ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ವಾರದಿಂದ ಗದಗ ಎಪಿಎಂಸಿ ಬಂದ್

Srinivasa Murthy VN
Updated On : 25 May 2014, 12:50 pm

-ಶಿವಕುಮಾರ ಕುಷ್ಟಗಿ
ಕನ್ನಡಪ್ರಭ ವಾರ್ತೆ, ಗದಗ, ಮೇ 24
ವಾರ್ಷಿಕ ರು. 5000 ಕೋಟಿಗಳಷ್ಟು ವಹಿವಾಟು ನಡೆಸುತ್ತಿರುವ ಗದಗ ಎಪಿಎಂಸಿ ಒಂದು ವಾರದಿಂದ ಸ್ತಬ್ಧಗೊಂಡಿದೆ. ಸರ್ಕಾರಕ್ಕೆ ರು. 18 ಲಕ್ಷಕ್ಕೂ ಅಧಿಕ ತೆರಿಗೆ ಖೋತಾ ಆಗಿದ್ದು, ಸಮಸ್ಯೆ ಬಗೆಹರಿಸಲು ಎಪಿಎಂಸಿ ಆಡಳಿತ ಮಂಡಳಿ ಅಥವಾ ಅಧಿಕಾರಿಗಳು ಮುಂದಾಗದೆ ಕಾರ್ಮಿಕರಿಗೂ ದುಡಿಮೆ ಇಲ್ಲದಂತಾಗಿದೆ.
ಕಳೆದ ಶನಿವಾರದಿಂದ ಎಪಿಎಂಸಿಗಳಲ್ಲಿರುವ ಖರೀದಿದಾರರು, ದಲಾಲಿ ಅಂಗಡಿಗಳ ಮಾಲೀಕರು, ಹಮಾಲಿ ಕಾರ್ಮಿಕರು ಹಾಗೂ ಚಕ್ಕಡಿ ಮಾಲೀಕರ ಮಧ್ಯೆ ಕೂಲಿ ವಿಷಯವಾಗಿ ಗೊಂದಲ ಉಂಟಾಗಿದೆ. ಖರೀದಿಸಿದ ವಸ್ತುಗಳನ್ನು ಬೇರೆಡೆ ಸಾಗಿಸಲು ಬಳಸುವ ಚಕ್ಕಡಿಗಳ ಮಾಲೀಕರು ಬಿಗಿ ಪಟ್ಟು ಹಿಡಿದಿದ್ದಾರೆ. ಹೀಗಾಗಿ, ವಹಿವಾಟು ಸಂಪೂರ್ಣ ಸ್ತಬ್ಧಗೊಂಡಿದೆ.
ಏನು ಸಮಸ್ಯೆ?: ಎಪಿಎಂಸಿ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿರುವ ಚಕ್ಕಡಿಗಳ ಬಾಡಿಗೆಯನ್ನು ಪ್ರತಿ ಮೂರು ವರ್ಷಕ್ಕೊಮ್ಮೆ ಪರಿಷ್ಕರಿಸಬೇಕು. ದರ ಪರಿಷ್ಕರಣೆ ಮಾಡುತ್ತೇವೆ. ಆದರೆ, ಎಪಿಎಂಸಿ ಚಕ್ಕಡಿ ಮಾಲೀಕರನ್ನು ಹೊರತುಪಡಿಸಿಯೂ ಧಾನ್ಯಗಳನ್ನು ಸಾಗಿಸಲು ಅನುಕೂಲ ಕೊಡಬೇಕು ಎನ್ನುವುದು ಖರೀದಿದಾರರ ಆಗ್ರಹ. ಆದರೆ, ಚಕ್ಕಡಿ ಮಾಲೀಕರು ಹೆಚ್ಚಿನ ಬಾಡಿಗೆ ನೆಪವೊಡ್ಡಿ ನಮ್ಮ ಕೂಲಿ ಕಿತ್ತುಕೊಳ್ಳುತ್ತಾರೆ ಎನ್ನುವ ಆತಂಕದಲ್ಲಿ ಮಾತುಕತೆಗೆ ಬಾರದೆ ಸಮಸ್ಯೆ ಉಲ್ಬಣಿಸಿದೆ.
ಕಣ್ಮುಚ್ಚಿ ಕುಳಿತ ಅಧಿಕಾರಿಗಳು: ಗದಗ ಎಪಿಎಂಸಿಯಲ್ಲಿ ಈ ಹಿಂದೆ ಈರುಳ್ಳಿ - ಬೆಳ್ಳುಳ್ಳಿ ಬೆಲೆ ಕುಸಿತ ಮುಂತಾದ ಹತ್ತಾರು ಸಂದರ್ಭಗಳಲ್ಲಿ ರೈತರ ಶೋಷಣೆ ನಿರಂತರವಾಗಿ ನಡೆದಿದ್ದು ಎಲ್ಲರಿಗೂ ತಿಳಿದಿದೆ. ಈಗ ಕೂಲಿ ಮತ್ತು ವಸ್ತುಗಳನ್ನು ಸಾಗಿಸುವ ನಿಟ್ಟಿನಲ್ಲಿ ಚಕ್ಕಡಿ ಮಾಲೀಕರು ಮತ್ತು ಖರೀದಿದಾರರ ಮಧ್ಯೆ ಉಂಟಾಗಿರುವ ಗೊಂದಲ ನಿವಾರಿಸುವುದು ಅಧಿಕಾರಿಗಳ ಜವಾಬ್ದಾರಿ. ಆದರೆ, ವಾರದಿಂದ ಗದಗ ಎಪಿಎಂಸಿ ಸ್ಥಗಿತೊಂಡಿದ್ದರೂ ಅಧಿಕಾರಿಗಳು ಸುಮ್ಮನಿರುವುದು ಹಲವು ಸಂಶಯಗಳಿಗೆ ಕಾರಣವಾಗಿದೆ.
ರು. 18 ಲಕ್ಷ ನಷ್ಟ: ವಾರದಿಂದ ಸ್ಥಗಿತಗೊಂಡಿರುವ ಗದಗ ಎಪಿಎಂಸಿಯಿಂದ ಸರ್ಕಾರಕ್ಕೆ ರು. 18 ಲಕ್ಷಕ್ಕೂ ಅಧಿಕ ತೆರಿಗೆ ಹಣ ಖೋತಾ ಆಗಿದೆ. ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಎಪಿಎಂಸಿಯಲ್ಲಿರುವ ಕೆಲ ದಲಾಲಿ ಅಂಗಡಿ ಮಾಲೀಕರೇ ಚಕ್ಕಡಿ ಮಾಲೀಕರು ಹಾಗೂ ಖರೀದಿದಾರರನ್ನು ಕೂಡಿಸಿ 3 ಸುತ್ತಿನ ಸಭೆ ನಡೆಸಿದ್ದಾರೆ. ಆದರೆ, ಎರಡೂ ಕಡೆಯವರು ಬಿಗಿ ಪಟ್ಟು ಹಿಡಿದಿದ್ದು, ಸಮಸ್ಯೆ ಹೆಚ್ಚಲು ಕಾರಣವಾಗಿದೆ. ಇಷ್ಟಿದ್ದರೂ ಎಪಿಎಂಸಿ ಅಧಿಕಾರಿಗಳು ಮಾತ್ರ ಆಸಕ್ತಿ ತೋರುತ್ತಿಲ್ಲ.

ಸಮಸ್ಯೆ ಕುರಿತು ಚರ್ಚಿಸಲಾಗಿದೆ. ಸೋಮವಾರದಿಂದ ಯಥಾವತ್ತಾಗಿ ಮಾರುಕಟ್ಟೆ ಪ್ರಾರಂಭ ಮಾಡುವ ನಿಟ್ಟಿನಲ್ಲಿ ಎಲ್ಲರೊಂದಿಗೂ ಸಭೆ ನಡೆಸಿ ಕ್ರಮ ತೆಗೆದುಕೊಳ್ಳಲಾಗುವುದು.
- ನಂಜುಂಡಸ್ವಾಮಿ, ಕಾರ್ಯದರ್ಶಿ, ಎಪಿಎಂಸಿ, ಗದಗ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement