಡಿ.ಐ. ಅಸುಂಡಿ ಪಟ್ಟಣ ಸೇರಿ ಇತರೆ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಥಳಿಯ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ 412 ಹಾಗೂ ಎಸ್.ಎಂ. ಭೂಮರಡ್ಡಿ ಸಂಯುಕ್ತ ಪ್ರೌಢಶಾಲೆಯಲ್ಲಿ 429 ವಿದ್ಯಾರ್ಥಿಗಳು ಕನ್ನಡ ಹಾಗೂ ಉರ್ದು ಪರೀಕ್ಷೆ ಬರೆಯಲಿದ್ದಾರೆ. ಗೊಗೇರಿ, ರಾಜೂರು, ಕುಂಟೋಜಿ, ದಿಂಡೂರ, ಕಾಲಕಾಲೇಶ್ವರ, ಮುರಾರ್ಜಿ, ರಾಣಿಚನ್ನಮ್ಮ ಸೇರಿದಂತೆ ಪಟ್ಟಣದ ಕೆ.ಎಸ್.ಎಸ್, ಜೆಟಿಪಿಎಸ್, ವಿ.ಟಿ. ರಾಯಬಾಗಿ ಪ್ರೌಢಶಾಲೆ ವಿದ್ಯಾರ್ಥಿಗಳು ಈ ಎರಡು ಕೇಂದ್ರ ವ್ಯಾಪ್ತಿಯಲ್ಲಿ ಪರೀಕ್ಷೆ ಬರೆಯಲಿದ್ದಾರೆ. ತಾಲೂಕಿನ ಒಟ್ಟು 11 ಕೇಂದ್ರಗಳಲ್ಲಿ 3396 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು, ಪ್ರತಿ ಪರೀಕ್ಷಾ ಕೇಂದ್ರದಲ್ಲಿ ಇಬ್ಬರು ಸಿಟ್ಟಿಂಗ್ ಸ್ಕ್ವಾಡ್ ಕಾರ್ಯ ನಿರ್ವಹಿಸುವರು. ಪ್ರಶ್ನೆಪತ್ರಿಕೆ ವಿತರಣೆಗಾಗಿ 5 ಮಾರ್ಗ ರೂಪಿಸಲಾಗಿದೆ. ಜತೆಗೆ ಪರೀಕ್ಷೆಯಲ್ಲಿ ಅಕ್ರಮ ತಡೆಗಟ್ಟಲು ಮುಂಜಾಗ್ರತಾ ಕ್ರಮವಾಗಿ ಗಜೇಂದ್ರಗಡ, ರೋಣ, ನರೇಗಲ್, ಹೊಳೆಆಲೂರ ಕೇಂದ್ರಗಳಲ್ಲಿ ಪರೀಕ್ಷಾ ಅಕ್ರಮ ನಿಗ್ರಹ ಪಡೆ ರಚಿಸಲಾಗಿದೆ. ಪರೀಕ್ಷಾ ಕೇಂದ್ರದಿಂದ 200 ಮೀಟರ್ ಪ್ರತಿಬಂಧಕಾಜ್ಞೆ ವಿಧಿಸಲಾಗಿದೆ. ಈ ಸ್ಥಳದಲ್ಲಿ ಝರಾಕ್ಸ್ ಸೆಂಟರ್‌ನಂತಹ ಯಾವುದೇ ನಕಲು ಅಕ್ರಮಗಳಿಗೆ ಪ್ರೋತ್ಸಾಹಿಸುವಂತಹ ಅಂಗಡಿಗಳನ್ನು ಬಂದ್ ಮಾಡಿಸಲಾಗುವುದು ಎಂದ ಅವರು, ಚುನಾವಣೆ ನೀತಿ ಸಂಹಿತೆ ಇರುವುದರಿಂದ ಪರೀಕ್ಷಾ ಕೇಂದ್ರಗಳಿಗೆ ವಿಶೇಷ ಭದ್ರತೆ ಒದಗಿಸಲಾಗಿದೆ ಎಂದರು. ಮುಖ್ಯೋಪಾಧ್ಯಾಯ ಡಿ.ಜಿ. ತಾಳಿಕೋಟಿ, ಎಸ್.ಎಫ್. ಜಾಲಿಹಾಳ, ಎಂ.ಡಿ. ಸರಕಾವಸ, ಎಂ.ಟಿ. ಕುಲಕರ್ಣಿ ಇದ್ದರು.