ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

20 ನಿಮಿಷ 20 ಸುದ್ದಿ

Srinivasa Murthy VN
Updated On : 25 May 2014, 12:57 pm

ಹೊಳೆಆಲೂರು: ಈಚೆಗೆ ಸಿಡಿಲು ಬಡಿದು ನಿಧನರಾದ ಹೊಳೆಆಲೂರು ಸಮೀಪದ ಹುನಗುಂಡಿ ಗ್ರಾಮದ ಅಣ್ಣಪ್ಪ ಸೋಮನಕಟ್ಟಿ ಅವರ ಕುಟುಂಬಕ್ಕೆ ನರಗುಂದ ಶಾಸಕ ಬಿ.ಆರ್. ಯಾವಗಲ್ ಅವರು ಸರ್ಕಾರದ ಪರಿಹಾರ ಧನದ ಚೆಕ್ ವಿತರಿಸಿದರು. ಬುಧವಾರ ಹುನಗುಂಡಿ ಗ್ರಾಮಕ್ಕೆ ಭೇಟಿ ನೀಡಿದ ಶಾಸಕ ಯಾವಗಲ್ ಅಣ್ಣಪ್ಪನ ಪಾಲಕ ಷಣ್ಮುಖಪ್ಪ ಸೋಮನಕಟ್ಟಿ ಅವರಿಗೆ ರು. 1 ಲಕ್ಷ ರು. 50 ಸಾವಿರ ಪರಿಹಾರದ ಚೆಕ್ ವಿತರಿಸಿ ಸೋಮನಕಟ್ಟಿ ಕುಟುಂಬಕ್ಕೆ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ರೋಣ ತಹಸೀಲ್ದಾರ್ ಎ.ಜಿ. ಪಂಡಿತ, ಆರ್.ಎಂ. ಭೂಮಕಾರ, ಗ್ರಾಮ ಲೆಕ್ಕಾಧಿಕಾರಿ ಎಚ್.ಎಂ. ಪಾಟೀಲ, ಡಿ.ಎಸ್. ಶೆಲ್ಲಿಕೇರಿ, ಪರಸಪ್ಪ ಶಿರಗುಂಪಿ, ಶಂಕರಗೌಡ ಬಾಲನಗೌಡರ, ಶಂಕರಗೌಡ ಪಾಟೀಲ, ಗಂಗಾಧರ ಮಂಡಸೊಪ್ಪಿ ಉಪಸ್ಥಿತರಿದ್ದರು.

ಶಿವಕುಮಾರ್ ಗೆಲವು: ಹರಕೆ ತೀರಿಸಿದ ಅಭಿಮಾನಿಗಳು
ಗಜೇಂದ್ರಗಡ: ಹಾವೇರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ ಅಧಿಕ ಮತ ಪಡೆದು 2ನೇ ಬಾರಿಗೆ ಜಯ ಸಾಧಿಸಿದ ಹಿನ್ನೆಲೆಯಲ್ಲಿ ಗೆಲವಿಗಾಗಿ ಸಂಕಲ್ಪ ತೊಟ್ಟಿದ್ದ ಸಮೀಪದ ಕೊಡಗಾನೂರು ಗ್ರಾಮ ಬಿಜೆಪಿ ಕಾರ್ಯಕರ್ತರು ಗ್ರಾಮದ ಅಧಿದೇವತೆ ದುರ್ಗಾದೇವಿ ದೇಗುಲದಲ್ಲಿ ಈಚೆಗೆ 101 ತೆಂಗಿನಕಾಯಿ ಒಡೆದು ಹರಿಕೆ ತಿರಿಸಿದರು. ಬಿಜೆಪಿ ಮುಖಂಡ ಕನಕಪ್ಪ ಪೂಜಾರ ಮಾತನಾಡಿ, ಭವ್ಯ ಭಾರತದ ಕನಸು ಕಂಡ ನರೇಂದ್ರ ಮೋದಿಯವರ ನಾಯಕತ್ವಕ್ಕೆ ದೇಶದ ಜನತೆ ಬೆಂಬಲ ಜತೆ ಐತಿಹಾಸಿಕ ತೀರ್ಪು ನೀಡುವ ಮೂಲಕ ದೇಶದ ಉಜ್ವಲ ಭವಿಷ್ಯಕ್ಕೆ ನಾಂದಿಯಾಗಿದೆ ಎಂದರು. ತಾಪಂ ಸದಸ್ಯೆ ಲಲಿತಾ ಪೂಜಾರ, ಪಿ.ಡಿ. ಮಾಳೋತ್ತರ, ಕಲ್ಲವ್ವ ಪೂಜಾರ, ರೇಣುಕಯ್ಯ ಅಂಗಡಿ, ಎಂ.ಬಿ. ತಳವಾರ, ಬಿ.ಕೆ. ನಡಕಟ್ಟಿನ, ಸುನೀಲ ಹಿರೇಮಠ, ವೀರಯ್ಯ ಕಳ್ಳಿಮಠ, ಈರಪ್ಪ ಹುಯಿಲಗೋಳ. ಎಂ.ಸಿ. ಕಪ್ಲಿಮಠ, ಎಂ.ಬಿ. ಬಾಳಿಕಾಯಿಮಠ, ನಾಗಯ್ಯ ಹಿರೇಮಠ ಇದ್ದರು.

ಸಿಡಿಲು ಬಡಿದು ಸಾವು ಕುಟುಂಬಕ್ಕೆ ಚೆಕ್ ವಿತರಣೆ
ರೋಣ: ಈಚೆಗೆ ಸಿಡಿಲು ಬಡಿದು ಸಾವನ್ನಪ್ಪಿದ ತಾಲೂಕಿನ ಮಾಡಲಗೇರಿ ಗ್ರಾಮದ ಬಸವರಾಜ ಕೆಂಗಾರ ಅವರ ಮನೆಗೆ ಶಾಸಕ ಜಿ.ಎಸ್. ಪಾಟೀಲ, ತಹಸೀಲ್ದಾರ್ ಎ.ಜಿ. ಪಂಡಿತ ಶುಕ್ರವಾರ ಸಂಜೆ ತೆರಳಿ ಮೃತ ಬಸವರಾಜ ಕೆಂಗಾರ ಪತ್ನಿ ನೀಲವ್ವ ಕೆಂಗಾರ ಅವರಿಗೆ ಸಾಂತ್ವನ ಹೇಳಿ, ಸರ್ಕಾರದ ರು. 1.5 ಲಕ್ಷದ ಸಹಾಯಧನ ಚೆಕ್ ವಿತರಿಸಿದರು. ಬಳಿಕ ತಾಲೂಕಿನ ನೈನಾಪುರ ಗ್ರಾಮಕ್ಕೆ ತೆರಳಿ ಈಚೆಗೆ ಬೀಸಿದ ರಭಸದ ಗಾಳಿ, ಮಳೆಯಿಂದ ಹಾನಿಗೊಳಗಾದ ಮನೆಗಳ ಸಂತ್ರಸ್ತರಿಗೆ ಪರಿಹಾರಧನ ಚೆಕ್ ವಿತರಿಸಿದರು. ಹರಿಯಪ್ಪ ಮಾದರ, ಮರದಪ್ಪ ಮಾದರ ಎಂಬುವರಿಗೆ ತಲಾ ರು. 70 ಸಾವಿರ ಚೆಕ್ ಮತ್ತು ಪಡಿಯವ್ವ ಮಾದರ ಎಂಬುವರಿಗೆ ರು. 17,600 ಚೆಕ್ ವಿತರಿಸಿ ಶಾಸಕ ಜಿ.ಎಸ್. ಪಾಟೀಲ ಮಾತನಾಡಿದರು. ಗ್ರಾಪಂ ಪಿಡಿಒ ಬಿ.ಎಸ್. ದಳವಾಯಿ, ಕೆ.ಎಚ್. ಓಲೆಕಾರ, ದಶರಥ ಗಾಣಿಗೇರ, ಪರಶುರಾಮ ಅಳಗವಾಡಿ, ವಿ.ಬಿ. ಸೋಮನಕಟ್ಟಿಮಠ, ಶರಣಪ್ಪ ಬಾವಿ ಇದ್ದರು.

ಸಾಮೂಹಿಕ ವಿವಾಹ
ಲಕ್ಷ್ಮೇಶ್ವರ ತಾಲೂಕು ಬಾಲೆಹೊಸೂರಿನ ದಿಂಗಾಲೇಶ್ವರಮಠದ ಲೋಕಾರ್ಪಣೆ ನಿಮಿತ್ತ ನಡೆದ ಸಾಮೂಹಿಕ ವಿವಾಹದಲ್ಲಿ ಮಾಂಗಲ್ಯ ಕಟ್ಟುತ್ತಿರುವ ಸಂದರ್ಭ ನವ ಜೋಡಿಗಳಿಗೆ ಶ್ರೀಗಳು ಪುಷ್ಪವೃಷ್ಟಿ ಮಾಡಿದರು.

