ಶೌಚಾಲಯವಾದ ಹಳೆ ತಹಸೀಲ್ದಾರ್ ಕಚೇರಿ
-ಶರಣು ಸೊಲಗಿ
ಮುಂಡರಗಿ: ಒಂದು ಕಾಲದಲ್ಲಿ ಇಡೀ ತಾಲೂಕಿನ ಜನಜಂಗುಳಿಯಿಂದ ತುಂಬಿ ತುಳುಕುತ್ತಿದ್ದ ಪಟ್ಟಣದ ಮಧ್ಯ ಭಾಗದಲ್ಲಿರುವ ಹಳೆ ತಹಸೀಲ್ದಾರ್ ಕಚೇರಿ ಆವರಣ ಇಂದು ಸಾಮೂಹಿಕ ಶೌಚಾಲಯ, ಸಾರ್ವಜನಿಕ ಮೂತ್ರಾಲಯವಾಗಿ ಬದಲಾಗಿದ್ದು, ನಿತ್ಯ ಗಬ್ಬು ವಾಸನೆ ಬೀರುತ್ತಿದೆ. ಅಕ್ಕಪಕ್ಕದ ಅಂಗಡಿಯವರು, ಮನೆಯವರು, ತರಕಾರಿ ವ್ಯಾಪಾರಸ್ಥರು ಸಾಂಕ್ರಾಮಿಕ ರೋಗಗಳ ಭೀತಿಯಲ್ಲಿದ್ದಾರೆ.
ಈ ಮೊದಲು ತಹಸೀಲ್ದಾರ್ ಕಚೇರಿ ಹಾಗೂ ಪೊಲೀಸ್ ಠಾಣೆ ಎರಡೂ ಒಂದೇ ಆವರಣದಲ್ಲಿ ಕಾರ್ಯನಿರ್ವಹಿಸುತ್ತಿದ್ದವು. ನಂತರ ಠಾಣೆಯ ಹೊಸ ಕಟ್ಟಡಕ್ಕೆ ಸ್ಥಳಾಂತರ ಗೊಂಡಿತು. ನಂತರ ಇಲ್ಲಿ ತಾಲೂಕು ಆಡಳಿತ ನಡೆಸುವ ತಹಸೀಲ್ದಾರ್ ಕಚೇರಿ ಮಾತ್ರ ಇತ್ತು. ಕಚೇರಿ ಇಲ್ಲಿ ಕಾರ್ಯನಿರ್ವಹಿಸುವ ವರೆಗೆ ಸುಂದರ ಹಾಗೂ ಸ್ವಚ್ಛವಾಗಿತ್ತು. ನಂತರದ ದಿನಗಳಲ್ಲಿ ಮುಂಡರಗಿಯಲ್ಲಿ ಮಿನಿ ವಿಧಾನಸೌಧ ಕಟ್ಟಡದ ಕಾಮಗಾರಿ ಪೂರ್ಣಗೊಂಡು ಅಲ್ಲಿದ್ದ ತಹಸೀಲ್ದಾರ ಕಚೇರಿಯೂ ಎತ್ತಂಗಡಿಯಾಯಿತು. ಅಂದಿನಿಂದ ಇಂದಿನ ವರೆಗೂ ತಾಲೂಕು ಅಧಿಕಾರಿಗಳಾಗಲಿ, ಪುರಸಭೆ ಅಧಿಕಾರಿಗಳಾಗಲಿ ತಿರುಗಿ ನೋಡುತ್ತಿಲ್ಲ ಎನ್ನುವುದು ಸಾರ್ವಜನಿಕರ ದೂರಾಗಿದೆ.
