ಎಸ್ಸೆಸ್ಸೆಲ್ಸಿ ಪರೀಕ್ಷೆ: ನಕಲು ತಡೆಗೆ ಅಗತ್ಯ ಕ್ರಮ
ರೋಣ: ಮಾ. 28ರಿಂದ ಏ. 9ರ ವರಗೆ ತಾಲೂಕಿನಲ್ಲಿ ನಡೆಯಲಿರುವ ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಯಾವುದೇ ರೀತಿಯ ನಕಲು ಚೀಟಿ, ವಗೈರೆ ನಡೆಯದಂತೆ ಶಾಂತಿಯುತವಾಗಿ ನಡೆಯಲು ಮುಂಜಾಗ್ರತ ಕ್ರಮ ಕೈಗೊಳ್ಳಲಾಗಿದ್ದು, ಇದಕ್ಕಾಗಿ ತಾಲೂಕು ಮಟ್ಟದ ಜಾಗೃತ ದಳ ನೇಮಿಸಲಾಗಿದೆ. ಆ ಮೂಲಕ ನಕಲಿಗೆ ಆಸ್ಪದ ನೀಡದಂತೆ ಸೂಕ್ತ ಬಂದೋಬಸ್ತ್ ಏರ್ಪಡಿಸಲಾಗುವುದು ಎಂದು ಬಿಇಒ ಡಿ.ಐ. ಅಸುಂಡಿ ತಿಳಿಸಿದರು.
ಈ ಕುರಿತು ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಲೂಕಿನ 11 ಕೇಂದ್ರಗಳಲ್ಲಿ ಪರೀಕ್ಷೆಗಳು ಜರುಗಲು ಅವಕಾಶ ಕಲ್ಪಿಸಿದ್ದು, ಕಳೆದ ಬಾರಿ ಅನುತ್ತೀರ್ಣರಾದ 82 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 3396 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು, ಇದರಲ್ಲಿ 1881 ಗಂಡು, 1515 ಹೆಣ್ಣು ಮಕ್ಕಳು ಪರೀಕ್ಷೆ ಬರೆಯಲಿದ್ದಾರೆ. ತಾಲೂಕಿನ 11 ಪರೀಕ್ಷಾ ಕೆಂದ್ರಗಳ ಪೈಕಿ ರೋಣ ಪಟ್ಟಣದಲ್ಲಿ 3 ಕೇಂದ್ರ, ನರೇಗಲ್ನಲ್ಲಿ 2 ಕೇಂದ್ರ, ಗಜೇಂದ್ರಗಡದಲ್ಲಿ 2 ಕೇಂದ್ರ, ಮುಸಿಗೇರಿಯಲ್ಲಿ 1 ಕೇಂದ್ರ, ಬೆಳವಣಕಿಯಲ್ಲಿ 1 ಕೇಂದ್ರ, ಹೊಳೆಆಲೂರಿನಲ್ಲಿ 1 ಕೇಂದ್ರ ಮತ್ತು ಸೂಡಿಯಲ್ಲಿ 1 ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.
ನಕಲಿಗೆ ಆಸ್ಪದವಿಲ್ಲ: ಯಾವುದೇ ಕೇಂದ್ರದಲ್ಲಿ ನಕಲಿಗೆ ಆಸ್ಪದ ನೀಡದಂತೆ ಹಾಗೂ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ಶಾಂತಿಯುತವಾಗಿ ಪರೀಕ್ಷೆಗಳು ಜರುಗುವಂತೆ ವ್ಯವಸ್ಥೆ ಕೈಗೊಳ್ಳಲಾಗಿದೆ. ಪರೀಕ್ಷಾ ಕೇಂದ್ರದಲ್ಲಿ ಯಾವುದೇ ರೀತಿ ನಕಲು ನಡೆದಲ್ಲಿ, ನಕಲಿಗೆ ಸಹಕಾರ ನೀಡಿದ ಪರೀಕ್ಷಾ ಕೊಠಡಿ ಮೇಲ್ವಿಚಾರಕರು ಮತ್ತು ಮುಖ್ಯ ಅಧೀಕ್ಷಕರ ಮೇಲೆ ಕ್ರಮ ಜರುಗಿಸಲಾಗುವುದು. ಪ್ರತಿಯೊಂದು ಪರೀಕ್ಷಾ ಕೇಂದ್ರದಲ್ಲಿ ನಕಲು ತಡೆ ಜಾಗೃತ ದಳ ನಿಯೋಜಿಸಲಾಗಿದೆ. ಅಲ್ಲದೆ, ಯಾವುದೇ ಅಹಿತಕರ ಘಟನೆ ನಡೆಯದಂತೆ ಶಾಂತಿ ಕಾಪಾಡುವಲ್ಲಿ ಪ್ರತಿಯೊಂದು ಕೇಂದ್ರದಲ್ಲಿ ಇಬ್ಬರು ಮುಖ್ಯ ಪೊಲೀಸ್ ಪೇದೆ, 6 ಜನ ಪೊಲೀಸ್ ಪೇದೆ ನೇಮಿಸಲಾಗಿದೆ ಎಂದರು. ನಕಲು ತಡೆ ಮತ್ತು ಶಾಂತಿಯುವ ಪರೀಕ್ಷೆ ನಡೆಸುವಲ್ಲಿ ತಹಸೀಲ್ದಾರ್ ಎ.ಜಿ. ಪಂಡಿತ, ತಾಪಂ ಇಒ ಎಸ್.ಎಂ. ಪಿಡಶೆಟ್ಟಿ, ಬಿಇಓ ಡಿ.ಐ. ಅಸುಂಡಿ ಮತ್ತು ಸಿಪಿಐ ವೆಂಕಟಪ್ಪ ನಾಯಕ ಇವರ ನೇತೃತ್ವದಲ್ಲಿ ತಾಲೂಕು ಮಟ್ಟದ ಜಾಗೃತ ದಳ ನೇಮಿಸಲಾಗಿದೆ. ಆ ಮೂಲಕ ತಂಡವು ಪ್ರತಿಯೊಂದು ಕೇಂದ್ರಕ್ಕೆ ಭೇಟಿ ನೀಡಲಿದೆ. ಅಗತ್ಯ ಪೊಲೀಸ್ ಸಿಬ್ಬಂದಿ ನೇಮಕಗೊಳಿಸುವಲ್ಲಿ ಪೊಲೀಸ್ ಇಲಾಖೆಗೆ ತಿಳಿಸಲಾಗಿದೆ ಎಂದು ಬಿಇಒ ಡಿ.ಐ.ಅಸುಂಡಿ ಕನ್ನಡಪ್ರಭಕ್ಕೆ ತಿಳಿಸಿದರು.
ಗದಗದಲ್ಲಿ ಮಾನವ ಸರಪಳಿ: ಸೈಕಲ್ ಜಾಥಾ
ಗದಗ: ನಗರದ ವಿವಿಧ ಪ್ರೌಢಶಾಲೆಗಳ ವಿದ್ಯಾರ್ಥಿಗಳು ಗುರುವಾರ ನಗರದಲ್ಲಿ ಮಾನವ ಸರಪಳಿ ಹಾಗೂ ಸೈಕಲ್ ಜಾಥಾಗಳ ಮೂಲಕ ಲೋಕಸಭಾ ಚುನಾವಣೆಯಲ್ಲಿ ತಪ್ಪದೇ ಮತ ಚಲಾಯಿಸುವಂತೆ ಮನವಿ ಮಾಡಿದರು. ನಗರದ ಭೂಮರೆಡ್ಡಿ ವೃತ್ತದಲ್ಲಿ ವಿದ್ಯಾದಾನ ಸಮಿತಿ ಪ್ರೌಢಶಾಲೆ ಬಾಲಕ ಬಾಲಕಿಯರು, ತೋಂಟದಾರ್ಯ ಮಠದ ಪ್ರೌಢಶಾಲೆ, ಕೆ.ಎಚ್. ಪಾಟೀಲ ಹಾಗೂ ಲಯನ್ಸ್ ಪ್ರೌಢಶಾಲೆಗಳ ಸುಮಾರು 600 ವಿದ್ಯಾರ್ಥಿಗಳು ಮಾನವ ಸರಪಳಿ ನಿರ್ಮಿಸಿ ಅರ್ಹ ಮತದಾರರು ಬರುವ ಲೋಕಸಭಾ ಚುನಾವಣೆಯಲ್ಲಿ ಮತ ಚಲಾಯಿಸುವ ಘೋಷಣೆ ಕೂಗಿದರು. ನಗರಸಭೆ ಆಯುಕ್ತ ಎಂ.ಬಿ. ನಡುವಿನಮನಿ, ಡಿಡಿಪಿಐ ರಾಜೇಂದ್ರ ಪ್ರಸಾದ, ಗದಗ ಶಹರದ ಕ್ಷೇತ್ರ ಶಿಕ್ಷಣಾಧಿಕಾರಿ ಐ.ಬಿ. ಬೆನಕೊಪ್ಪ ಭಾಗವಹಿಸಿದ್ದರು. ಬೆಟಗೇರಿ ಬಸ್ ನಿಲ್ದಾಣದಲ್ಲಿ ಶರಣ ಬಸವೇಶ್ವರ ಪ್ರೌಢಶಾಲೆ, ಬಾಸೆಲ್ ಮಿಶನ್, ಲೋಯಲಾ ಹಾಗೂ ಮಹಾರಾಣಾ ಪ್ರತಾಪ ಪ್ರೌಢಶಾಲೆಗಳ ವಿದ್ಯಾರ್ಥಿಗಳು ಮತದಾರರಲ್ಲಿ ಜಾಗೃತಿ ಮೂಡಿಸಿದರು.