ಚೀನಿಯರ ಜೀವನ ಶೈಲಿ ಕುರಿತು ಮಾಹಿತಿ
ಗದಗ: ರೋಟರಿ ಕ್ಲಬ್ ಗದಗ-ಬೆಟಗೇರಿಯ ಸಾಪ್ತಾಹಿಕ ಸಭೆ ಈಚೆಗೆ ರೋಟರಿ ಅಧ್ಯಕ್ಷ ಡಾ. ಪ್ರದೀಪ ಉಗಲಾಟ ಅವರ ಅಧ್ಯಕ್ಷತೆಯಲ್ಲಿ ನಗರದ ರೋಟರಿ ಐ ಕೇರ್ ಸೆಂಟರ್‌ನಲ್ಲಿ ಜರುಗಿತು. ಈ ಸಭೆಗೆ ಸಂಸ್ಥೆ ಸದಸ್ಯ ಎಸ್.ಎಫ್. ಬೆನಕಣ್ಣವರ ಅತಿಥಿಗಳಾಗಿ ಆಗಮಿಸಿ ತಾವು ಈಚೆಗೆ ಕೈಗೊಂಡ ಚೀನಾ ಪ್ರವಾಸದ ಕುರಿತು ತಮ್ಮ ಅನುಭವ ಹಂಚಿಕೊಂಡರು. ಚೀನಿಯರ ಸಾಮಾಜಿಕ ಜೀವನ ಹಾಗೂ ಅವರ ಉಡುಗೆ-ತೊಡುಗೆಗಳ ಮಾಹಿತಿಯನ್ನು ಸಭೆಗೆ ನೀಡಿದರು. ಈ ಸಂದರ್ಭ ವಿಶ್ವನಾಥ ಯಳಮಲಿ, ಅರವಿಂದಸಿಂಗ ಬ್ಯಾಳಿ, ಶ್ರೀಧರ ಸುಲ್ತಾನಪುರ, ಎಸ್.ವಿ. ಇಟಗಿ, ಎಸ್.ವಿ. ಹುಬ್ಬಳ್ಳಿ, ಎ.ಎಂ. ಗೌಡರ, ಡಾ. ಎಸ್.ಎಲ್. ಹಕ್ಕಾಪಕ್ಕಿ, ಡಾ. ಎ.ಡಿ. ಪಾಟೀಲ, ಡಾ. ಬಿ.ಎನ್. ಪಾಟೀಲ, ಎಸ್.ಎಲ್. ನಾಲ್ವತ್ತವಾಡಮಠ, ಸಿ.ಪಿ. ಹುಣಸಿಕಟ್ಟಿ, ಡಾ. ಪಿ.ಡಿ. ಕೋಲೋಶಗಿ, ಎಂ.ಬಿ. ಬಾತಖಾನಿ ಇತರರಿದ್ದರು.

ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ರಾಜೇಂದ್ರ ಸಿಂಗ್‌ಗೆ ಸನ್ಮಾನ
ಗದಗ: ಭಾರತ ದೇಶದ ನೀರು ಮಾನವ ಎಂದು ಪ್ರಖ್ಯಾತರಾದ ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ರಾಜಸ್ಥಾನದ ಡಾ. ರಾಜೇಂದ್ರ ಸಿಂಗ್ ಅವರಿಗೆ ಧಾರವಾಡದ ಕೃಷಿ ವಿವಿ ಗೌರವ ಡಾಕ್ಟರೇಟ್ ಪದವಿ ನೀಡಿದ ನಿಮಿತ್ತ ಈಚೆಗೆ ತಾಲೂಕಿನ ಹುಲಕೋಟಿ ಗ್ರಾಮದಲ್ಲಿರುವ ಕೆ.ಎಚ್. ಪಾಟೀಲ ಕೃಷಿ ವಿಜ್ಞಾನ ಕೇಂದ್ರದಲ್ಲಿ ಗದಗ ಜಿಲ್ಲೆಯ ರೈತರ ಪರ ಸನ್ಮಾನಿಸಲಾಯಿತು. ಈ ಸಂದರ್ಭ ಗದಗನ ರಾಮಕೃಷ್ಣ ವಿವೇಕಾನಂದಾಶ್ರಮದ ನಿರ್ಭಯಾನಂದ ಶ್ರೀಗಳು, ಶಾಸಕ ಬಿ.ಆರ್. ಯಾವಗಲ್, ಮಾಜಿ ಶಾಸಕ ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ  ಡಿ.ಆರ್. ಪಾಟೀಲ, ಜೆ.ಕೆ. ಜಮಾದಾರ, ಸಿ.ಜಿ. ಕೊರವನವರ ಸೇರಿದಂತೆ ಜಿಲ್ಲೆಯ 300ಕ್ಕೂ ಅಧಿಕ ರೈತರು ಪಾಲ್ಗೊಂಡಿದ್ದರು.

ಪ್ರಾ. ಸಂಕನೂರಗೆ ಪಕ್ಷಾತೀತ ಬೆಂಬಲ
ನರೇಗಲ್ಲ: ಪಶ್ಚಿಮ ಪದವೀಧರ ಕ್ಷೇತ್ರದಿಂದ ನಡೆಯುವ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಪ್ರಾ. ಎಸ್.ವಿ. ಸಂಕನೂರ ಈ ಬಾರಿ ಜಯಸುವುದು ಖಂಡಿತ ಎಂದು ನಿಡಗುಂದಿ ಗ್ರಾಪಂ ಅಧ್ಯಕ್ಷ ಜಗದೀಶ ಕರಡಿ ಹೇಳಿದರು. ಸಮೀಪದ ನಿಡಗುಂದಿ ಗ್ರಾಮದ ಚಿಕ್ಕಅಗಸಿ ಓಣಿಯ ಅಣಗೌಡರ ಮನೆಯಲ್ಲಿ ನಡೆದ ಚುನಾವಣಾ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿದರು. ಪ್ರಾ. ಎಸ್.ವಿ. ಸಂಕನೂರ ಮಾತನಾಡಿ, 3 ದಶಕಗಳಿಂದ ಕ್ಷೇತ್ರದಲ್ಲಿ ಅಧಿಕಾರವಿಲ್ಲದೇ ಪದವೀಧರರ ಮತ್ತು ಶಿಕ್ಷಕರ ಸೇವೆ ಮಾಡುತ್ತಾ ಬಂದಿದ್ದೇನೆ. ಒಂದು ಬಾರಿ ನನಗೆ ಅವಕಾಶ ಕೊಟ್ಟು ಆಯ್ಕೆ ಮಾಡಿ ವಿಧಾನ ಪರಿಷತ್ತಿಗೆ ಕಳಿಸಿದರೆ ನಿರುದ್ಯೋಗಿ ಪದವೀಧರರಿಗೆ ವಿಶೇಷವಾಗಿ ಗ್ರಾಮೀಣ ಭಾಗದ ಪದವೀಧರರಿಗೆ ಪೂರಕವಾದ ಕೆಲಸ ಮಾಡುತ್ತೇನೆ ಎಂದರು. ಶಿಕ್ಷಕ ಪಿ.ಕೆ. ಕರಡಿ ದೇವೇಂದ್ರ ಬಡಿಗೇರ, ಅಂದಪ್ಪ ಅಣಗೌಡರ ಇದ್ದರು.

ಎಪಿಎಂಸಿ ವ್ಯವಹಾರ ಶೀಘ್ರ ಪ್ರಾರಂಭಿಸಿ
ಗದಗ: ಉತ್ತರ ಕರ್ನಾಟಕದಲ್ಲಿಯೇ ಪ್ರಸಿದ್ಧವಾದ ಗದಗ ಎಪಿಎಂಸಿ ಮಾರುಕಟ್ಟೆ 6 ದಿನಗಳಿಂದ ಶ್ರಮಿಕರ ಕೂಲಿ ದರ ಹಾಗೂ ಚಕ್ಕಡಿಯವರ ಸಾಗಾಣಿಕೆ ದರಗಳನ್ನು ಹೆಚ್ಚಿಸಬೇಕೆಂದು ವಾದ ಮುಂದಿಟ್ಟುಕೊಂಡು ಮಾರುಕಟ್ಟೆ ಬಂದ ಇಟ್ಟಿರುವರು. ಈ ಹಂತದಲ್ಲಿ ಎಪಿಎಂಸಿ ಚೇರ್‌ಮನ್ ಹಾಗೂ ಕಾರ್ಯದರ್ಶಿಗಳ ಸಮ್ಮುಖದಲ್ಲಿ ಹಲವಾರು ಸಭೆಗಳು ಜರುಗಿದರೂ ಸಮಸ್ಯೆ ಪರಿಹರಿಸಲು ಸಾಧ್ಯವಾಗಿರುವುದಿಲ್ಲ. ಈಗ ಈ ಭಾಗದಲ್ಲಿ ಮುಂಗಾರು ಮಳೆ ಪ್ರಾರಂಭವಾಗಿದ್ದು, ರೈತರಿಗೆ ಬೀಜ, ಗೊಬ್ಬರ ಕೊಳ್ಳಲು ತೊಂದರೆಯಾಗುತ್ತಿದೆ. ಕಾರಣ ಶೀಘ್ರ ತಾವುಗಳು ಮುತುವರ್ಜಿ ವಹಿಸಿ ಈ ಸಮಸ್ಯೆ ಪರಿಹರಿಸಬೇಕೆಂದು ಆಗ್ರಹಿಸಿದ್ದಾರೆ.

ಮನಸೆಳೆದ ಗಂಧ ಉರೂಸ್ ಮೆರವಣಿಗೆ
ನರೇಗಲ್ಲ: ಪಟ್ಟಣದಲ್ಲಿ ರಹಿಮಾನ್ ಶಾವಲಿಯವರ ಉರೂಸ್ ಸಡಗರ, ಸಂಭ್ರಮದಿಂದ ಪ್ರಾರಂಭವಾಯಿತು. ಶುಕ್ರವಾರ ಮಧ್ಯಾಹ್ನ ನಾಡಿನ ವಿವಿಧ ಮಠಾಧೀಶರು ಉರೂಸ್‌ಗೆ ಚಾಲನೆ ನೀಡಿದರು. ಪಾಲಕಿಯಲ್ಲಿ ಉರೂಸ್‌ಗೆ ಕಾರಣಕರ್ತರಾಗಿರುವ ಹಜರತ್ ಸಯ್ಯದ ರಹಿಮಾನ್ ಶಾವಲಿಯವರ ಮತ್ತು ಈಗಿನ ಪೀಠಾಧಿಪತಿ ಅಬ್ದುಲ್ ರಹಿಮಾನ್ ಶ್ಯಾವಲಿಯವರ ಭಾವಚಿತ್ರಗಳಿದ್ದವು. ಝಾಂಜ್ ಮೇಳ, ಕರಡಿ ಮಜಲು, ಕೋಲಾಟದ ದೃಶ್ಯಗಳು ನೋಡುಗರ ಮನ ತುಂಬಿದವು. ದರ್ಗಾದಿಂದ ಹೊರಟ ಮೆರವಣಿಗೆ ಅಗಸಿ ಸಾಗಿ ಗ್ರಾಮ ದೇವತೆ ಗುಡಿ, ಪಪಂ, ಹೊಸ ಬಸ್ ನಿಲ್ದಾಣ, ಕೋಡಿಕೊಪ್ಪದ ಮೂಲಕ ಕೋಚಲಾಪುರವನ್ನು ತಲುಪಿತು. ಸಂಜೆ 4.30ಕ್ಕೆ ದರ್ಗಾದಿಂದ ಹೊರಟ ಮೆರವಣಿಗೆ ರಾತ್ರಿ 9ರ ಸುಮಾರಿಗೆ ಕೋಚಲಾಪುರವನ್ನು ತಲುಪಿತು. ಆರತಿ ಹಿಡಿದ ಸುಮಂಗಲೆಯರು, ಯುವಕರು, ಚಿಕ್ಕ ಮಕ್ಕಳು ಪಾಲ್ಗೊಂಡಿದ್ದರು.