ಶೌಚಾಲಯವಾಗಿ ಮಾರ್ಪಾಡು: ನಿತ್ಯ ತಾಲೂಕಿನ ಜನರಿಂದ, ಪ್ರತಿಭಟನಾಕಾರರಿಂದ, ರೈತರಿಂದ ಹಾಗೂ ಅಧಿಕಾರಿಗಳಿಂದ ತುಂಬಿಕೊಂಡಿರುತ್ತಿದ್ದ ಈ ಕಚೇರಿ ಕೊಠಡಿಗಳು ಇದೀಗ ಮೂತ್ರಾಲಯ ಹಾಗೂ ಶೌಚಾಲಯವಾಗಿ ಮಾರ್ಪಟ್ಟಿವೆ. ಪಕ್ಕದಲ್ಲಿ ತರಕಾರಿ ಮಾರುಕಟ್ಟೆ, ಎದುರಿನಲ್ಲಿ ದಿನಸಿ ವಸ್ತುಗಳ ಕಿರಾಣಿ ಅಂಗಡಿ ಇದ್ದು, ಅಕ್ಕಪಕ್ಕದ ಮನೆಯವರೂ ಈ ಗಬ್ಬು ವಾಸನೆ ಹಾಗೂ ಸಾಂಕ್ರಾಮಿಕ ರೋಗಗಳ ಭಯದಿಂದ ಜೀವನ ನಡೆಸುವಂತಾಗಿದೆ. ಪಟ್ಟಣದಲ್ಲಿ ಈಗಿರುವ ತರಕಾರಿ ಮಾರುಕಟ್ಟೆಯಲ್ಲಿ ರಸ್ತೆಯಲ್ಲೇ ಲಿಲಾವು ಮಾಡಲಾಗುತ್ತಿದೆ. ತರಕಾರಿ ಹೊತ್ತು ತಂದ ವಾಹನಗಳು ಅಲ್ಲಿಯೇ ನಿಲ್ಲುತ್ತವೆ. ಇದರಿಂದಾಗಿ ಪಾದಚಾರಿಗಳಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ಹಾಳು ಬಿದ್ದಿರುವ ಹಳೆಯ ತಹಸೀಲ್ದಾರ್ ಕಚೇರಿ ಆವರಣದಲ್ಲಿಯೇ ನಿತ್ಯ ಲಿಲಾವು ಮಾಡಲು ಅನುಕೂಲ ಮಾಡಿ, ಸಾರ್ವಜನಿಕರಿಗೆ ಆಗುವ ತೊಂದರೆ ತಪ್ಪಿಸುವುದು ಅವಶ್ಯವಾಗಿದೆ. ಈ ಹಿಂದೆ ಬಿ. ಶ್ರೀರಾಮುಲು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಸಂದರ್ಭದಲ್ಲಿ ಅಂದಿನ ಜಿಲ್ಲಾಧಿಕಾರಿಗೆ ಹಳೆಯ ತಹಸೀಲ್ದಾರ್ ಕಚೇರಿಯಲ್ಲಿ ತರಕಾರಿ ಮಾರುಕಟ್ಟೆಗೆ ಅವಕಾಶ ಕಲ್ಪಿಸಲು ಶಿಫಾರಸು ಮಾಡಲು ತಿಳಿಸಿದ್ದರು. ಪುರಸಭೆಯವರೂ ಕಂದಾಯ ಇಲಾಖೆ ಜತೆ ಮಾತನಾಡಿ ತರಕಾರಿ ಮಾರಾಟಕ್ಕೆ ವ್ಯವಸ್ಥೆ ಮಾಡುವುದಾಗಿ ತಿಳಿಸಿತ್ತು. ಆದರೆ ಇದುವರೆಗೂ ಯಾವುದೇ ಕೆಲಸ ನಡೆದಿಲ್ಲ.
ಕಾಟಾಚಾರದ ಸ್ವಚ್ಛತೆ: ಹಳೆಯ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಸ್ವಚ್ಛತೆ ಕೊರತೆ ಇದೆ ಎಂದು ಪತ್ರಿಕೆಗಳಲ್ಲಿ ವರದಿಗಳು ಪ್ರಕಟವಾದಾಗ ಮಾತ್ರ ಇತ್ತ ತಿರುಗಿನೋಡುವ ಅಧಿಕಾರಿಗಳು ಒಂದೆರಡು ದಿನ ಅಲ್ಲಲ್ಲಿ ಸ್ವಚ್ಛ ಮಾಡಿ ಹೋಗುತ್ತಾರೆ. ಈ ಪ್ರದೇಶದಲ್ಲಿ ಮಲ ಮೂತ್ರ ವಿಸರ್ಜನೆ ಮಾಡುವವರಿಗೆ ಕಟ್ಟು ನಿಟ್ಟಿನ ಎಚ್ಚರಿಕೆ ಕೊಟ್ಟು ಜಾಗ ಸದ್ಬಳಕೆಯತ್ತ ಗಮನಹರಿಸಬೇಕಿದೆ.