ಉಳಿತಾಯ ಹವ್ಯಾಸ ರೂಢಿಸಿಕೊಳ್ಳಿ: ಸುರೇಂದ್ರ
ಗದಗ: ಗ್ರಾಹಕರು ಹಣಕಾಸು ಉತ್ಪನ್ನಗಳ ಬಗೆಗಿನ ಅರಿವು ಹೆಚ್ಚಿಸಿಕೊಳ್ಳುವ ಜತೆಗೆ ಉಳಿತಾಯದ ಹವ್ಯಾಸ ರೂಢಿಸಿಕೊಳ್ಳಬೇಕೆಂದು ಸಿಂಡಿಕೇಟ್ ಬ್ಯಾಂಕ್ ವ್ಯವಸ್ಥಾಪಕ ಟಿ.ಇ. ಸುರೇಂದ್ರ ಹೇಳಿದರು. ತಾಲೂಕಿನ ಅಡವಿಸೋಮಾಪುರ ಗ್ರಾಮದ ಸಿಂಡಿಕೇಟ್ ಬ್ಯಾಂಕ್ ಹಮ್ಮಿಕೊಂಡಿದ್ದ ಗ್ರಾಹಕರ ಸಮಾವೇಶದಲ್ಲಿ ಮಾತನಾಡಿದರು. ಗ್ರಾಹಕರು ಹಣಕಾಸು ಸಾಕ್ಷರತೆ ಹೊಂದಿ ಬ್ಯಾಂಕ್ ಸೌಲಭ್ಯ ಪಡೆಯಬೇಕು ಎಂದರು. ಮಹಾಂತೇಶ ದಡವಾಡ, ಗ್ರಾಹಕರು ಬ್ಯಾಂಕಿನೊಂದಿಗೆ ಉತ್ತಮ ಬಾಂಧವ್ಯ ಹೊಂದಿರಬೇಕು ಎಂದರು. ಬ್ಯಾಂಕಿನಿಂದ ಅಡವಿಸೋಮಾಪುರ, ಪಾಪನಾಶಿ, ತಾಂಡಾಗಳ ಜನರಿಗೆ ತುಂಬಾ ಅನುಕೂಲವಾಗಿದೆ ಎಂದರು. ಗ್ರಾಪಂ ಸದಸ್ಯ ಮಲ್ಲಪ್ಪ ಹೊಸಳ್ಳಿ, ಬಸವರಾಜ ಕದಾಂಪುರ, ಕುಬೇರಪ್ಪ ಹುಲಗಣ್ಣವರ, ರಾಜೇಸಾಬ ಅಗಸಿಮನಿ, ಅಲ್ಲಾಸಾಬ ಹಳ್ಳಿಕೇರಿ, ಗೋಣೆಪ್ಪ ಹೊಂಬಳ, ಈರಣ್ಣ ಹುಲಗಣ್ಣವರ, ಅನ್ವರ ಪೆಂಡಾರಿ, ಮಂಜುನಾಥ ಮೆಗಲಮನಿ ಬ್ಯಾಂಕಿನ ಸಿಬ್ಬಂದಿ ಇದ್ದರು.

ಸಮ್ಮೇಳನದ ಸಾನ್ನಿಧ್ಯ ವಹಿಸಲು ಶ್ರೀಗಳಿಗೆ ಆಹ್ವಾನ
ಗದಗ: ಜೂನ್ 7ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುವ ರಾಜ್ಯ ವಚನ ಸಾಹಿತ್ಯ ಪರಿಷತ್ತಿನ ರಾಜ್ಯಮಟ್ಟದ ಪ್ರಥಮ ಸಮ್ಮೇಳನಕ್ಕೆ ಗದುಗಿನ ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರಿಗೆ ಸಾನ್ನಿಧ್ಯ ವಹಿಸಲು ಆಹ್ವಾನಿಸಲಾಗಿದೆ. ಗದಗ ಜಿಲ್ಲಾ ವಚನ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಡಾ. ಗಣೇಶ ಸುಲ್ತಾನಪುರ ನೇತೃತ್ವದ ನಿಯೋಗ ಶುಕ್ರವಾರ ವೀರೇಶ್ವರ ಪುಣ್ಯಾಶ್ರಮಕ್ಕೆ ತೆರಳಿ ಶ್ರೀಗಳನ್ನು ಸನ್ಮಾನಿಸುವ ಮೂಲಕ ಅಧಿಕೃತವಾಗಿ ಆಹ್ವಾನಿಸಲಾಯಿತು. ಈ ಕುರಿತು ಶ್ರೀಗಳು ಸಮ್ಮೇಳನದಲ್ಲಿ ಪಾಲ್ಗೊಳ್ಳುವುದಾಗಿ ತಿಳಿಸಿ ಹರ್ಷ ವ್ಯಕ್ತಪಡಿಸಿ ಸಮ್ಮೇಳನ ಸರ್ವ ರೀತಿಯಿಂದಲೂ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು. ಡಾ. ಪ್ರಭು ಗಂಜಿಹಾಳ, ಜಿ.ಎಸ್. ಯತ್ನಟ್ಟಿ, ಎಚ್.ಎಸ್. ದಳವಾಯಿ, ಬಸವರಾಜ ಹಿಡ್ಕಿಮಠ, ಪಿ.ಸಿ. ಹೀರೇಮಠ, ಅಮರೇಶ ಶಿವರೆಡ್ಡಿ, ಎನ್.ಎಂ. ಶ್ಯಾವಿ, ಎಸ್.ಎ. ಹಿರೇಮಠ, ಎಸ್.ಎ. ಪಟ್ಟಣಶೆಟ್ಟಿ ಇದ್ದರು.

ಮಕ್ಕಳ ಕೋಲಾಟ
ನರೇಗಲ್ ಪಟ್ಟಣದಲ್ಲಿ ರಹಿಮಾನ್ ಶಾವಲಿಯವರ ಉರೂಸಿನ ಮೆರವಣಿಗೆಯಲ್ಲಿ ಚಿಣ್ಣರ ಕೋಲಾಟ ಗಮನ ಸೆಳೆಯಿತು.

ಮೈಲಾರಲಿಂಗೇಶ್ವರ ದೇವಸ್ಥಾನ ದ್ವಾರಬಾಗಿಲು ಸ್ಥಾಪನೆ
ಗದಗ: ನಗರದ ಕೊನೇರಿ ಮಾರುತಿ ದೇವಸ್ಥಾನ ಹೊಂಡದ ಹತ್ತಿರವಿರುವ ಮೈಲಾರಲಿಂಗೇಶ್ವರ ದೇವಸ್ಥಾನದ ದ್ವಾರ ಬಾಗಿಲು ಈಚೆಗೆ ಸ್ಥಾಪಿಸಲಾಯಿತು. ಈ ಸಂದರ್ಭದಲ್ಲಿ ದಾನಿಗಳಾದ ಮಹೇಶ ಕಬಾಡರ ದಂಪತಿ, ದೇವಸ್ಥಾನದ ಟ್ರಸ್ಟ್ ಅಧ್ಯಕ್ಷ ಜಯದೇವ ಮೆಣಸಗಿ, ಎಂ.ಎಸ್. ಅರಣಿ, ಎಸ್.ಎಸ್. ಪಾಟೀಲ, ಮೋಹನ ಚಂದಪ್ಪನವರ, ಎಸ್.ಬಿ. ಪಾಟೀಲ, ಅರ್ಚಕ ಆನಂದ ಭಟ್ಟ ಜೋಶಿ ಗಣ್ಯರು ಮುಂತಾದವರು ಹಾಜರಿದ್ದರು.

ಹೈನುಗಾರಿಕೆ ತರಬೇತಿ ಶಿಬಿರ
ಗದಗ: ಕರ್ನಾಟಕ ಕೃಷಿಕರ ಸಂಪನ್ಮೂಲ ಕೇಂದ್ರ ಬಾಗಲಕೋಟೆ ಇವರು ಕುರಿ, ಆಡು ಮತ್ತು ಹೈನುಗಾರಿಕೆ ಬಗ್ಗೆ ತರಬೇತಿ ಶಿಬಿರವನ್ನು ಮೇ ತಿಂಗಳಲ್ಲಿ ಏರ್ಪಡಿಸಿದೆ. ಶಿಬಿರದಲ್ಲಿ ಅಧಿಕ ಆದಾಯಕ್ಕಾಗಿ ಅನುಸರಿಸಬೇಕಾದ ಅಧುನಿಕ ಪದ್ಧತಿಗಳು, ಹಣಕಾಸಿನ ನಿರ್ವಹಣೆ ಇತ್ಯಾದಿ ವಿಷಯಗಳ ಬಗ್ಗೆ ತರಬೇತಿ ನೀಡಲಾಗುವುದು. ತರಬೇತಿಯಲ್ಲಿ ಭಾಗವಹಿಸುವ ಶಿಬಿರಾರ್ಥಿಗಳಿಗೆ ಉಚಿತ ಊಟ ಮತ್ತು ವಸತಿ ವ್ಯವಸ್ಥೆ ನೀಡಲಾಗುವುದು. ಆಸಕ್ತ ರೈತರು, ರೈತ-ಮಹಿಳೆಯರು, ಸ್ವ-ಸಹಾಯ ಸಂಘದ ಸದಸ್ಯರು, ಯುವಕರು ಇತ್ಯಾದಿ ಹೆಸರು, ವಿಳಾಸ, ದೂರವಾಣಿ, ಮೊಬೈಲ್ ಸಂಖ್ಯೆ ಇತ್ಯಾದಿ ವಿವರಗಳನ್ನು ಮೇ 28ರೊಳಗೆ ನೋಂದಾಯಿಸಲು ತಿಳಿಸಿದ್ದು, ಹೆಚ್ಚಿನ ಮಾಹಿತಿಗಾಗಿ ಕಾರ್ಯನಿರ್ವಾಹಕ ನಿರ್ದೇಶಕರು, ಕರ್ನಾಟಕ ಕೃಷಿಕರ ಸಂಪನ್ಮೂಲ ಕೇಂದ್ರ, ಬಿವಿವಿ ಸಂಘದ ಸ್ಪಿನಿಂಗ್ ಮಿಲ್ ಆವರಣ, ಗದ್ದನಕೇರಿ ರಸ್ತೆ, ಬಾಗಲಕೋಟೆ-587103. ದೂ:08354-244028, 244048, ಮೊ: 8050502960 ಇಲ್ಲಿಗೆ ಸಂಪರ್ಕಿಸುವಂತೆ ಕೇಂದ್ರದ ಕಾರ್ಯನಿರ್ವಾಹಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕ್ರಿಕೆಟ್ ಬೆಟ್ಟಿಂಗ್:ಇಬ್ಬರ ಸೆರೆ
ಗದಗ: ಮೊಹಾಲಿಯಲ್ಲಿ ಕಿಂಗ್ಸ್ ಎಲೆವೆನ್ ಪಂಚಾಬ್ ವಿರುದ್ಧ ಮುಂಬಯಿ ಇಂಡಿಯನ್ಸ್ ಟಿ-20 ಕ್ರಿಕೆಟ್ ಮ್ಯಾಚ್‌ನಲ್ಲಿ ಬೆಟ್ಟಿಂಗ್‌ನಲ್ಲಿ ಭಾಗವಹಿಸಿ ಜೂಜಾಟವಾಡುತ್ತಿದ್ದ ಇಬ್ಬರು ಜೂಜುಗಾರರನ್ನು ಪೊಲೀಸರು ಬಂಧಿಸಿರುವ ಘಟನೆ ತಾಲೂಕಿನ ಮುಳಗುಂದ ಪಟ್ಟಣದ ವಿದ್ಯಾನಗರದಲ್ಲಿ ನಡೆದಿದೆ. ಇಲ್ಲಿನ ನಿವಾಸಿಗಳಾದ ಬಸವರಾಜ ಶಿವನಪ್ಪ ಹಾರೋಗೇರಿ ಮತ್ತು ಬಾಬಾಜಾನ ಅಬ್ದುಲ್‌ಗವಾರ ನದಿಮಲ್ಲಾ ಬಂಧಿತ ಆರೋಪಿಗಳು. ಬಂಧಿತರಿಂದ 14,700 ಹಾಗೂ ಮೊಬೈಲ್ ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ಮುಳಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಾಳೆ ಸಹಸ್ರಚಂದ್ರ ದರ್ಶನ ಕಾರ್ಯಕ್ರಮ
ಲಕ್ಷ್ಮೇಶ್ವರ: ಪಟ್ಟಣದ ಮಲ್ಲಣ್ಣ ಮಹಾಂತಶೆಟ್ಟರ, ಮರಿತಮ್ಮಣ್ಣ ಮಹಾಂತಶೆಟ್ಟರ ಅವರು ಸಹಸ್ರಚಂದ್ರ ದರ್ಶನ ಪಟ್ಟಣದಲ್ಲಿ ಅವರ ಅಭಿಮಾನಿಗಳಿಂದ ಮೇ 26ರಂದು ಬೆಳಗ್ಗೆ 11.30ಕ್ಕೆ ರಂಭಾಪುರಿ ಜ. ವೀರಗಂಗಾಧರ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಸಹಸ್ರ ಚಂದ್ರದರ್ಶನ, ಜನ್ಮ ವಜ್ರ ಮಹೋತ್ಸವ, ಸನ್ಮಾನ ಮತ್ತು ವಿವಾಹ ರಜತ ಮಹೋತ್ಸವ ಜರುಗಲಿದ್ದು, ಬಾಳೆಹೊನ್ನೂರು ರಂಭಾಪುರಿ ಶ್ರೀಗಳು ಸಾನ್ನಿಧ್ಯ ವಹಿಸಲಿದ್ದಾರೆ. ವಿಮಲರೇಣುಕ ವೀರಮುಕ್ತಿಮುನಿ ಶಿವಾಚಾರ್ಯರು, ಚಂದ್ರಶೇಖರ ಶಿವಾಚಾರ್ಯರು ಉಪಸ್ಥಿತರಿರುವರು. ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಎಲ್.ಸಿ. ಲಿಂಬಯ್ಯಸ್ವಾಮಿಮಠ ಅಧ್ಯಕ್ಷತೆ ವಹಿಸಲಿದ್ದು, ಮಾಜಿ ಸಂಸದ ಡಾ. ವಿಜಯ ಸಂಕೇಶ್ವರ, ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ, ಜಿ.ಎಂ. ಮಹಾಂತಶೆಟ್ಟರ, ರಾಮಣ್ಣ ಲಮಾಣಿ, ಡಾ. ವೈ.ಎಫ್. ಹಂಜಿ, ಎ.ಎಂ. ಮೆಕ್ಕಿ, ದುಂಡಪ್ಪ ಮಹಾಂತಶೆಟ್ಟರ್, ಶಂಕ್ರಪ್ಪ ಬೆಲ್ಲದ ಇತರರು ಆಗಮಿಸಲಿದ್ದಾರೆ.

ಟಂಟಂ ಪಲ್ಟಿ: ಬಾಲಕ ಸಾವು, ಮೂವರಿಗೆ ಗಾಯ
ರೋಣ: ಟಂಟಂ ಪಲ್ಟಿಯಾಗಿ 8 ವರ್ಷದ ಬಾಲಕ ಸಾವನ್ನಪ್ಪಿದ್ದು, ಮೂವರಿಗೆ ಗಾಯಗಳಾದ ಘಟನೆ ಗಜೇಂದ್ರಗಡ ರಸ್ತೆಯ ಪಟ್ಟಣದ ವಾಲ್ಮೀಕಿ ಮಹರ್ಷಿ ಸಮುದಾಯ ಭವನ ಹತ್ತಿರ ಶನಿವಾರ ಮಧ್ಯಾಹ್ನ ಸಂಭವಿಸಿದೆ. ಮೃತ ಬಾಲಕನನ್ನು ತಾಲೂಕಿನ ಇಟಗಿ ಗ್ರಾಮದ ಚಂದ್ರು ಚಿಖಾಡೆ ಎಂದು ಗುರುತಿಸಲಾಗಿದೆ. ಗಾಯಗೊಂಡ ಶಾಂತಾಬಾಯಿ ಹಂಚಿನಾಳ, ಮಂಜುಳಾ ಕವಡಿ ಮತ್ತು ಸುಲೋಚನಾ ತಾಂಬೆ ಎಂಬುವರನ್ನು ಪಟ್ಟಣದ ಭಾರತರತ್ನ ಡಾ. ಭೀಮಸೇನ ಜೋಶಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು. ಈ ಕುರಿತು ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ಬಾಲಕನು ರಿಕ್ಷಾದ ಚಾಲಕ ಧರ್ಮಣ್ಣನ ಮಗನಾಗಿದ್ದಾನೆ.

ಮರಕ್ಕೆ ಬಸ್ ಡಿಕ್ಕಿ: ಹಲವರಿಗೆ ಗಾಯ
ಮುಂಡರಗಿ: ತಾಲೂಕಿನ ಮೇವುಂಡಿ ಹತ್ತಿರ ಫೇಟಾಲೂರು ಹಳ್ಳಿಗುಡಿ ಮಧ್ಯದಲ್ಲಿ ಶನಿವಾರ ಸಂಜೆ 5.50 ಸುಮಾರಿಗೆ ಮುಂಡರಗಿ ಕೆಎಸ್‌ಆರ್‌ಟಿಸಿ ಘಟಕದ ಹಳ್ಳಿಗುಡಿ-ಮುಂಡರಗಿ ಬಸ್ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಹಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ಆರೋಗ್ಯ ಕವಚ-108 ವಾಹನದಲ್ಲಿ ಮುಂಡರಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡವರನ್ನು ಹೇಮಣ್ಣ ಯಲ್ಲಪ್ಪ ವ್ಯಾಪಾರಿ, ಚೆನ್ನವ್ವ ಬಸಪ್ಪ ಹೊಸೂರ, ರೇವಣೆಪ್ಪ ರಾಮಪ್ಪ ಹನವಾಳ, ಬುಡ್ನೇಸಾಬ್ ಮಾಬೂಸಾಬ್ ಅಳವಂಡಿ ಹಾಗೂ ಬಸ್ಸಿನ ನಿರ್ವಾಹಕ ಮಹಾರುದ್ರಪ್ಪ ಎಚ್ಚರಪ್ಪ ಅರ್ಕಸಾಲಿ ಎಂದು ಗುರುತಿಸಲಾಗಿದೆ. ನಿರ್ವಾಹಕನನ್ನು ಹೊರತುಪಡಿಸಿ ಉಳಿದವರು ಪೇಠಾಲೂರು ಗ್ರಾಮದವರು. ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement